ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀಂದ್ರ ಕುಲಕರ್ಣಿ ಬರಹ: ರಾಷ್ಟ್ರಪತಿ: ಹೇಗಿದ್ದರೆ ದೇಶಕ್ಕೆ ಹಿತ?

ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ ಮೊಟಕಾಗುತ್ತಿರುವಾಗ ರಬ್ಬರ್‌ಸ್ಟ್ಯಾಂಪ್‌ ರಾಷ್ಟ್ರಪತಿ ಬೇಡ
Last Updated 11 ಜುಲೈ 2022, 19:30 IST
ಅಕ್ಷರ ಗಾತ್ರ

ದೇಶದ ರಾಜಧಾನಿ ದೆಹಲಿಯಲ್ಲಿ ಅತಿ ಭವ್ಯ ಕಟ್ಟಡ ಯಾವುದು? ನಿಸ್ಸಂದೇಹವಾಗಿಯೂ ರಾಷ್ಟ್ರಪತಿ ಭವನ. 320 ಎಕರೆ ವ್ಯಾಪ್ತಿಯ ಎಸ್ಟೇಟಿನಲ್ಲಿ 340 ಕೋಣೆಗಳ ಬೃಹದಾಕಾರದ ನಿಲಯ. ಅದರಲ್ಲಿ 190 ಎಕರೆಗಳು ಉದ್ಯಾನಕ್ಕಾಗಿ ಬಳಕೆಯಾಗಿವೆ. 1929ರಲ್ಲಿ ಬ್ರಿಟಿಷ್‌ ವೈಸರಾಯ್‌ಗಾಗಿ ಅರಮನೆಯಾಗಿ ಕಟ್ಟಿದ್ದ ಈ ಭವನವನ್ನು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತದ ರಾಷ್ಟ್ರಪತಿ ಬಳಸುತ್ತಿದ್ದಾರೆ. ಆದರೆ ರಾಷ್ಟ್ರಪತಿ ಸ್ಥಾನದ ಮಹತ್ವವು ಈ ಅತ್ಯಾಕರ್ಷಕ ಭವನದ ಕಾರಣದಿಂದಾಗಿ ಬಂದಿಲ್ಲ. ನಮ್ಮ ದೇಶದ ಸಂವಿಧಾನದ ಸಂರಕ್ಷಕನಾಗಿ ಕರ್ತವ್ಯ ನಿರ್ವಹಿಸುವ ಹಾಗೂ ನಮ್ಮ ಗಣರಾಜ್ಯದ ಪ್ರಮುಖನಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ
ಅವರದ್ದಾಗಿರುವುದರಿಂದಲೇ ರಾಷ್ಟ್ರಪತಿಯವರಿಗೆ ಮಹತ್ವ ದೊರಕಿದೆ.

ವಿಷಾದದ ವಿಷಯವೆಂದರೆ, ಇತ್ತೀಚಿನ ವರ್ಷಗಳಲ್ಲಿ ಈ ಸ್ಥಾನ ತನ್ನ ಘನತೆಯನ್ನು ಬಹಳಷ್ಟು ಕಳೆದುಕೊಂಡಿದೆ. ರಾಷ್ಟ್ರಪತಿ ಎಂದರೆ ಒಬ್ಬ ಉತ್ಸವಮೂರ್ತಿ, ಅದು ಬಾಹ್ಯ ಶಿಷ್ಟಾಚಾರಕ್ಕಾಗಿ ಬೇಕಾದ ಒಂದು ಔಪಚಾರಿಕ ಸ್ಥಾನ ಎಂಬ ತಪ್ಪು ನಂಬಿಕೆ ಹುಟ್ಟಿಕೊಂಡಿದೆ. ಆದರೆ ನಮ್ಮ ಸಂವಿಧಾನವನ್ನು ರೂಪಿಸಿದವರ ಕಲ್ಪನೆ ಹಾಗಿರಲಿಲ್ಲ. ಅವರು, ಅಮೆರಿಕದಂಥ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷರು ನಡೆಸುವ ಆಡಳಿತ ಮಾದರಿಯನ್ನು ಸ್ವೀಕರಿಸಲಿಲ್ಲ. ಬ್ರಿಟನ್ನಿ ನಲ್ಲಿರುವ ಸಂಸದೀಯ ವ್ಯವಸ್ಥೆಯನ್ನೂ ಯಥಾವತ್ತಾಗಿ ನಕಲು ಮಾಡಲಿಲ್ಲ. ನಮ್ಮದು ಸಂಸದೀಯ ಪ್ರಜಾಪ್ರಭುತ್ವವಾಗಿದ್ದರೂ ರಾಷ್ಟ್ರಪತಿಯು ಯಾವುದೇ ಅಧಿಕಾರ ಇಲ್ಲದ, ಹೆಸರಿಗಷ್ಟೇ ರಾಷ್ಟ್ರ ಪ್ರಮುಖರಾಗಿರುವ ಬ್ರಿಟನ್ನಿನ ರಾಜ ಅಥವಾ ರಾಣಿಯಂತೆ ಅಲ್ಲ. ಸಂವಿಧಾನವು ರಾಷ್ಟ್ರಪತಿಯವರಿಗೆ ನಿರ್ದಿಷ್ಟ ಅಧಿಕಾರಗಳನ್ನು ನೀಡಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಕಂಬಗಳ ಮೇಲೆ ನಿಂತಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ರಾಷ್ಟ್ರಪತಿ ಈ ಮೂರೂ ಅಂಗಗಳ ಪ್ರಮುಖರು.

ಆದರೆ ರಾಷ್ಟ್ರಪತಿಯವರಿಗಾಗಲೀ ಇಲ್ಲವೇ ಕಾರ್ಯಾಂಗದ ಪ್ರಮುಖರಾದ ಪ್ರಧಾನ ಮಂತ್ರಿಯವರಿಗಾಗಲೀ ಅಪರಿಮಿತ, ನಿರಂಕುಶ ಅಧಿಕಾರಗಳಿಲ್ಲ. ಎಲ್ಲ ಸ್ಥಾನಗಳ ಹಾಗೂ ಎಲ್ಲ ಸಂಸ್ಥೆಗಳ ನಡುವೆ ನಿಯಂತ್ರಣ ಮತ್ತು ಸಮತೋಲನವು ನಮ್ಮ ಸಂವಿಧಾನದ ಅತಿ ಮಹತ್ವದ ವೈಶಿಷ್ಟ್ಯಗಳಲ್ಲಿ ಒಂದು. ಯಾವುದೇ ಸಂಸ್ಥೆ ಅಥವಾ ಅದನ್ನು ನಡೆಸುವ ವ್ಯಕ್ತಿ ತನ್ನ ಅಧಿಕಾರದ ಸೀಮೆಗಳನ್ನು ಉಲ್ಲಂಘಿಸಿದರೆ ಅಥವಾ ಸಂವಿಧಾನದ ತತ್ವಗಳ ಅವಹೇಳನ ಮಾಡಿದರೆ, ರಾಷ್ಟ್ರಪತಿಅವರು ಬಹಿರಂಗವಾಗಿ ಇಲ್ಲವೇ ಖಾಸಗಿಯಾಗಿ ಸಲಹೆ ಹಾಗೂ ಸದುಪದೇಶ ಕೊಡಬಹುದು. ಅವರು ಹೇಳಿದ ಮಾತುಗಳನ್ನು ಇತರ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಹೀಗಿರುವಾಗ, ರಾಷ್ಟ್ರಪತಿ ಯಾರಾಗಬೇಕು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಸಂವಿಧಾನದ ಬಗ್ಗೆ ಆಳವಾದ ಅಧ್ಯಯನ ಮಾಡಿದವರು, ಅದರ ನೀತಿ-ನಿಯಮಗಳನ್ನು ಯಾವುದೇ ಅಂಜಿಕೆ, ಪಕ್ಷಪಾತ ಇಲ್ಲದೆ ಪಾಲಿಸುವ ಬದ್ಧತೆ ಇರುವವರು, ರಾಷ್ಟ್ರ
ಜೀವನದಲ್ಲಿ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿ ವ್ಯಾಪಕ ಅನುಭವ ಪಡೆದು ಕೀರ್ತಿ ಗಳಿಸಿದವರು ಈ ಸ್ಥಾನವನ್ನು ಅಲಂಕರಿಸಲು ಅರ್ಹರು. ಇಂಥ ಅರ್ಹತೆ ಇದ್ದ ಕೆಲವರು ಭಾರತದ ರಾಷ್ಟ್ರಪತಿಯಾಗಿ ಆ ಸ್ಥಾನದ ಗೌರವವನ್ನು ಬೆಳೆಸಿದ್ದಾರೆ. ಉದಾಹರಣೆಗೆ, ಡಾ. ರಾಜೇಂದ್ರ ಪ್ರಸಾದ್‌, ಡಾ. ಎಸ್.ರಾಧಾಕೃಷ್ಣನ್, ಡಾ. ಜಾಕಿರ್ ಹುಸೇನ್, ಕೆ.ಆರ್.ನಾರಾಯಣನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರಣವ್‌ ಮುಖರ್ಜಿ. ಆದರೆ ಇನ್ನು ಕೆಲವರು ಮಾತ್ರ ಪ್ರಧಾನಿಯವರ ಕೈಗೊಂಬೆಯಂತೆ ಕೆಲಸ ಮಾಡಿದ್ದಾರೆ. ಫಕ್ರುದ್ದೀನ್‌ ಅಲಿ ಅಹಮದ್ ತಮ್ಮ ವಿವೇಚನೆ ಬಳಸದೆ, ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಣಯವನ್ನು ಪ್ರಶ್ನಿಸದೆ, ಕಣ್ಣುಮುಚ್ಚಿ ಒಪ್ಪಿಗೆ ನೀಡಿದ್ದರಿಂದಲೇ 1975ರಲ್ಲಿ ತುರ್ತು ಪರಿಸ್ಥಿತಿಯಂಥ ಸಂಕಟವನ್ನು ದೇಶ ಎದುರಿಸಬೇಕಾಯಿತು.

ಭಾರತದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ ಮೊಟಕುಗೊಂಡಿದೆ. ಆಡಳಿತ ಪಕ್ಷದ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳ ನಾಯಕರನ್ನು ಹೆದರಿಸಲು, ವಿರೋಧ ಪಕ್ಷಗಳನ್ನು ಒಡೆಯಲು, ಅವುಗಳ ನೇತೃತ್ವದ ಸರ್ಕಾರಗಳನ್ನು ಬೀಳಿಸಲು ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆಯಂತಹ ಸಂಸ್ಥೆಗಳ ದುರುಪಯೋಗವಾಗುತ್ತಿದೆ. ನ್ಯಾಯಾಂಗವನ್ನೂ ನಿಯಂತ್ರಿಸುವ ಹುನ್ನಾರ ನಡೆದಿದೆ. ಸಮಾಜದಲ್ಲಿ ಧರ್ಮಾಂಧತೆಯನ್ನು ಪೋಷಿಸಿ, ಕೋಮುದ್ವೇಷ ಪಸರಿಸಿ ಚುನಾವಣೆ ಗೆಲ್ಲುವ ಹೀನ ಪ್ರಯತ್ನ ಮುಂದುವರಿದಿದೆ. ಪಾರ್ಲಿಮೆಂಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಇವೆಲ್ಲ ನಡೆದಿರುವಾಗ, ಈ ಐದು ವರ್ಷಗಳಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಎಲ್ಲರಿಗೂ ಕೇಳಿಸುವಂಥ ಮೌನಧಾರಣೆ ಮಾಡಿದರು. ಅವರು ಸರ್ಕಾರದ ರಬರ್ ಸ್ಟ್ಯಾಂಪ್ ಆಗಿಯೇ ಕೆಲಸ ಮಾಡಿದರು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಅವುಗಳಲ್ಲಿ ಒಂದೆಂದರೆ, 2019ರ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಒಮ್ಮಿಂದೊಮ್ಮೆಲೇ ಮಧ್ಯರಾತ್ರಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡರು. ನಂತರ ಯಾರಿಗೂ ಗೊತ್ತಾಗದಂತೆ ನಸುಕಿನಲ್ಲಿಯೇ ರಾಜ್ಯಪಾಲರು ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಬಿಟ್ಟರು. ಈ ಹಿಂದಿನ ಐದು ವರ್ಷಗಳಲ್ಲಿ ಸರ್ಕಾರದ ಯಾವುದೇ ತಪ್ಪಿನ ಬಗ್ಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವರು ಮಾತನಾಡಲಿಲ್ಲ.

ಈಗ ಮುಂದಿನ ಐದು ವರ್ಷಗಳಿಗೆ ಹೊಸ ರಾಷ್ಟ್ರಪತಿಯವರ ಆಯ್ಕೆಗಾಗಿ ಈ ತಿಂಗಳ 18ರಂದು ಚುನಾವಣೆ ನಡೆಯಲಿದೆ. ದ್ರೌಪದಿ ಮುರ್ಮು ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ವಿರೋಧ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ತಮ್ಮ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿವೆ. ಸಂಸತ್ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಮಾತ್ರ ಭಾಗವಹಿಸಬಲ್ಲ ಈ ಚುನಾವಣೆಯಲ್ಲಿ ಮುರ್ಮು ಅವರು ಗೆಲ್ಲುವ ಸಾಧ್ಯತೆ ಹೆಚ್ಚು. ಅವರು ಗೆದ್ದರೆ ಮೊದಲನೇ ಬಾರಿ ಒಬ್ಬ ಆದಿವಾಸಿ ಮಹಿಳೆಯು ಭಾರತದ ರಾಷ್ಟ್ರಪತಿಯಾಗುವರು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳಲ್ಲಿ ನಂಬಿಕೆ ಇರುವ ಎಲ್ಲರೂ ಇದನ್ನು ಸ್ವಾಗತಿಸಲೇಬೇಕು. ಭಾರತದ ಪ್ರಜಾಪ್ರಭುತ್ವವು ಎಲ್ಲ ವರ್ಗಗಳಿಗೂ ಸಮಾನ ಸ್ಥಾನ ಮತ್ತು ಅವಕಾಶಗಳನ್ನು ಕೊಡುತ್ತದೆ ಹಾಗೂ ಇಲ್ಲಿ ಒಬ್ಬ ಹಿಂದುಳಿದ ಸಮುದಾಯದ ಮಹಿಳೆಯೂ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುತ್ತಾಳೆ ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನವಾಗಬಲ್ಲದು.

ಆದರೆ, ಬರೀ ಒಬ್ಬ ಆದಿವಾಸಿ ಮಹಿಳೆ ರಾಷ್ಟ್ರಪತಿ ಆಗುವುದರಿಂದಲೇ ದೇಶದ ಜನತೆ ತೃಪ್ತರಾಗಬಹುದೇ? ಅವರು ಯಾವುದೇ ಭೀತಿ- ಪಕ್ಷಪಾತ ಇಲ್ಲದೆ ಸಂವಿಧಾನದ ಕಾವಲುಗಾರರಾಗಿಯೂ ಹೊಣೆ ನಿರ್ವಹಿಸಬೇಕು ಎಂಬುದೂ ಜನರ ಅಪೇಕ್ಷೆಯಾದರೆ ಅದು ತಪ್ಪೇ? ನಾವು ಒಬ್ಬ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತಿದ್ದೇವೆ ಎಂದು ಬಿಜೆಪಿಯವರುಐದು ವರ್ಷಗಳ ಹಿಂದೆ ಹೇಳಿದ್ದರು. ಆದರೆ ದಲಿತ ಸಮಾಜವಾಗಲೀ ಇತರರಾಗಲೀ ಹೆಮ್ಮೆಪಡುವಂಥ ಕಾರ್ಯವು ಕೋವಿಂದ್‌ ಅವರಿಂದ ಆಗಲಿಲ್ಲ. ಆದ್ದರಿಂದ ಚುನಾವಣೆಯಲ್ಲಿ ಆದಿವಾಸಿ ಸಮುದಾಯದ ಮತಗಳನ್ನು ಗಳಿಸುವುದಕ್ಕಾಗಿ ಮಾತ್ರ ಮುರ್ಮು ಅವರನ್ನು ಬಿಜೆಪಿಯವರು ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂಬ ಸಂದೇಹ ಇಂದು ಅನೇಕರಲ್ಲಿದೆ. ಇದಕ್ಕೆ ಮುರ್ಮು ಅವರ ಮೌನವೂ ಕಾರಣವಾಗಿದೆ.

ಇದುವರೆಗೆ ಅವರು ಒಂದೂ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಸಂವಿಧಾನ ಹಾಗೂ ದೇಶದ ಎದುರಿಗಿರುವ ಯಾವುದೇ ಸವಾಲುಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಕಟಪಡಿಸಿಲ್ಲ. ಸಿನ್ಹಾ ಅವರು ದೇಶದಾದ್ಯಂತ ಮಾಧ್ಯಮ ಪ್ರತಿನಿಧಿಗಳ ಮೂಲಕ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಸಂವಿಧಾನದ ರೂವಾರಿಗಳು ಆಡಳಿತ ಪಕ್ಷದ ರಾಜಕೀಯ ಲಾಭಕ್ಕಾಗಿ ರಾಷ್ಟ್ರಪತಿ ಸ್ಥಾನವನ್ನು ಪ್ರತಿಷ್ಠಾಪಿಸಿಲ್ಲ. ರಾಷ್ಟ್ರಪತಿ ಭವನದ ಅಲಂಕಾರ ಮೂರ್ತಿಯನ್ನಾಗಿಯೂ ಈ ಸ್ಥಾನವನ್ನು ಪರಿಭಾವಿಸಿಲ್ಲ. ಯಾವುದೇ ಹಂಗಿಲ್ಲದೆ ಸಂಪೂರ್ಣ ಜವಾಬ್ದಾರಿಯಿಂದ ಸೇವೆ ಸಲ್ಲಿಸಿ, ತನ್ನ ಬದ್ಧತೆಯು ಸಂವಿಧಾನಕ್ಕೆ ಮಾತ್ರ, ಸರ್ಕಾರಕ್ಕೆ ಅಲ್ಲ ಎಂದು ತೋರಿಸಿಕೊಟ್ಟು, ಭಾರತೀಯ ಪ್ರಜಾಪ್ರಭುತ್ವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕಾಳಜಿ ವಹಿಸಿ, ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಿಸುವ ಕಾರ್ಯವು ಗೆಲ್ಲುವ ಅಭ್ಯರ್ಥಿಯಿಂದ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT