ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರಾಜ್ಯದ ಮರುನಾಮಕರಣದ ಕತೆ: ಸಚಿವ ಎಚ್‌.ಕೆ.ಪಾಟೀಲ ಲೇಖನ

ಎಚ್‌.ಕೆ.ಪಾಟೀಲ
Published 1 ನವೆಂಬರ್ 2023, 2:32 IST
Last Updated 1 ನವೆಂಬರ್ 2023, 2:32 IST
ಅಕ್ಷರ ಗಾತ್ರ

‘ಕಾವೇರಿಯಿಂದಮಾಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌ …….’ 

ರೋಮಾಂಚನ ತರಿಸುವ ನೃಪತುಂಗ ಕವಿಯ ಈ ಸಾಲುಗಳು ಕನ್ನಡ ನಾಡಿನ ಉದ್ದ ಅಗಲ ವ್ಯಾಪ್ತಿಯನ್ನು ಸಾರುತ್ತದೆ. ಚಲುವ ಕನ್ನಡ ನಾಡಿನ ಕನಸನ್ನು ಕಂಡ ನಮ್ಮ ಗದುಗಿನ ಹುಯಿಲಗೋಳ್‌ ನಾರಾಯಣರಾಯರು

‘ಪಾವನೆಯರ … ಕೃಷ್ಣೆ ಭೀಮೆಯರ ತಾಯ್ನಾಡು,

ಕಾವೇರಿ ಗೋದೆಯರ ಮೈದೊಳೆವ ನಲುನಾಡು:

ಅವಗಂ ಬಗೆಯ ನಗಿಸುವ ಕಬ್ಬಿಗರ ಹಾಡು,

ಕಾವ ಗದುಗಿನ ವೀರನಾರಾಯಣನ ಬೀಡು’

ಎಂದು ಹಾಡಿ ರವಿ ಕಾಣದನ್ನು ಕವಿ ಕಂಡ ಎಂಬುದನ್ನು ಅಕ್ಷರಶಃ ಅನ್ವರ್ಥಕಗೊಳಿಸಿದ್ದಾರೆ.

ಮೈಸೂರು ರಾಜ್ಯವು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಜೊತೆಗೆ ಕನ್ನಡ ಭಾಷಿಕರಿಗಾಗಿ ಒಂದು ಪ್ರತ್ಯೇಕ ರಾಜ್ಯವಾಗಿ ಉದಯಿಸಿತು. ಕರ್ನಾಟಕ ಏಕೀಕರಣ ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ಎಂಬುದಾಗಿ ನಾಮಕರಣ ಮಾಡಬೇಕೆಂಬ ಕರ್ನಾಟಕ ರಾಜ್ಯದ ಎಲ್ಲಾ ನಾಗರಿಕರ ಒಕ್ಕೂರಲಿನ ಆಶೋತ್ತರಗಳನ್ನು ಪ್ರತಿಬಿಂಬಿಸುವ ವಿಶಿಷ್ಟವಾದ ಆಸೆ 1973ರಲ್ಲಿ ಕೈಗೂಡಿತ್ತು.

1970-71ರಲ್ಲಿ ನಡೆದಂತಹ ಮಧ್ಯಂತರ ಚುನಾವಣೆಯ ಕಾಲಘಟ್ಟದಲ್ಲಿ ಇದೊಂದು ಚುನಾವಣಾ ಜನಮತ ಸಂಗ್ರಹದ ವಿಷಯವಾಗಿ ಮಾರ್ಪಟ್ಟಿತ್ತು. ಮೈಸೂರು ರಾಜ್ಯದ ಹೆಸರು ಬದಲಾವಣೆಗಾಗಿ ವಾದ ವಾಗ್ವಾದಗಳು ಬಹಿರಂಗವಾಗಿ ಹಾಗೂ ಆಂತರಿಕವಾಗಿ ಪಕ್ಷಗಳ ಒಳಗೆ ಹೊರಗೆ ವಿಸ್ತೃತವಾದ ಚರ್ಚೆಯಾಗಿತ್ತು. ದೇವರಾಜ ಅರಸು ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಆಡಿದ ಮಾತುಗಳು ದೊಡ್ಡ ವಿವಾದಕ್ಕೆ ಕಾರಣವಾಯಿತು. ಶಾಸನ ಸಭೆಯ ಪ್ರತಿನಿಧಿಗಳ ಅಭಿಪ್ರಾಯದ ಆಧಾರದ ಮೇಲೆ ಹೆಸರು ಬದಲಾವಣೆಯನ್ನು ಮಾಡೋಣ, ಬಹುಮತದ ಅಭಿಪ್ರಾಯದಂತೆ ಹೆಸರು ಬದಲಾವಣೆಯನ್ನು ಪರಿಗಣಿಸೋಣ ಎಂದು ಹೇಳಿದ್ದು ದೇಶದಲ್ಲಿ ಬಹುಕಾಲ ಚರ್ಚೆಗೆ ಕಾರಣವಾಯಿತು.

ಮೈಸೂರು ರಾಜ್ಯ ಉದಯವಾದ ಸರಿಯಾಗಿ 17 ವರ್ಷಗಳ ನಂತರ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡುವ ಚಾರಿತ್ರಿಕ ನಿರ್ಣಯವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಯಿತು. ಅಂದು ಕನ್ನಡ ನಾಡಿನ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ವಿಧಾನಸಭೆಯಲ್ಲಿ ಈ ಚಾರಿತ್ರಿಕ ನಿರ್ಣಯವನ್ನು ಮಂಡಿಸಿದರೆ, ವಿಧಾನ ಪರಿಷತ್ತಿನಲ್ಲಿ ಇದೇ ನಿರ್ಣಯವನ್ನು ಅರಣ್ಯ ಇಲಾಖೆಯ ಸಚಿವರಾಗಿದ್ದ ಕೆ.ಎಚ್.‌ ಪಾಟೀಲ ಮಂಡಿಸಿದರು. 

‘ಭಾರತ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ‘ಕರ್ನಾಟಕ’ ವೆಂಬುದಾಗಿ ಬದಲಾಯಿಸಬೇಕೆಂದು ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸು ಮಾಡುತ್ತಾರೆ’ ಎಂದು ಅರಸು ಅವರು ನಿರ್ಣಯ ಮಂಡಿಸಿದ್ದರು. ನಂತರ ತಮ್ಮ ಭಾಷಣವನ್ನು ಪ್ರಾರಂಭಿಸಿದ ಅವರು, ‘ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾಗತಕ್ಕ ದಿವಸವಾಗಿದೆ. ಅದರ ಕಾರಣ ಏನು ಎನ್ನುವುದು ಈ ಸಭೆಗೆ ವಿವರಿಸಬೇಕಾದ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. ಅರಸು ಅವರ ಭಾಷಣದ ನಂತರ ನಿರ್ಣಯವನ್ನು ಅಂಗೀಕರಿಸಲಾಯಿತು. ಅರಸು ಅವರು ‘ಕರ್ನಾಟಕಕ್ಕೆ’ ಎಂದಾಗ ಎಲ್ಲಾ ಸದಸ್ಯರು ‘ಜಯವಾಗಲಿ’ ಎಂದು ಘೋಷಣೆ ಕೂಗಿದರು.

ವಿಧಾನ ಪರಿಷತ್ತಿನಲ್ಲಿ ಕೆ.ಎಚ್.‌ ಪಾಟೀಲ ಅವರು ಐತಿಹಾಸಿಕ ಭಾಷಣ ಮಾಡಿದ್ದರು. ‘ಇವತ್ತು ಭಾರತದ ನಕ್ಷೆಯಲ್ಲಿ ಕರ್ನಾಟಕ ಒಂದು ದೊಡ್ಡ ಪ್ರಾಂತವಾಗಿದೆ. ಈ ಪ್ರಾಂತದಲ್ಲಿ ಮುಂಬಯಿ ಪ್ರದೇಶದವರು ತಮ್ಮ ನಡೆನುಡಿಯನ್ನು ಕರೆದುಕೊಂಡು ಬಂದಿದ್ದಾರೆ. ಮದ್ರಾಸ್‌, ಹೈದರಾಬಾದ್‌ ಮುಂತಾದ ಪ್ರಾಂತಗಳಿಂದ ಬಂದಿರುವವರೂ ಸಹ ತಮ್ಮ ತಮ್ಮ ನಡೆನುಡಿಗಳನ್ನು ತಂದಿದ್ದಾರೆ. ಮೈಸೂರಿಗೆ ಹಿಂದಿನಿಂದಲೂ ಸಹ ಒಂದು ಹಿರಿಮೆ ಇದೆ. ಸುಗಂಧದ ಹಿರಿಮೆ, ಕನ್ನಡದ ಹಿರಿಮೆ ಇದೆ. ಮುಂಬಯಿ ಪ್ರದೇಶಗಳಿಂದ ಕಾರವಾರ ಮುಂತಾದ ಬಂದರುಗಳು ಸೇರಿವೆ… ತುಂಗಭದ್ರ ಸೌಕರ್ಯ ಹೊಂದಿದೆ. ಮಂಗಳೂರು ಬಂದರು ಬಂದಿರುವುದರಿಂದ ಔದ್ಯೋಗಿಕ ಬೆಳವಣಿಗೆ ಕಾರಣವಾಗಿದೆ. ಉತ್ತರ ಕರ್ನಾಟಕದಿಂದ ಬಂದಂಥ ಜನಗಳೂ ಕೂಡ ಹೇಳುತ್ತಾರೆ, ‘ಇದು ನಮ್ಮ ಕೈಯಲ್ಲೂ ಆಗಲಿಲ್ಲ. ಮೈಸೂರಿನವರೇ ಮುಂದಾಗಿ ಬಂದು ತಾವು ಇದಕ್ಕಾಗಿ ತ್ಯಾಗ ಬೇಕಾದರೂ ಮಾಡುತ್ತೇವೆ. ಈ ಹೆಸರನ್ನು ಇಡೋಣ ಎಂದು ಮೈಸೂರಿನವರು ಉದಾರ ದೃಷ್ಟಿಯಿಂದ ಹೇಳಿದ್ಧಾರೆ’ ಎಂದು. ಕರ್ನಾಟಕ ಮೊದಲಿನ ಕಾಲದೊಳಗೆ ಏನು ಇತ್ತೋ ಚಾಲುಕ್ಯ, ಕದಂಬರ ಕಾಲದಲ್ಲಿ, ಹಾಗೆ ಬರಬೇಕೆಂದು ತಾವು ಆಶೀರ್ವಾದ ಮಾಡಬೇಕು’ ಎಂದು ಅವರು ಹೇಳಿದ್ದರು.

ಕರ್ನಾಟಕ ನಾಮಕರಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಅಂದು ಕರ್ನಾಟಕ ನಾಮಕರಣ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು. ಕರ್ನಾಟಕ ನಾಮಕರಣದ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ನೇರವೇರಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂದೇಶದಲ್ಲಿ ಕನ್ನಡ ನಾಡನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭವು ನಾಡಿನ ಮುಗಿಲಲಿ ಮಾರ್ಧನಿಗೊಳ್ಳುವಂತೆ ಮಾಡಿದರು. ಹಂಪೆ ಮತ್ತು ಗದುಗಿನಲ್ಲಿ ನಡೆದ ಉತ್ಸವಗಳ ಸಂದರ್ಭದಲ್ಲಿ ಕರ್ನಾಟಕದ ಹಿರಿಮೆ ಗರಿಮೆಗಳನ್ನು ಬಾನೆತ್ತರಕ್ಕೆ ಕೊಂಡೊಯ್ಯುವ ಸಂಭ್ರಮ ಸಡಗರಗಳು ನಡೆದವು.

ಪ್ರಮುಖ ಹೆಜ್ಜೆ ಗುರುತು

* 1972ರ ಜುಲೈ 18: ರಾಜ್ಯ ಸಚಿವ ಸಂಪುಟದ ನಿರ್ಣಯ

* 1972ರ ಜುಲೈ 27: ವಿಧಾನ ಸಭೆಯ ಒಪ್ಪಿಗೆ

* 1972ರ ಜೂನ್‌ 31: ವಿಧಾನ ಪರಿಷತ್ತಿನ ಒಪ್ಪಿಗೆ

* 1973ರ ಜುಲೈ 30: ಲೋಕ ಸಭೆಯ ಒಪ್ಪಿಗೆ

* 1973ರ ಆಗಸ್ಟ್‌ 8: ರಾಜ್ಯ ಸಭೆಯ ಒಪ್ಪಿಗೆ

* 1973ರ ಅಕ್ಟೋಬರ್‌ 8: ರಾಷ್ಟಪತಿಯವರ ಅಂಕಿತ

* 1973ರ ನವೆಂಬರ್‌ 1: ನಾಮಕರಣ

* 1973ರ ನವೆಂಬರ್‌ 1: ನಾಮಕರಣ ಸ್ಮರಣೆಗಾಗಿ ಹಂಪೆಯಲ್ಲಿ ವಿಶೇಷ ಉತ್ಸವ

* 1973ರ ನವೆಂಬರ್‌ 3: ನಾಮಕರಣ ಸ್ಮರಣೆಗಾಗಿ ಗದುಗಿನ ವೀರನಾರಾಯಣನ ಗುಡಿಯಲ್ಲಿ ಹೊತ್ತಿಸಿದ ಕರ್ನಾಟಕ ಜ್ಯೋತಿಯನ್ನು ನಂದಾದೀಪವಾಗಿರಿಸುವಿಕೆ ಹಾಗೂ ದೇವರಾಜ ಅರಸು, ಜಯಚಾಮರಾಜ ಒಡೆಯರರಾದಿಯಾಗಿ ಕರ್ನಾಟಕಕ್ಕೆ ದುಡಿದವರಿಗೆ ಸಾಂಕೇತಿಕ ಸನ್ಮಾನ ಮಾಡಲಾಯಿತು

ಲೇಖಕ: ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ

ನಿರೂಪಣೆ: ಲಕ್ಷ್ಮೀಕಾಂತ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT