ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಸಿಂಪಡಿಸೋಣ ಸೈಬರ್‌ ‘ಕ್ರಿಮಿ’ನಾಶಕ!

ಸಿ.ಕೆ ಬಾಬಾ
Published : 20 ಸೆಪ್ಟೆಂಬರ್ 2024, 22:49 IST
Last Updated : 20 ಸೆಪ್ಟೆಂಬರ್ 2024, 22:49 IST
ಫಾಲೋ ಮಾಡಿ
Comments

ಬೆಂಗಳೂರು ನಗರದ ಹೊರವಲಯದ, ಆಡಳಿತಾತ್ಮಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಪ್ರದೇಶಗಳ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಹಲವು ವಿರೋಧಾಭಾಸಗಳನ್ನು ಎದುರಿಸುತ್ತಿದ್ದಾರೆ.

ಕ್ಷಿಪ್ರಗತಿಯಲ್ಲಿ ವಿಸ್ತರಣೆಯಾಗುತ್ತಿರುವ ನಗರವು ಒಂದು ಕಾಲದಲ್ಲಿ ಸುಂದರವಾಗಿದ್ದ ಅವರ ಗ್ರಾಮೀಣ ಜೀವನವನ್ನು ಅತಿಕ್ರಮಿಸಿದೆ. ಒಬ್ಬರನ್ನೊಬ್ಬರು ಚೆನ್ನಾಗಿ ಬಲ್ಲ, ನಿಕಟ ಸಂಬಂಧ ಹೊಂದಿದ್ದ ಸಮುದಾಯ ಅವರದ್ದಾಗಿತ್ತು. ಇಂದು, ತಂತ್ರಜ್ಞಾನವು ಜೀವನದ ಪ್ರತಿ ಆಯಾಮವನ್ನೂ ಪ್ರವೇಶಿಸಿದೆ. ನಗರೀಕರಣದ ಅಲೆಯಲ್ಲಿ ಸಿಲುಕಿರುವ ಗ್ರಾಮೀಣ ಪ್ರದೇಶಗಳು ಮತ್ತು ಮಹಿಳೆಯರು ಇದರ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ.

ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳು ಇಂತಹ ಪ್ರದೇಶಗಳಲ್ಲಿ ಪ್ರತಿದಿನ ಸಂಭವಿಸುತ್ತಿವೆ. ಆದರೆ ಸಮಾಜಕ್ಕೆ ಹೆದರಿಯೋ ಅಥವಾ ಮತ್ತಷ್ಟು ತೊಂದರೆಗೆ ಸಿಲುಕಬಹುದು ಎಂಬ ಭಯದಿಂದಲೋ ಸಂತ್ರಸ್ತರು ದೂರು ನೀಡಲು ಮುಂದೆ ಬರುವುದಿಲ್ಲ. ಮರ್ಯಾದೆಗೆ ಅಂಜಿ ಅತ್ತ ಪೊಲೀಸರಿಗೂ ದೂರು ನೀಡದೆ, ಇತ್ತ ಆಪ್ತರೊಂದಿಗೂ ಹೇಳಲಾಗದೆ ನೋವು, ಅವಮಾನ ಸಹಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವ ಅಥವಾ ಬ್ಲ್ಯಾಕ್‌ಮೇಲ್‌ ಮಾಡುವ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಇನ್ನಷ್ಟು ಸಲೀಸಾಗಿಸಿವೆ.

ಬೆಂಗಳೂರಿನ ಹೊರವಲಯ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಈ ಅಪರಾಧಗಳು ಆನ್‌ಲೈನ್‌ನಲ್ಲಿ ಲೈಂಗಿಕ ಕಿರುಕುಳ ನೀಡುವುದರಿಂದ ಆರಂಭಗೊಂಡು, ಮಹಿಳೆಯರ ಫೋಟೊ ಮತ್ತು ಹೆಸರು ಬಳಸಿಕೊಂಡು ನಕಲಿ ಖಾತೆ ತೆರೆಯುವುದು, ಖಾಸಗಿ ಕ್ಷಣಗಳ ಫೋಟೊ, ವಿಡಿಯೊ ಬಹಿರಂಗಪಡಿಸುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆಯಿಡುವುದು ಸೇರಿದಂತೆ ತೀವ್ರತರದ ಹಲವು ಶೋಷಣೆಗಳವರೆಗೆ ಮುಂದುವರಿಯುತ್ತವೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾನ್ಯವಾಗಿ ಡಿಜಿಟಲ್ ಸಾಕ್ಷರತೆ ಮತ್ತು ಅರಿವಿನ ಕೊರತೆಯಿಂದ ಸೈಬರ್ ವಂಚಕರಿಗೆ ಸುಲಭದ ಗುರಿಯಾಗುತ್ತಿದ್ದಾರೆ.‌ಈಚೆಗೆ ನಡೆದ ಒಂದು ಪ್ರಕರಣವು ಪರಿಸ್ಥಿತಿಯ ತೀವ್ರತೆಯನ್ನು ಅನಾವರಣಗೊಳಿಸುತ್ತದೆ. ಬೆಂಗಳೂರು ಜಿಲ್ಲೆಯಗ್ರಾಮಾಂತರ ಪ್ರದೇಶದಲ್ಲಿ ನೆಲಸಿರುವ ಮಹಿಳೆಯೊಬ್ಬರ ಜತೆ ವ್ಯಕ್ತಿಯೊಬ್ಬ ಸ್ನೇಹ ಬೆಳೆಸಿ, ಸಲುಗೆಯ ಮಾತುಗಳನ್ನಾಡಿ ವಿಶ್ವಾಸ ಗಳಿಸಿದ. ಆಕೆಯೊಂದಿಗೆ ಆತ್ಮೀಯವಾಗಿ ಕಳೆದ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ, ಆ ವಿಡಿಯೊವನ್ನು ಸ್ನೇಹಿತನೊಂದಿಗೆ ಹಂಚಿಕೊಂಡ. ಆ ಸ್ನೇಹಿತ ಆ ವಿಡಿಯೊ ಬಳಸಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಲೈಂಗಿಕವಾಗಿ ಸಹಕರಿಸುವಂತೆ ಹಾಗೂ ಆಭರಣಗಳನ್ನು ನೀಡುವಂತೆ ಬಲವಂತಪಡಿಸಿದ. ಈ ಆಘಾತಕಾರಿ ಪ್ರಕರಣವು ಆನ್‌ಲೈನ್‌ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಒಂದು ಸಣ್ಣ ನಿದರ್ಶನ ಮಾತ್ರ.

ಇಂತಹ ಅಪರಾಧಗಳು ಉಂಟುಮಾಡುವ ಮಾನಸಿಕ ಆಘಾತ ತೀವ್ರವಾಗಿರುತ್ತದೆ. ಇದು ಸಾಮಾನ್ಯವಾಗಿ ದೀರ್ಘಕಾಲೀನ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಲ್ಲದು. ಸಂಪ್ರದಾಯನಿಷ್ಠ ಗ್ರಾಮೀಣ ಸಮುದಾಯಗಳಲ್ಲಿ, ಮಹಿಳೆಯ ಮರ್ಯಾದೆಯು ಆಕೆಯ ಕುಟುಂಬದ ಗೌರವದ ಜತೆ ನಂಟು ಹೊಂದಿರುತ್ತದೆ. ಸಂತ್ರಸ್ತೆಯ ಕುಟುಂಬವು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾದರೆ ಅದರಿಂದ ಉಂಟಾಗುವ ಪರಿಣಾಮ ಮತ್ತಷ್ಟು ಮಾರಕವಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಂತ್ರಸ್ತೆ ಯಾರೆಂಬುದು ಇನ್ನೊಬ್ಬರಿಗೆ ತಿಳಿದಿರುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಸಂತ್ರಸ್ತೆಯು ಇತರರಿಗೆ ಪರಿಚಿತಳೇ ಆಗಿರುತ್ತಾಳೆ.

ಇನ್ನೊಂದು ಪ್ರಕರಣ ಹೀಗಿದೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ವಿಫಲನಾದ ತಮಿಳುನಾಡಿನ 37 ವರ್ಷದ ಎಂಜಿನಿಯರ್‌ವೊಬ್ಬ ಬೆಂಗಳೂರಿನಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾನೆ. ಸಾಮಾಜಿಕ ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಇನ್‌ಸ್ಟಾಗ್ರಾಂ ಮತ್ತು ವಿವಿಧ ಡೇಟಿಂಗ್ ಆ್ಯಪ್‌ಗಳಲ್ಲಿ ಆತ ಹೆಚ್ಚು ಸಕ್ರಿಯನಾಗಿದ್ದ. ಡೇಟಿಂಗ್‌ ಆ್ಯಪ್‌ ಒಂದರ ಮೂಲಕ ಆತನಿಗೆ ಮಹಿಳೆಯೊಬ್ಬರ ಪರಿಚಯವಾಗುತ್ತದೆ. ಇಬ್ಬರೂ ಬೆಂಗಳೂರಿನಲ್ಲಿ ಹಲವು ಸಲ ಭೇಟಿಯಾಗಿ ಖಾಸಗಿ ಕ್ಷಣಗಳನ್ನು ಕಳೆಯುತ್ತಾರೆ. ಇಂತಹ ಭೇಟಿಯ ಸಂದರ್ಭದಲ್ಲಿ ಆತ, ಮಹಿಳೆಯ ಹಲವು ಫೋಟೊಗಳನ್ನು ರಹಸ್ಯವಾಗಿ ತೆಗೆದಿಟ್ಟುಕೊಂಡಿದ್ದ.

ಮುಂದೆ ಅವನು ಉದ್ಯೋಗವನ್ನು ಕಳೆದುಕೊಂಡಾಗ ಇಬ್ಬರ ನಡುವಣ ಸಂಬಂಧ ಹದಗೆಡುತ್ತದೆ. ಮಹಿಳೆಯು ಆ ವ್ಯಕ್ತಿಯಿಂದ ಅಂತರ ಕಾಯ್ದುಕೊಂಡು, ಆತನ ಸ್ನೇಹಿತನೊಬ್ಬನಿಗೆ ಹತ್ತಿರವಾಗುತ್ತಾಳೆ. ಇದರಿಂದ ಕುಪಿತಗೊಂಡ ಆತ, ಈ ಹಿಂದೆ ಆಕೆಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಾನೆ. ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸುವ ಮತ್ತು ಆನ್‌ಲೈನ್‌ ಸಂವಹನಗಳಲ್ಲಿ ಎಚ್ಚರ ವಹಿಸಬೇಕಾದ ಪ್ರಾಮುಖ್ಯವನ್ನು ಈ ಪ್ರಕರಣ ಒತ್ತಿ ಹೇಳುತ್ತದೆ. ಸಾಮಾನ್ಯವಾಗಿ ಇಂತಹ ಅಪರಾಧಗಳನ್ನು ಎದುರಿಸುವಷ್ಟು ಅಥವಾ ಆ ಬಗ್ಗೆ ದೂರು ನೀಡುವಷ್ಟು ಸಾಮರ್ಥ್ಯ ತಮಗೆ ಇಲ್ಲ ಎಂಬ ಭಾವನೆ ಗ್ರಾಮೀಣ ಭಾಗದ ಮಹಿಳೆಯರಲ್ಲಿದೆ.

ಮೇಲಿನ ಎರಡೂ ಸಂದರ್ಭಗಳಲ್ಲಿ, ಮಹಿಳೆಯರು ದೂರು ಸಲ್ಲಿಸಲು ಮುಂದೆ ಬಂದರು. ತಕ್ಷಣ ಪ್ರತಿಕ್ರಿಯಿಸಿದ ಪೊಲೀಸರು, ಎರಡೂ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಿದರು. ದೂರುದಾರರ ಗೋಪ್ಯತೆ ಕಾಯ್ದುಕೊಂಡರು. ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಹಿಳೆಯರನ್ನು ಗುರಿಯಾಗಿಸಿ ನಡೆಯುತ್ತಿರುವ ಸೈಬರ್ ಅಪರಾಧಗಳು ದೊಡ್ಡ ಬೆದರಿಕೆಯಾಗಿ ಪರಿಣಮಿಸಿವೆಯಾದರೂ, ಇದರಿಂದ ರಕ್ಷಣೆ ಪಡೆಯಲು ಹಲವು ಮಾರ್ಗಗಳಿವೆ. ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ತಮ್ಮನ್ನು ತಾವುರಕ್ಷಿಸಿಕೊಳ್ಳುವ ದಿಸೆಯಲ್ಲಿನ ಕೆಲವು ಸಲಹೆಗಳು ಇಲ್ಲಿವೆ:

  • ಸೈಬರ್ ಅಪರಾಧಗಳ ಮೇಲೆ ನಿಗಾ ವಹಿಸಲು ಮತ್ತು ಅಂತಹ ಪ್ರಕರಣಗಳು ವರದಿಯಾದರೆ ತಕ್ಷಣ ಸ್ಪಂದಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸೈಬರ್ ದಳ ಸ್ಥಾ‍ಪಿಸುವುದು. ಈ ತಂಡವು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿರಬೇಕು. ಗೋಡೆ ಬರಹ ಮತ್ತು ಪೋಸ್ಟರ್‌ಗಳ ಮೂಲಕ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು.

  • ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಾಲಕಾಲಕ್ಕೆ ಡಿಜಿಟಲ್ ಸಾಕ್ಷರತೆ ಕುರಿತು ಕಾರ್ಯಾಗಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು.

  • ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರನ್ನು ಸಂಪಾದಿಸುವಾಗ ಎಚ್ಚರ ವಹಿಸುವುದು ಅಗತ್ಯ. ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿ, ಫೋಟೊ ಅಥವಾ ವಿಡಿಯೊಗಳನ್ನು ಅಪರಿಚಿತರ ಜತೆ ಹಂಚಿಕೊಳ್ಳಬಾರದು.

  • ಅಪರಿಚಿತ ವ್ಯಕ್ತಿಗಳಿಂದ ಬರುವ ಫ್ರೆಂಡ್‌ ರಿಕ್ವೆಸ್ಟ್‌ ಅಥವಾ ಅನಪೇಕ್ಷಿತ ಸಂದೇಶ ಸೇರಿದಂತೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣದಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು.

  • ಆನ್‌ಲೈನ್ ಖಾತೆಗಳಿಗೆ ಬಹು ಹಂತಗಳ ದೃಢೀಕರಣ ಅಳವಡಿಸಿ. ಇದು ಹ್ಯಾಕರ್‌ಗಳು ನಿಮ್ಮ ಖಾತೆಗೆ ಸುಲಭದಲ್ಲಿ ಕನ್ನ ಹಾಕಲು ಸಾಧ್ಯವಾಗದಂತಹ ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ.

  • ಆನ್‌ಲೈನ್‌ ಮೂಲಕ ನಡೆಸುವ ವಹಿವಾಟುಗಳಲ್ಲಿ ಯಾವುದಕ್ಕೆಲ್ಲಾ ಸಮ್ಮತಿ ನೀಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವುದು.

  • ಆನ್‌ಲೈನ್‌ನಲ್ಲಿ ಅತ್ಯಂತ ಸೂಕ್ಷ್ಮ ವಹಿವಾಟುಗಳನ್ನುನಡೆಸಲು ಸಾರ್ವಜನಿಕ ವೈಫೈ ಸೌಲಭ್ಯವನ್ನು ಬಳಸಬೇಡಿ. ಏಕೆಂದರೆ, ಅದು ಅಷ್ಟೊಂದು ಸುರಕ್ಷಿತವಾಗಿರದ ಕಾರಣ ಸೈಬರ್‌ ಅಪರಾಧಿಗಳಿಗೆ ಸುಲಭದಲ್ಲಿ ನಿಮ್ಮ ರಹಸ್ಯ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ.

  • ಮಹಿಳೆಯರು ಕಾನೂನಿನ ನೆರವು ಪಡೆಯುವುದಕ್ಕೆ ಹಿಂಜರಿಯಬಾರದು. ಆನ್‌ಲೈನ್ ಮೂಲಕ ವಂಚನೆಗೆ ಒಳಗಾದವರಿಗೆ ನೆರವಾಗಲು ಸಹಾಯವಾಣಿಗಳು ಮತ್ತು ಸಂಸ್ಥೆಗಳಿವೆ. ಮಹಿಳೆಯರು ಪರಸ್ಪರರನ್ನು ಅರಿತುಕೊಳ್ಳಲು ಸ್ಥಳೀಯವಾಗಿ ಗುಂಪುಗಳನ್ನು ರಚಿಸಬಹುದು. ಅಲ್ಲಿ ತಮ್ಮ ಅನುಭವ ಮತ್ತು ಮಾಹಿತಿಗಳನ್ನು ಹಂಚಿಕೊಂಡರೆ, ಅದು ಇತರರಿಗೆ ಜಾಗ್ರತೆ ವಹಿಸಲು ಹಾಗೂ ತಮ್ಮನ್ನು ತಾವು ಸುರಕ್ಷಿತವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಲೇಖಕ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT