ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆಗೆ ಮಹಿಳಾ ಗುಂಪುಕೃಷಿ ಉತ್ತರವೇ?

ಗ್ರಾಮದ ಬೀಳು ಭೂಮಿಯು ಮಹಿಳೆಯರ ಕೈಗೆ ಬಂದಾಗ ಖಂಡಿತವಾಗಿ ಗ್ರಾಮದ ಚಿತ್ರವೇ ಬದಲಾಗುತ್ತದೆ
Last Updated 22 ಜೂನ್ 2018, 19:48 IST
ಅಕ್ಷರ ಗಾತ್ರ

ಮೊನ್ನೆ ನವಲಗುಂದದ ರೈತರೊಬ್ಬರು ಕೊಟ್ಟಿಗೆಯಲ್ಲಿ ತಾವು ಸಾಕಿದ್ದ ದನಗಳ ಎದುರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ತನ್ನ ಪಾಲಕ ಸಾವಿಗೆ ಶರಣಾಗುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದ ಆ ಮೂಕ ಪ್ರಾಣಿಗಳು ಮೌನವಾಗಿ ರೋದಿಸಿರಬೇಕು. ಇನ್ನು ಶುರುವಾಗುತ್ತದೆ ಪರಿಹಾರ ಪಡೆಯುವುದಕ್ಕಾಗಿಆ ಮನೆಯ ರೈತ ಮಹಿಳೆಯ ಹೋರಾಟ. ವರದಿಗಳಾಗಬೇಕು, ಅರ್ಜಿಗಳು ಹೋಗಬೇಕು, ದಾಖಲೆಗಳಾಗಬೇಕು, ಆ ರೈತನ ಆತ್ಮಹತ್ಯೆಗೆ ಸಾಲಬಾಧೆಯೇ ಕಾರಣ ಎಂದು ಕೃಷಿ ಆಯುಕ್ತರು ವರದಿ ನೀಡಬೇಕು... ನೂರೆಂಟು ಕವಲುಗಳ ಹಾದಿ.

ರೈತರ ಆತ್ಮಹತ್ಯೆಗಳ ಬಗ್ಗೆ ಇನ್ನಿಲ್ಲದಷ್ಟು ವರದಿಗಳಾಗಿವೆ. ಮಳೆ ಇರಲಿ, ಬರವಿರಲಿ, ಬೆಳೆ ಬರಲಿ, ಬರದಿರಲಿ ರೈತರು ಆತ್ಮಹತ್ಯೆಗೆ ಶರಣಾಗುವುದು ಮಾತ್ರ ನಿಲ್ಲುತ್ತಿಲ್ಲ. ಸಾಲ ಮನ್ನಾದ ಭರವಸೆಯಿರಲಿ, ಸಂಘಟನೆಗಳ ಬೆಂಬಲವಿರಲಿ ಆತ್ಮಹತ್ಯೆಗಳನ್ನು ತಡೆಯಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ದೇಶದ ಆಹಾರ ಭದ್ರತೆಯ ದೊಡ್ಡ ಜವಾಬ್ದಾರಿ ರೈತರ ಮೇಲೆ. ಹೆಚ್ಚು ಬೆಳೆಯಬೇಕು. ಹೆಚ್ಚೆಚ್ಚು ಒಳಸುರಿಗಳನ್ನು ಬಳಸಿ ಹೆಚ್ಚೆಚ್ಚು ಬೆಳೆಯುತ್ತಲೇ ಹೋಗಬೇಕಾದ ಒತ್ತಡ ಇಂದು ನಿಭಾಯಿಸಲಾಗದ ಹಂತಕ್ಕೆ ತಲುಪಿಬಿಟ್ಟಿದೆ. ಒಳಸುರಿಗಳ ಸಲುವಾಗಿ ಸಾಲ ಮಾಡು, ಸಾಲಕ್ಕಾಗಿ ಮಾರುಕಟ್ಟೆಯ ಮೇಲೆ ಅವಲಂಬಿತನಾಗು, ಮಾರುಕಟ್ಟೆ ವಿಧಿಸುವ ಎಲ್ಲಾ ಷರತ್ತುಗಳಿಗೂ ಶರಣಾಗಿ ಅವರ ಆಟದ ದಾಳವಾಗು ಎಂಬುದು ನಮ್ಮ ರೈತರ ಸೋಲಿನ ಕಥೆಯಾಗಿದೆ. ಕೃಷಿಯ ಭಾಗವೇ ಆಗಿದ್ದ ಪ್ರಾಣಿಗಳನ್ನು ಸಾಕಲಾಗದೆ ಯಾಂತ್ರಿಕ ಕೃಷಿಗೆ ಶರಣಾಗುತ್ತಿರುವುದೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬೆಳವಣಿಗೆ.

ಕೂಲಿಕಾರರದ್ದು ಇನ್ನೊಂದು ದೊಡ್ಡ ಸಮಸ್ಯೆ. ಮುಂದೆ ಬರಲಿರುವ ನೀರಿನ ಭೀಕರ ಸಮಸ್ಯೆಯನ್ನು ಇದೀಗ ನೀತಿ ಆಯೋಗವು ದೇಶದ ಮುಂದಿಟ್ಟಿದೆ. ಆತ್ಮಹತ್ಯೆಯತ್ತ ಹೋಗುತ್ತಿರುವ ರೈತನಿಗೆ ಸಿಗಬೇಕಾದ್ದು ಈ ಸಮಸ್ಯೆಗಳಿಗೆ ಪರಿಹಾರಗಳೇ ಹೊರತು ಸಾಲ ಮನ್ನಾ ಅಲ್ಲ, ಸತ್ತ ನಂತರ ಬರುವ ಪರಿಹಾರವೂ ಅಲ್ಲ. ಯಾವ ಸರ್ಕಾರವೇ ಬರಲಿ, ಬೆಳೆಗೆ ವೈಜ್ಞಾನಿಕ ಬೆಲೆಯ ವಿಚಾರವನ್ನೇ ಮಾತಾಡದೆ ಮತ್ತೆ ಮತ್ತೆ ಸಾಲ ಮನ್ನಾದ ಬಗ್ಗೆ ಮಾತ್ರ ಮಾತನಾಡುತ್ತದೆ.

ಸಂಪನ್ಮೂಲಗಳ ಕೊರತೆ, ನೀರಿನ ಅಭಾವ, ಇವೆಲ್ಲಕ್ಕಿಂತಲೂ ರೈತ ರೈತರೊಳಗೆ ಮಾಯವಾಗಿರುವ ಪರಸ್ಪರ ವಿಶ್ವಾಸ ಮತ್ತು ಅವಲಂಬನೆಗಳನ್ನು ಮತ್ತೆ ಕಟ್ಟಿಕೊಡಬೇಕಾಗಿದೆ. ಹೊರಗಿನಿಂದ ಹರಿದು ಬಂದ ಆಧುನಿಕ ತಂತ್ರಜ್ಞಾನ ಅಥವಾ ಒಳಸುರಿಗಳು ಮತ್ತೇನನ್ನು ಮಾಡದಿದ್ದರೂ ರೈತ ರೈತರ ಮಧ್ಯೆ ಕಂದರವನ್ನು ನಿರ್ಮಿಸಿರುವುದಂತೂ ಖರೆ. ತನ್ನ ಹೊಲ ಹೆಚ್ಚು ಹಸಿರಾಗಿ ಕಾಣಬೇಕು, ಪಕ್ಕದವನಿಗಿಂತ ತಾನು ಹೆಚ್ಚು ಬೆಳೆಯಬೇಕು, ಹೆಚ್ಚು ಹಣ ಗಳಿಸಬೇಕೆಂಬ ಸ್ಪರ್ಧೆಯಲ್ಲಿ ರೈತರಿಂದು ಸೋತು ಒಬ್ಬರಿಗೊಬ್ಬರು ಮುಖ ತೋರಿಸಲಾಗದಾದಾಗ ಆತ್ಮಹತ್ಯೆಯತ್ತ ಹೊರಳುತ್ತಿದ್ದಾರೆ. ತಮ್ಮ ಲಾಭಕ್ಕೋಸ್ಕರ ಕಂಪನಿಗಳು ರೈತ ರೈತರ ಮಧ್ಯೆ ಸ್ಪರ್ಧೆ ಹುಟ್ಟಿಸಿ ಅವರನ್ನು ಸೋಲಿಸಿ ತಾವು ಗೆದ್ದಿವೆ.

ಮಹಿಳೆಯರು ಜಮೀನಿನ ಒಡೆಯರಲ್ಲ. ಕಾನೂನಿನಲ್ಲಿ ಅವಕಾಶವಿದ್ದರೂ ಮಹಿಳೆಯರ ಹೆಸರಲ್ಲಿ ಇಂದಿಗೂ ಭೂಮಿ ಇಲ್ಲ. ಭೂಮಿ ಇರುವ ಕುಟುಂಬದಲ್ಲಿ ಹುಟ್ಟಿದರೂ, ಜಮೀನುದಾರನನ್ನೇ ಮದುವೆಯಾದರೂ ಅವಳು ಭೂಹೀನಳೇ. ಭೂಮಿ ಅವರ ಹೆಸರಲ್ಲಿ ಇಲ್ಲ ಎಂಬ ಒಂದೇ ಕಾರಣವು ಆರ್ಥಿಕವಾಗಿ ಮತ್ತು ಮುಖ್ಯವಾಗಿ ಸಾಮಾಜಿಕವಾಗಿ ಅವರನ್ನು ಬಹಳ ಹಿಂದಕ್ಕೆ ತಳ್ಳುತ್ತದೆ. ಭೂಮಿಯ ಒಡೆಯ ಮಹಿಳೆಗೂ ಯಜಮಾನ. ಆಧುನಿಕ ಕೃಷಿ ಬಂದಾಗಿನಿಂದ ಯಾವ ಬೆಳೆ ತೆಗೆಯಬೇಕು ಎಂಬ ವಿಚಾರದಿಂದ ಹಿಡಿದು ಎಲ್ಲದರಲ್ಲೂ ಅವಳ ಪಾತ್ರ ನಗಣ್ಯವಾಗಿದೆ. ಬೀಜ ಸಂಗ್ರಹಣೆಯಲ್ಲಿ ಅವಳು ವಹಿಸುತ್ತಿದ್ದ ಅತಿ ಮಹತ್ವದ ಪಾತ್ರ ಕಳೆಗುಂದಿದೆ. ಯಾವ ಗೊಬ್ಬರ, ಕೀಟನಾಶಕ, ಕ್ರಿಮಿನಾಶಕಗಳನ್ನು ಬಳಸಬೇಕೆಂಬ ವಿಚಾರಗಳಲ್ಲಂತೂ ಅವಳನ್ನು ಕೇಳುವವರೇ ಇಲ್ಲವಾಗಿ ಇಂದು ಅವಳಲ್ಲಿದ್ದ ಜ್ಞಾನ ಮರೆಯಾಗಿಹೋಗಿದೆ. ಬೆಳೆ ಬಂದಮೇಲೆ ಎಲ್ಲಿ, ಯಾವ ರೇಟಿಗೆ ಮಾರಬೇಕು ಎನ್ನುವುದರ ವಿಷಯದಲ್ಲಂತೂ ಪೇಟೆಗೆ ಕಾಳನ್ನು ಒಯ್ಯುವ ಪುರುಷ ರೈತನಿಗೂ ನಿರ್ಧಾರ ಮಾಡುವ ಸ್ಥಾನ ಇಲ್ಲ. ಮಹಿಳೆಯ ಮಾತು ಯಾವಲ್ಲಿಗೆ?

‘ಈ ಎಲ್ಲ ಅವಕಾಶಹೀನತೆಗಳನ್ನೂ ಮೆಟ್ಟಿ ನಿಲ್ಲುತ್ತದೆ ಮಹಿಳಾ ಗುಂಪುಕೃಷಿ’ ಎನ್ನುತ್ತಾರೆ ಕೇರಳದ ಕುಡುಂಬಶ್ರೀ ಮತ್ತು ತೆಲಂಗಾಣದ ಸಾಮುದಾಯಿಕ ಕೃಷಿಗಳೆರಡನ್ನೂಅಧ್ಯಯನ ಮಾಡಿರುವ ಗುಜರಾತಿನ ಡಾ. ಬೀನಾ ಅಗರ್‌ವಾಲ್. ಭೂಮಿಯನ್ನು, ಬಂಡವಾಳವನ್ನು ಮತ್ತು ಸಾಂಘಿಕ ಶಕ್ತಿಯನ್ನು ಒಂದುಗೂಡಿಸಿ ದುಡಿದರೆ ಖಂಡಿತವಾಗಿ ಭೂಮಿಯನ್ನೂ ಉಳಿಸಲು ಸಾಧ್ಯ, ರೈತರನ್ನೂ ಬದುಕಿಸಲು ಸಾಧ್ಯವೆನ್ನುತ್ತವೆ ಈ ಪ್ರಯೋಗಗಳು. ಸಂಘಟಿತರಾಗಿ ದುಡಿದಾಗ, ಕೂಲಿಕಾರರ ಸಮಸ್ಯೆ, ಒಟ್ಟುಗೂಡಿಸಿದ ಬಂಡವಾಳ ಮತ್ತು ಕೌಶಲ ಇವು ಹೊರ ಜಗತ್ತಿನ ಮಾರುಕಟ್ಟೆಯೊಂದಿಗೆ ಸೆಣಸಾಡಬಲ್ಲ ಬಲವನ್ನು ಮತ್ತು ಚೌಕಾಶಿ ಮಾಡುವ ಶಕ್ತಿಯನ್ನೂ ಅವರಿಗೆ ತಂದುಕೊಡುತ್ತವೆ.

ಉಳುವ ಆ ಭೂಮಿ ಮಹಿಳೆಯ ಹೆಸರಿಗೆ ಆಗದಿರಬಹುದು, ಆದರೆ ಗುಂಪುಕೃಷಿಯಲ್ಲಿ ಮಹಿಳೆಯರೇ ಇದ್ದಾಗ ಎಷ್ಟು ಭೂಮಿ, ಯಾವ ಬೆಳೆ ಮಾಡಬೇಕು ಎಂಬ ನಿರ್ಧಾರಗಳು ಮಹಿಳೆಯರದ್ದೇ ಆಗಿ ಸಾಮಾಜಿಕವಾಗಿ ಅವಳ ಸ್ಥಾನ ಮೇಲೇರುತ್ತದೆ. ಬಂಡವಾಳವನ್ನು ಕ್ರೋಡೀಕರಿಸುವಾಗ ಅವಳ ನಿರ್ಧಾರವೇ ಮುಖ್ಯ. ಮುಂದೆ ಮಾರುಕಟ್ಟೆಗೆ ಒಯ್ಯುವವರೂ ಅವರೇ ಆದಾಗ ಬೆಲೆ ನಿರ್ಧಾರ ಮಾಡುವುದರಲ್ಲೂ ಪಾತ್ರ ವಹಿಸುತ್ತಾರೆ. ಕೃಷಿಸಮಾಜದಲ್ಲಿ ಹಿನ್ನೆಲೆಯಲ್ಲೇ ಉಳಿದಿದ್ದ ಹೆಣ್ಣುಮಗಳು ಮುನ್ನೆಲೆಗೆ ಬರುತ್ತಾಳೆ. ರೈತ ಮನೆತನದ ಹೆಣ್ಣುಮಗಳಾಗಿ ಹೊರಸಂಚಾರಕ್ಕೆ ಅವಳಿಗಿದ್ದ ಅಡೆತಡೆಗಳನ್ನು ಈ ಹೊಸ ಪಾತ್ರವು ಮೀರಿ ನಿಲ್ಲುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತ ರೈತರ ಮಧ್ಯೆ ಎದ್ದಿರುವ ಅವಿಶ್ವಾಸದ ಗೋಡೆಯನ್ನು ಗುಂಪು ಚರ್ಚೆ, ಒಟ್ಟಿಗೆ ಕೆಲಸ ಮಾಡುವುದರ ಮೂಲಕ ಅವಳು ಒಡೆದು ಹಾಕುತ್ತಾಳೆ.

ಕೇರಳ ಮತ್ತು ತೆಲಂಗಾಣದಲ್ಲಿ 2000ನೇ ಇಸ್ವಿಯಲ್ಲಿ ಕೇವಲ ಹೆಣ್ಣುಮಕ್ಕಳೇ ಒಟ್ಟಾಗಿ ಬೇರೆಯವರ ಹೊಲಗಳನ್ನು ಗುತ್ತಿಗೆ ಪಡೆದು ಕೃಷಿ ಮಾಡತೊಡಗಿದರು. ತೆಲಂಗಾಣದಲ್ಲಿ ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆಯು ಸರ್ಕಾರದ ಸಹಭಾಗಿತ್ವದಲ್ಲಿ 500 ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಿ ‘ಸಮತಾ ಧಾರಣ’ ಹೆಸರಿನಲ್ಲಿ ಮಹಿಳಾ ಸಮತಾ ಸೊಸೈಟಿಯ ಮೂಲಕ ಬೆಂಬಲಿಸಿತು. ಉಳಿತಾಯ ಗುಂಪುಗಳಲ್ಲಿದ್ದ ಎಲ್ಲಾ ಸದಸ್ಯರೂ ಈ ಸಂಘದ ಸದಸ್ಯರಾದರು. ಐದು ವರ್ಷಗಳವರೆಗೆ ಬೀಜ ಖರೀದಿಗೆಂದು ಆರಂಭಿಕ ಬಂಡವಾಳದ ಸುತ್ತು ನಿಧಿ, ಆರ್ಥಿಕ ತರಬೇತಿಗಳು ಮತ್ತು ಸಂಸ್ಥೆಯ ಬೆಂಬಲದೊಂದಿಗೆ ಈ ಗುಂಪುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು. ವಿಶ್ವಸಂಸ್ಥೆಯ ಸಹಾಯ ನಿಂತ ಮೇಲೂ ಅರ್ಧದಷ್ಟು ಗುಂಪುಗಳು ಒಟ್ಟಿಗೆ ಕೃಷಿಯನ್ನು ಮುಂದುವರೆಸಿಕೊಂಡು ಹೋಗಿವೆ.

ಕೇರಳದ ಕುಡುಂಬಶ್ರೀ ಇನ್ನೊಂದು ಮಾದರಿ. ಈಗಾಗಲೇ ಉಳಿತಾಯ ಮತ್ತು ಸಾಲದ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಹೆಣ್ಣುಮಕ್ಕಳು ಆಯಾ ಆಸಕ್ತಿಯ ಉದ್ಯೋಗಗಳ ಗುಂಪುಗಳಲ್ಲಿ ಸೇರಿಕೊಳ್ಳುತ್ತಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳೇ ಕುಳಿತು ಹೆಣೆದಿರುವ ಯೋಜನೆ ಇದು. ಇದಕ್ಕೆ ನಬಾರ್ಡ್ ಕೈಜೋಡಿಸಿದೆ. ಸರ್ಕಾರದ ಬಡತನ ನಿರ್ಮೂಲನಾ ಯೋಜನೆ, ಕುಡುಂಬಶ್ರೀಯ ಒಕ್ಕೂಟ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನರಿಂದ ಆಯ್ಕೆಯಾದ ಪ್ರದೇಶಾಭಿವೃದ್ಧಿ ಸಂಘಗಳು ಇವು ಇಲ್ಲಿನ ಗುಂಪು ಕೃಷಿಯ ಮೂರು ಸ್ತಂಭಗಳಾಗಿವೆ.

ಕೇರಳ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಛಿದ್ರಗೊಂಡ ತಮ್ಮ ಭೂಮಿಯನ್ನು ಈ ಕುಡುಂಬಶ್ರೀ ಮಾದರಿಯಲ್ಲಿ ಉಳಿಸಿಕೊಳ್ಳುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿಯೂ 90ರ ದಶಕದಲ್ಲಿ ಸಾಮುದಾಯಿಕ ಕೃಷಿಯ ಅನೇಕ ಪ್ರಯೋಗಗಳನ್ನು ಸರ್ಕಾರೇತರ ಸಂಘಗಳು ಮಾಡಿದ್ದವು. ಸ್ವತಃ ನಬಾರ್ಡ್, ಸ್ಥಳೀಯ ಬ್ಯಾಂಕುಗಳ ಮೂಲಕ ಈ ಪ್ರಯೋಗಕ್ಕೆ ಬೆಂಬಲ ನೀಡಿತ್ತು. ಆದರೆ ಮುಂದೆ ಜಾಗತೀಕರಣದ ಹೊಡೆತಕ್ಕೆ ಸಿಲುಕಿದ ಕೃಷಿ ಮತ್ತು ಸಂಘಟನೆ ಇವೆರಡೂ ನೆಲಕ್ಕುರುಳಿವೆ. ಇದರ ಫಲವಾಗಿ ನಾವು ನೋಡುತ್ತಿರುವುದು ನಿಲ್ಲದ ರೈತರ ಆತ್ಮಹತ್ಯೆ ಮತ್ತು ಭೂಮಿಯ ನಾಶ. ಅತಿವೇಗವಾಗಿ ಮರುಭೂಮೀಕರಣವಾಗುತ್ತಿರುವ ಕರ್ನಾಟಕ.

‘ಆತ್ಮಹತ್ಯೆ ಮಾಡಿಕೊಳ್ಳಬೇಡಿ ರೈತರೇ, ನಾವು ನಿಮ್ಮೊಂದಿಗಿದ್ದೇವೆ’ ಎಂದು ಅನೇಕ ಸಂಘಟನೆಗಳು ಕಳೆದ ವರ್ಷ ಹಳ್ಳಿ ಹಳ್ಳಿಗೆ ಜಾಥಾಗಳನ್ನು ಮಾಡಿ ರೈತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದವು. ಅಷ್ಟು ಸಾಲದು ಎಂದು ಮರುಕಳಿಸುತ್ತಿರುವ ಆತ್ಮಹತ್ಯೆಗಳೇ ಹೇಳುತ್ತಿವೆ. ಯಾಕೆಂದರೆ ಯಾವ ರೈತ ಆತ್ಮಹತ್ಯೆಯತ್ತ ಹೊರಟಿದ್ದಾನೆ, ಸಾಂತ್ವನ ಹೇಳಬೇಕಾದ್ದು ಯಾರಿಗೆ ಎಂದು ಲೆಕ್ಕ ಸಿಗುವುದಿಲ್ಲ. ಇಡೀ ವಾತಾವರಣದಲ್ಲಿ ಧೈರ್ಯದ ಸಾಧ್ಯತೆಗಳಿದ್ದರೆ, ವಿಶ್ವಾಸ ಹೆಚ್ಚಿಸುವ ಕೃತಿಗಳು ಕಂಡುಬಂದರೆ ಆತ್ಮಹತ್ಯೆಯ ವಿಚಾರ ಮಾಡುತ್ತಿರುವ ರೈತ ಜೀವನದತ್ತ ಮರಳಬಹುದು. ಅದಕ್ಕೂ ಹೆಚ್ಚಾಗಿ ಇಂದು ರೈತರನ್ನು ದೇಶದ ಆಹಾರ ಭದ್ರತೆಯ ಭಾರದಿಂದ ಮುಕ್ತನನ್ನಾಗಿ ಮಾಡಬೇಕಾಗಿದೆ. ನೀನು ಹೆಚ್ಚು ಬೆಳೆಯಬೇಕು, ಅದಕ್ಕಾಗಿ ಸಾಲ ಮಾಡು, ನಾನು ಕೊಡುವ ಈ ಬೀಜ ಖರೀದಿ ಮಾಡು, ಆ ಬೀಜ ಹುಟ್ಟಲು ನನ್ನದೇ ಗೊಬ್ಬರ ಹಾಕು, ಬೆಳೆಯನ್ನು ರಕ್ಷಿಸಲು ನನ್ನದೇ ರಾಸಾಯನಿಕ ಬಳಸು ಎಂದು ಸಾರುತ್ತಿರುವ ಕಂಪನಿಗಳ ಕಪಿಮುಷ್ಟಿಯಿಂದ ಅವರನ್ನು ಬಚಾವು ಮಾಡಬೇಕಾಗಿದೆ.

ಮಹಿಳಾ ಗುಂಪುಗಳು ಮಾತ್ರ ಈ ಕೆಲಸ ಮಾಡಬಲ್ಲವು. ಮಹಿಳಾ ಗುಂಪುಗಳಲ್ಲಿ ತುಂಬಿಕೊಳ್ಳುವ ಆತ್ಮವಿಶ್ವಾಸ, ಪರಸ್ಪರರಲ್ಲಿಯ ನಂಬಿಕೆ ಇವು ಒಟ್ಟೂ ಶಕ್ತಿಯನ್ನು ಬಹಳವಾಗಿ ಹೆಚ್ಚಿಸುತ್ತವೆ. ಹಿಂದೆ ಉಳಿತಾಯ ಗುಂಪುಗಳನ್ನು ಮಾಡಿಕೊಂಡು ಚಿಕ್ಕ ಉಳಿತಾಯಗಳ ಮೂಲಕ ತಮ್ಮ ಸಂಸಾರಗಳನ್ನು ಬದುಕಿಸಿಕೊಂಡು ಬಂದವರಿವರು. ಉಳಿತಾಯದ ಗುಂಪುಗಳ ಮೂಲಕವೇ ಬ್ಯಾಂಕಿನಲ್ಲೂ ಪರಿಚಿತರಾದವರು. ಆ ಉಳಿತಾಯದ ಗುಂಪುಗಳನ್ನು ಹೊರಗಿನಿಂದ ಬಂದ ಸಾಲದ ಸಂಘಗಳು ನಾಶಪಡಿಸಿವೆ. ಆದರೆ ಮಹಿಳೆಯರ ಆತ್ಮಸ್ಥೈರ್ಯ ತಗ್ಗಿಲ್ಲ. ಇಂದು ರಾಷ್ಟ್ರೀಯ ಉದ್ಯೋಗ ಖಾತರಿಯಲ್ಲಿ ಒಟ್ಟಿಗೆ ಕೆಲಸ ಮಾಡಿ ಮತ್ತೊಮ್ಮೆ ಅವರು ಸಂಘಟಿತರಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಉದ್ಯೋಗ ಖಾತರಿಯ ಭರವಸೆಯಿಂದ ರೈತರ ಆತ್ಮಹತ್ಯೆಗಳನ್ನು ತಡೆದವರಿವರು.

ಈ ಮಹಿಳಾ ಗುಂಪುಗಳಲ್ಲಿ ಗುಂಪುಕೃಷಿಯ ವಿಚಾರವನ್ನು ನಾವಿಂದು ಮತ್ತೆ ಬಿತ್ತಬೇಕಾಗಿದೆ. ಕೃಷಿ ಮಾಡಲಾಗದೆ ರೈತರು ಬಿಟ್ಟುಹೋಗಿರುವ ಭೂಮಿಯ ಪ್ರಮಾಣ ಕರ್ನಾಟಕದಲ್ಲಿ 21 ಲಕ್ಷ ಹೆಕ್ಟೇರು ಎನ್ನುತ್ತಾರೆ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ. ಎಲ್ಲೆಲ್ಲೋ ಗೌಂಡಿಗಳಾಗಿ, ಗೌಂಡಿ ಕೆಳಗಿನ ಕೂಲಿಗಳಾಗಿ ಕಳೆದು ಹೋಗುತ್ತಿರುವ ರೈತರ ಮಕ್ಕಳಿಗೆ ತಮ್ಮ ಭೂಮಿಯ ಬಗ್ಗೆ ಆಸಕ್ತಿ ಇಲ್ಲ. ಕೃಷಿ ಭೂಮಿಯನ್ನು ಗುತ್ತಿಗೆಗೆ ಕೊಡುವ ಮಾದರಿ ನಿಯಮಗಳನ್ನಾಗಲೇ ಕೇಂದ್ರ ಸರ್ಕಾರ ಮಾಡಿಟ್ಟಿರುವಾಗ ಹೊರಗಿನವರಿಗೆ ಈ ಭೂಮಿಯನ್ನು ಗುತ್ತಿಗೆಗೋ, ಮತ್ತಾವುದೋ ವಿಧಾನದಲ್ಲಿ ಪಡೆಯಲು ಸುಲಭದ ದಾರಿಗಳು ಕಾಣುತ್ತವೆ. ನಮ್ಮ ಭೂಮಿಯು ಪರಭಾರೆ ಆಗುವ ಮೊದಲು ಸ್ಥಳೀಯ ಮಹಿಳಾ ಗುಂಪುಗಳ ಕೈಗೆ ಕೊಡಬೇಕು. ಅಂಥ ಪ್ರಯೋಗಗಳನ್ನು ಸ್ಥಳೀಯ ಸಂಸ್ಥೆಗಳು ಗೌರವಿಸಬೇಕು.

ಮಹಿಳಾ ಗುಂಪುಗಳ ಕೈಗೆ ಗ್ರಾಮದ ಬೀಳು ಭೂಮಿ ಬಂದಾಗ ಖಂಡಿತವಾಗಿ ಗ್ರಾಮದ ಚಿತ್ರವೇ ಬದಲಾಗುತ್ತದೆ. ತಾಯಂದಿರು ಭೂತಾಯಿಯ ರಕ್ಷಣೆಗೆ ಮುಂದಾಗುತ್ತಾರೆ. ರಾಸಾಯನಿಕಗಳ ಸಿಂಪರಣೆಯಿಂದ ಗಾಯಗೊಂಡಿರುವ ನೆಲವನ್ನವರು ಸಂತೈಸುತ್ತಾರೆ. ಹಿತ್ತಲ ಗೊಬ್ಬರದಿಂದ ಉಪಚಾರ ಮಾಡುತ್ತಾರೆ. ಎರೆಹುಳು, ಕಪ್ಪೆ, ಹಾವು, ಜೇಡಗಳನ್ನು ಮರಳಿ ಮಣ್ಣಿಗೆ ಬರುವಂತೆ ಮಾಡಿ ಜೀವವೈವಿಧ್ಯವನ್ನು ಹೆಚ್ಚಿಸುತ್ತಾರೆ. ಚೇತರಿಸಿಕೊಂಡ ಭೂಮಿಯಲ್ಲಿ ಜೀವ ನಳನಳಿಸಿದಾಗ ರೈತರಲ್ಲಿ ವಿಶ್ವಾಸ ಮರಳಬಹುದು. ನೇಣಿನ ಗಂಟು ಸಡಿಲಾಗಿ ಹಗ್ಗಗಳು ಉಯ್ಯಾಲೆಗಳಾಗಿ ನಾಗರ ಪಂಚಮಿಯ ನಗುವನ್ನು ಮರಳಿ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT