ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಬ್ಬವೆಂದರೆ ಸಂತೋಷ; ಶಾಶ್ವತ ಸತ್ಯವೊಂದರ ಹುಡುಕಾಟ

Published : 26 ಆಗಸ್ಟ್ 2024, 23:50 IST
Last Updated : 26 ಆಗಸ್ಟ್ 2024, 23:50 IST
ಫಾಲೋ ಮಾಡಿ
Comments

ಜೀವನವನ್ನು ತುಂಬಾ ಆಳವಾಗಿ ವಿಮರ್ಶಿಸಿದಾಗ ಏನು ಕಾಣಿಸುತ್ತದೆ? ಈ ಜೀವನದ ಜಂಜಾಟದಲ್ಲೂ ಪಡೆಯಲು ಯೋಗ್ಯವಾಗಿರುವ ಏನೋ ಒಂದು ಇದೆ; ಅದು ದೊರೆಯುವುದು ಸುಲಭವಲ್ಲ. ಆದರೆ ಅದು ದೊರೆತಾಗ ಆಗುವ ಧನ್ಯತೆಯೂ ಸಾಮಾನ್ಯವಾದುದಲ್ಲ; ದುರ್ಲಭವಾದ್ದೊಂದನ್ನು ಪಡೆಯುವ ಪ್ರಯತ್ನವೇ ಬದುಕಿಗೊಂದು ಅರ್ಥಪೂರ್ಣತೆಯನ್ನು, ಮೌಲ್ಯವನ್ನು ತಂದುಕೊಡುತ್ತದೆ ಎನ್ನುವುದು ಕಾಣಿಸುತ್ತದೆ. ಈ ಶಾಶ್ವತವಾದ ಸ್ಥಿತಿಯೊಂದರ ಅನ್ವೇಷಣೆಯೇ ಬದುಕಿಗೆ ಸೌಂದರ್ಯವನ್ನು ಕೊಡುತ್ತದೆ; ಬದುಕಿನ ಏರುಪೇರುಗಳನ್ನು ಸಹಿಸಿಕೊಳ್ಳುವ ಮನೋದಾರ್ಢ್ಯವನ್ನೂ ತಂದುಕೊಡುತ್ತದೆ.

ಎಂದೂ ವಿಕಾರಗೊಳ್ಳದ, ಸದಾ ಆನಂದವನ್ನು ಶಾಂತಿಯನ್ನು ತರುವ ವಸ್ತುವಿನ / ಸ್ಥಿತಿಯ ಸ್ವರೂಪವನ್ನು ಅರಿಯುವ ಪ್ರಯತ್ನದಲ್ಲಿ, ಆ ವಸ್ತು /ಸ್ಥಿತಿಯನ್ನು ದಕ್ಕಿಸಿಕೊಳ್ಳುವ ಮಾರ್ಗದಲ್ಲಿ ನಮ್ಮನ್ನು ತೊಡಗಿಸುವುದನ್ನೇ ಎಲ್ಲ ಧರ್ಮಗಳೂ ಗುರಿಯಾಗಿಸಿಕೊಂಡಿವೆ. ಬದುಕಿಗೇನೂ ಆತ್ಯಂತಿಕವಾದ ಅರ್ಥವಿಲ್ಲ ಎನ್ನುವವರು ಕೂಡ ಬದುಕಿನ ಅರ್ಥಹೀನತೆಯನ್ನು ಸಹ್ಯಮಾಡಿಕೊಳ್ಳಲಾದರೂ ತಾತ್ಕಾಲಿಕವಾದ ಅರ್ಥವೊಂದನ್ನು ಹುಡುಕಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಬದುಕಿನ ಮೂಲಭೂತ ಅರ್ಥಹೀನತೆಯನ್ನು ಕಂಡೂ ಬದುಕಿನಿಂದ ಓಡಿಹೋಗದೇ, ಭ್ರಮನಿರಸನಗೊಳ್ಳದೆ ಮತ್ತೆ ಮತ್ತೆ ಹೊಸ ಹೊಸ ಅರ್ಥಗಳನ್ನು ಕಂಡುಕೊಳ್ಳುವುದೂ ಧೈರ್ಯವಂತರಿಗೆ ಉಚಿತವಾದದ್ದೇ ಹೌದು. ಯಾವ ಅರ್ಥವೂ ಶಾಶ್ವತವಲ್ಲದಿದ್ದರೂ ಅರ್ಥವನ್ನು ಹುಡುಕುವ ಪ್ರಯತ್ನವಾದರೂ ಶಾಶ್ವತವಿದ್ದೀತು. ಒಟ್ಟಿನಲ್ಲಿ ಮನುಷ್ಯನಿಗೆ ಒಂದಲ್ಲ ಒಂದು ಬಗೆಯಲ್ಲಿ ಶಾಶ್ವತತೆ, ನಿತ್ಯತ್ವದ ಹಂಬಲವಿದೆ.

ಹೀಗೆ ಶಾಶ್ವತವಾದದುರ ಹಿಂದೆ ಓಡುವುದು, ಬೆನ್ನಟ್ಟುವುದು ಮನುಷ್ಯನ ಮೂಲಸ್ವಭಾವವೇ ಇರಬೇಕು. ಕ್ಷಣಿಕತೆಯನ್ನು, ಕಾಲದ ನಿರಂತರ ಹೊಡೆತವನ್ನು ಸಹಿಸುವುದು ಒಂದು ಬಗೆಯ ಯಾತನೆ. ಹಾಗಾಗಿಯೇ ಕ್ಷಣಿಕವಾದ ಬದುಕಿನಲ್ಲೂ ಕಾಲಾತೀತವಾದ ಏನೋ ಒಂದನ್ನು ಹಿಡಿದಿಟ್ಟುಕೊಳ್ಳುವ ಬಯಕೆ ಮನುಷ್ಯನದು. ಸಂತೋಷ ಎನ್ನುವುದು ಮೂಲತಃ ಇಂತಹ ಕಾಲಾತೀತವಾದ್ದನ್ನು ಕಂಡುಕೊಳ್ಳುವ ಅನ್ವೇಷಣೆಗೆ, ಪ್ರಯತ್ನಕ್ಕೆ, ಆ ಪ್ರಯತ್ನಕ್ಕಾಗಿ ಒದಗಿ ಬರುವ ಒಂದು ಕ್ರಿಯಾಶೀಲ ಮನಃಸ್ಥಿತಿಗೆ ಸಂಬಂಧಪಟ್ಟಿದ್ದು.

ನಮಗೆ ಬೇಕಾದ್ದೇನೋ ಸಿಕ್ಕಿದಾಗ, ನಾವು ಕಾತರದಿಂದ ಕಾಯುತ್ತಿದ್ದುದ್ದು ಘಟಿಸಿದಾಗ ನಮಗೆ ಸಂತೋಷವಾಗುವುದೇನೋ ನಿಜ; ಆದರೆ ಅದು ಕ್ಷಣಿಕ; ಅದು ಮತ್ತೊಂದು ಬಯಕೆ ಹುಟ್ಟುವವರೆಗೆ ಮಾತ್ರ. ಅಷ್ಟೇ ಅಲ್ಲದೆ, ಅತಿಯಾದ ಸಂತೋಷದಲ್ಲಿರುವಾಗ ನಮಗೆ ವಿಚಾರಮಾಡುವ ಶಕ್ತಿಯೂ ಕಡಿಮೆಯಾಗಿರುತ್ತದೆ. ಮುಂದೆ ಇಂತಹದ್ದೇ ಗೆಲುವುಗಳನ್ನು ಪಡೆಯಬೇಕೆಂಬ ಚಡಪಡಿಕೆಯೂ, ಮತ್ತಷ್ಟು ಪಡೆಯಬೇಕೆಂಬ ದಾಹವೂ, ನಾವು ಬಯಸಿದ್ದು ನಡೆದೇ ಹೋಯಿತಲ್ಲ ಎನ್ನುವ ಅಹಂಕಾರವೂ ಸೇರಿ, ಒಂದು ಬಗೆಯ ತಾತ್ಕಾಲಿಕವಾದ ಹುಚ್ಚು ಹಿಡಿದಂತಾಗುವುದೂ ಇದೆ.

ಸಾಧಕರು, ದಾರ್ಶನಿಕರು ಹೇಳುವ ಸಂತೋಷ ಈ ಬಗೆಯ ರೋಚಕತೆಯಲ್ಲ, ಭಾವಾತಿರೇಕವಲ್ಲ. ಸಂತೋಷ ಎನ್ನುವುದು ಒಂದು ಸಮಾಧಾನದ ಸ್ಥಿತಿಯೇ ಹೊರತು ಉದ್ರಿಕ್ತತೆ, ‘ಎಕ್ಸೈಟ್ಮೆಂಟ್’ ಅಲ್ಲ. ಸಂತೋಷ ಎನ್ನುವುದು ಶಾಶ್ವತವಾದುದರ, ಮೌಲಿಕವಾದುದರ ಅನ್ವೇಷಣೆಯಲ್ಲಿ ಆಗುವ ತೃಪ್ತಿ, ಸಮಾಧಾನ. ಮನುಷ್ಯ ಯುವುದೋ ಒಂದರ ಬೆನ್ನಟ್ಟುವುದಂತೂ ಹೌದು. ಆದರೆ ಯಾವುದರ ಬೆನ್ನಟ್ಟುವುದು ಯೋಗ್ಯ, ಯಾವುದನ್ನು ನಿಜಕ್ಕೂ ಪಡೆಯಲೇಬೇಕು ಎನ್ನುವುದರ ಬಗೆಗೆ ಸ್ಪಷ್ಟತೆ ಇರಬೇಕು. ಈ ವಿಷಯದಲ್ಲಿ ನಮ್ಮ ಹಬ್ಬಗಳು, ಧಾರ್ಮಿಕ ಆಚರಣೆಗಳು ನಮಗೆ ದಾರಿತೋರಬಲ್ಲವು. ನಮ್ಮೆಲ್ಲಾ ಹಬ್ಬಗಳು ಈ ಶಾಶ್ವತ ಸತ್ಯವೊಂದರ ಹುಡುಕಾಟದಲ್ಲಿ ನಮ್ಮನ್ನು ತೊಡಗಿಸುವಂಥದ್ದೇ ಆಗಿವೆ, ಆದ್ದರಿಂದಲೇ ಹಬ್ಬಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸಿದರೆ ಸಾಲದು, ತತ್ವಚಿಂತನೆಯ ಕಡೆಗೂ ಹಬ್ಬಗಳ ಪರಿಧಿಯನ್ನು ವಿಸ್ತರಿಸಬೇಕು.

ನಮಗೆಲ್ಲಾ ತಿಳಿದಿರುವಂತೆ ಕೆಲವು ಹಬ್ಬಗಳು ಭವಬಂಧನದ ಬಿಡುಗಡೆಗಾಗಿ ಅಲೌಕಿಕ ತತ್ವವೊಂದರ ಬಗೆಗಿನ ಭಕ್ತಿಯನ್ನು, ಪ್ರೀತಿಯನ್ನು ಬೆಳೆಸುವಂಥದ್ದಾದರೆ ಮತ್ತೆ ಕೆಲವು ಹಬ್ಬಗಳು ಬದುಕಿನಲ್ಲಿ ನಮಗಿರಬೇಕಾದ ಸಮತೋಲನ, ಸಂಭ್ರಮ, ಸೌಂದರ್ಯಗಳನ್ನು ನೆನಪಿಸುವ ಹಬ್ಬ. ಯಾವುದೇ ಹಬ್ಬವಾದರೂ ಅದು ವ್ಯಕ್ತಿ ಮತ್ತು ಸಮುದಾಯದ ನಡುವಿನ ಅವಿಚ್ಛಿನ್ನ ಬಾಂಧವ್ಯವನ್ನು ನೆನಪಿಸುವುದಕ್ಕೆ ಇರುವ ನೆಪವೂ ಹೌದು.

ಒಟ್ಟಾರೆ ಹೇಳಬೇಕೆಂದರೆ ಹಬ್ಬವೆಂದರೆ ಶಾಶ್ವತ ಸತ್ಯ / ಸ್ಥಿತಿ / ವಸ್ತು / ಮೌಲ್ಯ / ತತ್ವ – ಇವುಗಳ ಅನ್ವೇಷಣೆ, ಅನುಸಂಧಾನ. ಆ ಅನ್ವೇಷಣೆಯಲ್ಲಿ ಎಲ್ಲರನ್ನೂ ಒಳಗೊಂಡು ಅದರಿಂದ ದೊರಕಬಹುದಾದ ಸುಖ, ಶಾಂತಿ, ತೃಪ್ತಿ, ಪ್ರೀತಿಗಳನ್ನು ಆಚರಣೆಯ ರೂಪದಲ್ಲೂ, ಚಿಂತನೆಯ ರೂಪದಲ್ಲೂ ಎಲ್ಲರಿಗೂ ಹಂಚುವುದು, ಮುಂದಿನ ಪೀಳಿಗೆಗೂ ಇದು ನಿರಂತರವಾಗಿರುವಂತೆ ಅವರಲ್ಲಿ ಈ ಅನ್ವೇಷಣೆಯ ಬಗೆಗೆ ಅಭಿರುಚಿ ಹುಟ್ಟಿಸುವುದು - ಇದೆ ಅಲ್ಲವೇ ಹಬ್ಬದ ತಿರುಳು? ಸಂತೋಷದ ಒಳತಿರುಳೂ ಇದೇ! ಶಾಶ್ವತವಾದನ್ನು ಕಂಡುಕೊಳ್ಳುವ ಹಾದಿಯಲ್ಲಿ ಶ್ರದ್ಧೆ, ಭಕ್ತಿ, ಪ್ರೀತಿ ಇಟ್ಟುಕೊಳ್ಳುವುದು - ಇದೇ ಸಂತೋಷದ ಮೂಲ.

ಹಬ್ಬದ ಸಮಯದಲ್ಲಿ ಸಂತೋಷ ಗರಿಗೆದರುತ್ತದೆ, ಸಂಭ್ರಮ ಮನದಲ್ಲಿ ಮನೆಮಾಡಿರುತ್ತದೆ. ಹಬ್ಬ ಮುಗಿದ ತಕ್ಷಣ ಖಾಲಿತನ ಆವರಿಸಬೇಕಿಲ್ಲ. ಏಕೆಂದರೆ ಹಬ್ಬ ಯಾವುದು ಕಾಲಾತೀತವೋ ಅದರೆಡೆಗೆ ನಮ್ಮಲ್ಲಿ ಪ್ರೀತಿ, ಶ್ರದ್ಧೆಯ ಹಣತೆಯೊಂದನ್ನು ಹಚ್ಚಿಟ್ಟಿರುತ್ತದೆಯಲ್ಲಾ – ಅದು ಹಬ್ಬದ ಸಾರ್ಥಕತೆಯೇ ಅಲ್ಲವೆ? ಯಾವುದೇ ತತ್ವವನ್ನು ಎಷ್ಟೇ ಗಹನವಾಗಿ ಅರಿತಿದ್ದರೂ ಅದು ಕಾಲಾಂತರದಲ್ಲಿ ಮರೆವಿಗೆ ಸಂದಿರುತ್ತದೆ, ಮನಃಪಟಲದಿಂದ ಹೇಗೋ ಜಾರಿಹೋಗಿ ಮಸುಕಾಗಿರುತ್ತದೆ. ಹಬ್ಬಗಳು ನಾವು ಅರಿತ ಸತ್ಯಗಳನ್ನು, ನಮ್ಮ ಮೌಲ್ಯಗಳನ್ನು ಮತ್ತೆ ನಮಗೇ ಮನವರಿಕೆಯಾಗುವಂತೆ ಗಟ್ಟಿಯಾಗಿ ಹೇಳಿಕೊಳ್ಳುವ ಪ್ರಕ್ರಿಯೆ. ಯಾವುದು ಭೂಮವೋ ಶ್ರೇಷ್ಠವೋ ನಿತ್ಯವೋ ಅದನ್ನು ಒಮ್ಮೆ ಮಾತ್ರ ಕಂಡು, ಕೇಳಿ, ಹೇಳಿ, ಆಚರಿಸಿ ಸುಮ್ಮನಿರಲಾಗುವುದೇ? ಈ ದೃಷ್ಟಿಯಿಂದ ಕಂಡಾಗ ಹಬ್ಬವೆಂದರೆ ನಿಜವಾದ ಸಂತೋಷದ ಅರಿವು; ಸಂತೋಷವೆಂದರೆ ಶಾಶ್ವತವಾದದ್ದನ್ನು ಸಂಭ್ರಮಿಸುವ ಹಬ್ಬ ಎಂದೆನಿಸದೆ ಇರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT