ಸಂಘರ್ಷದಲ್ಲಿ ತೊಡಗಿರುವ ದೇಶಗಳ ನಡುವೆ ಶಾಂತಿ ನೆಲಸುವಂತೆ ಮಾಡುವ ರಾಜತಾಂತ್ರಿಕ ಪ್ರಯತ್ನಗಳಂತೆ, ವಿಜ್ಞಾನ–ತಂತ್ರಜ್ಞಾನವೂ ಸೌಹಾರ್ದದ ರಾಯಭಾರಿ ಆಗಬಲ್ಲದು. ಭಿನ್ನಾಭಿಪ್ರಾಯ ಇರುವ ದೇಶಗಳು ವಿಜ್ಞಾನ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವುದು ವಿಶ್ವಶಾಂತಿಯ ಉದ್ದೇಶಕ್ಕೆ ಪೂರಕವಾಗಿದೆ.

‘ವಿಜ್ಞಾನವು ಜ್ಞಾನಸಂಚಯ ಮಾತ್ರವಲ್ಲ, ಅದು ವಿವೇಕದ ಸಾಧನ. ಅದನ್ನು ಶಾಂತಿಗಾಗಿ ಬಳಸುವುದೇ ನಮ್ಮ ಪರಮ ಗುರಿಯಾಗಬೇಕು’ ಎನ್ನುವುದು 25 ವರ್ಷಗಳ ಹಿಂದೆ ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಮೊಟ್ಟ ಮೊದಲ ವಿಜ್ಞಾನದ ವಿಶ್ವ ಸಮ್ಮೇಳನದಲ್ಲಿ, 150 ದೇಶಗಳ ಪ್ರತಿನಿಧಿಗಳು ತೊಟ್ಟಿದ್ದ ಸಂಕಲ್ಪ. ಅದರ ನೆನಪಿಗೆ ಮತ್ತು ಆ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರತಿವರ್ಷ ನ. 10ರಂದು ವಿಶ್ವದಾದ್ಯಂತ ‘ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ. ‘ನಂಬಿಕೆ, ಪರಿವರ್ತನೆ ಮತ್ತು ನಾಳೆ– 2050ಕ್ಕೆ ನಮಗೆ ಬೇಕಾದ ವಿಜ್ಞಾನ’– ಇದು ಈ ವರ್ಷದ ವಿಜ್ಞಾನ ದಿನದ ಧ್ಯೇಯ.

ವಿಜ್ಞಾನದ ಜ್ಞಾನ ಮತ್ತು ಫಲಿತಾಂಶಗಳ ಹಂಚಿಕೆಗಾಗಿ ದೇಶಗಳ ನಡುವೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟನ್ನು ಉತ್ತೇಜಿಸುವುದು ಹಾಗೂ ಯುದ್ಧನಿರತ ದೇಶಗಳಲ್ಲಿರುವ ವಿಜ್ಞಾನಿಗಳ ನಡುವೆ ಸಹಕಾರವನ್ನು ಸುಗಮಗೊಳಿಸಲು ಈ ದಿನಾಚರಣೆ ಬಳಸಿಕೊಳ್ಳಲಾಗುತ್ತಿದೆ. ಸಮಾಜದ ಪ್ರಯೋಜನಕ್ಕಾಗಿ ವಿಜ್ಞಾನದ ಬಳಕೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಬದ್ಧತೆಯನ್ನು ನವೀಕರಿಸುವುದು ಮತ್ತು ವೈಜ್ಞಾನಿಕ ಪ್ರಯತ್ನಗಳಿಗೆ ಬೆಂಬಲ ಹೆಚ್ಚಿಸುವ ದಿಸೆಯಲ್ಲಿ ವಿಜ್ಞಾನವು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುವುದು ಈ ದಿನಾಚರಣೆಯ ಉದ್ದೇಶಗಳಲ್ಲಿ ಸೇರಿವೆ.

ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವಕುಲದ ಪ್ರಗತಿಗೆ ಬೇಕಾದ ಎಲ್ಲವನ್ನೂ ನೀಡುತ್ತಿದೆ. ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ, ಶಾಂತಿ ಸ್ಥಾಪನೆಯ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಸಲಕರಣೆಗಳು ಯುದ್ಧದ ಅವಕಾಶಗಳನ್ನು ಹೆಚ್ಚು ಮಾಡುತ್ತಿವೆ. ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಇದಕ್ಕೆ ಸಾಕ್ಷಿ. ಆಸ್ತಿ ನಾಶ, ಪ್ರಾಣಹಾನಿ ಪ್ರಮಾಣವು ಮಿತಿಮೀರಿದೆ. ಭಯೋತ್ಪಾದಕರಿಗೆ, ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರಿಗೆ ವಿಜ್ಞಾನ–ತಂತ್ರಜ್ಞಾನದ ಲಾಭಗಳು ಸುಲಭವಾಗಿ ದೊರಕುತ್ತಿವೆ. ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಸಲಕರಣೆಗಳು ವಿದ್ಯುತ್ತನ್ನು ಬೇಡುತ್ತವಲ್ಲದೆ, ಮಾಲಿನ್ಯಕ್ಕೆ ಕಾರಣವಾಗುತ್ತವೆ.

ನಾವು ಬಳಸುತ್ತಿರುವ ಚಾಟ್ ಜಿಪಿಟಿಗಳಿಗೆ ಅಗತ್ಯವಾದ ವಿದ್ಯುತ್ ಪೂರೈಸಲು ಅಣುಸ್ಥಾವರವೇ ಬೇಕು. ಜನರ ಕೊಳ್ಳುಬಾಕತನವನ್ನು ಪೋಷಿಸುವ ತಂತ್ರಜ್ಞಾನಗಳು ಮಾರುಕಟ್ಟೆಗೆ ಗಂಟೆಗೊಂದು ಬರುತ್ತಿವೆ. ತಮ್ಮ ಉತ್ಪನ್ನಗಳಿಗೆ ಸದೃಢ ಮಾರುಕಟ್ಟೆಗಳ ಹುಡುಕಾಟದಲ್ಲಿರುವ ದೇಶಗಳ ನಡುವೆ ತೀವ್ರ ಪೈಪೋಟಿಯಿದೆ. ಈ ಸ್ಪರ್ಧೆ, ಆರ್ಥಿಕ ಅಭಿವೃದ್ಧಿಯ ಮುಂದೆ ಬೇರೆಲ್ಲ ನಗಣ್ಯ ಎಂಬಂತೆ ವರ್ತಿಸಿ, ಜಗತ್ತಿನ ನೆಮ್ಮದಿ ಕಸಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ, ದೇಶ ದೇಶಗಳ ನಡುವೆ ಸೌಹಾರ್ದದ ಸೇತುವೆ ಸ್ಥಾಪಿಸಲು ವಿಜ್ಞಾನಕ್ಕೆ ಸಾಧ್ಯವೆ?

ಸಾಧ್ಯ ಎನ್ನುತ್ತದೆ ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ದೇಶದ ನಡುವಿನ ‘ವಿಜ್ಞಾನ ರಾಜತಾಂತ್ರಿಕತೆ’. ಏಳು ದಶಕಗಳಿಗೂ ಹೆಚ್ಚು ಕಾಲ ಯುದ್ಧದಲ್ಲಿ ತೊಡಗಿರುವ ಈ ರಾಷ್ಟ್ರಗಳು ವಿಜ್ಞಾನ–ತಂತ್ರಜ್ಞಾನದ ವಿಷಯದಲ್ಲಿ ಜಂಟಿ ಯೋಜನೆಗಳನ್ನು ಹಾಕಿಕೊಂಡು ಸಂಶೋಧನೆಯಲ್ಲಿ ನಿರತವಾಗಿವೆ. ಇದು, ವಿಜ್ಞಾನದ ಮೂಲಕ ಶಾಂತಿ ಸ್ಥಾಪಿಸುವ ‘ವಿಜ್ಞಾನ ರಾಜತಾಂತ್ರಿಕತೆ’ಗೆ ಒಳ್ಳೆಯ ಉದಾಹರಣೆ. ವಿಶ್ವ ನಾಯಕತ್ವದ ವಿಚಾರದಲ್ಲಿ ಭಾರತವನ್ನು ಸ್ಪರ್ಧಿಯೆನ್ನುವಂತೆ ಅಮೆರಿಕ ಕಂಡರೂ, ಬಾಹ್ಯಾಕಾಶ ಯೋಜನೆಗಳಿಗೆ ತಂತ್ರಜ್ಞಾನದ ಸಹಾಯ ಮಾಡುತ್ತಲೇ ಇದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆಯ ವಿಷಯಗಳಲ್ಲಿ ಸದಾ ಪೈಪೋಟಿಯಲ್ಲಿರುವ ಚೀನಾ–ಅಮೆರಿಕ ಕಳೆದ 45 ವರ್ಷಗಳಿಂದ ಜಂಟಿಯಾಗಿ ಸಂಶೋಧನೆ ನಡೆಸುತ್ತಿವೆ. ಶೂನ್ಯ ಇಂಗಾಲ ಉತ್ಸರ್ಜನೆ ಸಾಧಿಸಲು ಜಗತ್ತಿನ ಎಲ್ಲ ದೇಶಗಳಿಗೂ ಅಮೆರಿಕ ನೆರವಾಗುತ್ತಿದೆ. ಯುರೋಪಿಯನ್ ಸಮುದಾಯವು ಕನಿಷ್ಠ 20 ದೇಶಗಳೊಂದಿಗೆ ವಿಜ್ಞಾನ– ತಂತ್ರಜ್ಞಾನ ಯೋಜನೆಗಳಲ್ಲಿ ಕೈಜೋಡಿಸಿದೆ. ‘ಲಸಿಕೆ ಸ್ನೇಹ’ (ವ್ಯಾಕ್ಸಿನ್ ಮೈತ್ರಿ) ಯೋಜನೆಯ ಅಡಿಯಲ್ಲಿ ನಾವು 96 ದೇಶಗಳಿಗೆ ಕೋವಿಡ್ ಲಸಿಕೆ ನೀಡಿ ಸಹಕರಿಸಿದ್ದೆವು.

ವಾಯುಗುಣ ವೈಪರೀತ್ಯ ಎದುರಿಸಲು ಜಗತ್ತು ವಿಜ್ಞಾನ–ತಂತ್ರಜ್ಞಾನದ ಮೊರೆ ಹೋಗುತ್ತಿದೆ. ನವೀಕರಿಸಬಹುದಾದ ಸೌರ, ಪವನ ಶಕ್ತಿ ತಂತ್ರಜ್ಞಾನಗಳು ಭೂಮಿ ಬಿಸಿ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿವೆ. ಹಸಿರು ಜಲಜನಕ ಭಾಗ್ಯದ ಬಾಗಿಲು ತೆರೆಯಲು ಕಾಯುತ್ತಿದೆ. ವಿಜ್ಞಾನವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅವಶ್ಯಕ ಮಾರ್ಗದರ್ಶನ ನೀಡುತ್ತಿದೆ. ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಜಾಗತಿಕ ಬಿಕ್ಕಟ್ಟುಗಳನ್ನು ಮತ್ತು ಕೋವಿಡ್–19 ರೀತಿಯ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಲಸಿಕೆ ತಯಾರಿಕೆ, ವೈದ್ಯಕೀಯ ತಂತ್ರಜ್ಞಾನಗಳನ್ನು ರೂಪಿಸಿ ಜನರ ಜೀವ ಉಳಿಸಿರುವುದಲ್ಲದೆ ಸರಾಸರಿ ಜೀವಿತಾವಧಿಯನ್ನು ಹೆಚ್ಚಿಸಲೂ ಸಹಕಾರಿಯಾಗಿವೆ.

ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನದ ಅನುಕೂಲಗಳು ಸುಧಾರಿತ ದೇಶಗಳಿಗಷ್ಟೇ ಮುಕ್ತವಾಗಿ ದೊರಕುತ್ತಿವೆ ಎಂಬ ಮಾತಿದೆ. ಹಸಿರು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಆವಿಷ್ಕಾರಗಳ ಫಲಶ್ರುತಿ ಸುಧಾರಣೆ ಬಯಸುವ ದೇಶಗಳಿಗೆ ಸಿಗುತ್ತಿಲ್ಲ. ಕಳೆದ ಕೈಗಾರಿಕಾ ಕ್ರಾಂತಿಗಳಲ್ಲಿ ಆದಂತೆ ತೃತೀಯ ಜಗತ್ತಿನ ದೇಶಗಳಿಗೆ ಈಗಲೂ ಅನ್ಯಾಯವಾಗುತ್ತಿದೆ. ಹಂಚಿಕೆಯ ಅಸಮಾನತೆ ಕೊನೆಯಾಗಬೇಕು. ಇಡೀ ಜಗತ್ತೇ ಒಂದು ಹಳ್ಳಿಯಂತಾಗಿರುವಾಗ, ಒಂದು ಪ್ರದೇಶದ ಏರುಪೇರುಗಳು ಇನ್ನೊಂದು ಜಾಗದಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಸಂಶೋಧನಾ ಫಲಿತಾಂಶಗಳು ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿಜ್ಞಾನಿಗಳು ಜಾಗತಿಕವಾಗಿ ಒಂದಾಗಬೇಕು.

ನೀರಿನ ಕೊರತೆ, ಆಹಾರ ಭದ್ರತೆ ಅಥವಾ ನೈಸರ್ಗಿಕ ವಿಕೋಪಗಳಂತಹ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಜ್ಞಾನವು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಒದಗಿಸುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು. ಇದು ದೇಶಗಳ ನಡುವಿನ ವೈಜ್ಞಾನಿಕ ಮತ್ತು ರಾಜಕೀಯ ಸಹಕಾರಕ್ಕೆ ವೇದಿಕೆ ಕಲ್ಪಿಸುತ್ತಲೇ ಜಾಗತಿಕ ಸಹಕಾರ ಮತ್ತು ಶಾಂತಿ ಸ್ಥಾಪನೆಗೆ ನೆರವಾಗುತ್ತದೆ. ‘ಇಸ್ರೇಲ್–ಪ್ಯಾಲೆಸ್ಟೀನ್ ಸೈನ್ಸ್ ಆರ್ಗನೈಜೇಷನ್’ ರೀತಿಯ ಸಂಸ್ಥೆಗಳು ರಾಜಕೀಯ ಸಂಘರ್ಷಗಳ ಹೊರತಾಗಿಯೂ ವಿಜ್ಞಾನವನ್ನು ಬಳಸಿಕೊಂಡು ಪರಸ್ಪರ ಪ್ರಗತಿ ಸಾಧಿಸಿವೆ.

ವಿಜ್ಞಾನದ ಬಹುಪಾಲು ಆವಿಷ್ಕಾರಗಳು ಶಾಂತಿ ಮತ್ತು ಸಂಘರ್ಷ ನಿವಾರಣೆಗೆ ಪ್ರಬಲ ಸಾಧನಗಳಾಗಿವೆ. ಜಾಗತಿಕ ತಿಳಿವಳಿಕೆ ಮತ್ತು ಶಾಂತಿ ಸ್ಥಾಪಿಸುವಲ್ಲಿ ಸಂವಹನ ತಂತ್ರಜ್ಞಾನಗಳ ಪಾತ್ರ ಅಗಾಧವಾಗಿದೆ. ಮಾಹಿತಿ ತಂತ್ರಜ್ಞಾನದ ಪ್ರಗತಿಯ ಫಲಗಳಾದ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ದೇಶಗಳನ್ನು ಮತ್ತು ಜನರನ್ನು ಒಗ್ಗೂಡಿಸಿವೆ. ಇಂಟರ್ನೆಟ್ ಮತ್ತು ವಿಡಿಯೊ ಕಾನ್ಫರೆನ್ಸ್ನಂತಹ ತಂತ್ರಜ್ಞಾನಗಳು ಗಡಿಗಳಾಚೆಗಿನ ವೈಜ್ಞಾನಿಕ ಮತ್ತು ಶೈಕ್ಷಣಿಕ ಸಹಯೋಗವನ್ನು ಸುಲಭಗೊಳಿಸಿವೆ. ವಿಭಿನ್ನ ಸಂಸ್ಕೃತಿಗಳ ಜನರು ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಸಂಘರ್ಷಗಳನ್ನು ಮಾತುಕತೆ ಮೂಲಕ ಪರಿಹರಿಸಲು ವೇದಿಕೆ ಸೃಷ್ಟಿಸಿವೆ.

ಬರಗಾಲ, ಅತಿವೃಷ್ಟಿ, ಬೆಳೆರೋಗ, ಕೀಟ ದಾಳಿ ಮತ್ತು ಕೃಷಿ ಇಳುವರಿಯಂತಹ ವಿಷಯಗಳ ಕುರಿತು ಉಪಗ್ರಹ ಆಧಾರಿತ ದತ್ತಾಂಶ ಮತ್ತು ಹವಾಮಾನ ಮುನ್ಸೂಚನೆಗಳನ್ನು ಹಂಚಿಕೊಳ್ಳುವುದರಿಂದ ರೈತನಿಗೆ ದೊಡ್ಡ ಅನುಕೂಲವಾಗುತ್ತದೆ. ಇದರಿಂದ ದೇಶಗಳ ನಡುವಿನ ಸ್ಪರ್ಧೆ ಕಡಿಮೆಯಾಗಿ, ಸಹಕಾರ ಏರ್ಪಡುತ್ತದೆ. ಆಹಾರ, ನೀರು, ವಾಯುಗುಣ ಸಮಸ್ಯೆಗಳು ಯಾವುದೇ ಒಂದು ದೇಶಕ್ಕೆ ಸೀಮಿತವಲ್ಲ. ಜಾಗತಿಕ ಸಹಭಾಗಿತ್ವದಿಂದ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.

ಪರಮಾಣು ಶಕ್ತಿಯನ್ನು ಶಸ್ತ್ರಾಸ್ತ್ರಗಳಿಗಾಗಿ ಅಭಿವೃದ್ಧಿಪಡಿಸಿದರೂ, ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ಯಂತಹ ಸಂಸ್ಥೆಗಳು, ಪರಮಾಣು ತಂತ್ರಜ್ಞಾನವನ್ನು ಶಾಂತಿಯುತ ಉದ್ದೇಶಗಳಾದ ವಿದ್ಯುತ್ ಉತ್ಪಾದನೆ, ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನವನ್ನು ಬಳಸಿಕೊಳ್ಳುತ್ತವೆ. ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಪರಿಶೀಲನಾ ವಿಧಾನಗಳು ವಿಜ್ಞಾನದ ತಾಂತ್ರಿಕ ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿವೆ. ನಿಶ್ಶಸ್ತ್ರೀಕರಣಕ್ಕೆ ವಿಜ್ಞಾನದ ಬಳಕೆ ಮಾಡಿಕೊಳ್ಳುವುದು ಬಿಡುವುದು ನಮ್ಮ ಕೈಯಲ್ಲೇ ಇದೆ.

ಆಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನದ ಸಾಧನಗಳು ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ಜಗತ್ತನ್ನು ಒಗ್ಗೂಡಿಸಿದ ಹಲವು ಉದಾಹರಣೆಗಳಿವೆ. ಕೋವಿಡ್–19ರ ಸಮಯದಲ್ಲಿ ವಿಭಿನ್ನ ರಾಷ್ಟ್ರಗಳ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಗೆ ಕೈಜೋಡಿಸಿದ್ದರು. ಆ ಸಹಕಾರ, ಮಾನವ ಕಲ್ಯಾಣಕ್ಕೆ ವಿಜ್ಞಾನದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಗಳಿಸಿರುವ ಭಾರತ ಇತರ 83 ರಾಷ್ಟ್ರಗಳೊಂದಿಗೆ ವಿಜ್ಞಾನ, ತಂತ್ರಜ್ಞಾನ ನಾವೀನ್ಯತೆಗೆ ಕೈಜೋಡಿಸಿದೆ.

ವಿಜ್ಞಾನವು ಪೂರ್ವಗ್ರಹವಿಲ್ಲದ ಶಕ್ತಿಯಾಗಿದ್ದು, ಅದನ್ನು ರಚನಾತ್ಮಕವಾಗಿ, ಸುಸ್ಥಿರ ಅಭಿವೃದ್ಧಿಗಾಗಿ ಬಳಸುವುದೇ ಮಾನವಕುಲದ ಜವಾಬ್ದಾರಿಯಾಗಿದೆ. ವಿಜ್ಞಾನಿಗಳು, ನೀತಿ ನಿರೂಪಕರು, ಶಿಕ್ಷಕರು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ, ವಿಜ್ಞಾನವು ನಿಜವಾದ ಶಾಂತಿಯುತ ಮತ್ತು ಸುಸ್ಥಿರ ಜಗತ್ತನ್ನು ನಿರ್ಮಿಸುವ ತನ್ನ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.