ಯುದ್ಧೋನ್ಮಾದ ಸಿನಿಮಾಗಳ ಯಶಸ್ಸಿನ ನಡುವೆ, ಯುದ್ಧದ ಘೋರ ಪರಿಣಾಮಗಳನ್ನು ಹೇಳುವ ಕಾರಣಕ್ಕಾಗಿ ‘ಇಕ್ಕೀಸ್’ ಗಮನಸೆಳೆಯುತ್ತದೆ. ಮನುಷ್ಯ ಸಂಬಂಧಗಳಿಗೆ ದೇಶ–ಕಾಲದ ಗಡಿಯಿಲ್ಲ ಎನ್ನುವುದನ್ನು ರುಜುವಾತುಪಡಿಸುವ ಈ ಸಿನಿಮಾ, ಸಂಯಮ ಮತ್ತು ನೈತಿಕ ಸ್ಪಷ್ಟತೆ ಒಳಗೊಂಡಿರುವ ಕಲಾಕೃತಿ.

‘ತುಂಡಾಗಿದೆ ಭೂಮಿ ಛಿದ್ರವಾಗಿದೆ ಬದುಕು/ ಜ್ವಲಿಸುತ್ತಿವೆ ಚಂಡಮಾರುತ ಎದೆಯೆದೆಯಲ್ಲೂ/ ಅಲ್ಲಿಯೂ ಇಲ್ಲಿಯೂ’, ‘ಪ್ರತಿ ಮನೆಯಲ್ಲಿ ಚಿತೆಯ ಜ್ವಾಲೆ/ ಹಬ್ಬುತಿದೆ ಬೆಂಕಿ ಊರೆಲ್ಲ ಖಾಲಿ/ ಅಲ್ಲಿಯೂ ಇಲ್ಲಿಯೂ’ – ಕೈಫಿ ಆಜ್ಮಿ ಅವರ ಈ ಕವಿತೆಯೊಂದಿಗೆ ಶುರುವಾಗುವ ಕನ್ನಡಿಗ ಎಂ.ಎಸ್. ಸತ್ಯು ನಿರ್ದೇಶನದ ‘ಗರಂ ಹವಾ’ (1973) ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಪರಿಗಣಿಸಲಾಗಿರುವ ಹಿಂದಿ ಸಿನಿಮಾ. ದೇಶ ವಿಭಜನೆಯ ನಂತರ ಭಾರತದಲ್ಲೇ ಉಳಿಯಲು ನಿರ್ಧರಿಸಿದ ಮುಸ್ಲಿಂ ಕುಟುಂಬವೊಂದರ ದುರಂತ ಕಥೆ ಈ ಚಿತ್ರದ್ದು. ದೇಶ ತುಂಡಾಗಿ ಜನರ ಮಧ್ಯೆ ಹೊಸದೊಂದು ಗಡಿಗೋಡೆ ಎದ್ದು ನಿಂತರೂ ಮನಸ್ಸುಗಳು ಬೆಸೆದುಕೊಂಡಿರುವ ಜನಸಾಮಾನ್ಯರ ಬದುಕು–ಬವಣೆಯನ್ನು ಚಿತ್ರ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಇದೀಗ 2026ರ ಮೊದಲ ದಿನ ತೆರೆಕಂಡ ತಮಿಳು ಮೂಲದ ಶ್ರೀರಾಮ್ ರಾಘವನ್ ನಿರ್ದೇಶನದ ಹಿಂದಿ ಚಿತ್ರ ‘ಇಕ್ಕೀಸ್’ ಭಾರತ–ಪಾಕಿಸ್ತಾನದ ಯುದ್ಧದ ಹಿನ್ನೆಲೆಯಲ್ಲಿ ಗಡಿಗೋಡೆಗಳನ್ನು ಮೀರಿದ ಜನಸಾಮಾನ್ಯರ ಬದುಕನ್ನು ವಿಶಿಷ್ಟ ಬಗೆಯಲ್ಲಿ ಕಟ್ಟಿಕೊಟ್ಟಿದೆ. ದೇಶ ವಿಭಜನೆ, ಯುದ್ಧದ ನೋವು, ಸಂಕಟಗಳನ್ನು ನೇರವಾಗಿ ಅನುಭವಿಸದ ದಕ್ಷಿಣ ಭಾರತೀಯರಿಬ್ಬರು ಇಂತಹ ಸಂಕೀರ್ಣ ವಿಷಯಗಳನ್ನುಳ್ಳ ಚಿತ್ರಗಳನ್ನು ಕಟ್ಟಿದ್ದು ಮಾನವ ಸಂಬಂಧಗಳಿಗೆ, ಸಂವೇದನೆಗಳಿಗೆ ದೇಶ–ಕಾಲಗಳ ಗಡಿಯಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ.

ಕಥೆ, ಪಾತ್ರಗಳ ವಿವರ, ಕಾಲಘಟ್ಟ, ಇವೆಲ್ಲವೂ ಬೇರೆಯೇ ಆದರೂ ‘ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ’ ಎಂದು ಇವೆರಡೂ ಚಿತ್ರಗಳು ಆರ್ದ್ರವಾಗಿ ಹೇಳುತ್ತಿವೆ. ಇಂದಿನ ಅಬ್ಬರದ ದೇಶಭಕ್ತಿಗೆ, ಯುದ್ಧಪಿಪಾಸು ಮನಃಸ್ಥಿತಿಗೆ, ಉಗ್ರ ರಾಷ್ಟ್ರೀಯತೆಗೆ ದಿಟ್ಟವಾಗಿ ಪ್ರತಿರೋಧ ಒಡ್ಡಿವೆ. ಜನಸಾಮಾನ್ಯರ ಸಾವು–ನೋವು ಅಲ್ಲಿಯೂ ಇಲ್ಲಿಯೂ ಒಂದೇ ಬಗೆಯದು, ಮೇಲ್ನೋಟಕ್ಕೆ ಕಾಣುವ ಹಗೆ–ವೈರ ಜನಸಾಮಾನ್ಯರ ಆಯ್ಕೆಯಲ್ಲ ಎಂಬ ಸ್ಪಷ್ಟ ನಿಲುವು ಈ ಚಿತ್ರಗಳದ್ದು.

ಹಿಂದಿಯಲ್ಲಿ ಇಕ್ಕೀಸ್ ಎಂದರೆ ಇಪ್ಪತ್ತೊಂದು. 21ನೇ ವಯಸ್ಸಿನಲ್ಲೇ ಸಾವನ್ನಪ್ಪಿದ ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ (ಅಗಸ್ತ್ಯ ನಂದ) ಅವರ ಬದುಕನ್ನು ಆಧರಿಸಿದ್ದು ಈ ಚಿತ್ರ. ಈತ ಭಾರತದ ಅತಿ ಕಿರಿಯ ‘ಪರಮವೀರಚಕ್ರ’ ಪುರಸ್ಕೃತ. ಹಾಗೆಯೇ ಯುದ್ಧಭೂಮಿಯಲ್ಲಿ ಮಡಿದ ಮಗನನ್ನು 30 ವರ್ಷಗಳ ನಂತರವೂ ನೆನೆಯುತ್ತಲೇ ಇರುವ 81ರ ವಯಸ್ಸಿನ ಮದನ್ಲಾಲ್ ಖೇತರ್ಪಾಲ್ (ಧರ್ಮೇಂದ್ರ) ಅವರ ಬದುಕಿನ ಚಿತ್ರಣವೂ ಹೌದು. ಅರುಣ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಸೈನಿಕ ತರಬೇತಿ ಪಡೆದು 1971ರ ಭಾರತ–ಪಾಕಿಸ್ತಾನ ಯುದ್ಧದ ಸಮಯದಲ್ಲಿ 17 ಪೂನಾ ಹಾರ್ಸ್ ರೆಜಿಮೆಂಟ್ನಲ್ಲಿ ಟ್ಯಾಂಕ್ ಕಮಾಂಡರ್ ಆಗಿ ಯುದ್ಧಭೂಮಿಯಲ್ಲಿ ಕಾದಾಡುತ್ತ ಸಾಯುವ ಚಿತ್ರಣ ಒಂದೆಡೆಯಾದರೆ, 2001ರಲ್ಲಿ ಲಾಹೋರ್ಗೆ ಭೇಟಿ ನೀಡುವ ನಿವೃತ್ತ ಬ್ರಿಗೇಡಿಯರ್ ಮದನ್ಲಾಲ್ ಅವರನ್ನು ಪಾಕಿಸ್ತಾನದಲ್ಲಿ ಬ್ರಿಗೇಡಿಯರ್ ನಿಸಾರ್ (ಜೈದೀಪ್ ಅಹಲಾವತ್) ಆತಿಥ್ಯ ಮಾಡುವ ಚಿತ್ರಣ ಇನ್ನೊಂದೆಡೆ. ಹೀಗೆ ಚಿತ್ರವು ಎರಡು ಕಾಲರೇಖೆಗಳಲ್ಲಿ ನಡೆಯುತ್ತದೆ. ಸೈನಿಕನಾಗಿ ಶತ್ರುಗಳ ವಿರುದ್ಧ ಯುದ್ಧಭೂಮಿಯಲ್ಲಿ ಸೆಣೆಸುವ ಬಗ್ಗೆ ಸಾಹಸಮಯ ಕಲ್ಪನೆಗಳನ್ನಿಟ್ಟುಕೊಂಡ ಬಿಸಿರಕ್ತದ ಯುವಕನ ಕಥೆ ಮತ್ತು ಅದರ ಪರಿಣಾಮಗಳೊಂದಿಗೆ ಹೋರಾಡುತ್ತಲೇ ಇರುವ ಇಳಿವಯಸ್ಸಿನ ತಂದೆ ಮತ್ತು ‘ಶತ್ರುದೇಶದ’ ಮಧ್ಯವಯಸ್ಕನ ಕಥೆ ಒಂದಕ್ಕೊಂದು ಹೆಣೆದುಕೊಂಡಿರುವ ಪರಿಯೇ ಚಿತ್ರದ ಜೀವಾಳ.

ಇತ್ತೀಚಿನ ವರ್ಷಗಳಲ್ಲಿ ಯುದ್ಧವನ್ನು ಅತಿರಂಜಿತವಾಗಿ ಚಿತ್ರಿಸಿ ನೋಡುಗರಲ್ಲಿ ರೋಷ ಉಕ್ಕುವಂತೆ ಪ್ರಚೋದಿಸುವ ಜವಾಬ್ದಾರಿಯನ್ನು ಆವಾಹಿಸಿಕೊಂಡಿರುವ ಬಾಲಿವುಡ್ ಚಿತ್ರಗಳು ಒಂದರ ಹಿಂದೆ ಒಂದು ಯಶಸ್ಸನ್ನು ಸಾಧಿಸುತ್ತಿರುವಾಗ, ‘ಇಕ್ಕೀಸ್’ ಇದ್ಯಾವುದನ್ನೂ ಲೆಕ್ಕಿಸದೆ ಅಪ್ಪ ಮತ್ತು ಮಗನ ಬದುಕನ್ನು ಭಾವನಾತ್ಮಕ ನೆಲೆಯಲ್ಲಿ ಸಂಧಿಸುವ ಹಾಗೆ ಕಟ್ಟುತ್ತ ಸಾಗುತ್ತದೆ. ಬಾಕ್ಸ್ ಆಫೀಸ್ನ ಪ್ರಲೋಭನೆಗಳಿಗೆ ಬಗ್ಗದ ಆತ್ಮವಿಶ್ವಾಸದ ಸಂವೇದನಾಶೀಲ ನಿರ್ದೇಶಕ, ಯುದ್ಧವೆಂದರೆ ದೇಶಭಕ್ತಿಯ ಹೆಸರಿನಲ್ಲಿ ನಡೆಸುವ ಅಬ್ಬರದ ಅರಚಾಟವಲ್ಲ, ತಲೆಮಾರುಗಳು ಅದರ ದುಷ್ಪರಿಣಾಮವನ್ನು ನೇರವಾಗಿಯೋ ಪರೋಕ್ಷವಾಗಿಯೋ ಎದುರಿಸಬೇಕಾಗುತ್ತದೆ ಎಂಬುದನ್ನು ಕೌಶಲದಿಂದ ಹೆಣೆದ ಚಿತ್ರಿಕೆಗಳಲ್ಲಿ ಬಿಚ್ಚಿಡುತ್ತಾರೆ. ಅರುಣ್ ಸೈನಿಕ ತರಬೇತಿಯಲ್ಲಿರುವಾಗ ಹೆಮಿಂಗ್ವೇಯ ‘For Whom The Bell Tolls’ ಕಾದಂಬರಿಯನ್ನು ಉಡುಗೊರೆಯಾಗಿ ಪಡೆಯುವ ದೃಶ್ಯ ಇದಕ್ಕೆ ಉದಾಹರಣೆ. ಯುದ್ಧದಲ್ಲಾಗುವ ಸಾವು–ನೋವಿನ ದುರಂತದ ಚಿತ್ರಣವಿರುವ ಕಾದಂಬರಿ ಇದು. ಅರುಣ್ ಕೈಗೆ ಈ ಪುಸ್ತಕವನ್ನಿಡುವ ನಿರ್ದೇಶಕ ಯುದ್ಧಗಳ ಕುರಿತ ತನ್ನ ನಿಲುವನ್ನು ಮೆಲುವಾಗಿ ಸ್ಪಷ್ಟ ಧ್ವನಿಯಲ್ಲಿ ಹೇಳಿಬಿಡುತ್ತಾರೆ. ನಿಜದಲ್ಲಿ ಶತ್ರುವೆಂದರೆ ಯಾರು, ಶತ್ರುನಾಶ ಎಂದರೆ ಏನು ಎಂಬೆಲ್ಲಾ ಸಂಕೀರ್ಣ ಪ್ರಶ್ನೆಗಳು ನೋಡುಗರ ಮನದಲ್ಲಿ ಹುಟ್ಟುವ ಹಾಗೆ ಮಾಡುತ್ತಾರೆ.

ಲಾಹೋರಿನ ತನ್ನ ಕಾಲೇಜಿಗೆ ಭೇಟಿ ಕೊಟ್ಟ ಮದನ್ಲಾಲ್ ಅಲ್ಲಿ ಸಾಲಾಗಿಟ್ಟ ಖ್ಯಾತನಾಮರ ಪಟಗಳ ಮಧ್ಯೆ ನಟ ದೇವಾನಂದರನ್ನು ತೋರಿಸಿ ಇವರು ‘ನನ್ನ ಹಿರಿಯ’ ಎಂದು ಗುರುತಿಸುವ ದೃಶ್ಯ, ಉರ್ದುವಿನಲ್ಲಿ ಟಿಪ್ಪಣಿಗಳನ್ನು ಬರೆದುಕೊಳ್ಳುವ ದೃಶ್ಯ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು. ಇತ್ತೀಚೆಗೆ ಪ್ರಜ್ಞಾಪೂರ್ವಕವಾಗಿ ತನ್ನ ಹಿಂದೂಸ್ತಾನಿ (ಹಿಂದಿ–ಉರ್ದು) ಬೇರುಗಳಿಂದ ದೂರ ಸರಿಯುತ್ತಿರುವ ಬಾಲಿವುಡ್ ಚಿತ್ರಗಳನ್ನು ನೋಡಿದಾಗ ಈ ದೃಶ್ಯಗಳ ಮಹತ್ವ ಅರಿವಾಗುತ್ತದೆ.

ಹಳೆಯ ಹಿಂದಿ ಸಿನಿಮಾಗಳ ಆರಾಧಕರಾದ ಶ್ರೀರಾಮ್ ಈವರೆಗಿನ ತಮ್ಮ ಎಲ್ಲಾ ಚಿತ್ರಗಳಲ್ಲಿ ಒಂದಿಲ್ಲೊಂದು ನೆಪದಲ್ಲಿ ಹಳೆಯ ಚಿತ್ರಗೀತೆಗಳ ತುಣುಕನ್ನು, ನಟ–ನಟಿಯರ ಚಿತ್ರಗಳನ್ನು, ಸಂಭಾಷಣೆಗಳನ್ನು ಕಥೆಯ ಭಾಗವಾಗಿ ಸಾವಯವವಾಗಿ ಹೆಣೆದಿದ್ದಾರೆ. ಅದು ಇಲ್ಲಿಯೂ ಮುಂದುವರಿದು ಇಡೀ ಚಿತ್ರಕ್ಕೆ ಒಂದು ಸುಂದರ ಆವರಣವನ್ನು ಒದಗಿಸಿದೆ. 50–60ರ ದಶಕದ ಹಿಂದಿಚಿತ್ರಗಳ ಜೀವಾಳವೇ ಆಗಿದ್ದ ಗಂಗಾ–ಜಮುನಿ ತಹಜ಼ೀಬ್ (ಹಿಂದೂ–ಮುಸ್ಲಿಂ ಸಮನ್ವಯ ಸಂಸ್ಕೃತಿ) ಅನ್ನು ಅಳಿಸಿಹಾಕುವ ಇತ್ತೀಚಿನ ಪ್ರಯತ್ನಗಳನ್ನು ಶ್ರೀರಾಮ್ ತಮ್ಮದೇ ಶೈಲಿಯಲ್ಲಿ ಧಿಕ್ಕರಿಸುತ್ತ ಅವುಗಳನ್ನು ಮರುಸೃಷ್ಟಿಸುವ ಛಾತಿ ತೋರುತ್ತಾರೆ.

ಯುದ್ಧೋನ್ಮಾದ ಹೆಚ್ಚಿಸಿ, ನೆರೆಹೊರೆಯ ರಾಷ್ಟ್ರಗಳ ಕುರಿತ ಭೀತಿಯನ್ನು ಬಳಸಿ, ಮಾಧ್ಯಮಗಳ ಮೂಲಕ ‘ರಣೋತ್ಸಾಹ’ವನ್ನು ಮನೆ ಮನೆಗೂ ಹಂಚಿ, ಹುತಾತ್ಮರನ್ನೂ ಬಿಡದೆ ಬಳಸಿಕೊಳ್ಳುತ್ತಿರುವ ರಾಜಕೀಯ–ಆರ್ಥಿಕತೆಯ ಈ ದಿನಗಳಲ್ಲಿ, ‘ಇಕ್ಕಿಸ್’ ದಟ್ಟವಾದ ವಿಷಾದದೊಂದಿಗೆ ಯುದ್ಧವೆಂದರೆ ಗೆದ್ದು ಸೋಲುವ ಆಟ ಎಂಬುದನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಭಾರತದಲ್ಲಿ ಮಾತ್ರವಲ್ಲ, ಯುದ್ಧಪಿಪಾಸು ಇಸ್ರೇಲ್, ರಷ್ಯಾ ಮತ್ತು ಅಮೆರಿಕದಲ್ಲಿಯೂ ಶಾಂತಿ–ಸಂಧಾನದ ಮಾತಾಡುವುದನ್ನು ಇಂದು ದೌರ್ಬಲ್ಯವೆಂಬಂತೆ ನೋಡಲಾಗುತ್ತಿದೆ, ಅಟ್ಟಹಾಸದಿಂದ ಅಪಹಾಸ್ಯ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪಾಕಿಸ್ತಾನಿ ಸೇನಾಧಿಕಾರಿ ಭಾರತೀಯ ಅಧಿಕಾರಿಗೆ ಆತಿಥ್ಯ ನೀಡಿದ್ದಲ್ಲದೆ, ಅವರ ಮಗನನ್ನು ಕೊಂದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದನ್ನು ಒಂದು ಯುಟೋಪಿಯನ್ ಕಲ್ಪನೆ ಎಂಬಂತೆ ತಳ್ಳಿಹಾಕಲಾಗುತ್ತಿದೆ. ಆದರೆ, ಇವೆಲ್ಲ ನೈಜ ಘಟನೆಗಳು. ಪಾಕಿಸ್ತಾನಿ ಅಧಿಕಾರಿ ನಿಸಾರ್ ಮದನ್ಲಾಲ್ರನ್ನು ಅವರ ಹುಟ್ಟೂರು ಸರಗೋಧಾಗೆ ತನ್ನ ಕಾರಿನಲ್ಲೇ ಕೊಂಡೊಯ್ಯುವುದು, ಅಲ್ಲಿ ಅವರ ಪೂರ್ವಜರು ವಾಸವಿದ್ದಲ್ಲಿ ಈಗ ಇರುವ ಕುಟುಂಬದವರು ಪ್ರೀತಿಯಿಂದ ಬರಮಾಡಿಕೊಳ್ಳುವುದು ಇವೆಲ್ಲವೂ ವಾಸ್ತವದಲ್ಲಿ ನಡೆದದ್ದೇ ಆಗಿವೆ. ಅದನ್ನು ಅಷ್ಟೇ ಪ್ರಾಮಾಣಿಕವಾಗಿ, ಆತ್ಮೀಯತೆಯಿಂದ ಶ್ರೀರಾಮ್ ಚಿತ್ರಿಸುತ್ತಾರೆ. ಅಲ್ಲಲ್ಲಿ ಸೃಜನಶೀಲ ಸ್ವಾತಂತ್ರ್ಯ ಬಳಸಿಕೊಂಡಿದ್ದರೂ, ಉಳಿದಂತೆ ಸಂಪೂರ್ಣವಾಗಿ ನೈಜ ಘಟನೆಗಳಿಗೆ ನಿಷ್ಠರಾಗಿಯೇ ಶ್ರೀರಾಮ್ ಚಿತ್ರವನ್ನು ಕಟ್ಟಿದ್ದಾರೆ. ಅದಕ್ಕಾಗಿ ನಾಲ್ಕೈದು ವರ್ಷಗಳ ಸಂಶೋಧನೆ, ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ ಎಲ್ಲವನ್ನೂ ಅವರ ತಂಡ ಅಚ್ಚುಕಟ್ಟಾಗಿ ಮಾಡಿದೆ. ಯಾವುದೇ ಆಧುನಿಕ ಗ್ರಾಫಿಕ್ಸ್, ಭಾವನೆಗಳನ್ನು ಉದ್ದೀಪಿಸುವ ಸಂಗೀತ ಬಳಸದೆ ನಿಜದಲ್ಲಿ ಯುದ್ಧಭೂಮಿ ಹೇಗಿರುವುದೋ ಹಾಗೆಯೇ ಚಿತ್ರಿಸಿರುವುದು ಗಮನಾರ್ಹ.

ಯೌವನದ ಕೆಚ್ಚಿನ ಅರುಣ್ ಯುದ್ಧಭೂಮಿಗೆ ಹೋಗಿ ಅಸಾಧಾರಣ ಶೌರ್ಯ ಪ್ರದರ್ಶಿಸಿ ನಂತರ ಹೆಣವಾಗುವ ತ್ಯಾಗವನ್ನು ಶ್ರೀರಾಮ್ ಈ ಕಾಲದ ಇತರ ಯುದ್ಧಕೇಂದ್ರಿತ ಚಿತ್ರಗಳಂತೆ ವಿಜೃಂಭಿಸದೆ, ಅಬ್ಬರದ ಭಾಷಣಕ್ಕೆ ಸರಕನ್ನಾಗಿಸದೆ ಯುದ್ಧದ ನಿಷ್ಪ್ರಯೋಜಕತೆಯನ್ನು ಸಶಕ್ತವಾಗಿ ಕಟ್ಟಿಕೊಡುತ್ತಾರೆ. ಮದನ್ಲಾಲ್ ಹುಟ್ಟೂರಿನಲ್ಲಿರುವಾಗ ಯುದ್ಧದಲ್ಲಿ ಒಂದು ಕಾಲನ್ನು ಕಳೆದುಕೊಂಡ ಮಾಜಿ ಪಾಕಿಸ್ತಾನಿ ಸೈನಿಕನೊಬ್ಬ ಅಲ್ಲಿಗೆ ಕುಂಟುತ್ತಲೇ ಬಂದು ‘ಯಾರು ಈ ಶತ್ರುವನ್ನು ಇಲ್ಲಿ ಕರೆತಂದಿದ್ದು’ ಎಂದು ಅಬ್ಬರಿಸುತ್ತಾನೆ. ಆಗ ಮದನ್ಲಾಲ್ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು ‘ಯಾರು ಶತ್ರು ಎಂದರೆ? ನೀನು ಒಂದು ಕಾಲನ್ನು ಕಳೆದುಕೊಂಡಿದ್ದಿ, ನಾನು ಮಗನನ್ನೇ ಕಳೆದುಕೊಂಡಿದ್ದೇನೆ’ ಎಂದು ಕಣ್ಣೀರಾಗುವ ದೃಶ್ಯ ಮತ್ತು ಈ ಎಲ್ಲ ಸಂಘರ್ಷ ಎಂದಾದರೂ ಕೊನೆಗೊಳ್ಳುವುದೇ ಎಂಬ ನಿಸಾರ್ನ ಪ್ರಶ್ನೆಗೆ, ‘ಕೊನೆಯಾಗಲೇಬೇಕು ಎಂದು ನಾವು ಪ್ರಯತ್ನಿಸಿದರೆ ಕೊನೆಯಾಗೇ ಆಗುತ್ತದೆ’ ಎಂದು ಹೇಳುವ ದೃಶ್ಯ ಯುದ್ಧದಲ್ಲಿ ನೊಂದು ನಲುಗಿದ ಎಲ್ಲರ ಧ್ವನಿಯಾಗಿ ಕೇಳಿಸುತ್ತದೆ. ‘ಇಕ್ಕೀಸ್’ ಇತರ ಯುದ್ಧೋನ್ಮಾದದ ಚಿತ್ರಗಳಂತೆ ಯಶಸ್ವಿಯಾಗದೆ ಹೋದರೂ ಸಂಯಮ ಮತ್ತು ನೈತಿಕ ಸ್ಪಷ್ಟತೆಯನ್ನು ಆಯ್ದುಕೊಂಡ ಚಿತ್ರ ಎಂದು ಸದಾಕಾಲ ನೆನಪಿನಲ್ಲುಳಿಯುತ್ತದೆ.

ಲೇಖಕ: ಸಿನಿಮಾ ತಯಾರಕ ಹಾಗೂ ಸಂಕಲನಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.