ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಉತ್ತರ ಕಂಡುಕೊಳ್ಳುವುದೇ ಕಾಂಗ್ರೆಸ್?

ಬಿ.ಎಸ್. ಅರುಣ್
Published 5 ಡಿಸೆಂಬರ್ 2023, 23:25 IST
Last Updated 5 ಡಿಸೆಂಬರ್ 2023, 23:25 IST
ಅಕ್ಷರ ಗಾತ್ರ

ಉತ್ತರ ಭಾರತದ ಮೂರು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೆ ಪಾಠಗಳಿವೆ. ಫಲಿತಾಂಶದ ನಂತರ ಕಾಂಗ್ರೆಸ್ಸಿನ ನೈತಿಕ ಸ್ಥೈರ್ಯಕ್ಕೆ ಬಲವಾದ ಪೆಟ್ಟು ಬಿದ್ದಂತಿದೆ. ಇನ್ನು ಆರೇ ತಿಂಗಳಲ್ಲಿ ಇದಕ್ಕೂ ದೊಡ್ಡದಾದ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಿರುವ ಕಾರಣ ಪಕ್ಷವು ಈಗ ಬಿದ್ದಿರುವ ಏಟಿನಿಂದ ತಕ್ಷಣವೇ ಚೇತರಿಸಿಕೊಳ್ಳಬೇಕಿದೆ. 2018ರಲ್ಲಿ ಕಾಂಗ್ರೆಸ್ ಪಕ್ಷವು ಈ ಮೂರು (ರಾಜಸ್ಥಾನ, ಛತ್ತೀಸಗಢ ಮತ್ತು ಮಧ್ಯಪ್ರದೇಶ) ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದ್ದರೂ, ಶಾಸಕರ ಪಕ್ಷಾಂತರದ ಕಾರಣದಿಂದಾಗಿ ನಂತರ ಅಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಯಿತು.

ಮೂರೂ ರಾಜ್ಯಗಳಲ್ಲಿ (ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ) ಪಕ್ಷ ಸೋಲುತ್ತದೆ ಎಂದು ಕಾಂಗ್ರೆಸ್ಸಿ ನಲ್ಲಿ ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಪಕ್ಷವು ಅದೆಷ್ಟರಮಟ್ಟಿಗೆ ಅತಿಯಾದ ವಿಶ್ವಾಸದಲ್ಲಿತ್ತು ಎಂದರೆ, ಒಂದು ವರ್ಷದ ಹಿಂದೆಯೇ ಪಕ್ಷದ ನಾಯಕರು ತಾವು ಕನಿಷ್ಠ ಎರಡು ರಾಜ್ಯಗಳಲ್ಲಿ ಸುಲಭವಾಗಿ ಗೆಲುವು ಸಾಧಿಸುವುದಾಗಿ ಹೇಳಿಕೊಳ್ಳುತ್ತಿದ್ದರು. ತೆಲಂಗಾಣದಲ್ಲಿ ಬಿಆರ್‌ಎಸ್‌ನಿಂದ ಅಧಿಕಾರವನ್ನು ಕಾಂಗ್ರೆಸ್ ಕಿತ್ತು
ಕೊಂಡಿದೆಯಾದರೂ, ಅದು ಸಮಾಧಾನಕರ ಬಹು ಮಾನದಂತೆ ಕಾಣುತ್ತಿದೆ. ಈಶಾನ್ಯದ ಮಿಜೋರಾಂನಲ್ಲಿ ಪಕ್ಷವು ದಯನೀಯವಾಗಿ ಸೋತಿದೆ.

ಉತ್ತರದಲ್ಲಿ ಆಗಿರುವ ಸೋಲಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಒಂದೇ ಒಂದು ಪೂರಕ ಅಂಶದ ಮೇಲೆ ಗಮನಹರಿಸೋಣ. 2018ರಲ್ಲಿ ಪಡೆದಿದ್ದ ಮತಗಳ ಪ್ರಮಾಣವನ್ನು ಪಕ್ಷವು ಈ ಬಾರಿ ಹಿಡಿದುಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದೆ. ರಾಜಸ್ಥಾನದಲ್ಲಿ ಈ ಬಾರಿ ಶೇ 39.7ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದಿದೆ, ಕಳೆದ ಬಾರಿ ಇದು ಶೇ 39.3ರಷ್ಟು ಆಗಿತ್ತು (ಬಿಜೆಪಿಯು ತನ್ನ ಮತ ಗಳಿಕೆ ಪ್ರಮಾಣ ಶೇ 38.8ರಷ್ಟು ಇದ್ದಿದ್ದನ್ನು ಶೇ 42ಕ್ಕೆ ಹೆಚ್ಚಿಸಿಕೊಂಡಿದೆ). ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಈ ಬಾರಿ ಶೇ 40.4ರಷ್ಟು ಮತಗಳನ್ನು ಪಡೆದಿದೆ; ಹಿಂದಿನ ಬಾರಿ ಶೇ 40.9ರಷ್ಟು ಇತ್ತು (ಇಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣ ಶೇ 41ರಷ್ಟು ಇದ್ದಿದ್ದನ್ನು ಶೇ 48.4ಕ್ಕೆ ಹೆಚ್ಚಿಸಿಕೊಂಡಿದೆ). ಛತ್ತೀಸಗಢದಲ್ಲಿ ಕಾಂಗ್ರೆಸ್ ಈ ಬಾರಿ ಶೇ 41.9ರಷ್ಟು ಮತ ಪಡೆದಿದೆ, ಕಳೆದ ಬಾರಿ ಇದು ಶೇ 43ರಷ್ಟು ಆಗಿತ್ತು (ಬಿಜೆಪಿ ಇಲ್ಲಿ ಮತ ಗಳಿಕೆ ಪ್ರಮಾಣ ಶೇ 33ರಷ್ಟು ಇದ್ದಿದ್ದನ್ನು ಶೇ 46.2ಕ್ಕೆ ಹೆಚ್ಚಿಸಿಕೊಂಡಿದೆ).

ಎರಡೂ ಪಕ್ಷಗಳು ಪಡೆದಿರುವ ಮತಗಳ ಸಂಖ್ಯೆಯ ನಡುವಿನ ವ್ಯತ್ಯಾಸವು ಬಹಳ ಗಾಢವಾಗಿ ಕಾಣಿಸು ತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ 1,56,66,731 ಮತಗಳನ್ನು ಪಡೆದಿದೆ, ಬಿಜೆಪಿ 1,65,23,568 ಮತಗಳನ್ನು ತನ್ನದಾಗಿಸಿಕೊಂಡಿದೆ. ಮಧ್ಯಪ್ರದೇಶ ದಲ್ಲಿ ಕಾಂಗ್ರೆಸ್ 1,75,64,353 ಮತಗಳನ್ನು, ಬಿಜೆಪಿಯು 2,11,13,278 ಮತಗಳನ್ನು ಪಡೆದಿವೆ. ಛತ್ತೀಸಗಢದಲ್ಲಿ ಕಾಂಗ್ರೆಸ್ಸಿಗೆ 66,02,586 ಮತಗಳು ಹಾಗೂ ಬಿಜೆಪಿಗೆ 72,34,968 ಮತಗಳು ದೊರೆತಿವೆ. ಮೂರು ರಾಜ್ಯಗಳಲ್ಲಿ ಎರಡು ಪಕ್ಷಗಳು ಪಡೆದ ಮತಗಳ ಸಂಖ್ಯೆಯನ್ನು ಒಗ್ಗೂಡಿಸಿ ನೋಡಿದಾಗ, ವ್ಯತ್ಯಾಸವು ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ಕಾಂಗ್ರೆಸ್ ಒಟ್ಟು 3,97,33,670 ಮತಗಳನ್ನು ಹಾಗೂ ಬಿಜೆಪಿ ಒಟ್ಟು 4,48,71,814 ಮತಗಳನ್ನು ಪಡೆದಿವೆ. ಅಂದರೆ, ಒಗ್ಗೂಡಿಸಿ ನೋಡಿದಾಗ ಎರಡು ಪಕ್ಷಗಳು ಪಡೆದಿರುವ ಒಟ್ಟು ಮತಗಳ ನಡುವಿನ ವ್ಯತ್ಯಾಸವು 50 ಲಕ್ಷಕ್ಕೂ ಹೆಚ್ಚಿದೆ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ ಬಿಜೆಪಿಯು ಮೂರೂ ರಾಜ್ಯಗಳಲ್ಲಿ ಈ ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ತೋರಿರುವ ಸಾಧನೆಯು 2018ಕ್ಕೆ ಹೋಲಿಸಿದರೆ ಎದ್ದು ಕಾಣುವಂತಿದೆ. ಮಹಿಳೆಯರು ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ನೀಡಿದ ಗಮನವು ಬಿಜೆಪಿಯು ಎಲ್ಲ ವರ್ಗಗಳಿಂದ ಬೆಂಬಲ ಪಡೆಯಲು ನೆರವಾಗಿದೆ.

ಈಗ ಬಿಜೆಪಿಯ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಅದು ಹೀಗಿದೆ: ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮಾ ಮತ್ತು ‘ಕೆಲಸ ಮಾಡುವವರು’ ಎಂಬ ಹೆಗ್ಗಳಿಕೆ; ಗೃಹ ಸಚಿವ ಅಮಿತ್ ಶಾ ಅವರ ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರ. ಬಿಜೆಪಿಯು ಮೋದಿ ಅವರ ಹೆಸರಿನಲ್ಲಿ ಮತ ಯಾಚಿಸಿದ್ದ ಕಾರಣ, ಈ ವಿಜಯವು ಮೋದಿ ಅವರ ನಾಯಕತ್ವಕ್ಕೆ ಮತ್ತೊಮ್ಮೆ ಅನುಮೋದನೆ ನೀಡಿದಂತಿದೆ. ಭ್ರಷ್ಟಾಚಾರದ ಆರೋಪ (ಅದಾನಿ) ಹಾಗೂ ಮೋದಿ ಅವರ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ನಡೆಸಿದ ‘ಅಪಶಕುನ’ದ ದೂಷಣೆಯು ಕೆಲಸಕ್ಕೆ ಬಂದಿಲ್ಲ. ಬದಲಿಗೆ, ಇವು ಕಾಂಗ್ರೆಸ್ ವಿರುದ್ಧ ತಿರುಗುಬಾಣವಾಗಿ ಪರಿವರ್ತನೆ ಕಂಡಿವೆ. ತಳಹಂತದ ಕಾರ್ಯಕರ್ತರ ಜೊತೆ ಸಂಪರ್ಕ ಇಟ್ಟುಕೊಂಡು, ಕೆಳಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ಬಿಜೆಪಿ ಗಮನಿಸುತ್ತಿರುತ್ತದೆ. ಅದು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಆರಂಭದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ರಮಣ್ ಸಿಂಗ್ ಅವರನ್ನು ಪಕ್ಕಕ್ಕೆ ಸರಿಸಿದ್ದರೂ ನಂತರದಲ್ಲಿ ಅವರನ್ನು ಪ್ರಧಾನ ನೆಲೆಗೆ ಕರೆತಂದ ಕಾರ್ಯತಂತ್ರ ಯಶಸ್ಸು ಕಂಡಿರುವುದನ್ನು ಈಗ ಯಾರು ಬೇಕಿದ್ದರೂ ಗಮನಿಸಬಹುದು.

ಆದರೆ ಇದಕ್ಕೆ ವಿರುದ್ಧವಾಗಿ, ಕಾಂಗ್ರೆಸ್ ಅನುಸರಿಸಿದ ಯಾವುದೇ ಕಾರ್ಯತಂತ್ರವು ಮತದಾರರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಪಕ್ಷವು ಘೋಷಿಸಿದ ಗ್ಯಾರಂಟಿಗಳಾಗಲೀ ರಾಹುಲ್ ಗಾಂಧಿ ಅವರೇ ಪ್ರಸ್ತಾಪಿಸಿದ ಜಾತಿ ಗಣತಿಯ ವಿಚಾರವಾಗಲೀ ಮತದಾರರಲ್ಲಿ ಉತ್ಸಾಹ ಚಿಮ್ಮಿಸುವ ಕೆಲಸ ಮಾಡಲಿಲ್ಲ. ಜಾತಿ ಗಣತಿಯು ಉತ್ತರ ಭಾರತದ ರಾಜ್ಯಗಳಲ್ಲಿಯೇ ಹೆಚ್ಚು ಪರಿಣಾಮ ಉಂಟುಮಾಡಿಲ್ಲ ಎಂಬುದು ಕಾಂಗ್ರೆಸ್ಸಿಗೆ ಕಳವಳ ಮೂಡಿಸುವ ಸಂಗತಿ. ಏಕೆಂದರೆ ಈ ಮೂರು ರಾಜ್ಯಗಳಲ್ಲಿ ಒಬಿಸಿ ಸಮುದಾಯದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ. ಇಲ್ಲಿ ಇನ್ನೊಂದು ವಿಷಯವೂ ಇದೆ. ಒಬಿಸಿ ಜನಸಂಖ್ಯೆ ಹೆಚ್ಚಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನ ಇಬ್ಬರು ಪ್ರಮುಖ ನಾಯಕರು (ಕಮಲ್‌ನಾಥ್‌ ಮತ್ತು ದಿಗ್ವಿಜಯ್ ಸಿಂಗ್) ಮುಂದುವರಿದ ಜಾತಿಗಳಿಗೆ ಸೇರಿದವರು. ಜಾತಿ ಗಣತಿಯ ಮಿತಿಗಳು ಕೂಡ ಇಲ್ಲಿ ಗೊತ್ತಾಗಿವೆ. ನಾಥ್ ಮತ್ತು ಸಿಂಗ್ ಮೃದು ಹಿಂದುತ್ವದ ಧೋರಣೆ ಹೊಂದಿದ್ದರೂ, ಮತದಾರರು ಅದನ್ನು ನಂಬಲಿಲ್ಲ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನಾಯಕತ್ವದಲ್ಲಿ ದೊಡ್ಡ ಬದಲಾವಣೆ ಬೇಕಿದೆ. ಹೈಕಮಾಂಡ್ ಅಥವಾ ನಾಥ್–ಸಿಂಗ್ ಜೋಡಿಯು ಎರಡನೇ ಹಂತದ ನಾಯಕರನ್ನು ಬೆಳೆಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದಲ್ಲಿ ಇಲ್ಲ. ಹೀಗಾಗಿ, ಎರಡನೆಯ ತಲೆಮಾರಿನ ನಾಯಕತ್ವದ ವಿಚಾರದಲ್ಲಿ ಪಕ್ಷದಲ್ಲಿ ನಿರ್ವಾತ ಸ್ಥಿತಿ ಇದೆ. ಮಧ್ಯಪ್ರದೇಶವು ಗುಜರಾತ್ ಮಾದರಿಯಲ್ಲಿ ಬಿಜೆಪಿಯ ಪಾಲಿಗೆ ಭದ್ರಕೋಟೆಯಂತೆ ಆಗುತ್ತಿರುವ ಕಾರಣ, ನಾಯಕರನ್ನು ಅರಸಲು ಕಾಂಗ್ರೆಸ್ ದೀರ್ಘ ಕಾಲ ತೆಗೆದುಕೊಳ್ಳ
ಬೇಕಾಗಬಹುದು.

ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಭ್ರಷ್ಟಾಚಾರದಂತಹ ಸಮಸ್ಯೆಗಳು ಮಾತ್ರವಲ್ಲದೆ, ನಾಯಕರಲ್ಲಿನ ಒಳಜಗಳಗಳು ಪಕ್ಷಕ್ಕೆ ಸಮಸ್ಯೆ ತಂದಿತ್ತವು. ರಾಜಸ್ಥಾನ ದಲ್ಲಿ ಅಶೋಕ್ ಗೆಹಲೋತ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷವನ್ನು ಶಮನ ಮಾಡಲು ಪಕ್ಷಕ್ಕೆ ಆಗಲಿಲ್ಲ. ಈ ಚುನಾವಣೆಗಳ ನಂತರ, ದಕ್ಷಿಣ ಭಾರತವು ಬಿಜೆಪಿ ಮುಕ್ತವಾಗಿರುವಂತೆಯೇ, ಉತ್ತರ ಭಾರತವು ಕಾಂಗ್ರೆಸ್ಸಿನಿಂದ ಬಹುತೇಕ ಮುಕ್ತವಾಗಿದೆ. ಸಣ್ಣ ರಾಜ್ಯ ಹಿಮಾಚಲ ಪ್ರದೇಶ, ಮಧ್ಯಮ ಗಾತ್ರದ ತೆಲಂಗಾಣ ಮತ್ತು ದೊಡ್ಡ ರಾಜ್ಯವಾಗಿರುವ ಕರ್ನಾಟಕವನ್ನು ಹೊರತು ಪಡಿಸಿದರೆ ಪಕ್ಷವು ತನ್ನದೇ ಬಲದಲ್ಲಿ ಇನ್ನೆಲ್ಲಿಯೂ ಸರ್ಕಾರವನ್ನು ಮುನ್ನಡೆಸುತ್ತಿಲ್ಲ, ಎರಡು ರಾಜ್ಯಗಳಲ್ಲಿ ಮೈತ್ರಿಕೂಟದ ಭಾಗವಾಗಿ ಸರ್ಕಾರದಲ್ಲಿಯೂ ಪಾಲು ಹೊಂದಿದೆ. ಆದರೆ ಬಿಜೆಪಿಯು 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರವನ್ನು ಮುನ್ನಡೆಸು ತ್ತಿದೆ ಅಥವಾ ಸರ್ಕಾರದ ಭಾಗವಾಗಿದೆ.

ಹಾಗಾದರೆ, ಕಾಂಗ್ರೆಸ್ಸಿನ ಭವಿಷ್ಯ ಏನು? ಅದು ಯಾವ ರೀತಿಯಲ್ಲಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು? ನೀತಿಗಳು, ನಾಯಕತ್ವ (ಕೇಂದ್ರದಲ್ಲಿ ಮತ್ತು ಕೆಲವು ರಾಜ್ಯಗಳ ಮಟ್ಟದಲ್ಲಿ), ಚುನಾವಣಾ ತಂತ್ರಗಾರಿಕೆ, ಸಂಘಟನೆ ವಿಚಾರವಾಗಿ ಪಕ್ಷದ ಕಾರ್ಯತಂತ್ರ ಏನಿರಬೇಕು? ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಬೇಕಾದ ಸವಾಲು ಕೂಡ ಇದೆ. ಈ ಪ್ರಶ್ನೆಗಳಿಗೆ ಪಕ್ಷವು ಉತ್ತರ ಕಂಡುಕೊಳ್ಳಬೇಕಿದೆ. ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಕಾರಣ ಉತ್ತರವನ್ನು ಬಹಳ ಬೇಗ ಕಂಡುಕೊಳ್ಳಬೇಕಿದೆ.

ಲೇಖಕ: ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT