ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ದೀದಿ ಮತ್ತು ಶೈಲಜಾ ಟೀಚರ್

ಇಬ್ಬರು ಮಹಿಳಾ ರಾಜಕಾರಣಿಗಳ ವಿಭಿನ್ನ ಮಾದರಿ ದೇಶಕ್ಕೆ ಹೊಸ ಹಾದಿ ತೋರಿಸಬಲ್ಲದು...
Last Updated 3 ಮೇ 2021, 19:49 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರ ವೀಲ್ ಚೇರ್ ಹೋರಾಟ ಅಳ್ಳೆದೆಯ ನಾಯಕರಿಗೆಲ್ಲ ಅದ್ಭುತ ಸ್ಫೂರ್ತಿಯಾಗಬಲ್ಲದು. ಹಾಗೆಯೇ, ಕೇರಳದ ಆರೋಗ್ಯಮಂತ್ರಿ ಶೈಲಜಾ ಟೀಚರ್ ತೋರಿಸಿಕೊಟ್ಟ 24x7 ಕರ್ತವ್ಯಬದ್ಧತೆ ಮಾನವಂತ ರಾಜಕಾರಣಿಗಳಿಗೆಲ್ಲ ಮಾದರಿಯಾಗಬಲ್ಲದು.

‘ಬಿಜೆಪಿ ಬಂಗಾಳದಲ್ಲಿ ಹೇಗೆ ಗೆಲ್ಲುತ್ತೆ? ನಾನು ಗೋಲ್ ಕೀಪರ್ ಆಗಿರೋ ತನಕ ಸಾಧ್ಯವೇ ಇಲ್ಲ!’ ಎಂದು ಮಮತಾ ಆತ್ಮವಿಶ್ವಾಸದಿಂದ ಹೇಳುತ್ತಲೇ ಇದ್ದರು. ತಮ್ಮ ಬಂಟನಾಗಿದ್ದ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಬಿಟ್ಟಾಗ ಮಮತಾ ಹೊಸ ಸವಾಲೊಂದನ್ನು ಕೈಗೆತ್ತಿಕೊಂಡರು. ತಮ್ಮ ರಾಜಕೀಯ ಬದುಕಿಗೆ ತಿರುವು ಕೊಟ್ಟಿದ್ದ ನಂದಿಗ್ರಾಮದಲ್ಲಿ ಸುವೇಂದು ಎದುರಿಗೇ ಚುನಾವಣೆಗೆ ನಿಂತರು. ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಶುರುವಾದ ದಿನ ಇದ್ದಕ್ಕಿದ್ದಂತೆ ಮಮತಾ ಕಾಲಿಗೆ ಪೆಟ್ಟಾಯಿತು. ಇದು ಆಕಸ್ಮಿಕವೋ, ಯೋಜಿತವೋ? ಖಚಿತವಾಗಿ ಹೇಳಲಾಗದು!

ಪ್ಲಾಸ್ಟರ್ ಹಾಕಿಕೊಂಡಿದ್ದ ಮಮತಾ ಮುರಿದ ಕಾಲನ್ನು ಅಲ್ಲಾಡಿಸುತ್ತಿದ್ದಾರೆ ಎಂಬ ಹೀನ ಟ್ರೋಲಿಂಗೂ ಶುರುವಾಯಿತು. ಸಡಿಲ ನಾಲಗೆಯ ದುಶ್ಶಾಸನರು ಮಮತಾ ಸೀರೆಯವರೆಗೂ ಅಣಕವಾಡಿದರು. ವೀಲ್ ಚೇರಿನಲ್ಲಿ ಮೈಕ್ ಹಿಡಿದ ಮಮತಾ ಅದಕ್ಕೆಲ್ಲ ಬಗ್ಗಲಿಲ್ಲ. ನಂದಿಗ್ರಾಮದಲ್ಲೇ ಅವರನ್ನು ಕಟ್ಟಿಹಾಕಲೆತ್ನಿಸಿದ ವಿರೋಧಿಗಳ ಸ್ಟ್ರ್ಯಾಟಜಿಗೂ ಬಲಿಯಾಗಲಿಲ್ಲ. ಬಂಗಾಳದ 292 ಕ್ಷೇತ್ರಗಳಲ್ಲೂ ದೀದಿಯೇ ಸ್ಟಾರ್ ಪ್ರಚಾರಕಿ!

ಮಮತಾ ತಮ್ಮ ಸೀಟು ಸೋತಿರಬಹುದು; ಆದರೆ 214 ಸೀಟುಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಈ ಎಲ್ಲದರ ಕ್ರೆಡಿಟ್ಟನ್ನು ಮಮತಾಗೇ ಕೊಡಬೇಕಾಗಿಲ್ಲ; ಕೆಟ್ಟ ಮತೀಯ ಧ್ರುವೀಕರಣದ ಚುನಾವಣೆಯಲ್ಲಿ ಕೋಮುವಾದದ ವಿರುದ್ಧದ ಮತಗಳು ಕಾಂಗ್ರೆಸ್, ಕಮ್ಯುನಿಸ್ಟ್, ತೃಣಮೂಲ ನಡುವೆ ಹಂಚಿ ಹೋಗದಂತೆ ಮತ ಚಲಾಯಿಸಿದ ಬಂಗಾಳದ ಮತದಾರರ ಮುನ್ನೋಟ ಹಾಗೂ ಅಲ್ಪಸಂಖ್ಯಾತರ, ಜಾತ್ಯತೀತರ ರಾಜಕೀಯ ಪ್ರಜ್ಞೆಯೂ ಅಷ್ಟೇ ಮುಖ್ಯವಾದುದು. ಮಹಿಳೆಯರು ಮಮತಾ ತಮ್ಮ ರಕ್ಷಕಿಯೆಂದು ನಂಬಿ ಬೆಂಬಲಿಸಿದ್ದು ಕೂಡ ಇಷ್ಟೇ ನಿರ್ಣಾಯಕವಾಗಿದೆ. ಆಧುನಿಕ ಬಂಗಾಳಿಗರ ಉದಾರವಾದಿ ಪ್ರಜ್ಞೆಯನ್ನು ವಿಕೃತ ಕೋಮುಪ್ರಜ್ಞೆಯಾಗಿಸಲು ಪ್ರಯತ್ನಿಸುತ್ತಾ, ದೇವತೆ ಗಳಾದ ದುರ್ಗಾ, ರಾಮರುಗಳನ್ನು ಬೀದಿಗೆಳೆದು ತಂದಿದ್ದ ಈ ಚುನಾವಣೆಯಲ್ಲಿ, ಕಮ್ಯುನಿಸ್ಟರು ಬಂಗಾಳದಲ್ಲಿ ಬೆಳೆಸಿರುವ ಜಾತ್ಯತೀತ ಪ್ರಜ್ಞೆಯೂ ಮಮತಾ ಗೆಲುವಿಗೆ ನೆರವಾಗಿದೆ. ತೃಣಮೂಲ ಪಕ್ಷದಿಂದ ನಿಂತ 42 ಮುಸ್ಲಿಂ ಅಭ್ಯರ್ಥಿಗಳಲ್ಲಿ 41 ಜನ ಗೆದ್ದಿರುವುದು ಕೂಡ ಒಟ್ಟಾರೆ ಯಾಗಿ ರಾಜ್ಯದಲ್ಲಿ ಅಲ್ಪಸಂಖ್ಯಾತ ಮತಗಳು ಮಮತಾ ಪರ ಒಗ್ಗೂಡಲು ಸಹಾಯಕವಾಗಿದೆ. ಹಾಗೆಯೇ, ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಬಿಂಬಿಸದ ಬಿಜೆಪಿಯಲ್ಲಿ ತೃಣಮೂಲ ಪಕ್ಷಾಂತರಿಗಳೇ ತುಂಬಿಕೊಂಡಿದ್ದರ ಅಡ್ಡ ಪರಿಣಾಮವೂ ಮಮತಾಗೆ ವರವಾಯಿತು!

ಚುನಾವಣಾ ಯೋಜಕ ಪ್ರಶಾಂತ್ ಕಿಶೋರ್ ಮಾಡಿದ ಹೋಮ್‌ವರ್ಕ್ ತೃಣಮೂಲ ಕಾಂಗ್ರೆಸ್ಸಿನ 10 ವರ್ಷದ ‘ಆಡಳಿತ ವಿರೋಧಿ ಅಲೆ’ಯನ್ನು ಹಿಮ್ಮೆಟ್ಟಿ ಸಿತು. ಹೋದ ವರ್ಷವೇ ಪ್ರಶಾಂತ್‌ ತೃಣಮೂಲ ಕಾಂಗ್ರೆಸ್ಸಿನ ‘ವೇಸ್ಟ್’ ಶಾಸಕರ ಪಟ್ಟಿ ಮಾಡಿದ್ದರು. ದೀದಿಯ ಜೊತೆ ಪಕ್ಷದ ಕಾರ್ಯಕರ್ತರು, ಜನರು ನೇರವಾಗಿ ಮಾತಾಡಬಲ್ಲ ‘ದೀದಿ ಕೆ ಬೋಲ್’ ಕಾರ್ಯಕ್ರಮ ಶುರು ಮಾಡಿದರು. ಕಾರ್ಯಕರ್ತರ ಅಭಿಪ್ರಾಯಗಳ ಅಗ್ನಿಪರೀಕ್ಷೆಯಲ್ಲಿ ಫೇಲಾಗಿ ಟಿಕೆಟ್ ಕಳೆದುಕೊಳ್ಳುವ ಭಯದಲ್ಲಿದ್ದ ತೃಣಮೂಲ ಶಾಸಕರು ಬಿಜೆಪಿಗೆ ವಲಸೆ ಹೋದರು; ತೃಣಮೂಲ ಕಾಂಗ್ರೆಸ್ ಶುದ್ಧವಾಯಿತು; ಹೊಸ ಮುಖಗಳನ್ನು ಪಡೆಯಿತು. ಇದು ಕೂಡ ಈ ಗೆಲುವಿನ ಹಿಂದಿದೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯಾವ ಪ್ರಧಾನ ಮಂತ್ರಿಯೂ ಹೋಗದಷ್ಟು ಸಲ ರಾಜ್ಯವೊಂದರ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಹಾಲಿ ಪ್ರಧಾನಿಯವರ ಸುತ್ತ ಕಟ್ಟಲಾದ ಹುಸಿ ಪ್ರಭಾವಳಿ ಹಾಗೂ ಶಬ್ದಜಾಲದ ಸರಕು ಕುಸಿದು ಬಿದ್ದಿರುವುದನ್ನು ಈ ಚುನಾವಣೆ ಸ್ಪಷ್ಟವಾಗಿ ತೋರಿಸಿದೆ. ದಿಲ್ಲಿಯ ಗಡಿಯಲ್ಲಿ ಬೀಡುಬಿಟ್ಟಿರುವ ರೈತ ಚಳವಳಿಗಾರರು ಮಮತಾ ಗೆಲುವಿಗಿಂತಲೂ ಬಿಜೆಪಿಯ ಸೋಲಿನಿಂದಾಗಿ ಬೀಸುತ್ತಿರುವ ಹೊಸ ಗಾಳಿಯ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿರುವುದು ಮುಂಬರಲಿರುವ ರಾಜಕೀಯ ಬದಲಾವಣೆಯ ದಿಕ್ಕುಗಳನ್ನು ಸೂಚಿಸುತ್ತಿದೆ.

‘ರಾಷ್ಟ್ರೀಯ’ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಜೊತೆಗೆ ಮಾಡಿಕೊಳ್ಳುವ ಹೊಂದಾಣಿಕೆಯ ಮೇಲೆ ಇಂದಿನ ಚುನಾವಣೆಗಳು ನಿಂತಿವೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೇಶದುದ್ದಕ್ಕೂ ಹಬ್ಬಿರುವ ಕಾಂಗ್ರೆಸ್ ತಾನು ಯಾಕೆ ಅಧಿಕಾರ ಹಿಡಿಯಲಾಗು
ತ್ತಿಲ್ಲ ಎಂಬ ಬಗ್ಗೆ ವೈಜ್ಞಾನಿಕವಾಗಿ ಯೋಚಿಸಬೇಕಾಗಿದೆ. ಕಳೆದ ವರ್ಷಗಳಲ್ಲಿ ಮಧ್ಯಪ್ರದೇಶ, ಕರ್ನಾಟಕದಲ್ಲಿ ಪಕ್ಷಾಂತರಿಗಳ ಕುತಂತ್ರಗಳಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ರಾಜಸ್ಥಾನದಲ್ಲಿ ಈ ಅಪಾಯ ತಾತ್ಕಾಲಿಕವಾಗಿಯಂತೂ ತಪ್ಪಿದೆ. ಅಸ್ಸಾಂನಲ್ಲಿ ಹೊಂದಾಣಿಕೆಗಳನ್ನು ವಿಸ್ತರಿಸಿಕೊಂಡಿದ್ದರೆ ಸಲೀಸಾಗಿ ಗೆಲ್ಲಬಹುದಿತ್ತು. ಮಮತಾಗೆ ನೆರವಾಗುವ ಒಳ ಒಪ್ಪಂದದಿಂದಾಗಿ ಬಂಗಾಳದಲ್ಲಿ ಕಾಂಗ್ರೆಸ್ ಚುನಾವಣೆಯಿಂದ ಹಿಂಜರಿಯಿತೆಂಬ ಸುದ್ದಿಯಿದೆ. ಇದು ನಿಜವಾಗಿದ್ದರೆ ಮಮತಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಡನೆ ಗಟ್ಟಿಯಾಗಿ ನಿಲ್ಲಬೇಕಾಗುತ್ತದೆ. ಮಮತಾರ ‘ಎನರ್ಜಿ’ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಗಟ್ಟಿಯಾಗಿ ಒಂದೆಡೆ ತರುವಂತಾದರೆ ದೇಶದ ರಾಜಕೀಯದ ದಿಕ್ಕೇ ಬದಲಾಗುತ್ತದೆ.

ಕೇರಳದಲ್ಲಿ ಶೈಲಜಾ ಟೀಚರ್ ಎಂದೇ ಜನಪ್ರಿಯರಾಗಿ ರುವ ಸಿಪಿಎಂನ ಕೆ.ಕೆ.ಶೈಲಜಾ ಈ ಸಲ 61,035 ಮತಗಳ ದಾಖಲೆ ಅಂತರದಿಂದ ಗೆದ್ದಿರುವುದು ಒಳ್ಳೆಯ ರಾಜಕಾರಣಿಯೊಬ್ಬರನ್ನು ನ್ಯಾಯವಂತ ಮತದಾರರು ಗಟ್ಟಿಯಾಗಿ ಬೆಂಬಲಿಸುವ ಆದರ್ಶ ಸಂಬಂಧದ ಅಪರೂಪದ ಮಾದರಿಯಂತಿದೆ. ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಶೈಲಜಾ ಕೇರಳ ಎದುರಿಸಿದ ಪ್ರವಾಹ, ನಿಫಾ ವೈರಸ್ ಹಾಗೂ ಕೊರೊನಾ ಸಾಂಕ್ರಾಮಿಕದ ಘಟ್ಟಗಳಲ್ಲಿ ದಣಿವರಿಯದ ಯುದ್ಧನಾಯಕಿಯಾಗಿ ಕೆಲಸ ಮಾಡಿದರು. ಈ ಎಲ್ಲ ಬಿಕ್ಕಟ್ಟು ಗಳನ್ನು ಎದುರಿಸಲು ಶೈಲಜಾ ಹಾಗೂ ಎಡರಂಗ ಸರ್ಕಾರವು ಮಹಿಳೆಯರನ್ನು ತೊಡಗಿಸಿದ ರೀತಿಯಂತೂ ದೇಶಕ್ಕೇ ಮಾದರಿಯಾಗಿದೆ. ಶೈಲಜಾ ಪ್ರಚಾರದಿಂದ ದೂರವಿದ್ದರೂ ಅವರ ಕೆಲಸವೇ ಜಗತ್ತಿನಾದ್ಯಂತ ಅವರ ಹೆಸರನ್ನು ಮೊಳಗಿಸಿದೆ. ಕಳೆದ ವರ್ಷದ ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಅತ್ಯಂತ ದಕ್ಷವಾಗಿ ಕೆಲಸ ಮಾಡಿದ ಮೂವರು ವಿಶ್ವನಾಯಕಿಯರ ಪಟ್ಟಿಯಲ್ಲಿ ನ್ಯೂಜಿಲೆಂಡಿನ ಪ್ರಧಾನಿ ಜಸಿಂದಾ ಆರ್ಡರ್ನ್, ಜರ್ಮನಿಯ ಅಧ್ಯಕ್ಷೆ ಏಂಜೆಲಾ ಮರ್ಕೆಲ್, ಕೇರಳದ ಶೈಲಜಾ ಮುಂಚೂಣಿಯಲ್ಲಿದ್ದರು.

ಇಂಗ್ಲೆಂಡಿನ ‘ಪ್ರಾಸ್ಪೆಕ್ಟ್ ಮ್ಯಾಗಝಿನ್’ ನಡೆಸಿದ ಸಮೀಕ್ಷೆಯಲ್ಲಿ ಶೈಲಜಾ ಟೀಚರ್ ಜಸಿಂದಾರನ್ನು ಹಿಂದಿಕ್ಕಿ ‘ಟಾಪ್ ಥಿಂಕರ್ ಆಫ್ ದ ಇಯರ್ 2020’ ಆಗಿ ಆಯ್ಕೆಯಾದರು. ಶೈಲಜಾ ಮಾಡಿದ ಕೆಲಸ ಕೂಡ ಎಡರಂಗ ಮತ್ತೆ ಅಧಿಕಾರ ಹಿಡಿಯಲು ನೆರವಾಗಿದ್ದರೆ ಅಚ್ಚರಿಯಲ್ಲ. ಸದಾ ಸಮಾನತೆಯ ಮಾತನಾಡಿದರೂ ಮಹಿಳಾ ಮುಖ್ಯಮಂತ್ರಿಯ ಬಗ್ಗೆ ಇನ್ನೂ ಯೋಚಿಸದ ಎಡರಂಗ, ಮುಂದೆ ಶೈಲಜಾರನ್ನು ಮುಖ್ಯಮಂತ್ರಿಯಾಗಿ ಮಾಡಬಲ್ಲುದಾದರೆ ಕೇರಳದಲ್ಲಿ ನೆಲೆಯೂರಿರುವ ಎಡಪಂಥೀಯ ರಾಜಕೀಯಕ್ಕೆ ಹೊಸ ದಿಕ್ಕು ಸಿಕ್ಕೀತು.

ಈ ಚುನಾವಣೆಯ ಫಲಿತಾಂಶಗಳನ್ನು ನಿರ್ದಿಷ್ಟವಾಗಿ ಇಬ್ಬರು ಮಹಿಳೆಯರ ಮೂಲಕ ನೋಡಲು ಕಾರಣವಿದೆ: ಪುರುಷ ದುರಹಂಕಾರದ ಭಾಷೆಯ ಅಬ್ಬರ, ‘ದೀದೀ ಓ ದೀದಿ’ ಎಂದು ಕೂಗಿ ಕಾಲೆಳೆದ ಅಶ್ಲೀಲತೆ, ವಿಭಜಕ ಧ್ರುವೀಕರಣ- ಈ ಥರದ ಯಾವ ಭಾಷೆಯನ್ನೂ ಬಳಸದ ಈ ಇಬ್ಬರು ನಾಯಕಿಯರ ಮಾದರಿ ದೇಶದಲ್ಲಿ ಜನರನ್ನು ಬೆಸೆಯುವ ರಾಜಕಾರಣವನ್ನು ಸೃಷ್ಟಿಸ
ಬಲ್ಲದು. ಜನ ಬೀದಿಯಲ್ಲಿ ಹೊಡೆದಾಡಿ ಸಾಯುವಂತೆ ಮಾಡುವ ಕೋಮುದ್ವೇಷದ ರಾಜಕಾರಣ; ಜನ ಆಮ್ಲಜನಕವಿಲ್ಲದೆ ಬೀದಿಯಲ್ಲಿ ಸತ್ತು ಬೀಳುತ್ತಿದ್ದರೂ ಲೆಕ್ಕಿಸದ ಹೃದಯಹೀನ ರಾಜಕಾರಣ ಈ ಎರಡೂ ಪ್ರವೃತ್ತಿಗಳಿಗೆ ಮಮತಾರ ಹೋರಾಟದ ರಾಜಕಾರಣ ಹಾಗೂ ಶೈಲಜಾ ಟೀಚರ್ ಕರ್ತವ್ಯಬದ್ಧತೆಗಳು ಪರ್ಯಾಯವಾಗಬಲ್ಲವು. ಶೈಲಜಾರ ಕರ್ತವ್ಯಪ್ರಜ್ಞೆಯಿಂದಾಗಿಯೇ ಕೇರಳ ಇತರೆಲ್ಲ ರಾಜ್ಯಗಳಿಗಿಂತ ಮೊದಲೇ ಎಚ್ಚೆತ್ತು, ಕಳೆದ ವರ್ಷವೇ ಆಮ್ಲಜನಕ ಉತ್ಪಾದನೆಯ ಘಟಕಗಳನ್ನು ಹೆಚ್ಚಿಸಿತು; ಪಕ್ಕದ ರಾಜ್ಯಗಳಿಗೆ ಆಮ್ಲಜನಕ ಸರಬರಾಜು ಮಾಡುವಷ್ಟು ದಕ್ಷವಾಯಿತು.

ಸರ್ಕಾರಗಳಿರುವುದು ಕ್ಷುದ್ರ ರಾಜಕಾರಣ ಮಾಡುವುದಕ್ಕಲ್ಲ; ಜನರ ಜೀವ ಉಳಿಸುವುದಕ್ಕೆ ಎಂಬುದನ್ನು ಕೇರಳದ ಉದಾಹರಣೆಯಿಂದಲಾದರೂ ಇತರರು ಕಲಿಯಲಿ.

ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT