‘ನಾಗರಿಕತೆಗಳ ಸಂಘರ್ಷ’. ಈ ಪರಿಕಲ್ಪನೆಯನ್ನು ಮುಂದಿಟ್ಟದ್ದು ಸ್ಯಾಮುಯೆಲ್ ಪಿ. ಹಂಟಿಗ್ಟನ್. ಮಹಾಕುಂಭಮೇಳದ ಬಗ್ಗೆ ನಡೆದ ಪರ–ವಿರೋಧಗಳ ಕೋಲಾಹಲಗಳು ಎರಡು ಭಿನ್ನ ನಾಗರಿಕತೆ ಅಥವಾ ಸಂಸ್ಕೃತಿಗಳ ಸಂಘರ್ಷಕ್ಕೆ ಸಮವೇ ಸರಿ.

ಕುಂಭಮೇಳದ ವಿರೋಧಿಗುಂಪಿನ ವಿಚಾರಸರಣಿಗೆ ಎರಡು ಪ್ರಾತಿನಿಧಿಕ ಅಭಿಪ್ರಾಯಗಳನ್ನು ನೋಡೋಣ. ಕಾಂಗ್ರೆಸ್ನ ರಾಜಕಾರಣಿಯೊಬ್ಬರು ‘ಕುಂಭಮೇಳದಿಂದ ಬಡತನ ನಿವಾರಣೆ ಆಗುವುದೆ?’ ಎಂದರು. ಇನ್ನೊಬ್ಬರು, ‘ಚಿಂತಕ’ರು ‘ಗಂಗೆ ಮಾತ್ರ ಪವಿತ್ರ ಎಂಬುದು ಧಾರ್ಮಿಕ ಸರ್ವಾಧಿಕಾರ’ ಎಂದರು.

ಸುಮಾರು ಸಾವಿರ ವರ್ಷಗಳ ಹಿಂದಿದ್ದ ವಾಚಸ್ಪತಿಮಿಶ್ರ, ತನ್ನ ‘ಭಾಮತಿ’ ಎಂಬ ವ್ಯಾಖ್ಯಾನಗ್ರಂಥದಲ್ಲಿ,
ಆಚಾರ್ಯ ಶಂಕರರ ಪ್ರತಿಭಾಸಾಮರ್ಥ್ಯವನ್ನೂ, ತನ್ನ ಮಿತಿಯನ್ನೂ ಆಲಂಕಾರಿಕವಾಗಿ ಪ್ರಕಟಿಸಿದ್ದಾನೆ: ‘ನನ್ನ ಮಾತುಗಳು ರಸ್ತೆಯಲ್ಲಿ ಹರಿಯುವ ನೀರಿನಂತೆ, ಕಲುಷಿತವಾದುದು. ಆದರೆ ಶಂಕರರ ಮಾತುಗಳೋ ಸಾಕ್ಷಾತ್ ಗಂಗಾಪ್ರವಾಹ. ಆದರೆ ನನ್ನ ಮಾತುಗಳು ಶಂಕರರ ಮಾತುಗಳ ಜೊತೆ ಸೇರಿದರೆ ಅವು ಪವಿತ್ರವಾಗುವುದು ದಿಟ’. ಗಂಗಾನದಿಯನ್ನು ಶ್ರದ್ಧಾಳುಗಳು ಹೇಗೆ ಸ್ವೀಕರಿಸುತ್ತಾರೆ– ಎಂಬುದಕ್ಕೆ ಈ ಮಾತೊಂದು ಪ್ರತೀಕ.

ಕುಂಭಮೇಳದಿಂದ ಬಡತನ ನಾಶವಾಗುತ್ತದೆ– ಎಂದು ಯಾರೂ ನಂಬಿಲ್ಲ. ದಿಟ, ತೀರ್ಥಸ್ನಾನದಿಂದ ಪಾಪಗಳು ನಾಶವಾಗುತ್ತವೆ– ಎಂದೇ ಆಸ್ತಿಕರು ನಂಬುತ್ತಾರೆ. ಪಾಪ–ಪುಣ್ಯಗಳು ನಮ್ಮ ಮಾನಸಿಕ ಕಲ್ಪನೆಗಳು. ಹೇಗೆ ಪಾಪಗಳು ಕಣ್ಣಿಗೆ ಕಾಣಲಾರವೋ, ಹಾಗೆಯೇ ಪುಣ್ಯಸಂಪಾದನೆಯೂ ಕಾಣದು. ಹೀಗಾಗಿ ತೀರ್ಥಸ್ನಾನದಿಂದ ಶ್ರದ್ಧಾಳುಗಳು ಹೊಂದುವ ಲಾಭ–ನಷ್ಟಗಳನ್ನು ಬ್ಯಾಂಕಿನ ಪಾಸ್ಬುಕ್ನ
‘ಕ್ರೆಡಿಟ್’–‘ಡೆಬಿಟ್’ಗಳ ಲೆಕ್ಕಾಚಾರದಂತೆ ಪ್ರತ್ಯಕ್ಷಪ್ರಮಾಣದ ಅಳತೆಯಲ್ಲಿ ಲೆಕ್ಕಮಾಡಲಾಗದು. ತೀರ್ಥಸ್ನಾನವು ನಮ್ಮ ಮನಸ್ಸಿನಲ್ಲಿ ನೆಲೆಯೂರಿರುವ ಪಾಪಪ್ರಜ್ಞೆ, ಅಸಹಾಯಕತೆ, ಭಯ ಮುಂತಾದ ಮಾನಸಿಕ ‘ಬಡತನ’ಗಳನ್ನು ದೂರಮಾಡಿ, ನಮ್ಮಲ್ಲಿ ಆತ್ಮಸಂಪತ್ತನ್ನು ಹೆಚ್ಚಿಸುತ್ತದೆ ಎಂಬುದೇ ಜನರ ಶ್ರದ್ಧೆಗೆ ಮೂಲವಾಗಿರುವ ಬಂಡವಾಳ. ಬಡತನವನ್ನು ದೇಶದಿಂದ ಉಚ್ಚಾಟಿಸ
ಲೆಂದೇ ಕಾಂಗ್ರೆಸ್ ಪಕ್ಷ ಪಣತೊಟ್ಟು ಆರಂಭಿಸಿದ್ದ ‘ಗರೀಬಿ ಹಠಾವೋ‘ದಂಥ ಸರ್ಕಾರದ ಯೋಜನೆಗಳೇ ವಿಫಲವಾಗಿವೆಯಷ್ಟೆ! ಹೀಗಿರುವಾಗ ಧಾರ್ಮಿಕ ಆಚರಣೆಯೊಂದು ಬಡತನವನ್ನು ಓಡಿಸುತ್ತದೆ ಎಂದು, ಅದಕ್ಕೆ ಅಂಥ ಯಾವುದೇ ಸಂಕಲ್ಪ ಇಲ್ಲದಿದ್ದರೂ, ನಾವು ಮಾತ್ರ ಹಾಗೆ ಯೋಚಿಸುವುದು ಬಾಲಿಶತನವಲ್ಲವೆ? ಕಾಂಗ್ರೆಸ್ ಅಂದೇ ಯಶಸ್ವಿಯಾಗಿ ಬಡತನವನ್ನು ಓಡಿಸಿದಿದ್ದರೆ, ಇಂದು ಕುಂಭಮೇಳದ ಮೇಲೆ ಆ ಹೊಣೆಗಾರಿಕೆಯು ವರ್ಗಾವಣೆ ಆಗುತ್ತಲೇ ಇರಲಿಲ್ಲವೆನ್ನಿ!

ಇನ್ನು ಧಾರ್ಮಿಕ ಸರ್ವಾಧಿಕಾರದ ವಿಷಯ. ಮಾರ್ಕ್ಸ್ವಾದವಷ್ಟೆ ಶ್ರೇಷ್ಠ– ಎಂಬಂಥ ಯಾವುದೇ ಅಪ್ರಬುದ್ಧ ವೈಚಾರಿಕತೆಯೂ ಗಂಗಾಸ್ನಾನದ ಪಾವಿತ್ರ್ಯದ ವಿಷಯದಲ್ಲಿ ಗೂಡು ಕಟ್ಟಿಲ್ಲ. ಗಂಗಾನದಿಯ ಉಗಮ, ಅದರ ಪಾವಿತ್ರ್ಯ– ಇವೆಲ್ಲವೂ ‘ಮಿಥ್’ಗಳ ಭಾವಸಾಮ್ರಾಜ್ಯದ ವಿವರಗಳು. ಸಾವಿರಾರು ವರ್ಷಗಳಿಂದ ಇಂಥ ಮಿಥ್ಗಳ ಸಂಕೇತಗಳು ಜನಮಾನಸಿಕತೆಯಲ್ಲಿ ನೆಲೆಯೂರಿ, ಧಾರ್ಮಿಕ ಕಲಾಪಗಳ ಮೂಲಕ ಅವುಗಳ ಧ್ವನ್ಯರ್ಥಗಳು ಪ್ರಕಟವಾಗುತ್ತಿರುತ್ತವೆ. ಈ ಮಿಥ್ಗಳು ಐತಿಹಾಸಿಕ ತಥ್ಯಗಳಲ್ಲ, ಅವು ಜೀವಕೇಂದ್ರಿತ ಭಾವಸತ್ಯಗಳು. ಇವು ವಾಸ್ತವಸತ್ಯಗಳಿಗಿಂತಲೂ ಹೆಚ್ಚು ಪ್ರಭಾವವನ್ನು ಮೂಡಿಸಬಲ್ಲಂಥವು. ‘ದೇವಲೋಕದ ಗಂಗೆ ನಮ್ಮ ಪಾಪಗಳನ್ನು ತೊಳೆಯುತ್ತಾಳೆ’ ಎಂದು ಹೇಳುವ ಮಿಥ್ಗಳೇ, ‘ಕಾಶಿಯಲ್ಲಿ ಹರಿಯುವ ಗಂಗಾನದಿ ಮಾತ್ರವೇ ಗಂಗೆಯಲ್ಲ, ನಮ್ಮ ಮನೆಯ ಬಾವಿಯಲ್ಲಿರುವ ನೀರು ಕೂಡ ಗಂಗೆಯೇ ಹೌದು’– ಎಂದೂ ಹೇಳುತ್ತಿರುತ್ತವೆ. ‘ಗಂಗೇ ಚ ಯಮುನೇ ಚೈವ’ ಎಂಬ ಮಂತ್ರದಲ್ಲಿ ಇಂಥ ಸಮನ್ವಯವನ್ನೇ ಕಾಣುವುದು.

ಪ್ರಯಾಗರಾಜ್ನಲ್ಲಿ ಅಂದು ಮಾತ್ರ ಪವಿತ್ರಸ್ನಾನ ಏಕೆ? ಮಿಥ್ಗಳ ಜೊತೆಗೆ ಹಲವು ಭೌತಿಕ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ವಿವರಗಳೂ ಸೇರಿಕೊಂಡು ತೀರ್ಥಕ್ಷೇತ್ರವೊಂದು ರೂಪವನ್ನು ಪಡೆದಿರುತ್ತದೆ. ಕಾಲಾಂತರದಲ್ಲಿ ಅದು ಮಿಥ್ನ ನಾಭಿಯಂತೆ ಮನ್ನಣೆಯನ್ನು ಪಡೆಯುತ್ತದೆಯಷ್ಟೆ. ಇಲ್ಲೊಂದು ಉದಾಹರಣೆಯನ್ನು ಕೊಡಬಹುದು. ಭಾರತದಲ್ಲಿ ಇಷ್ಟು ಊರುಗಳಿರಲು ದೆಹಲಿಯನ್ನೇ ರಾಜಧಾನಿಯನ್ನಾಗಿ ಏಕೆ ಸ್ವೀಕರಿಸಲಾಯಿತು? ದೆಹಲಿ ‘ದೆಹಲಿ’ಯಾಗಲು ಎಷ್ಟೋ ವಿವರಗಳು, ಎಷ್ಟೋ ವರ್ಷಗಳು ಕಾರಣವಾಗಿರುತ್ತವೆ. ಕೊನೆಗೆ ಭಾರತದ ದನಿಯಾಗಿ ‘ದೆಹಲಿ’ ಎಂಬ ಸಂಕೇತ ಸಿದ್ಧವಾಗುತ್ತದೆ. ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೂ, ದೆಹಲಿಯಲ್ಲಿಯ ಆಚರಣೆಗಿರುವ ತೂಕ ಸ್ವಲ್ಪ ಹೆಚ್ಚು; ಏಕೆಂದರೆ ಅದು ರಾಜಧಾನಿ. ಹೀಗೆಂದು ಕನ್ಯಾಕುಮಾರಿಯಲ್ಲಿ ನಡೆಯುವ ಉತ್ಸವ, ಅದು ಭಾರತದ ಸ್ವಾತಂತ್ರ್ಯೋತ್ಸವ ಅಲ್ಲ ಎಂದು ಹೇಳಲಾದೀತೆ?

ಮಿಥ್ಗಳ ಭಾಷೆ ರೂಪಕಭಾಷೆ. ಹೀಗಾಗಿಯೇ ಇವು ಜಾತಿ–ಭಾಷೆ–ದೇಶ ಮುಂತಾದ ಎಲ್ಲೆಗಳನ್ನು ಮೀರಿ ಎಲ್ಲರೊಂದಿಗೂ ಸಂವಹಿಸುತ್ತಿರುತ್ತವೆ. ವೈಯಕ್ತಿಕ ಆಮಂತ್ರಣವಿಲ್ಲದಿದ್ದರೂ ಕುಂಭಮೇಳದಲ್ಲಿ ಹೇಗೆ ಕೋಟಿಕೋಟಿ ಜನರು ಏಕತ್ರ ಸೇರಿದ್ದರು? ಜನರನ್ನು ಹೀಗೆ ಒಗ್ಗೂಡಿಸಬಲ್ಲದ್ದು ಜನರ ಸಮೂಹಪ್ರಜ್ಞೆಯಲ್ಲಿ
ಸುಪ್ತವಾಗಿರುವ ಧಾರ್ಮಿಕ ಮಿಥ್ಗಳೇ ಹೌದು ಎಂಬುದನ್ನು ಹರಾರಿ ‘ಸೇಪಿಯನ್ಸ್’ ಕೃತಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಮಿಥ್ಗಳು ಲೌಕಿಕ–ಅಲೌಕಿಕಗಳ ಸಂಗಮಸ್ಥಾನಗಳು. ರಾಮ ಕೃಷ್ಣ ಶಿವ– ಈ ಮೂರು ಮಿಥ್ಗಳು ಭಾರತೀಯತೆಯ ಅಖಂಡತತ್ತ್ವಗಳು ಎಂದಿದ್ದಾರೆ, ಲೋಹಿಯಾ. ಈಗ ಅವರೇನಾದರೂ ಇದ್ದಿದ್ದರೆ ಈ ಪಟ್ಟಿಗೆ ಗಂಗೆಯನ್ನೂ ಸೇರಿಸಿಕೊಳ್ಳುತ್ತಿದ್ದರೇನೋ! ಮನುಷ್ಯನ ಬುದ್ಧಿಶಕ್ತಿಗೆ ಅಂಟಬಹುದಾದ ಅತಿರೇಕದ ಎರಡು ಜಾಡ್ಯಗಳನ್ನು, 17ನೇ ಶತಮಾನದ ಬ್ಲೇಸ್ ಪ್ಯಸ್ಕಲ್ ಸೊಗಸಾಗಿ ಒಕ್ಕಣಿಸಿದ್ದಾನೆ. ಒಂದು: ತರ್ಕವನ್ನು ಪೂರ್ಣವಾಗಿ ತಿರಸ್ಕರಿಸುವುದು; ಎರಡು: ತರ್ಕವನ್ನಷ್ಟೆ ನೆಚ್ಚಿಕೊಳ್ಳುವುದು. ಆದರೆ ‘ಹೃದಯ ಮತ್ತು ಮತಿಗಳು ಸತಿಪತಿ’ಗಳಂತೆ ಅನುಕೂಲದಾಂಪತ್ಯದಲ್ಲಿ
ದ್ದರಷ್ಟೆ ಮಿಥ್ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಸಮಾಜವನ್ನು ಒಗ್ಗೂಡಿಸುವಲ್ಲಿ ಧಾರ್ಮಿಕ ಆಚಾರ–ವಿಚಾರಗಳ ಪಾತ್ರ ದೊಡ್ಡದು ಎಂಬ ಸಮಾಜಶಾಸ್ತ್ರಜ್ಞ ಎಮಿಲ್ ಡಕ್ಹೈಮ್ನ ಪ್ರತಿಪಾದನೆ ಗಮನಾರ್ಹ. ಸನಾತನಧರ್ಮದ ಕೋಟ್ಯಂತರ ಶ್ರದ್ಧಾಳುಗಳು ತಮ್ಮ ಲೌಕಿಕ ಭೇದಗಳನ್ನು ಮರೆತು, ಸಂಗಮಸ್ಥಾನದಲ್ಲಿ ಸೇರಿದ್ದು ಸುಳ್ಳಲ್ಲವಷ್ಟೆ! ನಾಗರಿಕತೆಗಳ ಉಗಮಗಳ ಹಿಂದೆ ಧಾರ್ಮಿಕತೆಯ ಅಡಿಪಾಯಗಳಿರುವುದು ಸ್ಪಷ್ಟ.

ಜನರ ಭಾವನೆಗಳನ್ನು ಸಹಾನುಭೂತಿಯಿಂದ ವಿಶ್ಲೇಷಣೆಯ ನಿಕಷಕ್ಕೆ ಒಳಪಡಿಸಿ, ಅವುಗಳ ಸಾಧಕ–ಬಾಧಕಗಳ ಬಗ್ಗೆ ಪರಾಮರ್ಶಿಸುವಂಥ ಪ್ರಬುದ್ಧತೆಯೇ ಇಂದು ಮರೆಯಾಗುತ್ತಿದೆ. ‘ನಾನು ಹೇಳಿದ್ದೇ ಸತ್ಯ’ ಎಂಬ ಹಟಬುದ್ಧಿ ಎಲ್ಲೆಡೆ ತೀವ್ರವಾಗುತ್ತಿದೆ. ವಿಜ್ಞಾನವನ್ನೂ ಧರ್ಮವನ್ನೂ ನಾವು ತಪ್ಪಾಗಿಯೇ ಅರ್ಥಮಾಡಿಕೊಳ್ಳುತ್ತಿದ್ದೇವೆ. ಈ ತಪ್ಪುಹೆಜ್ಜೆಗಳಿಗೆ ಪ್ರಚೋದನೆಯನ್ನು ಕೊಡುತ್ತಿರುವುದು ನಮ್ಮ ರಾಜಕೀಯ ನಿಲುವುಗಳೇ ಹೊರತು, ಭಾವ–ಬುದ್ಧಿಗಳ ಸಂಸ್ಕಾರದಿಂದ ಸಂಸ್ಕೃತಗೊಂಡ ಚಿಂತನೆ ಅಲ್ಲ.

ಎಲ್ಲರ ಧಾರ್ಮಿಕ ಆಚರಣೆಗಳೂ ಪರಿಶುದ್ಧವಾಗಿರುತ್ತವೆ ಎಂದೇನಲ್ಲ. ವೈದ್ಯನೊಬ್ಬನ ತಪ್ಪಿನಿಂದ ರೋಗಿ ಸತ್ತರೆ, ಆ ತಪ್ಪನ್ನು ವೈದ್ಯಶಾಸ್ತ್ರದ ತಲೆಗೆ ಕಟ್ಟಬಹುದೆ? ದಿಟ, ಗಂಗಾನದಿ ಮಾತ್ರವಲ್ಲ, ನಮ್ಮ ಯಾವುದೇ ನದಿಯೂ ಇಂದು ಭೌತಿಕವಾಗಿ ಶುದ್ಧವಾಗಿಲ್ಲ. ಆದರೆ ಕಲ್ಮಷದ ನೆಪದಲ್ಲಿ ಜನರ ಶ್ರದ್ಧೆಯನ್ನು ಕಲುಷಿತ
ಗೊಳಿಸಬಾರದು. ಜಲಮೂಲಗಳನ್ನು ಅಶುದ್ಧಗೊಳಿಸಬಾರದು ಎಂದು ಧರ್ಮಶಾಸ್ತ್ರಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿವೆ. ಆದರೆ ನಮ್ಮ ಸಂಸ್ಕಾರಹೀನತೆಯಿಂದ ನಮ್ಮ ಧಾರ್ಮಿಕ ಕೇಂದ್ರಗಳನ್ನೂ ನಾವು ವಿರೂಪಗೊಳಿಸುತ್ತಿದ್ದೇವೆ. ‘ವಿದೇಶಗಳಲ್ಲಿ ನದಿಗಳನ್ನು ಪೂಜಿಸುವುದಿಲ್ಲ; ಆದರೆ ಅವರು ಅವನ್ನು ಶುದ್ಧವಾಗಿಟ್ಟುಕೊಂಡಿದ್ದಾರೆ. ನಾವು ನದಿಗಳನ್ನು ಪೂಜಿಸುತ್ತೇವೆ; ಆದರೆ ಅವನ್ನು ನಾವು ಶುದ್ಧವಾಗಿಟ್ಟುಕೊಂಡಿಲ್ಲ’ ಎಂದಿದ್ದರು ಒಮ್ಮೆ, ಶೃಂಗೇರಿಶ್ರೀಗಳು. ನಮ್ಮ ಧರ್ಮಧ್ವಜ ಬುದ್ಧಿಗೆ ಈ ಮಾತು ಚೆನ್ನಾದ ವಿವರಣೆ. ಹೀಗಾಗಿ ನಮ್ಮ ಡಾಂಬಿಕತನ ಎಂಬ ರೋಗದ ಚಿಕಿತ್ಸೆಯ ಬಗ್ಗೆ ನಾವಿಂದು ಮಾತನಾಡಬೇಕಿದೆ. ಹೀಗಲ್ಲದೆ, ಧಾರ್ಮಿಕತೆಯನ್ನೇ ರೋಗ ಎಂದು ಅರಚುವುದು ದುರಹಂಕಾರದ ಪರಮಾವಧಿ. ನೆಗಡಿ ಎಂದು ಮೂಗನ್ನೇ ಕತ್ತರಿಸುವುದು ಮೂರ್ಖತನ. ನಮ್ಮ ಸ್ವಘೋಷಿತ ‘ಪ್ರಗತಿಪರ’ರು ಇಂಥ ಬಾಲಿಶ ಮಾನಸಿಕತೆಯಿಂದ ಮುಕ್ತರಾಗಿ, ಶುದ್ಧರಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.