ಮಲೆನಾಡಿನಲ್ಲಿ ಜ್ವರ ಬಂದೋ, ಕಾಲೊಡೆಯಿಂದ ನಡೆಯಲಾಗದೆಯೋ, ಬಾಯೊಡೆಯಿಂದ ತಿನ್ನಲಾಗದೆಯೋ, ಮಲೆನಾಡು ಗಿಡ್ಡ ದನಗಳು ಸತ್ತುಹೋಗುತ್ತಿದ್ದವು. ಸತ್ತ ದನಗಳನ್ನು ಸೊಪ್ಪಿನಬೆಟ್ಟಗಳ ಖಾಲಿ ಜಾಗದಲ್ಲಿ ಹಾಕಿ ಬರುತ್ತಿದ್ದರು. ಸ್ವಲ್ಪ ಸಮಯದಲ್ಲೇ ಆಕಾಶದಿಂದ ಸುತ್ತಿ ಸುತ್ತಿ ಇಳಿದು ಬರುತ್ತಿದ್ದ ರಣಹದ್ದುಗಳ ಹಿಂಡು ದನದ ದೇಹವನ್ನು ತಮ್ಮ ಉಕ್ಕಿನಂತಹ ಕೊಕ್ಕಿನಿಂದ ಸೀಳಿ ಮಾಂಸವನ್ನು ತಿನ್ನುತ್ತಿದ್ದವು. ಸೊಪ್ಪಿನಬೆಟ್ಟವನ್ನು ಬಳಸಿಕೊಂಡೇ ಪ್ರಾಥಮಿಕ ಶಾಲೆಗೆ ಹೋಗಬೇಕಾದ ಅನಿವಾರ್ಯ ನಮ್ಮದಾಗಿತ್ತು. ಮೂರಡಿ ಎತ್ತರವಿರುವ ರಣಹದ್ದುಗಳು ದನಗಳ ಮಾಂಸವನ್ನು ಹರಿದು ತಿನ್ನುವುದನ್ನು ಕಂಡು ಹೆದರಿಕೊಳ್ಳುತ್ತಿದ್ದೆವು. ಇದು 1970–80ರ ದಶಕದ ಕಥೆ.

1980ರ ದಶಕದಲ್ಲಿ ಭಾರತದಲ್ಲಿ 9 ಜಾತಿಯ ಒಟ್ಟು 4 ಕೋಟಿ ರಣಹದ್ದುಗಳು ಅಕ್ಷರಶಃ ಆಕಾಶ ವನ್ನು ಆಳುತ್ತಿದ್ದವು. ಬರೀ 20 ವರ್ಷಗಳಲ್ಲಿ ಅವುಗಳ ಸಂಖ್ಯೆ ಅವನತಿಯ ಅಂಚಿಗೆ ಬಂದು ನಿಂತಿತ್ತು. ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯು, ಅವು ಗಳನ್ನು ಉಳಿಸುವ ಪ್ರಯತ್ನ ಪ್ರಾರಂಭಿಸಿತು. ಸತತ ಪರಿಶ್ರಮದ ಸಂರಕ್ಷಣಾ ಕ್ರಮಗಳಿಂದಾಗಿ ದೇಶದಲ್ಲಿ ಈಗ ರಣಹದ್ದುಗಳ ಸಂಖ್ಯೆ 30 ಸಾವಿರಕ್ಕೆ ಏರಿದೆ.

ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿ ರಾಮದೇವರ ಬೆಟ್ಟವಿದೆ. ಕ್ಲಿಷ್ಟವಾದ ಕಲ್ಲುಗುಡ್ಡಗಳಿಂದ ಕೂಡಿದ, ಬೇಟೆಪ್ರಾಣಿಗಳಿಗೆ ದುರ್ಗಮವಾದ, ಸುಲಭವಾಗಿ ತಲಪಲು ಸಾಧ್ಯವಿಲ್ಲದ ರಾಮದೇವರ ಬೆಟ್ಟವನ್ನು ರಣಹದ್ದುಗಳು ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಕರ್ನಾಟಕ ಸರ್ಕಾರ 2012ರಲ್ಲಿ ರಾಮದೇವರ ಬೆಟ್ಟವನ್ನು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ‘ರಣಹದ್ದು ಅಭಯಾರಣ್ಯ’ ಪ್ರದೇಶವೆಂದು ಘೋಷಣೆ ಮಾಡಿತು.

ಭಾರತದಲ್ಲಿ 9 ಪ್ರಬೇಧಗಳ ರಣಹದ್ದುಗಳಿವೆ. ಅವುಗಳಲ್ಲಿ ನಾಲ್ಕು ಪ್ರಬೇಧಗಳಾದ– ಉದ್ದ ಕೊಕ್ಕಿನ ರಣಹದ್ದು, ಬಿಳಿ ಪೃಷ್ಟದ ರಣಹದ್ದು, ಕೆಂಪು ತಲೆಯ ರಣಹದ್ದು ಹಾಗೂ ಈಜಿಪ್ಷನ್ ರಣಹದ್ದುಗಳು ಕರ್ನಾಟಕದಲ್ಲಿ ಕಂಡುಬರುತ್ತವೆ. ಅಪಾಯದ ಅಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು ಮತ್ತು ಈಜಿಪ್ಷನ್ ರಣಹದ್ದುಗಳು ರಾಮದೇವರ ಬೆಟ್ಟದಲ್ಲಿ ಕಂಡುಬರುವ ಸಾಮಾನ್ಯ ಪ್ರಬೇಧಗಳಾಗಿವೆ.

ಅರಣ್ಯ ಇಲಾಖೆ ಮತ್ತು ಪಕ್ಷಿತಜ್ಞರ ಪ್ರಕಾರ, ಬರೀ ಒಂದು ಜೋಡಿ ಉದ್ದಕೊಕ್ಕಿನ ರಣಹದ್ದು ಮಾತ್ರ ರಾಮದೇವರ ಬೆಟ್ಟದಲ್ಲಿ ಕೆಲವು ವರ್ಷಗಳಿಂದ ಕಂಡುಬರುತ್ತಿದೆ. ಇದರ ಹೊರತಾಗಿ, ಹಿಮಾಲಯನ್ ಮತ್ತು ಯುರೋಪಿಯನ್ ರಣಹದ್ದುಗಳು ಚಳಿಗಾಲದಲ್ಲಿ ವಲಸೆ ಬರುತ್ತವೆ. ಅವುಗಳ ಮೂಲ ಆವಾಸಸ್ಥಾನದಲ್ಲಿ ಕನಿಷ್ಠ ಉಷ್ಣಾಂಶವಿದ್ದು, ಚಳಿಯಿಂದ ಪಾರಾಗಲು ಕರ್ನಾಟಕದ ರಾಮದೇವರ ಬೆಟ್ಟಕ್ಕೆ ಬರುತ್ತವೆ. ಉದ್ದ ಕೊಕ್ಕಿನ ರಣಹದ್ದಿನ ಒಂದು ಜೋಡಿಯಾದರೂ ಇದೆಯಲ್ಲ ಎಂಬುದೇ ಸಮಾಧಾನದ ಸಂಗತಿ. ರಾಮದೇವರ ಬೆಟ್ಟದಲ್ಲಿ ಕಂಡು ಬರುವ ರಣಹದ್ದುಗಳು, ತಮ್ಮ ಆಹಾರಾನ್ವೇಷಣೆಗೆ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳನ್ನು ಅವಲಂಬಿಸಿವೆ. ಒಂದು ಜೋಡಿ ರಣಹದ್ದು, ವರ್ಷದಲ್ಲಿ ಒಂದೇ ಮೊಟ್ಟೆಯನ್ನಿಟ್ಟು ಮರಿ ಮಾಡುವುದು ಕೂಡಾ ಅವುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ರಣಹದ್ದಿನ ಮರಿ ಹಾರುವಷ್ಟು ಸಾಮರ್ಥ್ಯ ಪಡೆದ ನಂತರದಲ್ಲಿ, ತಾನು ಹುಟ್ಟಿದ ಜಾಗವನ್ನು ಬಿಟ್ಟು ಬೇರೆಡೆಗೆ ಹೊರಟು ಹೋಗುತ್ತದೆ. ಪ್ರೌಢಾವಸ್ಥೆಗೆ ಬಂದಾಗ ಮತ್ತೆ ತನ್ನ ಹುಟ್ಟಿನ ಜಾಗಕ್ಕೆ ಬಂದು ವಂಶಾಭಿವೃದ್ಧಿಗಾಗಿ ಸಂಗಾತಿಯನ್ನು ಹುಡುಕುತ್ತದೆ. ಹೀಗೆ ಎರಡು ವರ್ಷಗಳ ಹಿಂದೆ ಹುಟ್ಟಿದ ಮರಿಯು ಬೇರೆಡೆಗೆ ಹೋಗಿದ್ದು, ಪ್ರೌಢಾವಸ್ಥೆ ತಲುಪಿ ಮತ್ತೆ ಇಲ್ಲಿಗೆ ಬರುವ ನಿರೀಕ್ಷೆಯಿದೆ ಎಂದು ಅಲ್ಲಿನ ಅರಣ್ಯಾಧಿಕಾರಿ ಹೇಳುತ್ತಾರೆ.

ಯುನೈಟೆಡ್ ಕಿಂಗ್ಡಮ್ ಮೂಲದ ರಾಯಲ್ ಸೊಸೈಟಿಯಲ್ಲಿ ಪಕ್ಷಿಗಳ ಕುರಿತಾಗಿ ಸಂಶೋಧನೆ ಮಾಡುತ್ತಿರುವ ಕ್ರಿಸ್ ಬೌಡೇನ್ ಅವರು, ಕಳೆದ ಹನ್ನೆರಡು ವರ್ಷಗಳಿಂದ ನೈಸರ್ಗಿಕ ಜಾಡಮಾಲಿಯಾದ ರಣಹದ್ದುಗಳ ಕುರಿತಾಗಿ ಕರ್ನಾಟಕದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ರಣಹದ್ದುಗಳ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಆದರೂ, ರಣಹದ್ದುಗಳ ಸಂರಕ್ಷಣೆಯ ವಿಷಯದಲ್ಲಿ ನಮ್ಮ ಶ್ರಮ ಸಾಲುತ್ತಿಲ್ಲ. ರಣಹದ್ದುಗಳ ಚಲನವಲನಗಳನ್ನು ಪತ್ತೆ ಮಾಡಿ ದಾಖಲಿಸಲು ನಾವು ತಂತ್ರಜ್ಞಾನದ ಮೊರೆ ಹೋಗಲು ಇದು ಸಕಾಲ ಎಂದು ಕ್ರಿಸ್ ಅಭಿಪ್ರಾಯಪಡುತ್ತಾರೆ. ರಣಹದ್ದುಗಳಿಗೆ ಜಿಪಿಎಸ್ ಅಳವಡಿಸುವುದು ಸುಲಭದ ಕೆಲಸವಲ್ಲ, ಆದರೂ ನಾವು ಈ ಹಂತವನ್ನು ಮೀರಬೇಕಿದೆ ಎನ್ನುತ್ತಾರೆ. ರಣಹದ್ದುಗಳು ಎಲ್ಲಿಗೆ ಹೋಗುತ್ತವೆ? ಏನನ್ನು ತಿನ್ನುತ್ತವೆ? ಆಕಸ್ಮಿಕವಾಗಿ ಸತ್ತುಹೋದರೆ, ಅದಕ್ಕೆ ಕಾರಣಗಳೇನು? ಮುಂತಾದ ವಿವರಗಳನ್ನು ತಿಳಿಯುವುದು ರಣಹದ್ದುಗಳ ಸಂರಕ್ಷಣೆಯಲ್ಲಿ ಬಹು ಮುಖ್ಯವಾದುದು.

ರಣಹದ್ದುಗಳ ಕ್ಷಿಪ್ರ ಪತನಕ್ಕೆ ಯಾವುದೋ ವೈರಸ್ ಕಾರಣವಿರಬಹುದು ಎಂದು ಮೊದಲು ತರ್ಕಿಸಲಾಗಿತ್ತು. ಅಧ್ಯಯನದಲ್ಲಿ, ಡೈಕ್ಲೋಫಿನಾಕ್ ಎಂಬ ಅಂಶವೇ ಮೂಲ ಕಾರಣವೆಂದು ಬೆಳಕಿಗೆ ಬಂತು. ಜಾನುವಾರುಗಳ ಕಾಯಿಲೆಗೆ ಬಳಸುವ ನೋವು ನಿವಾರಕಗಳೇ ರಣಹದ್ದುಗಳಿಗೆ ವಿಷವಾಗಿ ಪರಿಣಮಿಸಿದವು. ಹದ್ದುಗಳು ಕಡಿಮೆಯಾಗಲು ಇದೊಂದೇ ಕಾರಣವಲ್ಲ. ಪಶ್ಚಿಮಘಟ್ಟಗಳಂತಹ ಅಭೇದ್ಯ ಪ್ರದೇಶಗಳಲ್ಲೂ ರಣಹದ್ದುಗಳು ನಿರ್ವಂಶವಾಗಿವೆ. ಅದಕ್ಕೆ ಬೇರೆ ಆಯಾಮವಿದೆ.

ಕಳೆದ ಶತಮಾನದ ಕೊನೆಯ ದಶಕಗಳಲ್ಲಿ (1970–1980) ಹೈನುಗಾರಿಕೆಯನ್ನು ಉತ್ತೇಜಿಸಲು ಹೆಚ್ಚು ಹಾಲು ನೀಡುವ ವಿದೇಶಿ ತಳಿಯ ಜಾನುವಾರುಗಳನ್ನು ಪರಿಚಯಿಸಲಾಯಿತು. ಹೆಚ್ಚು ಹಾಲು ನೀಡುವ ಹೈಬ್ರಿಡ್ ತಳಿಗಳಿಗೆ ಕಾಯಿಲೆಯೂ ಹೆಚ್ಚು. ಹೆಚ್ಚು ಹೆಚ್ಚು ಔಷಧೋಪಚಾರ ನೀಡುವ ಅನಿವಾರ್ಯವೂ ಬಂತು. ವಿದೇಶಿ ತಳಿ ಜಾನುವಾರುಗಳು ಮಲೆನಾಡು ಗಿಡ್ಡ ತಳಿಗೆ ಪರ್ಯಾಯವಾಗಲಿಲ್ಲ. ಮಲೆನಾಡು ಗಿಡ್ಡಗಳಿಗೆ ಕಾಯಿಲೆ ಬಂದಾಗ ಸಾಮಾನ್ಯವಾಗಿ ನಾಟಿ ವೈದ್ಯ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಕಾಲೊಡೆ ರೋಗಕ್ಕೆ ಒಳ್ಳೆಣ್ಣೆ ಸವರುವುದು, ಬಾಯೊಡೆ ರೋಗಕ್ಕೆ ಬಾಳೆಹಣ್ಣನ್ನು ಒಳ್ಳೆಣ್ಣೆಯಲ್ಲಿ ಅದ್ದಿ ತಿನ್ನಿಸುವುದು, ಗಂಟಲು ರೋಗಕ್ಕೆ ಉಪ್ಪಿನಕಾಯಿ ರಸವನ್ನು ನೆಕ್ಕಿಸುವುದು, ಇತ್ಯಾದಿ.

ಗೋಮಾಂಸ ವ್ಯಾಪಾರ, ಚರ್ಮೋದ್ಯಮಗಳು ಯಾಂತ್ರೀಕರಣ ಆಗುವುದರ ಜೊತೆಗೆ, ನಗರೀಕರಣ ಮತ್ತು ಸ್ವಚ್ಛತಾ ಕ್ರಮಗಳಿಂದಾಗಿ ಸಾಕುಪ್ರಾಣಿಗಳ ಮೃತದೇಹವನ್ನು ಬಯಲಿನಲ್ಲಿ ಹಾಕುವ ಪದ್ಧತಿ ಕುಸಿಯಿತು. ಇದರಿಂದ ಮೃತದೇಹದ ಲಭ್ಯತೆ ಕಡಿಮೆಯಾಯಿತು. ಕೃಷಿಯಲ್ಲಿ ಯಾಂತ್ರಿಕತೆ ಬಂದ ಮೇಲೆ ನಾಟಿ ಮಾಡಲು ಎತ್ತುಗಳ ಬಳಕೆ ಕಡಿಮೆಯಾಯಿತು. 1980ರ ನಂತರದಲ್ಲಿ ಅರಣ್ಯನಾಶದ ಪ್ರಮಾಣ ಹೆಚ್ಚಾಯಿತು. ಮಲೆನಾಡಿನ ಬಲು ಎತ್ತರದ ಮರಗಳ ಮೇಲೆ ಗೂಡು ಕಟ್ಟುತ್ತಿದ್ದ ಹದ್ದುಗಳಿಗೆ ಅಂತಹ ಮರಗಳ ಲಭ್ಯತೆ ಕಡಿಮೆಯಾಯಿತು. ಮಾನವಕೇಂದ್ರಿತ ರಸ್ತೆ ನಿರ್ಮಾಣ, ವಿದ್ಯುತ್ ಉತ್ಪಾದನೆ, ರೈಲು ಮಾರ್ಗಗಳು, ಗಣಿಗಾರಿಕೆ– ಹೀಗೆ, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ರಣಹದ್ದುಗಳಿಗೆ ಪೂರಕವಾದ ಆವಾಸಸ್ಥಾನದ ಕೊರತೆ ತೀವ್ರವಾಯಿತು. ಒಟ್ಟಾರೆ ಕಾಡಿನ ಶಾಂತ ವಾತಾವರಣ ನಾಶವಾಯಿತು. ವನ್ಯಜೀವಿ ಸಂರಕ್ಷಣೆ ನೆಲೆಗಳಲ್ಲೂ ಅಕ್ರಮ ಬೇಟೆ ಹೆಚ್ಚಾದ ಕಾರಣಕ್ಕೆ, ನೈಸರ್ಗಿಕವಾಗಿ ಸಾಯುತ್ತಿದ್ದ ಕಾಡುಪ್ರಾಣಿಗಳ ಸಂಖ್ಯೆಯೂ ಕುಸಿಯಿತು. ಕಾಡುಪ್ರಾಣಿಗಳಿಗೆ ಹೊಡೆದ ಗುಂಡಿನಲ್ಲಿ ಸೀಸದ ಅಂಶವಿರುತ್ತಿತ್ತು. ಇದನ್ನು ತಿನ್ನುವ ರಣಹದ್ದುಗಳು ಸಾವಿಗೀಡಾಗುತ್ತಿದ್ದವು. ಮೃತದೇಹಗಳನ್ನು ಮಾತ್ರ ತಿನ್ನುವ ರಣಹದ್ದುಗಳು, ಕೃಷಿ ವಿಷ ಸೇವಿಸಿ ಸತ್ತ ಕಾಡುಪ್ರಾಣಿಗಳನ್ನು ತಿಂದು ಅವನತಿಯತ್ತ ಸಾಗಿದವು.

ಮೃತ ಪ್ರಾಣಿಗಳನ್ನು ತಿನ್ನುವುದರ ಮೂಲಕ ವಾತಾವರಣವನ್ನು ಸ್ವಚ್ಛವಿಡುತ್ತಿದ್ದ ರಣಹದ್ದುಗಳು ಈಗ ಅತಿ ವಿರಳವಾಗಿವೆ. ಸಣ್ಣ ಊರುಗಳು ಪಟ್ಟಣ ಗಳಾಗಿ, ಪಟ್ಟಣಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ ಬದಲಾಗುತ್ತಲೇ ಇರುತ್ತವೆ. ಅಳಿದುಳಿದ ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು ತಿನ್ನಲು ಬೀದಿನಾಯಿಗಳು ಹೋಗುತ್ತವೆ. ಇದು ಮತ್ತೊಂದು ಪ್ರಮಾದಕ್ಕೆ ಕಾರಣವಾಗುತ್ತಿದೆ. ರಣಹದ್ದುಗಳ ಅವನತಿಯಿಂದ ರೇಬಿಸ್ ರೋಗದ ಪ್ರಮಾಣ ಹೆಚ್ಚಾಗಿ ಇರುವುದನ್ನು ಸಂಶೋಧಕರು ದಾಖಲಿಸಿದ್ದಾರೆ.

ಸಾಕು ಪ್ರಾಣಿಗಳ ಮೃತದೇಹಗಳ ಮೇಲೆ ಅವಲಂಬಿತವಾದ ವರ್ಗವೂ ಒಂದಿತ್ತು. ಇವರಿಗೆ ಜಾನುವಾರು ಸತ್ತ ವಿಷಯ ತಿಳಿಸಿದರೆ ಸಾಕು, ಮೃತ ಜಾನುವಾರುಗಳನ್ನು ಬೆಟ್ಟಕ್ಕೆ ತೆಗೆದುಕೊಂಡು ಹೋಗಿ, ಅದರ ಚರ್ಮವನ್ನು ಸುಲಿದು ತೆಗೆದು ಕೊಂಡು ಹೋಗುತ್ತಿದ್ದರು, ಚರ್ಮವನ್ನು ಹದ ಮಾಡಿ ಚಪ್ಪಲಿ ತಯಾರಿಸುತ್ತಿದ್ದರು. ರಣಹದ್ದುಗಳಂತೆ ಈ ವರ್ಗ ನಾಶವಾಗದೇ ಇದ್ದರೂ, ಅವರು ಅವಲಂಬಿಸಿ ಕೊಂಡಿದ್ದ ಜಾನುವಾರುಗಳ ಮೃತದೇಹದ ಅಲಭ್ಯತೆಯ ಕಾರಣಕ್ಕೆ ಅವರೂ ಬೇರೆ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡಿರಬಹುದು.

ರಣಹದ್ದುಗಳಿಗೆ ಮಾರಕವಾದ ರಾಸಾಯನಿಕ ಔಷಧಗಳನ್ನು ನಿಷೇಧಗೊಳಿಸುವುದು, ಕೃಷಿ ರಾಸಾಯನಿಕಗಳನ್ನು ಬಳಸದೇ ಇರುವುದು, ಹಾಲಿ ಇರುವ ಅರಣ್ಯ ಪ್ರದೇಶಗಳನ್ನು ಉಳಿಸಿಕೊಳ್ಳುವುದು ಹಾಗೂ ಪಶ್ಚಿಮಘಟ್ಟಗಳಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚು ಮಾಡುವುದು, ಇತ್ಯಾದಿ ಉಪಕ್ರಮಗಳಿಂದ ರಣಹದ್ದುಗಳು ಮಲೆನಾಡಿಗೆ ಮರಳಿ ಬರುವ ಕ್ಷೀಣ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಕೃತಕವಾಗಿ ಮರಿ ಮಾಡಿಸುವುದರ ಮೂಲಕ ರಣಹದ್ದುಗಳನ್ನು ಉಳಿಸಿಕೊಳ್ಳಬೇಕೆಂಬ ಯೋಜನೆ ಯನ್ನು ಕರ್ನಾಟಕ ಅರಣ್ಯ ಇಲಾಖೆ 2022ರಲ್ಲಿ ಪ್ರಾರಂಭಿಸಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಈ ಮಹತ್ವದ ಯೋಜನೆ ಕುಂಟುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.