ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗುರು, ಗೌರವ, ಗುರುತರ ಹೊಣೆ

ವಿದ್ಯಾರ್ಥಿಗಳ ಬದಲಾದ ವರ್ತನೆಯ ಬಗ್ಗೆ ಗುರುಗಳಿಂದ ನಡೆಯಬೇಕಿದೆ ಸ್ವವಿಮರ್ಶೆ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಸೂಕ್ತ ಗೌರವವನ್ನು ಕೊಡುತ್ತಿಲ್ಲ ಎಂಬ ಆರೋಪದಲ್ಲಿ ಸತ್ಯಾಂಶ ಇರುವುದೇನೋ ನಿಜ. ಆದರೆ, ಈ ವಿದ್ಯಮಾನಕ್ಕೆ ವಿದ್ಯಾರ್ಥಿಗಳು ಮಾತ್ರ ಹೊಣೆಯೇ? ಗುರುವಿಗೆ ತನ್ನ ವಿದ್ಯಾರ್ಥಿಗಳ ವರ್ತನೆ ಬದಲಾಗಿದೆ ಅನ್ನಿಸಿರುವಂತೆ, ವಿದ್ಯಾರ್ಥಿಗಳಿಗೂ ತಮ್ಮ ಗುರು ಬದಲಾದಂತೆ ಕಾಣುತ್ತಿರ ಬಹುದಲ್ಲವೇ?

ಇಂದಿನ ಗುರು ‘ನನ್ನ ವಿದ್ಯಾರ್ಥಿ ದಿನಗಳಲ್ಲಿ ಗುರು ವಿಗೆ ಎಷ್ಟೊಂದು ಭಯ ಭಕ್ತಿಯಿಂದ ನಡೆದುಕೊಳ್ಳು ತ್ತಿದ್ದೆ. ಆದರೆ ನನ್ನ ವಿದ್ಯಾರ್ಥಿಗಳಿಂದು ಆ ಮಟ್ಟದ ಗೌರವ ವನ್ನು ನನಗೆ ಕೊಡುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿ ದಂತೆ, ವಿದ್ಯಾರ್ಥಿಗೂ ‘ನನ್ನ ಹೆತ್ತವರು ಹೇಳುತ್ತಿದ್ದ ಗುರುವಿನ ಚಿತ್ರಣದಲ್ಲಿ ಕಲಿಕೆಯ ಕುರಿತ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿದ ನಿಸ್ವಾರ್ಥ ವ್ಯಕ್ತಿತ್ವವಿತ್ತು. ಆದರೆ, ನನಗೆ ಪಾಠ ಮಾಡುತ್ತಿರುವ ಗುರುಗಳು ಹಾಗಿಲ್ಲವಲ್ಲ’ ಎಂದೆನಿಸಬಹುದು ಅಲ್ಲವೇ? ಹಾಗಾಗಿ, ಕಾಲ ಬದ ಲಾದಂತೆ, ವಿದ್ಯಾರ್ಥಿ ಮಾತ್ರ ಬದಲಾಗಿಲ್ಲ, ಗುರುವೂ ಬದಲಾಗಿದ್ದಾನೆ, ಜೊತೆಗೆ ಪೋಷಕರ ಪಾತ್ರವೂ ಬದಲಾಗಿದೆ ಎನ್ನಬಹುದು.

ಹಿಂದಿನ ಕಾಲದ ಗುರುಗಳಿಗೆ ಹೋಲಿಸಿದರೆ, ವರ್ತಮಾನದ ಶಿಕ್ಷಕರಲ್ಲಿ ತಮ್ಮ ವಿದ್ಯಾರ್ಥಿಗಳ ಕುರಿತ ಕಾಳಜಿ, ತರಗತಿಗೆ ಸಿದ್ಧತೆ, ಸದಾ ಕಲಿಯುವ ಪ್ರವೃತ್ತಿ ಮತ್ತು ಮುಂದಿನ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಇರುವುದನ್ನು ನಾವು ನೋಡುತ್ತಿದ್ದೇವೆಯೇ ಎನ್ನುವ ಪ್ರಶ್ನೆಗಳ ಮೂಲಕ, ಈ ಬದಲಾವಣೆಯ ಇನ್ನೊಂದು ಆಯಾಮವನ್ನು ಗುರುತಿಸಬಹುದು. ಈ ಬದಲಾವಣೆ ಏಕಮುಖವಾಗಿರಲು ಸಾಧ್ಯವಿಲ್ಲ. ಹಾಗಾಗಿ, ಈ ವಿಷಯದ ಕುರಿತು ವಿಶ್ಲೇಷಿಸುವಾಗ, ಕಾಲಾನುಕ್ರಮವಾಗಿ ಗುರು, ವಿದ್ಯಾರ್ಥಿ, ಪೋಷಕರು ಮತ್ತು ಪ್ರಾಪಂಚಿಕ ಜೀವನದೃಷ್ಟಿಯಲ್ಲಿ ಆದಂತಹ ಬದಲಾವಣೆಗಳನ್ನು ಗುರುತಿಸುವುದು ಸೂಕ್ತ.

ಮೊದಲನೆಯದಾಗಿ, ಇಂದು ಅವರ ಮುಂದಿರುವ ಆದರ್ಶ ಮಾದರಿಗಳು ಯಾವುವು? ಮನೆಯಲ್ಲಿ ಕಾಣುವ ಹೆತ್ತವರ ಜೀವನಶೈಲಿ, ವಿದ್ಯಾರ್ಜನೆಯನ್ನು ವ್ಯವಹಾರವಾಗಿ ಕುದುರಿಸುವ ಗುರುಗಳು, ಸುತ್ತಲಿನ ಸಮಾಜದಲ್ಲಿ ಹೀರೊಗಳಾಗಿರುವ ಆತ್ಮವಂಚಕರು ಎಳೆಯ ವಯಸ್ಸಿನ ಮಕ್ಕಳ ಮೇಲೆ ಎಂತಹ ಪ್ರಭಾವ ಬೀರುತ್ತಿದ್ದಾರೆ ಎನ್ನುವ ವಿಚಾರವನ್ನು ಪರಿಶೀಲಿಸಬೇಕಾಗಿದೆ. ಹೆತ್ತವರಿಂದು ಮಕ್ಕಳನ್ನು ಸ್ವಪ್ರತಿಷ್ಠೆಗಾಗಿ ಅಂತರರಾಷ್ಟ್ರೀಯ ಮಟ್ಟದ ಶಾಲೆ– ಕಾಲೇಜುಗಳಿಗೆ ಸೇರಿಸಿ, ವಿಶ್ವಮಟ್ಟದ ಶಿಕ್ಷಣ ಕೊಡಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಇದು ಹೇಗಿದೆಯೆಂದರೆ, ಬೇರು ಭದ್ರವಾಗಿ ಊರದ ಗಿಡದಲ್ಲಿ ಸುಂದರ ಪುಷ್ಪವೊಂದು ಅರಳಲಿ ಎನ್ನುವ ಹೆಬ್ಬಯಕೆಯಂತೆ. ಹೀಗೆ, ಪೋಷಕರು ಮಕ್ಕಳಿಗೆ ತಮ್ಮ ಶಕ್ತಿ ಮೀರಿದ ಸೌಲಭ್ಯ ಒದಗಿಸಲೆಂದು ಶ್ರಮವಹಿಸುತ್ತಾರೆಯೇ ವಿನಾ ಅವರು ನಿರಂಕುಶಮತಿಗಳಾಗಿ ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ಉತ್ತಮ ಮನುಷ್ಯರಾಗಿ ಬಾಳಲಿ ಎಂದಲ್ಲ.

ಇಂದು, ಉತ್ತಮ ಜೀವನ ನಡೆಸಲು ಆರ್ಥಿಕ ಶ್ರೀಮಂತಿಕೆಯೊಂದೇ ರಾಜಮಾರ್ಗವೆಂದು ನಂಬಿರುವ ಪೋಷಕರು, ಅದನ್ನೇ ಮಕ್ಕಳಿಗೆ ದಾಟಿಸುತ್ತಿದ್ದಾರೆ. ಈ ಮೂಲಕ, ‘ಜೀವನ ಒಂದು ಸೆಣಸಾಟದ ಸ್ಪರ್ಧೆಯಂತೆ’, ‘ಲಕ್ಷ್ಯವೆಲ್ಲಾ ಗುರಿಯತ್ತ ನೆಟ್ಟಿರಬೇಕು’ ಎನ್ನುವಂತಹ ಹೇಳಿಕೆಗಳನ್ನು ದಿನನಿತ್ಯ ಮಕ್ಕಳಿಗೆ ಕಂಠಪಾಠ ಮಾಡಿಸಿ, ಅವರನ್ನು ಜೀವನದ ಸಣ್ಣ ಸಣ್ಣ ಖುಷಿಗಳಿಂದ ವಂಚಿತರನ್ನಾಗಿಸುತ್ತಿದ್ದಾರೆ. ಇದರೊಂದಿಗೆ, ಕೈಯಲ್ಲಿ ಅಂಟಿಸಿ ಕೊಂಡಿರುವ ಸ್ಮಾರ್ಟ್ ಫೋನ್, ಅವರನ್ನು ಡಿಜಿಟಲ್ ಲೋಕದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿಟ್ಟು, ವಾಸ್ತವ ಲೋಕದಲ್ಲಿ ಪರಕೀಯತೆ ಅನುಭವಿಸುವಂತೆ ಮಾಡು ತ್ತಿದೆ. ಇದರ ಪರಿಣಾಮವಾಗಿ, ಮಕ್ಕಳಲ್ಲಿ ಸಹಜ ನಗು ಕಡಿಮೆಯಾಗಿ, ನಡೆಯಲ್ಲಿ ಯಾಂತ್ರಿಕತೆ ದಟ್ಟವಾಗಿ ಗೋಚರಿಸುತ್ತಿದೆ.

ತಮ್ಮ ಅಪ್ಪ–ಅಮ್ಮ ಅವರ ಹೆತ್ತವರು ಮತ್ತು ಗುರುಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದೇ ಮಕ್ಕಳೆದುರು ಇರುವ ಆದರ್ಶ ಪರಂಪರೆ. ಮಕ್ಕಳು ತಮ್ಮ ಮುಂದಿರುವ ಮಾದರಿಗಳಿಂದ ತಮ್ಮ ಜೀವನದೃಷ್ಟಿಯನ್ನು ಕಟ್ಟಿಕೊಳ್ಳುತ್ತಾರೆ. ಆದ್ದರಿಂದ, ಅವರೆದುರು ತಮ್ಮ ನುಡಿ ಮತ್ತು ನಡೆಯ ನಡುವೆ ವ್ಯತ್ಯಾಸ ಇರದಂತೆ ಹೆತ್ತವರು ಹಾಗೂ ಗುರುಗಳು ಜಾಗ್ರತೆ ವಹಿಸುವುದು ಮುಖ್ಯವಾಗುತ್ತದೆ. ಹಿಂದೆ, ಹೆಚ್ಚಿನ ಮನೆಗಳಲ್ಲಿ ಅಮ್ಮ ಮನೆಯಲ್ಲಿದ್ದು ಮಕ್ಕಳ ಜೊತೆಗೆ ಬಹಳಷ್ಟು ಕಾಲ ಕಳೆಯುತ್ತಿದ್ದಳು. ಆದರೆ ಇಂದಿನ ಅಮ್ಮ ಮನೆಯೊಳಗೆ ಮತ್ತು ಹೊರಗೆ ದುಡಿಯುತ್ತಾ ದೈಹಿಕವಾಗಿ, ಮಾನಸಿಕವಾಗಿ ದಣಿದು, ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗೆಯೇ, ಹಿಂದೆ ಇದ್ದಂತೆ ಅಜ್ಜ, ಅಜ್ಜಿ ಮತ್ತು ಒಡಹುಟ್ಟಿದವರ ಆಸರೆಯೂ ಹೆಚ್ಚಿನ ಮಕ್ಕಳಿಗೆ ಸಿಗುತ್ತಿಲ್ಲ. ಹೀಗೆ, ಮನೆಯಲ್ಲಿ ಸಿಗದ ಸಂಸ್ಕಾರವು ಶಾಲೆಯಲ್ಲಾದರೂ ಸಿಗಬಹುದು ಎಂದುಕೊಂಡರೆ, ಅದು ಕೂಡ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಲಭ್ಯವಿಲ್ಲ. ಇಂದಿನ ಗುರುಗಳು ಪಠ್ಯ ಮುಗಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಿ, ಅವರು ಅತಿ ಹೆಚ್ಚಿನ ಅಂಕ ಗಳಿಸುತ್ತಾರೆ ಎಂಬುದನ್ನು ಖಾತರಿಗೊಳಿಸಿದರೆ, ಅಲ್ಲಿಗೆ ಅವರ ಜವಾಬ್ದಾರಿ ಮುಗಿಯುತ್ತದೆ. ಹಾಗಾಗಿ, ಸಂಸ್ಕಾರ ಎನ್ನುವುದು ಇಂದು ‘ಔಟ್ ಆಫ್ ಸಿಲಬಸ್’.

ವಿದ್ಯಾರ್ಜನೆಯನ್ನು ಒಂದು ವ್ಯವಹಾರ ಎಂದು ಪರಿಗಣಿಸಿರುವ ಕೆಲವು ಗುರುಗಳು, ವಿದ್ಯಾರ್ಥಿಗಳನ್ನು ಕೂಡ ಅದರ ಒಂದು ಭಾಗವಾಗಿ ನೋಡುತ್ತಾರೆ. ಅಧಿಕಾರ ಸ್ಥಾನದಲ್ಲಿರುವ, ಅಂಕಗಳನ್ನು ನಿರ್ಧರಿಸುವ ಪ್ರಭಾವ ಹೊಂದಿರುವ ಗುರುಗಳನ್ನು ಎದುರು ಹಾಕಿಕೊಳ್ಳುವುದಕ್ಕಿಂತ, ಅವರ ದೌರ್ಬಲ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುವ, ಅವರೊಂದಿಗೆ ರಾಜಿ ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ಕೂಡ ನಾವು ನೋಡುತ್ತಿರುತ್ತೇವೆ. ಆದರೆ, ಒಂದಂತೂ ನಿಜ. ಇಂತಹ ವಿದ್ಯಾರ್ಥಿಗಳು ತಮ್ಮ ಗುರುವಿನ ಮೇಲೆ ಯಾವುದೇ ಗೌರವ ಉಳಿಸಿಕೊಳ್ಳಲಾರರು. ಹಾಗಾಗಿ, ಗೌರವ ಕೊಡಲಿಲ್ಲ ಅನ್ನುವಷ್ಟೇ, ಗೌರವಕ್ಕೆ ಅರ್ಹತೆ ಪಡೆಯಬೇಕಾದುದು ಮುಖ್ಯವಾಗುತ್ತದೆ.

ಶಿಕ್ಷಕ ವೃತ್ತಿಯನ್ನು ಶ್ರೇಷ್ಠ ವೃತ್ತಿ ಎನ್ನುತ್ತೇವೆ. ಆದರೆ, ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇನೆಯೇ ಎನ್ನುವ ಸ್ವವಿಮರ್ಶೆಯನ್ನು ಗುರುವೂ ಮಾಡಿಕೊಳ್ಳಬೇಕಾ ಗಿದೆ. ಮಾಡಿದ ಕೆಲಸಕ್ಕೆ ಸಂಬಳ ಸಿಗುವುದರಿಂದ, ಹೆಸ ರಿಗೆ ಇದನ್ನು ವೃತ್ತಿ ಎನ್ನಬಹುದು. ಆದರೆ, ಹೆತ್ತವರ ನಂತರದ ಸ್ಥಾನದಲ್ಲಿ ನಿಂತು ‘ಮಾತೃವಾತ್ಸಲ್ಯ’ದಿಂದ, ಜ್ಞಾನಾರ್ಜನೆಯೊಂದಿಗೆ ಪರಿಪೂರ್ಣವಾಗಿ ಬದುಕುವ ಕಲೆಯನ್ನು ಕೂಡ ಮಕ್ಕಳಿಗೆ ಹೇಳಿಕೊಡುತ್ತಾ, ಕೈಹಿಡಿದು ಮುನ್ನಡೆಸುವ ಕಾಯಕವಿದು. ಮೂಲತಃ, ಇದೊಂದು ಸಮಾಜಸೇವೆ.

ವಿಶೇಷವಾಗಿ, ಇಂದಿನ ಸಂದರ್ಭದಲ್ಲಿ ಹೆತ್ತವರು ಮಕ್ಕಳೊಂದಿಗೆ ಸಮಯ ಕಳೆಯುವುದು ದುರ್ಲಭವಾಗು ತ್ತಿರುವಾಗ, ಉಳಿದ ಆಪ್ತ ಬಂಧುಬಳಗದವರೊಂದಿಗೆ ಒಡನಾಟ ಮತ್ತು ಸಹಬಾಳ್ವೆ ಕಡಿಮೆಯಾಗಿರು ವಾಗ, ಬಹುತೇಕ ಎಲ್ಲಾ ಮಕ್ಕಳು ಹೆಚ್ಚಿನ ಸಮಯ ಕಳೆಯುವುದು ತಮ್ಮ ಶಾಲೆ ಕಾಲೇಜುಗಳಲ್ಲಿ. ಆದ್ದರಿಂದ, ಇಂದು ಗುರುವು ಹಿಂದಿಗಿಂತ ಹೆಚ್ಚಿನ ಗುರುತರ ಜವಾಬ್ದಾರಿಯ ಸ್ಥಾನದಲ್ಲಿದ್ದಾನೆ. ಹಾಗಾಗಿ, ವಿದ್ಯಾರ್ಥಿಗ ಳಲ್ಲಿ ನಾವಿಂದು ಸಂಸ್ಕಾರವನ್ನು ಕಾಣದಿದ್ದಲ್ಲಿ ಅದರ ಹೊಣೆಗಾರಿಕೆ ಗುರುವಿನ ಮೇಲೂ ಇದೆ.

ಸೂಕ್ಷ್ಮವಾಗಿ ಗಮನಿಸಿದರೆ, ಇಂದಿನ ವಿದ್ಯಾರ್ಥಿಗಳು ಗುರುಗಳನ್ನು ಮಾತ್ರ ಅಸಡ್ಡೆಯಿಂದ ನೋಡುತ್ತಿಲ್ಲ, ಎಲ್ಲಾ ಹಿರಿಯರನ್ನು ಕಡೆಗಣಿಸುತ್ತಿದ್ದಾರೆ, ಹೆಚ್ಚು ಸ್ವಹಿತಸಾಧಕ ರಾಗುತ್ತಿದ್ದಾರೆ. ಇದು, ವಿಶೇಷವಾಗಿ ವರ್ತಮಾನದ ತಲೆ ಮಾರಿನಲ್ಲಿ ಕಾಣಿಸುತ್ತಿರುವ ಅನಾರೋಗ್ಯಕರ ಬೆಳವಣಿಗೆ. ಇದು, ನಾನಾ ಬಾಹ್ಯ ಕಾರಣಗಳಿಂದ ಮಾರ್ಪಾಡಾದ ಸಮಾಜದ ಜೀವನದೃಷ್ಟಿ. ಈ ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಎಳೆಯ ಮನಸ್ಸುಗಳಿಗೆ ತಿಳಿಹೇಳಬೇಕಾದ ಜವಾಬ್ದಾರಿ ಹೆತ್ತವರಿಗಿರುವಷ್ಟೇ ಗುರುಗಳಿಗೂ ಇದೆ.

ಇದೇನೂ ತೀವ್ರ ಹತಾಶೆ ಪಡಬೇಕಾದ ವಿದ್ಯಮಾನ ವೇನಲ್ಲ. ಗುರುಗಳನ್ನು ಅಭಿಮಾನದಿಂದ ನೋಡುವ, ಅವರು ನಿಸ್ವಾರ್ಥದಿಂದ ಹಾಕಿಕೊಟ್ಟ ಮಾರ್ಗದಲ್ಲಿ ವಿಶ್ವಾಸದಿಂದ ನಡೆಯುವ ವಿದ್ಯಾರ್ಥಿಗಳನ್ನು ಇಂದಿಗೂ ನಾವು ನೋಡಬಹುದು. ತಮ್ಮ ವೃತ್ತಿಯನ್ನು ಶ್ರದ್ಧೆಯಿಂದ ಮಾಡುವ ಗುರುಗಳೂ ಕಾಣಸಿಗುತ್ತಾರೆ. ಮಕ್ಕಳನ್ನು ಸಂಸ್ಕಾರದಿಂದ ಬೆಳೆಸುತ್ತಿರುವ ಹೆತ್ತವರೂ ಇದ್ದಾರೆ. ಹಾಗಾಗಿ, ವಿದ್ಯಾರ್ಥಿಗಳು, ಗುರುಗಳು ಮತ್ತು ಪೋಷಕರು ಎಲ್ಲರೂ ವ್ಯಾವಹಾರಿಕ ಜೀವನದೃಷ್ಟಿ ಬೆಳೆಸಿಕೊಂಡಿ ದ್ದಾರೆ ಎಂದು ಸಾರಾಸಗಟಾಗಿ ಹೇಳಲಾಗದು. ಈ ಸಂಬಂಧಗಳಲ್ಲಿ ಪರಸ್ಪರ ಕಾಳಜಿ, ಪ್ರೀತಿ ಮತ್ತು ಗೌರವ ಇನ್ನೂ ಉಳಿದುಕೊಂಡಿದೆ. ಆದರೆ, ಈ ಉದಾತ್ತ ಆಯಾಮದ ಮಹತ್ವದ ಅರಿವನ್ನು ಜಾಗೃತಗೊಳಿಸಿ ಪಸರಿಸುವ ಕಾರ್ಯ ಆಗಬೇಕಷ್ಟೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT