ಹೆಮ್ಮೆಯಿಂದ ಹೇಳುತ್ತಾರೋ ಅಥವಾ ನಾಚಿಕೆಯಿಂದ ಹೇಳುತ್ತಾರೋ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ‘ಬುದ್ಧ ಮತ್ತು ಗಾಂಧಿ’ ಅವರ ಪವಿತ್ರ ನಾಡು ಎಂದು ಪದೇಪದೇ ನೆನಪಿಸುತ್ತಾರೆ. ಕರ್ನಾಟಕದಲ್ಲಿ ಅವರ ಪಕ್ಷದ ನಾಯಕರು ಮಾತನಾಡುವಾಗಲೆಲ್ಲಾ ಬಸವಣ್ಣ, ವಿವೇಕಾನಂದರ ಹೆಸರು ಪ್ರಸ್ತಾಪಿಸುತ್ತಾರೆ. ಈ ಮಹನೀಯರಿಗೆ 2020ರಲ್ಲಿ ಎಷ್ಟು ಮಹತ್ವ, ಅವರ ಭಾವನೆಗಳಿಗೆ ಎಷ್ಟು ತೂಕ, ಅವರು ಸೂಚಿಸಿದ ಮಾರ್ಗಕ್ಕೆ ಎಷ್ಟು ಮರ್ಯಾದೆ ನೀಡಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೀದರ್‌ನಿಂದ ಕಳೆದ ವಾರ ಪ್ರಕಟಗೊಂಡ ಎರಡು ಪುಟ್ಟ ಛಾಯಾಚಿತ್ರಗಳನ್ನು ನೋಡಿದರೆ ಸಾಕು.

ಮೊದಲ ಚಿತ್ರದಲ್ಲಿ ಇಬ್ಬರು ಪುಟ್ಟ ಶಾಲಾಬಾಲಕರು ಇದ್ದಾರೆ. ಅವರ ವಯಸ್ಸು 10 ಅಥವಾ 11 ವರ್ಷ ಆಗಿರಬಹುದು. ಇಬ್ಬರು ‘ಎಕ್ಸ್‌ಟ್ರಾಲಾರ್ಜ್’ ಪೊಲೀಸ್ ಕಾನ್‌ಸ್ಟೆಬಲ್‌ಗಳ ಮುಂದೆ ಕೈಕಟ್ಟಿಕೊಂಡು, ಹೆದರಿಕೊಂಡು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇನ್ನೊಬ್ಬ ಕಾನ್‌ಸ್ಟೆಬಲ್ ಈ ದೃಶ್ಯವನ್ನು ವಿಡಿಯೊ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ.

ಎರಡನೇ ಚಿತ್ರ ಈ ಹುಡುಗರ ಶಾಲಾ ಕೊಠಡಿಯದು. ಎಲ್ಲಿ ತಮ್ಮ ಪ್ರೀತಿಯ ಮಿಸ್ ನಿಂತು ಪಾಠ ಹೇಳಿರಬಹುದೋ ಅಲ್ಲಿ ಮೀಸೆ ಮಾವಯ್ಯ ನಿಂತು ಮಕ್ಕಳನ್ನು ವಿಚಾರಣೆ ಮಾಡುತ್ತಿದ್ದಾರೆ. ಇಲ್ಲೂ ವಿಡಿಯೊ ಚಿತ್ರೀಕರಣ. ಈ ಎರಡು ಫೋಟೊಗಳನ್ನು ನೋಡಿದಾಗ, ಇದರ ಬಗ್ಗೆ ಕನ್ನಡಿಗರ ಮೌನ, ಮಾಧ್ಯಮಗಳ ಕಾಳಜಿ ನೋಡಿದಾಗ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಯಾಕೆ ಇಂತಹ ಪೊಲೀಸ್ ಕಸರತ್ತು? ಬೀದರಿನಲ್ಲಿ 30 ವರ್ಷಗಳ ಹಿಂದೆ ಸ್ಥಾಪಿತವಾದ ಪ್ರತಿಷ್ಠಿತ ಶಾಹೀನ್ ಉರ್ದು ಶಾಲೆಯಲ್ಲಿ ಮೂರು ನಿಮಿಷ, ಮೂವತ್ತು ಸೆಕೆಂಡ್‌ಗಳ ಕಿರುನಾಟಕದಲ್ಲಿ ಅಜ್ಜಿ ಮತ್ತು ಮೊಮ್ಮಗಳ ಸಂಭಾಷಣೆಯೊಂದರಲ್ಲಿ ನಾಲ್ಕು- ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪ್ರಧಾನಿ ವಿರುದ್ಧ ಆಡಿದ, ಆಡಿರಬಹುದು ಎನ್ನಲಾದ ಒಂದೇ ಒಂದು ವಾಕ್ಯದ ಹಿಂದೆ ಯಾರ ಕೈವಾಡ ಇತ್ತು ಮತ್ತು ಆ ಮಾತು ಏಕೆ ಬಂತು ಎಂಬುದನ್ನು ಪತ್ತೆ ಮಾಡಲು. ಯಾರೇ ಇರಲಿ, ಯಾಕೇ ಇರಲಿ. ಪ್ರಧಾನಿ ಮೋದಿ ಸ್ವತಃ ‘ನನ್ನ ನೇತೃತ್ವದ ಸರ್ಕಾರವನ್ನು ಟೀಕಿಸಿ, ಅದರಿಂದ ಪ್ರಜಾಪ್ರಭುತ್ವ ಗಟ್ಟಿ ಆಗುತ್ತದೆ’ ಎಂದು ಹಲವು ಬಾರಿ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಪ್ರಧಾನಿ ಬಗ್ಗೆ ವಿಶ್ವಾಸವಿಲ್ಲವೋ ಅಥವಾ ಪ್ರಜಾಪ್ರಭುತ್ವದಲ್ಲೇ ವಿಶ್ವಾಸವಿಲ್ಲವೋ?

ಇಷ್ಟು ಕ್ರೂರವಾದ, ಅಮಾನವೀಯ, ಕಾನೂನುಬಾಹಿರವಾದ ಸಂಶೋಧನೆಯ ನಂತರ, ಬುದ್ಧ-ಗಾಂಧಿ- ಬಸವಣ್ಣ- ವಿವೇಕಾನಂದರ ಹೆಸರು ಹೇಳಿ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಿರುವವರು ಸಾಧಿಸಿರುವುದಾದರೂ ಏನು? ಇಷ್ಟೇ– 26 ವರ್ಷ ವಯಸ್ಸಿನ, ಮನೆ ಕೆಲಸ ಮಾಡಿಕೊಂಡಿರುವ ಬಡ ವಿಧವೆಯೊಬ್ಬರನ್ನು 15 ದಿನಗಳಿಂದ ಜೈಲಿನಲ್ಲಿಟ್ಟು, ಅವರ ಸಂಪಾದನೆಗೆ ಕುತ್ತು ತಂದು, ತನ್ನ 11 ವರ್ಷದ ಮಗಳಿಂದ ದೂರಮಾಡಿರುವುದು. ಅದಲ್ಲದೆ, ಹುಡುಗಿಯು ಕೈಯಲ್ಲಿ ಹಿಡಿದು ತೋರಿಸಿದ ಅಥವಾ ತೋರಿಸಿದಳು ಎನ್ನಲಾದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೆಂದು ವರದಿಯಾಗಿದೆ. ಅವಳ ಪುಟ್ಟ ಕೈಯನ್ನು ಮುಟ್ಟದೆ ಇರುವುದೇ ಅವಳ, ಅವಳ ತಾಯಿಯ ಹಾಗೂ ನಮ್ಮ–ನಿಮ್ಮ ಅದೃಷ್ಟ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಿರುವ ಏಕೈಕ ರಾಜ್ಯವೆಂಬುದು ಕರ್ನಾಟಕಕ್ಕೆ ಕೀರ್ತಿಯನ್ನೇನೂ ತಂದಿಲ್ಲ. ಬೀದರ್‌ನಲ್ಲಿ ನಡೆದಿರುವಂತಹ ಘಟನೆಗಳಿಂದ ನಮ್ಮ ರಾಜ್ಯದ ಹೆಸರಿಗೆ ಕೆಸರು ಮೆತ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ಈ ದುಃಸ್ಥಿತಿಯು ನಗೆಪಾಟಲಿಗೆ ಈಡಾಗಿದೆ. ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಇದರ ಬಗ್ಗೆ ಸಹಜವಾಗಿಯೇ ಚಿಂತೆಗೆ ಈಡಾಗಬೇಕು. ಪೊಲೀಸರ ಈ ಪಕ್ಷಪಾತಿ ಕಾರ್ಯಶೈಲಿಯನ್ನು ಕನ್ನಡಿಗರು ಪ್ರಶ್ನಿಸಬೇಕಾಗಿದೆ. ಪೊಲೀಸರು ಈ ರಾಜ್ಯದ ಸೇವಕರೇ ವಿನಾ ಆಡಳಿತದಲ್ಲಿರುವ ಪಕ್ಷದ ಅಥವಾ ಅದರ ಹಿಂದಿರುವ ‘ಸಾಂಸ್ಕೃತಿಕ’ ಸಂಘಟನೆಗಳ ಸೇವಕರಲ್ಲ.

ಬೀದರ್ ಘಟನೆಯನ್ನು ನಾವು ದೂರದಿಂದ ನೋಡಿದಾಗ ಎದ್ದುಕಾಣುವುದು ಬಿಜೆಪಿ ನೇತೃತ್ವದ ಸರ್ಕಾರದ ಮತ್ತು ಅದರ ಇಲಾಖೆಗಳ ತಾರತಮ್ಯ ಹಾಗೂ ಕರ್ತವ್ಯಲೋಪ. ಒಂದು ಚಿಕ್ಕ ವಿಷಯವನ್ನು ಸ್ಥಳೀಯವಾಗಿ, ಸುಲಭವಾಗಿ, ಸೌಹಾರ್ದದಿಂದ ನಿವಾರಿಸಲು ಪ್ರಯತ್ನಿಸಬಹುದಾಗಿತ್ತು. ಆ ಕೆಲಸದಲ್ಲಿ ಬೀದರಿನ ಪೊಲೀಸರು ಹಾಗೂ ಜಿಲ್ಲೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾನೂನು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ನಡವಳಿಕೆಯಿಂದ ಒಂದು ಕುಟುಂಬಕ್ಕೆ ಭಾರಿ ಅನ್ಯಾಯ ಮಾಡಿದ್ದಾರೆ, ರಾಜ್ಯಕ್ಕೆ ಕೆಟ್ಟ ಮಾದರಿಯಾಗಿದ್ದಾರೆ, ಕೆಟ್ಟ ಹೆಸರು ತಂದಿದ್ದಾರೆ. ಏಕೆ ಹೀಗಾಯಿತು ಎಂದು ಊಹಿಸಬಹುದಾದರೂ ಮುಂದೆ ಬೇರೆಡೆ ಹೀಗಾಗದಿರಲಿ ಎಂಬ ಕಾರಣಕ್ಕಾದರೂ ಈ ಕುರಿತು ತನಿಖೆಯಾಗಬೇಕು. ಬೀದರ್ ಪ್ರಕರಣದ ಹಿಂದೆ ಕೋಮು ಶಕ್ತಿಗಳ ಕೈವಾಡ ಇದ್ದರೆ ಅದು ಇನ್ನಷ್ಟು ದೌರ್ಭಾಗ್ಯದ ಸಂಗತಿ.

ಒಂದು ಪುಟ್ಟ ವಾಕ್ಯದ ಈ ದೊಡ್ಡ ಪರಿಣಾಮ ನೋಡಿದಾಗ, ಬೀದರಿನ ಚಿಂತನಶೀಲ ಜನರಿಗೆ ಕಾನೂನಿನ ವಿಪರ್ಯಾಸ ಹಾಗೂ ತಮ್ಮ ಸರ್ಕಾರದ ದ್ವಂದ್ವ ನಿಲುವು ಕಾಣುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ನಡೆಯುವ ಶಾಲೆಯಲ್ಲಿ ಎರಡು ತಿಂಗಳ ಹಿಂದೆ, ಬಾಬರಿ ಮಸೀದಿಯನ್ನು ಹೇಗೆ ಕೆಡವಲಾಯಿತು ಅನ್ನುವ ಬಗ್ಗೆ 800 ಮಕ್ಕಳು 20 ನಿಮಿಷಗಳ ಅವಧಿಯ ನಾಟಕ ಮಾಡಬಹುದಾದರೆ, ಶಾಹೀನ್ ಶಾಲೆಯ ಪುಟ್ಟ ಮಕ್ಕಳು ಪೌರತ್ವ ಕಾಯ್ದೆಯ ಬಗ್ಗೆ ಕಿರುನಾಟಕ ಮಾಡಿದರೆ ಅದು ಯಾವ ದೃಷ್ಟಿಕೋನದಿಂದ, ಯಾವ ಕಾನೂನಿನ ಪ್ರಕಾರ ದೇಶದ್ರೋಹ? ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಕರಣದ ಬಗ್ಗೆ ಎರಡು ತಿಂಗಳಾದರೂ ಪೊಲೀಸರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಬೀದರಿನಲ್ಲಿ ಯಾಕೆ ಇಷ್ಟು ಅವಸರ? ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪು ಹುಡುಕಲಾಗದು.

ಇದು ಒಂದೇ ಉದಾಹರಣೆ ಆಗಿದ್ದರೆ ಪರವಾಗಿಲ್ಲ. ಆದರೆ, ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ನಂತರ, ಈ ಬಗೆಯ ಘಟನೆಗಳ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳ ಸುರಿಮಳೆ ಆಗುತ್ತಿದೆ. ಪೌರತ್ವ ಕಾಯ್ದೆಯನ್ನು ವಿರೋಧಿಸುವವರನ್ನು ಒಬ್ಬ ಸಂಸದ ‘ಪಂಚರ್ ಹಾಕುವವರು’ ಎಂದು ಕರೆದು ತನ್ನ ಸಂಸ್ಕೃತಿ ತೋರಿಸಿದ್ದಾರೆ. ಶಾಸಕರೊಬ್ಬರು ‘ನಾವು 80%, ನೀವು 18%. ನಾವು ನಿಮ್ಮ ಮೇಲೆ ಎಗರಿಬಿದ್ದರೆ ಏನಾಗುತ್ತೆ ಗೊತ್ತಾ?’ ಅಂತ ಬೆದರಿಸಿದ್ದಾರೆ. ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರು ತಮ್ಮ ಮನೆ ಬಾಗಿಲಲ್ಲೇ ಗುಂಡೇಟಿಗೆ ಸತ್ತಿರುವಾಗ, ಇನ್ನೊಬ್ಬ ಅವಿವೇಕಿ ‘ನಾನು ಗೃಹ ಮಂತ್ರಿ ಆಗಿದ್ದರೆ ಚಿಂತಕರನ್ನು ಕೊಲ್ಲುತ್ತಿದ್ದೆ’ ಎಂದು ಹೇಳುತ್ತಾನೆ.

ಪ್ರತಿನಿತ್ಯ ಸುಳ್ಳು ಸುದ್ದಿ ಸೃಷ್ಟಿಸುವುದರಲ್ಲಿ ನಮ್ಮ ರಾಜ್ಯದ್ದು ಎತ್ತಿದ ಕೈ. ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಬಾಂಬ್’ ಇಟ್ಟಿದ್ದು ಅಂತರರಾಷ್ಟ್ರೀಯ ಗ್ಯಾಂಗ್ ಅಂತ ಮಾಧ್ಯಮಗಳು ಬೊಬ್ಬೆ ಹೊಡೆದವು. ಯಾವುದೇ ಪುರಾವೆ ಕೊಡದೆ, ಬೆಂಗಳೂರಿನಲ್ಲಿ ಬಾಂಗ್ಲಾದೇಶದ 3 ಲಕ್ಷ ಅಕ್ರಮ ವಲಸಿಗರು ತುಂಬಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಇವೆಲ್ಲವುಗಳೂ ರಾಜ್ಯದ ಸರ್ವರ ಹಿತಾಸಕ್ತಿ ಕಾಪಾಡಬೇಕಾಗಿರುವ ಸರ್ಕಾರಕ್ಕೆ ಸರಿಯೆನಿಸಿದರೆ, ಬೀದರ್ ಮಕ್ಕಳನ್ನು ಕಂಡರೆ ಏಕೆ ಇಷ್ಟು ಭಯ?

ಕರ್ನಾಟಕದ ಜನ ತಾವು ಕಟ್ಟುತ್ತಿರುವ ಕಂದಾಯ, ತೆರಿಗೆಯನ್ನು ಸರ್ಕಾರವು ಯಾವ ಘನ ಕಾರ್ಯಗಳಿಗೆ ಬಳಸುತ್ತಿದೆ, ಗೃಹ ಮತ್ತು ಕಾನೂನು ಇಲಾಖೆ ಅಧಿಕಾರಿಗಳಿಗೆ ಸಂವಿಧಾನದ ಬಗ್ಗೆ ಎಷ್ಟು ಆಳವಾದ ತಿಳಿವಳಿಕೆ ಇದೆ ಅನ್ನುವುದಕ್ಕೆ ಬೀದರ್ ಪ್ರಕರಣ ಕನ್ನಡಿ. ಕರ್ನಾಟಕದ ಜನ ಎಚ್ಚರವಾಗಿ ಇರಬೇಕು. ಇಂದು ಬೀದರ್‌ನಲ್ಲಿ ನಡೆದದ್ದು, ನಾಳೆ ನಿಮ್ಮ ಊರಲ್ಲಿ ಆಗಬಹುದು. ಮಾನವ ಹಕ್ಕುಗಳನ್ನು ಕಾಪಾಡುವುದು ಬರೀ ಬೀದರ್‌ನವರ ಕರ್ತವ್ಯ ಅಲ್ಲ. ನಮ್ಮದೂ ಸಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.