ಗಾಂಧೀಜಿ ಅವರ ಬ್ರಹ್ಮಚರ್ಯ ಪ್ರಯೋಗಗಳನ್ನು ವಿಕೃತಿಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ಬ್ರಹ್ಮಚರ್ಯದ ಪ್ರಯೋಗಗಳನ್ನು ವೈಚಾರಿಕವಾಗಿ ಹಾಗೂ ಮಹಾತ್ಮನ ಒಟ್ಟು ಬದುಕಿನ ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ನೋಡದೆ, ರೋಚಕವಾಗಿ ನೋಡುವ ಪ್ರಯತ್ನ ಅನೈತಿಕವಾದುದು.

ಒಬ್ಬ ನಿಜವಾದ ನಾಯಕ ಸಂದರ್ಭಕ್ಕೆ ಅಗತ್ಯವಾದ ನಿರ್ಧಾರಗಳನ್ನೇ ತೆಗೆದು ಕೊಳ್ಳುತ್ತಾನೆ. ಎಷ್ಟೋ ಕಾಲದ ನಂತರ ಆ ನಿರ್ಧಾರ ಸರಿಯಾಗಿಲ್ಲ ಎನಿಸಬಹುದು. ಆದರೆ, ಆ ಸಂದರ್ಭದಲ್ಲಿ ಸರಿಯೇ ಆಗಿರುತ್ತದೆ. ಮಹಾತ್ಮ ಗಾಂಧಿಯವರು ತೆಗೆದುಕೊಂಡ ಅನೇಕ ನಿರ್ಧಾರ ಗಳನ್ನು ಆ ಕಾಲಮಾನದ ಅಗತ್ಯವನ್ನು ಪರಿಗಣಿಸದೆ ‘ತಪ್ಪು ನಿರ್ಧಾರಗಳು’ ಎಂದು ಪ್ರಚಾರ ಮಾಡುವ ದುಷ್ಟಶಕ್ತಿಗಳು ಬಹು ಹಿಂದಿನಿಂದಲೂ ಇದ್ದವು. ಈ ಶಕ್ತಿಗಳು ತಮ್ಮದೇ ಗುಂಪಿನಲ್ಲಿ ಏನು ಬೇಕಾದರೂ ಹೇಳಬಹುದು. ಆದರೆ, ಸಾರ್ವಜನಿಕವಾಗಿ ಮುಕ್ತ ಚರ್ಚೆಯಲ್ಲಿ ಹಾಗೆ ಹೇಳಲು ಹೊರಟಾಗ, ಒಂದು ವಿಷಯಕ್ಕೆ ಇರುವ ಬಹು ಆಯಾಮಗಳು ಚರ್ಚೆಗೆ ಬರುತ್ತವೆ. ಗಾಂಧೀಜಿಯ ನಿರ್ಧಾರಗಳ ಚಾರಿತ್ರಿಕ ಔಚಿತ್ಯಗಳು ಅನಾವರಣಗೊಳ್ಳುತ್ತಾ ಹೋದಹಾಗೆ ದುಷ್ಟಶಕ್ತಿಗಳಿಗೆ ಗಾಂಧೀಜಿಯನ್ನು ಕೆಟ್ಟವರಾಗಿ ತೋರಿಸಲು ಯಾವ ಅಸ್ತ್ರವೂ ಉಳಿದಿಲ್ಲದ ಪರಿಸ್ಥಿತಿ ಬಂದಿದೆ. ಆಗ ಹೊರಬಂದಿರುವುದೇ ಬ್ರಹ್ಮಚರ್ಯಾಸ್ತ್ರ.

ಬ್ರಹ್ಮಚರ್ಯದ ಪ್ರಯೋಗವನ್ನು ಸಾಕಷ್ಟು ಸಂತರು ಮಾಡಿದ್ದರು. ಆದರೆ, ಅದನ್ನು ಹೇಳಿ ಕೊಂಡಿಲ್ಲ. ಗಾಂಧಿಯವರು ಯಾವುದನ್ನೂ ಮುಚ್ಚಿಟ್ಟವರಲ್ಲ. ತಮ್ಮ ಪ್ರಯೋಗದ ಬಗ್ಗೆ ತಾವೇ ಹೇಳಿದರು. ಲೌಕಿಕ ವ್ಯಾಪ್ತಿಯಲ್ಲಿ ಈ ಬ್ರಹ್ಮಚರ್ಯದ ಪ್ರಯೋಗದ ಕುರಿತಾಗಿ ಒಂದು ದೃಷ್ಟಿಕೋನವನ್ನು ತಾಳುವುದು ಕಷ್ಟ. ಏಕೆಂದರೆ, ಬ್ರಹ್ಮಚರ್ಯದ ಪ್ರಯೋಗವು ಅಧ್ಯಾತ್ಮ ಸಾಧನೆಯ ಭಾಗವಾಗಿ ಬರುತ್ತದೆ. ಅಧ್ಯಾತ್ಮವು ಸಾರ್ವತ್ರಿಕ ಅನುಭವವಲ್ಲ; ಒಬ್ಬ ವ್ಯಕ್ತಿಗೆ ಮಾತ್ರ ಆಗಬಹುದಾದ ಅನುಭವ. ಅದನ್ನು ಸಾರ್ವತ್ರೀಕರಣಗೊಳಿಸಿ ಅರ್ಥೈಸುವುದು ಕಷ್ಟವಾಗುತ್ತದೆ.

ಗಾಂಧೀಜಿಯವರು ಅಧ್ಯಾತ್ಮದ ಸಾಧಕರೂ ಆಗಿದ್ದರು. ತಮ್ಮ ಆತ್ಮಕಥೆಯಲ್ಲಿ ಅವರು, ‘ಸತ್ಯಾನ್ವೇಷಣೆಯೇ ನನ್ನ ಜೀವನದ ಗುರಿ’ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬರುವ ‘ಸತ್ಯ’ ಪರಿಕಲ್ಪನೆಯು ಲೌಕಿಕ ವ್ಯಾಪ್ತಿಯ, ‘ನಿಜ’ ಎನ್ನುವ ಅರ್ಥದ್ದಲ್ಲ. ‘ಸತ್’ ಎನ್ನುವುದೇ ‘ಸತ್ಯ’. ಆಕಾರಾತೀತ, ಗುಣಾತೀತ, ಲಿಂಗಾತೀತವಾದ ಶಕ್ತಿಯನ್ನು ಉಪನಿಷತ್ತುಗಳಲ್ಲಿ, ಸತ್, ಬ್ರಹ್ಮನ್, ಪುರುಷ, ಈಶ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಈ ‘ಸತ್’ನ ಸಾಧನೆಯಲ್ಲಿ ಬ್ರಹ್ಮಚರ್ಯವೂ ಒಂದು ವಿಧಾನವಾಗಿದೆ.

ಬ್ರಹ್ಮಚರ್ಯದ ನಿಯಮಗಳ ಪ್ರಕಾರ ಲೈಂಗಿಕತೆಯನ್ನು ತ್ಯಜಿಸಬೇಕು. ಅಹಿಂಸೆ, ಸರಳ ಜೀವನ, ಶುದ್ಧ ಆಹಾರ, ಧ್ಯಾನವನ್ನು ಆಚರಿಸಬೇಕು. ಎಲ್ಲ ಬಗೆಯ ಶಕ್ತಿಯನ್ನು ಸಂರಕ್ಷಿಸುವ ಮೂಲಕ ಅಧ್ಯಾತ್ಮದ ಅಭಿವೃದ್ಧಿಯನ್ನು ಉತ್ತೇಜಿಸುವುದು ಬ್ರಹ್ಮಚರ್ಯದ ಉದ್ದೇಶವಾಗಿದೆ. ಬ್ರಹ್ಮಚರ್ಯದಲ್ಲಿ ದೇಹ, ಮನಸ್ಸು ಮತ್ತು ಮಾತನ್ನು ಒಗ್ಗೂಡಿಸಬೇಕು. ಅಂದರೆ, ಲೈಂಗಿಕ ಸಂಬಂಧದ ತ್ಯಾಗವೊಂದೇ ಬ್ರಹ್ಮಚರ್ಯದ ಲಕ್ಷಣವಲ್ಲ. ವೀಕ್ಷಣೆ, ಶ್ರವಣ, ಸ್ಪರ್ಶ ಮೂರರಿಂದ ದೊರೆಯುವ ಸುಖವನ್ನೂ ಮೀರಿ ನಿಲ್ಲಬೇಕು. ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ‘ಬ್ರಹ್ಮಚರ್ಯ’ಕ್ಕೆ ಭಿನ್ನ ದೃಷ್ಟಿಕೋನಗಳೂ ಇವೆ. ಶಾಂಡಿಲ್ಯ ಉಪನಿಷತ್ತಿನ ಒಂದನೇ ಅಧ್ಯಾಯವು ಲೈಂಗಿಕ ಸಂಬಂಧವನ್ನೇ ನಿರಾಕರಿಸುತ್ತದೆ. ಆದರೆ ‘ಲಿಂಗ ಪುರಾಣ’ದ ಅಧ್ಯಾಯ 1.8 ಪತ್ನಿಯ ಹೊರತು ಬೇರೆ ಯಾರೊಂದಿಗೂ ಲೈಂಗಿಕ ಸಂಬಂಧವನ್ನು ಹೊಂದದೇ ಇರುವುದು ಬ್ರಹ್ಮಚರ್ಯ ಎಂದು ಹೇಳುತ್ತದೆ.

ಬ್ರಹ್ಮಚರ್ಯದ ಪರಿಕಲ್ಪನೆಯನ್ನು ಲೌಕಿಕ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಬೇಕಾದರೆ, ಕ್ರಿಯೆಯಲ್ಲಿದ್ದೂ ಕ್ರಿಯೆಯಿಂದ ಮಾನಸಿಕವಾಗಿ ದೂರ ಇರುವ ಸ್ಥಿತಿಯ ಬಗ್ಗೆ ಹಿಂದೂ ಧಾರ್ಮಿಕ ರಚನೆಗಳಲ್ಲಿ ಕಾಣಿಸುವ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ, ‘ಲಿಪ್ಯತೇನಸ ಪಾಪೇನ ಪದ್ಮಪತ್ರ ಮಿವಾಂಭಸಾ’– ಅಂದರೆ, ಪಾಪದಿಂದ ಮುಕ್ತನಾಗಲಿಕ್ಕಾಗಿ ತಾವರೆ ಎಲೆಯ ಮೇಲೆ ನೀರಿನ ಹನಿ ಇರುವಂತೆ ಇರು ಎನ್ನುತ್ತಾನೆ. ಶ್ರೀಮದ್ಭಾಗವತದಲ್ಲಿ ಬಬ್ರುವಾಹನನು ಕೊಂದ ಅರ್ಜುನನ ತಲೆ ಕಾಣೆಯಾದಾಗ ಕೃಷ್ಣ, ‘ಅನಾದಿ ಬ್ರಹ್ಮಚರ್ಯವನ್ನು ನಾನು ಪಾಲಿಸಿದ್ದೇ ಆಗಿದ್ದಲ್ಲಿ ಅರ್ಜುನನ ತಲೆ ಎಲ್ಲಿದ್ದರೂ ಬರಲಿ’ ಎನ್ನುವ ಮಾತು ಬರುತ್ತದೆ. ಮಹಾಸತಿ ಅನಸೂಯಾಳ ಕಥೆಯಲ್ಲಿ ತ್ರಿಮೂರ್ತಿಗಳು, ಅನಸೂಯಾ ನಗ್ನಳಾಗಿ ತಮಗೆ ಊಟ ಬಡಿಸಬೇಕೆಂದು ಕೇಳಿದಾಗ ತ್ರಿಮೂರ್ತಿಗಳೇ ಶಿಶುಗಳಾದರು ಎಂಬ ರೂಪಕ ಬರುತ್ತದೆ. ಅಂದರೆ ಶಿಶುವಿನ ಮನಃಸ್ಥಿತಿ ಇದ್ದಾಗ ನಗ್ನತೆಗೆ ಅಶ್ಲೀಲತೆಯ ಸೋಂಕು ತಗಲುವುದಿಲ್ಲ. ಮತ್ತು ಇದನ್ನು ಅನಸೂಯಾಳ ಪತಿ ಅತ್ರಿ ಮುನಿ ಆಕ್ಷೇಪಿಸಿಯೂ ಇಲ್ಲ. ಇವೆಲ್ಲ ಕಥೆಗಳೇ. ಆದರೆ, ಕಥೆಯ ಹಿಂದೆ ಕ್ರಿಯೆಯಲ್ಲಿದ್ದೂ ಕ್ರಿಯೆಯನ್ನು ಅನುಭವಿಸದೆ ನಿರ್ಲಿಪ್ತವಾಗಿರುವ ಮನಃಸ್ಥಿತಿಯ ಪರಿಕಲ್ಪನೆ ಇದೆ. ಗಾಂಧೀಜಿಯ ಬ್ರಹ್ಮಚರ್ಯ ಪ್ರಯೋಗದಲ್ಲಿ ಪಾಲ್ಗೊಂಡ ಮಹಿಳೆ ಕೂಡ ತಾನು ಗಾಂಧಿಯನ್ನು ತಾಯಿಯಂತೆ ಸ್ವೀಕರಿಸುತ್ತೇನೆ ಎಂದಿದ್ದರು. ಇದೊಂದು ಮಾನಸಿಕ ಸ್ಥಿತಿ. ಸಾರ್ವತ್ರೀಕರಣ ಸಾಧ್ಯವಾಗಲಾರದು.

ಇಲ್ಲಿ ಇರುವ ಪ್ರಶ್ನೆ ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗದ ಕುರಿತ ವೈಚಾರಿಕ ಚರ್ಚೆಗೆ ಸಂಬಂಧಿಸಿದ್ದಲ್ಲ. ವೈಚಾರಿಕ ಚರ್ಚೆಯೇ ಉದ್ದೇಶ ಆಗಿರುವವರು ಬ್ರಹ್ಮಚರ್ಯದ ವಿಷಯದಲ್ಲಿ ಲೈಂಗಿಕ ಸಂಯಮದ ಪ್ರಯೋಗವನ್ನು ಮಾತ್ರವೇ ಪ್ರಸ್ತಾಪಿಸಲು ಸಾಧ್ಯವಿಲ್ಲ. ಅಹಿಂಸೆಯ ಪಾಲನೆ, ಸರಳ ಜೀವನ, ಶುದ್ಧ ಆಹಾರ ಮುಂತಾಗಿ ಬ್ರಹ್ಮಚರ್ಯದ ಮಾನದಂಡಗಳಾದ ಎಲ್ಲ ವಿಷಯಗಳನ್ನೂ ಗಾಂಧೀಜಿ ಹೇಗೆ ನಿರ್ವಹಿಸಿದರು ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಆ ಬಗ್ಗೆ ಒಂದೇ ಒಂದು ಮಾತೂ ಇಲ್ಲದೆ ಲೈಂಗಿಕತೆಗೆ ಸಂಬಂಧಿಸಿದ ಭಾಗವನ್ನು ಮಾತ್ರ ಪರಿಗಣಿಸಿದಾಗ, ಚರ್ಚೆಗಿರುವುದು ವೈಚಾರಿಕ ಉದ್ದೇಶ ಅಲ್ಲ ಎಂದು ಭಾವಿಸಬೇಕಾಗುತ್ತದೆ. ಗಾಂಧಿಯವರ ಮೇಲೆ ಬ್ರಹ್ಮಚರ್ಯಾಸ್ತ್ರವನ್ನು ಪ್ರಯೋಗಿಸುತ್ತಿರುವವರು ಎಲ್ಲ ವಿಷಯಗಳಲ್ಲೂ ಗಾಂಧಿಯವರನ್ನು ದ್ವೇಷಿಸುವವರು ಮತ್ತು ‘ಗಾಂಧಿ ಜಯಂತಿ’ಯನ್ನೂ ಗಾಂಧಿ ನಿಂದನೆಯ ಮೂಲಕವೇ ಆಚರಿಸುವವರು. ಅಂದಮೇಲೆ, ಅವರ ಚರ್ಚೆಯಲ್ಲಿ ವೈಚಾರಿಕ ಉದ್ದೇಶ ಕಾಣಲು ಸಾಧ್ಯವಿಲ್ಲ. ಲೈಂಗಿಕತೆಯ ವಿಷಯ ರೋಚಕವಾಗಿರುತ್ತದೆ, ಸುಲಭವಾಗಿ ಅನೈತಿಕತೆಯ ಅನುಮಾನವನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರಗಳೇ ಇಲ್ಲಿ ಕಾಣಿಸುತ್ತಿವೆ.

ಸತ್ಯ ನಿರಾಕರಿಸಲು ತರ್ಕವನ್ನು ಬಳಸುವುದು ಈ ತಂಡದ ಜಾಯಮಾನ. ಉದಾಹರಣೆಗೆ, ಎಡಪಂಥೀಯರು ಏನೇ ಮಾಡಿದರೂ ಟೂಲ್ ಕಿಟ್, ಹಿಂದೂ ಧರ್ಮಕ್ಕೆ ಅಪಾಯ ಎನ್ನುವುದು ಇವರ ಪ್ರತಿಪಾದನೆ. ಆದರೆ, ಎಡಪಂಥೀಯರೇ ಆದ ಭಗತ್ ಸಿಂಗ್ ಬಗ್ಗೆ ಬಹಳ ಪ್ರೀತಿ. ಭಗತ್ ಸಿಂಗ್ ಅವರು ಬದುಕಿದ್ದರೆ ಆಗ ಅವರನ್ನೂ ಇವರು ಹಿಂದೂ ವಿರೋಧಿ ಎಂದೇ ಕರೆಯುತ್ತಿದ್ದರು. ಗಾಂಧಿಯವರನ್ನು ಕೆಟ್ಟವರನ್ನಾಗಿ ಕಾಣಿಸಲು ಭಗತ್ ಸಿಂಗ್ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆದರೆ, ಭಗತ್ ಸಿಂಗ್ ಮತ್ತವರ ಗೆಳೆಯರಿಗೆ ಮರಣದಂಡನೆ ನೀಡಬಾರದೆಂದು ಗಾಂಧಿ ಪತ್ರ ಬರೆದ ವಿಷಯವನ್ನು ಮಾತ್ರ ಅಡಗಿಸಿಡುತ್ತಾರೆ. ಗಾಂಧಿ ಹೇಳಿದ ಕೂಡಲೇ ಬ್ರಿಟಿಷರು ಭಗತ್ ಸಿಂಗ್ ಅವರನ್ನು ಬಿಟ್ಟು ಬಿಡುತ್ತಿದ್ದರು ಎಂದಾದರೆ, ‘ನೀವಿನ್ನು ಹೋಗಿ’ ಎಂದು ಗಾಂಧಿ ಹೇಳಿದ್ದರೆ ಸಾಕಾಗಿತ್ತಲ್ಲವೇ? ಸ್ವಾತಂತ್ರ್ಯ ಕೊಟ್ಟು ಹೋಗಬೇಕಿತ್ತಲ್ಲ? ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡಬೇಕಾದ ಅಗತ್ಯ ಏನಿತ್ತು? ತಾನು ಬ್ರಹ್ಮಚರ್ಯದ ಪ್ರಯೋಗ ಮಾಡಿದ್ದೆ ಎಂದು ಗಾಂಧಿ ಹೇಳಿದ ಮಾತನ್ನು ನಂಬುತ್ತಾರೆ. ಆದರೆ, ಸಂಯಮವನ್ನು ಕಾಪಾಡಿಕೊಂಡಿದ್ದೆ ಎನ್ನುವುದನ್ನು ಮಾತ್ರ ನಂಬುವುದಿಲ್ಲ!

ಹಿಂಸೆಯನ್ನು ಸಂಪೂರ್ಣ ತ್ಯಜಿಸುವುದು ಗಾಂಧಿ ತತ್ತ್ವ. ಕ್ಷಾತ್ರ ತೇಜಸ್ಸಿನಿಂದ ಹೋರಾಟ ಮಾಡಿ ಕಡೆಗೆ ಬಂದು ಸೇರುವುದು ಗಾಂಧಿ ತತ್ತ್ವಕ್ಕೇ ಎಂದಾದರೆ ಆ ಕ್ಷಾತ್ರ ತೇಜಸ್ಸೇ ಪ್ರಶ್ನಾರ್ಹ ಅಲ್ಲವೆ. ಸಾವರ್ಕರ್ ಅವರು ಹೊರಬಂದು ದೇಶಸೇವೆ ಮಾಡಲು ಹೂಡಿದ ತಂತ್ರಗಾರಿಕೆ ಇದು ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಹೊರಗೆ ಬಂದ ಮೇಲೆ ಅವರೆಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ್ದರು ಎಂದು ಹೇಳುವುದಿಲ್ಲ. ಈ ದೇಶದಲ್ಲಿ ತಮ್ಮ ಕಡೆಯವರು ಮಾಡಿದ್ದು ಮಾತ್ರ ತಂತ್ರಗಾರಿಕೆ, ಉಳಿದವರೆಲ್ಲ ದುರುದ್ದೇಶಪೂರಿತರು ಎನ್ನುವುದು ಅವರ ನಿಲುವು.

ವಾಸ್ತವದಲ್ಲಿ ಇದೆಲ್ಲ ಅರ್ಥ ಆಗಿಲ್ಲ ಎಂದೇನೂ ಅಲ್ಲ. ಹೇಗಾದರೂ ಮಾಡಿ ಗಾಂಧಿಯವರನ್ನು ಕೆಟ್ಟವರೆಂದು ಜನಮಾನಸದಲ್ಲಿ ಬಿತ್ತಬೇಕು ಮತ್ತು ಅದರ ಬೆಳೆಯನ್ನು ತಾವು ಕುಯ್ಯಬೇಕು ಎನ್ನುವುದಷ್ಟೇ ಉದ್ದೇಶ ಎಂದು ಮೇಲ್ನೋಟಕ್ಕೇನೆ ಅರ್ಥ ಆಗುತ್ತದೆ. ಆದರೆ, ನೆಹರೂ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದಷ್ಟು ಸುಲಭದಲ್ಲಿ ಗಾಂಧಿಯವರನ್ನು ಬಿಂಬಿಸಲು ಆಗುವುದಿಲ್ಲ. ಗಾಂಧಿ ಹಿಂದೂಧರ್ಮಕ್ಕೆ ನಿಷ್ಠರಾಗಿದ್ದವರು. ಗಾಂಧಿ– ನಾರಾಯಣ ಗುರು ಸಂವಾದವು ಹಿಂದೂಧರ್ಮದ ಬಗ್ಗೆ ಗಾಂಧೀಜಿ ಅವರಿಗಿದ್ದ ಆಳವಾದ ನಂಬಿಕೆಗಳನ್ನು ತೆರೆದಿಡುತ್ತದೆ. ಆದರೆ, ಎಲ್ಲರನ್ನೂ ಒಳಗೊಳ್ಳುವ ಗಾಂಧಿಯವರ ರಾಷ್ಟ್ರೀಯತೆಯ ಪರಿಕಲ್ಪನೆ ಇವರಿಗೆ ಆಗಿಬರುವುದಿಲ್ಲ. ಆದ್ದರಿಂದ, ಗಾಂಧಿಯವರನ್ನು ಹೇಗಾದರೂ ಮಾಡಿ ಹಣಿಯಲೇಬೇಕೆಂಬ ನಿರ್ಧಾರದಿಂದ ಯಾರಾದರೊಬ್ಬ ಗಾಂಧಿಯವರನ್ನು ಅವರ ಪಾಡಿಗೆ, ‘ಮಹಾತ್ಮ’ ಎಂದು ಕರೆದರೆ ಅದಕ್ಕೂ ಭಾಷಾ ಗೂಂಡಾಗಿರಿಯ ಈ ಒಂದು ತಂಡದ ಗದರಿಸುವಿಕೆ ಇದ್ದೇ ಇರುತ್ತದೆ.

ತನ್ನ ಎಲ್ಲ ಮಿತಿಗಳನ್ನು ವಿಶ್ವದ ಮುಂದೆ ತೆರೆದಿಟ್ಟ ಗಾಂಧಿಯ ಹಾಗೆ ತನ್ನ ದುರ್ನಡತೆಗಳನ್ನು– ಸಣ್ಣ ತಪ್ಪನ್ನಾದರೂ– ಒಪ್ಪಿಕೊಳ್ಳಬಲ್ಲ ಒಬ್ಬ ನಾಯಕನೂ ಇವರ ಬಳಿ ಇಲ್ಲ. ಎಲ್ಲವನ್ನೂ ಮುಕ್ತವಾಗಿಯೇ ಇರಿಸಿದ ಗಾಂಧಿಯವರದ್ದು ಅಲ್ಲಮರ ಜಾಡಿನಲ್ಲಿ ಸಾಗುವ ವ್ಯಕ್ತಿತ್ವ. ಅಲ್ಲಮರಿಗೆ ಸೊನ್ನಲಿಗೆ ಸಿದ್ಧರಾಮ ಎಷ್ಟು ಕಲ್ಲು ಎಸೆದರೂ ಗಾಳಿಗೆ ಎಸೆದಂತಾಗುತ್ತದೆಯೇ ಹೊರತು ತಾಗುವುದಿಲ್ಲ. ಗಾಂಧಿಯೂ ಹಾಗೆಯೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.