ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕುರುಹುಗಳಲ್ಲಿ ಮುಚ್ಚಿಹೋಗುವ ಅರಿವು

ಅವರು, ನಾವು ಎಂಬ ಕದನದಲ್ಲಿ ಎರಡೂ ಕಡೆಯ ಹೆಣ್ಣು ಮಕ್ಕಳೇ ಬಲಿಪಶುಗಳು
Last Updated 23 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮುಖವಾಡಗಳು ಬಿಚ್ಚಿಬೀಳುತ್ತಿವೆ. ಹೀಗೆಂದು ಎಲ್ಲರೂ ಅವರವರದೇ ಪರದೆಗಳ ಹಿಂದೆ ನಿಂತು ಅಲವತ್ತುಕೊಳ್ಳುತ್ತಿದ್ದಾರೆ. ಪರದೆಗಳು ತಮ್ಮತಮ್ಮ ಬಣ್ಣಗಳಲ್ಲೇ ಜಗತ್ತನ್ನು ಕಾಣಿಸುತ್ತಿರುವಾಗ ನಿಜವನ್ನು ಕಾಣುವ ನೋಟವು ನಮಗೆ ದಕ್ಕದೇಹೋಗಿರುವುದು ಪರಿಸ್ಥಿತಿಯ ವ್ಯಂಗ್ಯ. ಅವರವರದೇ ನೋಟಕ್ರಮಗಳಲ್ಲಿ ವಿಭಜಿತಗೊಂಡಿರುವ ಸಮುದಾಯವು ಅರಿವಿನ ದಾರಿ ಬಿಟ್ಟು ಕುರುಹುಗಳ ಹಿಂದೆ ನಡೆಯುತ್ತಿದೆ ಎಂಬುದಕ್ಕೆ ಈ ಸಂದರ್ಭ ಒಂದು ಜ್ವಲಂತ ನಿದರ್ಶನ. ವಿವಿಧತೆಯಲ್ಲಿ ಏಕತೆ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆದರ್ಶ ಪರಿಕಲ್ಪನೆಗಳ ಹಿಂದೆ ಅಸಹನೆಯಲ್ಲಿ ಬೇಯುತ್ತಿರುವ ಭಾರತೀಯರ ವಾಸ್ತವ ಮನಃಸ್ಥಿತಿಯ ಪರದೆ ಕಳಚಿಬಿದ್ದಿದೆ.

ಮೇಲುನೋಟಕ್ಕಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆಯನ್ನು ಅನುಸರಿಸುವ ಪ್ರಶ್ನೆ. ತರಗತಿಗಳಲ್ಲಿ ಹಿಜಾಬ್ ಧರಿಸಲು ತಮಗೆ ಅವಕಾಶ ನೀಡಬೇಕೆಂಬ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕೊತ್ತಾಯದಿಂದ ಇದು ಆರಂಭವಾಯಿತು. ಒಂದು ತುಂಡು ಬಟ್ಟೆಯಿಂದ ಯಾರಿಗೇನು ತೊಂದರೆ ಎಂಬುದು ಲೋಕರೂಢಿಯ ಪ್ರಶ್ನೆ. ನಮ್ಮ ಪರಿಸರದಲ್ಲಿ ನಾವು ಹಾಗೆ ಬಾಳುತ್ತಿದ್ದೇವೆ ಕೂಡಾ. ತಮಗಿಷ್ಟವಾದ ಮತವನ್ನು ಅನುಸರಿಸುವುದು ಹಾಗೂ ಬಟ್ಟೆ ಧರಿಸುವುದು ಸಂವಿಧಾನ ಕೊಟ್ಟ ಮೂಲಭೂತ ಹಕ್ಕು. ಆದರೆ ಅದು ಎಲ್ಲಿ ಹೇಗೆ ಎಂಬುದು ವಿವೇಚನೆಯನ್ನು ಬೇಡುವ ಸಂಗತಿ.

ಹಿಜಾಬಿಗೆ ಪ್ರತಿಯಾಗಿ ಕೇಸರಿಶಾಲುಗಳು ಮಕ್ಕಳ ಹೆಗಲೇರಿದಾಗ ಇದು ರಾಜಕೀಯ ವಿಷಯವಾಗಿ ಹೋಯಿತು. ನಮ್ಮ ಮಕ್ಕಳು ಸ್ಪಷ್ಟವಾಗಿ ‘ಅವರು’ ಮತ್ತು ‘ನಾವು’ ಎಂಬ ವಿಭಜನೆಗೆ ತುತ್ತಾದರು. ಇದು ಸಮಾಜದ ಸುಪ್ತ ಮನಃಸ್ಥಿತಿ ಭುಗಿಲೆದ್ದ ಪರಿ. ಆದರೆ ಇದಕ್ಕಾಗಿ ವಿದ್ಯಾರ್ಥಿಗಳು ಬಳಕೆಯಾದದ್ದು ಮಾತ್ರ ದುರಂತ.

ಹಿಜಾಬ್ ಮುಸ್ಲಿಂ ಹೆಣ್ಣು ಮಕ್ಕಳ ಅಸ್ಮಿತೆಯೇ ಅಥವಾ ಹೇರಿಕೆಯೇ ಎಂಬುದನ್ನು ಸ್ವತಃ ಅವರೇ ಅರಿಯಬೇಕು. ಆದರೆ ವಿಷಯ ಇಂದು ಇಷ್ಟು ಸರಳವಾಗಿ ಉಳಿದಿಲ್ಲ. ಇದು ಧಾರ್ಮಿಕ ಅಸ್ಮಿತೆಯ ಸಮಸ್ಯೆಯಾಗಿಯೂ ನೈತಿಕ ಬಿಕ್ಕಟ್ಟಾಗಿಯೂ ರಾಜಕೀಯ ಉದ್ವಿಗ್ನತೆಯ ಅಭಿವ್ಯಕ್ತಿಯಾಗಿಯೂ ಸಾಂವಿಧಾನಿಕ ಹಕ್ಕುಗಳ ಮಂಡನೆಯಾಗಿಯೂ ಬೆಂಕಿ ಬಿದ್ದಾಗ ಚಳಿ ಕಾಯಿಸುವ ಕೆಲವರ ಪ್ರವೃತ್ತಿಯಾಗಿಯೂ ಬೇರೆಬೇರೆ ಸ್ವರಗಳನ್ನು ಪಡೆದುಕೊಂಡಿದೆ. ಸಂವಾದದ ಸಾಧ್ಯತೆಯೇ ಕೊನೆಯಾಗಿ ಸರಳ ಸಮಸ್ಯೆಯು ಸಿಕ್ಕುಸಿಕ್ಕಾಗಿದೆ.

ಶೈಕ್ಷಣಿಕ ಆವರಣದಲ್ಲಿ ಹಿಜಾಬಿನೊಂದಿಗೆ ಕೇಸರಿ, ನೀಲಿಗಳು ಬಂದವು. ಜೈ ಶ್ರೀರಾಮ್, ಜೈ ಭೀಮ್, ಅಲ್ಲಾಹು ಅಕ್ಬರ್ ಎಂಬ ಧ್ವನಿಗಳು ಪ್ರತಿಧ್ವನಿಸಿದವು. ನಮ್ಮ ಎಳೆಯರು ಮಾಧ್ಯಮಗಳಲ್ಲಿ ಪುರುಷ ಸಿಂಹಗಳೂ ಸಿಂಹಿಣಿಯರೂ ಆಗಿ ಮಿಂಚಿದರು. ಮಾಧ್ಯಮಗಳು ಪುಟ್ಟ ಮಕ್ಕಳನ್ನೂ ಬಿಡದೆ ಅಟ್ಟಾಡಿಸಿ ಪರಾಕ್ರಮ ಮೆರೆದವು. ವಿಚಾರ ವಿವೇಕಗಳು ಮರೆಯಾಗಿ ಇದೊಂದು ಬಗೆಯ ಸೈದ್ಧಾಂತಿಕ ಕದನವಾಗಿ ಮಾರ್ಪಟ್ಟಿತು. ಮಾಧ್ಯಮಗಳಲ್ಲಿ, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ನಂಜುಮಾತಿನ ಬಾಣಗಳು ಪರಸ್ಪರ ಗಾಸಿಗೊಳಿಸತೊಡಗಿದವು. ವಿಷಯ ಅಂತರರಾಷ್ಟ್ರೀಯ ನೆಲೆಯಲ್ಲಿ ಪರ–ವಿರೋಧ ಬಣಗಳನ್ನು ಸೃಷ್ಟಿಸಿತು.

ಆದರೆ ಶಿಕ್ಷಕರಾಗಿ, ಮಕ್ಕಳ ತಂದೆತಾಯಿಗಳಾಗಿ ನಮಗೆ ನಾವೇ ಕೇಳಿಕೊಳ್ಳಬೇಕಿರುವುದೆಂದರೆ, ಈ ಮಕ್ಕಳಿಗೆ ರಾಮನ ಬಗ್ಗೆ, ಅಲ್ಲಾಹುವಿನ ಬಗ್ಗೆ, ಅಂಬೇಡ್ಕರ್ ಬಗ್ಗೆ ಎಷ್ಟು ಗೊತ್ತು? ಅವರನ್ನೆಲ್ಲ ಸಂಕೇತಗಳನ್ನಾಗಿಸಿ, ಆಯುಧಗಳನ್ನಾಗಿಸಿ ಸ್ಲೋಗನ್ನುಗಳ ಮಟ್ಟಕ್ಕೆ ಇಳಿಸಿಯಾಗಿದೆ. ನಮಗೆ ಜಗತ್ತಿನ ಸಂಬಂಧಗಳ ಸಾಮರಸ್ಯವನ್ನು ಕಾಣುವ ಒಳಗಣ್ಣು ಮುಚ್ಚಿಹೋಗಿದೆ. ಸಂಕೇತಗಳು, ಬಣ್ಣಗಳು, ಘೋಷಣೆಗಳು ಮಾತ್ರ ಸತ್ಯವಾಗಿ ಗೋಚರಿಸುತ್ತಿವೆ. ನವಜನಾಂಗವೊಂದರ ಮಿದುಳಿಗೆ ಶಾಶ್ವತವಾಗಿ ಪರದೆ ತೊಡಿಸಲು ರಣೋತ್ಸಾಹ
ದೊಂದಿಗೆ ಕಣಕ್ಕಿಳಿದಿದ್ದಾಗಿದೆ. ಕಾಲವು ತೊಡಿಸುವ ಇಂಥ ಮಿಥ್ಯೆಗಳನ್ನು ಮುಂದೆ ಕಳಚುವುದು ಸುಲಭವೇ?

ಇದನ್ನೆಲ್ಲ ತಡೆಯಲು ಜಾತಿ ಮತ ನಿರಪೇಕ್ಷವಾದ ಸ್ಪೇಸ್ ಒಂದನ್ನು ನಿರ್ಮಿಸಿಕೊಳ್ಳುವುದು ಶಿಕ್ಷಣದಿಂದ ಸಾಧ್ಯ. ನಾವು ಅಧ್ಯಾಪಕರಿಗೂ ಒಂದು ಧರ್ಮವಿದೆ. ಜಗತ್ತನ್ನು ಪೂರ್ವಗ್ರಹಮುಕ್ತವಾಗಿ ಕಾಣುವುದನ್ನು ಕಲಿಸುವುದು ಆ ಧರ್ಮದ ನಡೆ. ಅಂಥ ಜ್ಞಾನವನ್ನು ನಿರ್ಮಿಸುವುದು ಹಾಗೂ ಅದು ಸೂಕ್ತವಾಗಿ ಬಳಕೆಯಾಗುವಂಥ ವಿವೇಕದ ದೃಷ್ಟಿಯನ್ನು ನೀಡುವುದು ಅದರ ದಾರಿ.

ಯಾವುದೇ ಹಿನ್ನೆಲೆಯ ವಿದ್ಯಾರ್ಥಿಗಳು ಕಟ್ಟಿಕೊಂಡು ಬಂದ ಪೂರ್ವಗ್ರಹೀತಗಳು ಸತ್ಯದ ಬೆಳಕಲ್ಲಿ ತಂತಾನೇ ಕಳಚಿಬೀಳುವಂಥ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ಶಿಕ್ಷಣ ಮೂಡಿಸಬೇಕು. ಅಂಥ ನಿರಂಕುಶಮತಿಗಳನ್ನು ಸೃಷ್ಟಿಸುವುದು ನಿಜ ಅರಿವಿನಿಂದ ಮಾತ್ರ ಸಾಧ್ಯ. ನಾವು ಜೈವಿಕ ಪರಿಸರವನ್ನು, ಪರಮಾಣು ಜಗತ್ತನ್ನು, ಮನುಷ್ಯನ ದೇಹ ಪ್ರಜ್ಞೆಗಳನ್ನು ಹೇಗೆ ಪೂರ್ವಗ್ರಹವಿಲ್ಲದೆ ವಸ್ತುನಿಷ್ಠವಾಗಿ ಅರಿಯುತ್ತೇವೋ ಹಾಗೇ ಧರ್ಮ, ಸಮಾಜ, ಸಂಸ್ಕೃತಿಗಳ ರಚನೆಯನ್ನೂ ಅರಿಯಬೇಕು. ಆಗ ನಮ್ಮ ಮೇಲೆ ಹೇರಿದ ಲಾಂಛನಗಳನ್ನು ನಾವು ಕಳಚುವುದು ಸಾಧ್ಯ.

ನಾವು ಧರಿಸುವ ಯಾವ ಲಾಂಛನಗಳೂ ನಮ್ಮ ಅಸ್ಮಿತೆಯಲ್ಲ. ಕುವೆಂಪು ಅವರು ಹೇಳುವ ಹಾಗೆ ‘ಮತ ನಮಗೊಂದು ದೊಡ್ಡ ಬಂಧನವಾಗಿದೆ. ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು
ಪಡೆಯಲೆಂದು ಜೀವ ಮಾಡುವ ಪ್ರಯತ್ನವೇ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ’. ಪಂಥಗಳ ಇಕ್ಕಟ್ಟಿಗೆ ಸಿಕ್ಕಿಕೊಳ್ಳದೇ ಸರ್ವಧರ್ಮಗಳ ಸಾರವಾದ ಉದಾರ ದರ್ಶನವೊಂದನ್ನು ಕಂಡು ಬಾಳು ಕಟ್ಟಿಕೊಳ್ಳಬೇಕೆಂದು ಕುವೆಂಪು ಯುವಕರಿಗೆ ಸಲಹೆ ಇತ್ತಿದ್ದಾರೆ. ಮತಭ್ರಾಂತಿಯನ್ನು ಬಿಟ್ಟು ಮತಿಯ ದೀವಿಗೆ ಹಿಡಿದು ಹೊರಡುವವರಿಗೆ ಆ ಕಾಣ್ಕೆಯು ಸಾಧ್ಯವೆನ್ನುತ್ತಾರೆ.

ಜಗತ್ತಿನ ಬಹುತೇಕ ಎಲ್ಲ ಧರ್ಮಗಳ ಗಂಡಾಳ್ವಿಕೆಯ ನೀತಿಯಿಂದಾಗಿ ಹೆಣ್ಣು ಹಲವು ದೈಹಿಕ ಹಾಗೂ ಮಾನಸಿಕ ಬಂಧನಗಳನ್ನು ಅನಿವಾರ್ಯವಾಗಿ ಹೊರುತ್ತ ಬಂದಿರುವುದು ಇತಿಹಾಸ. ಅದನ್ನು ಕಳಚಿಕೊಂಡು ಸಹಜವಾಗಿ ವಿಕಸಿಸುವುದಕ್ಕಾಗಿಯೇ ಶತಮಾನಗಳಿಂದ ಅನೇಕ ಹೋರಾಟಗಳು ನಡೆದಿವೆ. ಅದು ನಮ್ಮ ರಾಜಕೀಯ ಪ್ರಜ್ಞೆಯಿಂದ ಸಮಾನತೆಗಾಗಿ ಮಾಡುವ ಹೋರಾಟವೂ ಹೌದು, ಎಲ್ಲ ಬಗೆಯ ಸ್ಥಾಪಿತ ಅಧಿಕಾರ ರಚನೆಗಳಿಂದ ಮುಕ್ತಗೊಳ್ಳುವ ನಮ್ಮ ಪ್ರಜ್ಞೆಯ ಹಂಬಲವೂ ಹೌದು. ಅನೇಕ ಶತಮಾನಗಳಿಂದ ವಿಕಾಸವಾಗುತ್ತ ಬಂದ ಇಂಥದೊಂದು ಅರಿವು ಮಹಿಳೆಯರ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಧೀಃಶಕ್ತಿಗಳನ್ನು ಪುನರುಜ್ಜೀವನಗೊಳಿಸಿದೆ. ಸ್ತ್ರೀಯರನ್ನು ಮತ್ತೆ ಕುರುಹುಗಳ ಹಿಂದೆ ನಿಲ್ಲಿಸುವ ಈ ಹುನ್ನಾರಕ್ಕೆ ನಾವು ಮತ್ತೆ ಬಲಿಯಾಗಬೇಕೇ? ಇಂದು ಆರಂಭವಾಗಿರುವ ಈ ಹಿಮ್ಮುಖ ಚಲನೆ ನಿಜವಾಗಿಯೂ ನಮ್ಮನ್ನು ಮತ್ತೆ ಬಂಧಿಸುವ ಹುನ್ನಾರವೆಂದು ಯಾಕೆ ಅರ್ಥವಾಗುತ್ತಿಲ್ಲ?

ಡಾ. ಗೀತಾ ವಸಂತ
ಡಾ. ಗೀತಾ ವಸಂತ

ಇಷ್ಟು ದಿನಗಳ ಹೋರಾಟದ ಫಲವಾಗಿ ನಮ್ಮ ಮುಖಹೀನತೆಯನ್ನು ತೊರೆದು ತಲೆಯೆತ್ತಿ ಓಡಾಡುತ್ತಿದ್ದೇವೆ. ನಿರ್ಭಯದ ಪರಿಭಾಷೆ ಕಲಿತಿದ್ದೇವೆ. ಸಹೋದರಿತ್ವದ ಅಡಿಯಲ್ಲಿ ಒಕ್ಕೊರಲಿನಿಂದ ಮಾತಾಡಬೇಕಿದ್ದ ನಾವು ‘ಅವರು’ ಮತ್ತು ‘ನಾವು’ ಎಂಬ ಮತೀಯ ವಿಭಜನೆಯ ಬಲಿಪಶುಗಳಾಗುತ್ತಿದ್ದೇವೆ.

ಅವರು ತಾಳಿ, ಕಾಲುಂಗುರ ಧರಿಸುತ್ತಿಲ್ಲವೇ? ಇವರು ಜನಿವಾರ, ವಿಭೂತಿ ಧರಿಸುತ್ತಿಲ್ಲವೇ? ಅವರು ಹಿಜಾಬ್ ತೆಗೆದರೆ ನಾವು ಶಾಲು ತೆಗೆಯುತ್ತೇವೆ. ಇಂಥ ಅರ್ಥಹೀನ ಸ್ಪರ್ಧೆಯಲ್ಲಿ ಯಾರ ಗೆಲುವಿಗೆ ಯಾರು ಬಲಿಪಶುಗಳು? ಅರಿವಿನ ಜಾಗದಲ್ಲಿ ಕುರುಹುಗಳು ಮಾತನಾಡುತ್ತಿವೆ. ಅವರು ಧರ್ಮವೇ ಮುಖ್ಯವೆನ್ನುವಾಗ ನಮ್ಮ ಹೆಣ್ಣು ಮಕ್ಕಳಿಗೆ ಧರ್ಮ ಮುಖ್ಯವಲ್ಲವೇ ಎಂದು ಇವರು ಹುಯಿಲಿಡುತ್ತಾರೆ. ಕೊನೆಯಲ್ಲಿ ಹೆಣ್ಣುಗಳು ಧರ್ಮದ ಕುರುಹುಗಳನ್ನು ಕಾಪಿಡುವ ಸಾಧನಗಳಾಗಿ ತೆರೆದ ಆಕಾಶವು ಚೌಕಟ್ಟುಗಳಲ್ಲಿ ಮುರುಟಿಕೊಳ್ಳುತ್ತದೆ.

ಅವರು, ನಾವು ಎಂಬ ಕದನದಲ್ಲಿ ಎರಡೂ ಕಡೆಯ ಹೆಣ್ಣುಮಕ್ಕಳೇ ಬಲಿಪಶುಗಳು. ಮಕ್ಕಳೇ ಅದಕ್ಕೆಂದೇ ಕಣ್ಪಟ್ಟಿಗಳನ್ನು ಕಳಚೋಣ. ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗುವ ಶಿಕ್ಷಣಕ್ಕೆ ತಲೆಬಾಗೋಣ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT