ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಂರಕ್ಷಣೆಯ ಹೆಸರಿನಲ್ಲಿ ಹಳ್ಳ ಹಿಡಿಯುತ್ತಿದೆಯೇ ಹುಲಿ ಯೋಜನೆ?

ಏರಿತು ಹುಲಿ ಸಂಖ್ಯೆ: ಸಂರಕ್ಷಣೆ?
Published 27 ಜುಲೈ 2023, 19:29 IST
Last Updated 27 ಜುಲೈ 2023, 19:29 IST
ಅಕ್ಷರ ಗಾತ್ರ

ದೇಶದ ಹುಲಿಗಳ ಸಂರಕ್ಷಣೆ ಉದ್ದೇಶದ ಹುಲಿ ಯೋಜನೆಗೆ ಐವತ್ತು ವರ್ಷ ತುಂಬಿದೆ. ಹುಲಿ ಕುರಿತ ಸಂಶೋಧನೆಗೆ ಏಳು ದಶಕ ತುಂಬಿದೆ. ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯೂ ಆಗಿದೆ. ವನ್ಯಜೀವಿಪ್ರಿಯರು‌ ಖುಷಿಯಾಗಿದ್ದಾರೆ. ಸಂರಕ್ಷಣಾ ತಜ್ಞರು, ಸಂಶೋಧಕರು ಮತ್ತಷ್ಟು ಉತ್ತಮ ಕೆಲಸ ಮಾಡುವ ಉಮೇದಿನಲ್ಲಿದ್ದಾರೆ.

ಇತ್ತೀಚೆಗೆ ಬಂಡೀಪುರದ ಕಾಡಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಹುಲಿ ಗಣತಿ ವರದಿ ಬಿಡುಗಡೆ ಮಾಡಿ, ಉತ್ತಮ ಸಂರಕ್ಷಣಾ ಕೆಲಸಗಳಿಂದಾಗಿ ಇದು ಸಾಧ್ಯವಾಗಿದೆ ಎಂದು ಸಂಬಂಧಿಸಿದವರನ್ನೆಲ್ಲಾ ಮನಸಾರೆ ಹೊಗಳಿ ಹುರಿದುಂಬಿಸಿದರು. ಅಲ್ಲದೆ, ವಿಶ್ವದ ಇತರ ದೇಶಗಳ ಹುಲಿಗಳ ಸಂರಕ್ಷಣೆಗೆ ನಮ್ಮ ‘ಪ್ರಾಜೆಕ್ಟ್ ಟೈಗರ್’ ಮಾದರಿ ಯೋಜನೆಯ ಅವಶ್ಯಕತೆ ಇದೆಯೆಂದು ಪ್ರತಿಪಾದಿಸಿದರು. ಆದರೆ, ಈಗ ನಮ್ಮಲ್ಲಿ ಆಗುತ್ತಿರುವುದೇ ಬೇರೆ.

ಜಾರಿಯಲ್ಲಿರುವ ಹುಲಿ ಯೋಜನೆಗಳಿಗೆ ಕೇಂದ್ರದ ಬಜೆಟ್‌ನಲ್ಲಿ ತೆಗೆದಿರಿಸಿರುವ ಅನುದಾನವು ಜುಲೈ ತಿಂಗಳು ಮುಗಿಯುತ್ತಿದ್ದರೂ ಅರಣ್ಯ ಇಲಾಖೆಗೆ ಬಂದಿಲ್ಲ. ಕಾರಣವೇನು ಗೊತ್ತೇ? ಹಣಕಾಸು ಇಲಾಖೆಯ ಅತಿಯಾದ ನಿಬಂಧನೆಗಳಿಂದಾಗಿ ಹಣ ಬಿಡುಗಡೆಯಾಗುವುದು ತಡವಾಗಿದೆಯಂತೆ. ಹಾಗಾದಲ್ಲಿ ಇದುವರೆಗೆ ಅತ್ಯಂತ ಮುತುವರ್ಜಿಯಿಂದ ಕೈಗೊಂಡಿದ್ದ ಹುಲಿ ಯೋಜನೆ ಹಳ್ಳ ಹಿಡಿಯುತ್ತದೆ ಎಂಬ ಆತಂಕ ತಜ್ಞರದ್ದು. ಇದರ ಜೊತೆ ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು ವನ್ಯಜೀವಿ ತಜ್ಞರೊಂದಿಗೆ ಯಾವುದೇ ಚರ್ಚೆ, ಪರಾಮರ್ಶೆ ನಡೆಸದೆ ಹುಲಿ ಮತ್ತು ಆನೆ ಯೋಜನೆಗಳೆರಡನ್ನೂ ವಿಲೀನಗೊಳಿಸಿ ಹೊರಡಿಸಿರುವ ಆದೇಶವು ಹುಲಿ ಯೋಜನೆಗೆ ಇತಿಶ್ರೀ ಹಾಡಲಿದೆ ಎಂಬ ಆತಂಕ ವನ್ಯಜೀವಿ ತಜ್ಞರಲ್ಲಿ ಹೆಚ್ಚಾಗಿದೆ.

ಇದು ಸಂರಕ್ಷಣೆಯ ಹೆಸರಿನಲ್ಲಿ ಆಗುತ್ತಿರುವ ಅವಾಂತರ, ಇದನ್ನು ತಡೆಯಲು, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಖ್ಯಸ್ಥರಾಗಿರುವ ಪ್ರಧಾನಿಯವರೇ ಮಧ್ಯಪ್ರವೇಶಿಸಿ ಆದೇಶವನ್ನು ಹಿಂಪಡೆಯುವಂತೆ ಸಚಿವಾಲಯಕ್ಕೆ ತಾಕೀತು ಮಾಡಬೇಕು ಎಂಬ ಅಭಿಪ್ರಾಯ ಬಲವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಂದಾಗಿ ಹುಲಿಯ ಆವಾಸದ ವ್ಯಾಪ್ತಿ ಕಡಿಮೆಯಾದದ್ದರ ಬಗ್ಗೆಯೂ ನೊಂದುಕೊಂಡಿದ್ದ ಸಂರಕ್ಷಣಾ ವಿಜ್ಞಾನಿಗಳು, ಸರ್ಕಾರದ ಈ ನಿರ್ಧಾರದಿಂದ ಇನ್ನಷ್ಟು ನಿರುತ್ಸಾಹಗೊಂಡಿದ್ದಾರೆ.

ಹದಿನೇಳು ವರ್ಷಗಳ ಹಿಂದೆ ಸಾವಿರದ ಐನೂರಕ್ಕೂ ಕಡಿಮೆ ಇದ್ದ ಹುಲಿಗಳ ಸಂಖ್ಯೆ ಈಗ ದುಪ್ಪಟ್ಟಿಗಿಂತ ಹೆಚ್ಚಾಗಿರುವುದು ಸರಿಯಾದ ನಿಗಾ ಮತ್ತು ಸಂರಕ್ಷಣಾ ಕ್ರಮಗಳಿಂದ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ 2006ರಲ್ಲಿ 92,000 ಚದರ ಕಿ.ಮೀ.ನಷ್ಟಿದ್ದ ಹುಲಿ ಸಂರಕ್ಷಿತ ಪ್ರದೇಶದ ವಿಸ್ತೀರ್ಣವು ಹನ್ನೆರಡು ವರ್ಷಗಳ ಅಂತರದಲ್ಲಿ 88,000 ಚದರ ಕಿ.ಮೀ.ನಷ್ಟಾಗಿದೆ. ಅಂದರೆ ಹುಲಿಯ ಆವಾಸ ಬರೋಬ್ಬರಿ 4,000 ಚದರ ಕಿ.ಮೀ.ನಷ್ಟು ಕಡಿಮೆಯಾಗಿದೆ. ಹುಲಿಗಳನ್ನು ನಿಗದಿತ ಆವರಣಗಳಿಗೆ ಸೀಮಿತಗೊಳಿಸಿ, ಮೃಗಾಲಯದಲ್ಲಿ ಇಟ್ಟಂತೆ ಸಂರಕ್ಷಿಸಲಾಗುತ್ತಿದೆ ಎಂಬ ಮಾತಿದೆ.

2018ರ ಸಮೀಕ್ಷೆಯಂತೆ ಶೇ 65ರಷ್ಟು ಹುಲಿಗಳು ಬೇಲಿಯೊಳಗೆ ಬದುಕುತ್ತಿರುವುದು ಪತ್ತೆಯಾಗಿತ್ತು. ಉಳಿದ ಹುಲಿಗಳು ಕೋರ್ ಏರಿಯಾದ ಹೊರಗೆ ಮನುಷ್ಯರ ಆವಾಸದ ಸನಿಹ ಬದುಕುತ್ತಿವೆ. ಕೆಲವು ಹುಲಿ ತಜ್ಞರ ಪ್ರಕಾರ, ಭಾರತದಲ್ಲಿನ ಹುಲಿಗಳ ಸಂಖ್ಯೆ ಆವಾಸದಲ್ಲಿ ಇರಬಹುದಾದ ಗರಿಷ್ಠ ಮಟ್ಟ ತಲುಪಿದೆ. ಗ್ಲೋಬಲ್ ಟೈಗರ್ ಫೋರಂನ ಕಾರ್ಯದರ್ಶಿ ರಾಜೇಶ್ ಗೋಪಾಲ್, ಈಗಿನ ಹುಲಿಗಳ ಜೊತೆ ಇನ್ನೂ ಒಂದು ಸಾವಿರ ಹುಲಿಗಳಿಗೆ ನಮ್ಮ ಕಾಡುಗಳಲ್ಲಿ ಜಾಗವಿದೆ ಎನ್ನುತ್ತ, ಬರೀ ಸಂಖ್ಯೆ ಮುಖ್ಯವಲ್ಲ, ಅವುಗಳ ರಕ್ಷಣೆ ಹಾಗೂ ಮಾನವ- ಹುಲಿ ಸಂಘರ್ಷದ ಪ್ರಕರಣ ತಡೆಯುವುದು ಸದ್ಯದ ತುರ್ತುಗಳಲ್ಲೊಂದು ಎಂದಿದ್ದಾರೆ.

ಹುಲಿಗಳ ಸಂಖ್ಯೆ ಹೆಚ್ಚಿದ್ದರಿಂದ ಅವುಗಳ ಸಹಜ ಜೀವನಕ್ಕೆ ಹುಲಿ ಕಾರಿಡಾರ್‌ಗಳ ಅವಶ್ಯಕತೆ ಈಗ ಹೆಚ್ಚಾಗಿದೆ. ವ್ಯತಿರಿಕ್ತ ಎಂಬಂತೆ 2022ರ ಹುಲಿ ಗಣತಿ ವರದಿಯಲ್ಲಿ ಅರಣ್ಯ ಒತ್ತುವರಿ ಮತ್ತು ಹುಲಿ ಆವಾಸ ಕೆಡಿಸುವ ಗಣಿಗಾರಿಕೆ, ಜಲವಿದ್ಯುತ್‍ ಸ್ಥಾವರ, ಹೆದ್ದಾರಿ, ಅಣೆಕಟ್ಟು ಯೋಜನೆಗಳ ಕುರಿತು ಪ್ರಸ್ತಾಪವಿದೆ. ಸಂಖ್ಯೆಯಲ್ಲಿ ಹೆಚ್ಚಾಗಿರುವ ಹುಲಿಗಳು ತಮ್ಮದೇ ಸೀಮಿತ ವಲಯಗಳಲ್ಲಿ ಇರುವುದರಿಂದ ಬೇರೆ ಆವಾಸದ ಹುಲಿಗಳ ಸಂಪರ್ಕಕ್ಕೆ ಬರದೆ ಒಳವಂಶವರ್ಧನೆಯ ಅಪಾಯ ಎದುರಿಸುತ್ತಿವೆ. ನೂರಾರು ಕಿ.ಮೀ. ಕ್ರಮಿಸುವ ಹುಲಿಗಳಿಗೆ ಇತರ ಭಾಗಗಳ ಹುಲಿಗಳ ಸಂಪರ್ಕ ಸಾಧ್ಯವಾಗದಿದ್ದರೆ, ಹುಲಿಗಳ ಸಂಖ್ಯೆಯನ್ನು ಬಹುಕಾಲ ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಳ್ಳುವುದು ಕಷ್ಟ.

ಸಂರಕ್ಷಿತ ವಲಯಗಳ ಹೊರಗೆ ಬಹಳಷ್ಟು ಹುಲಿಗಳಿರುವ, ಹುಲಿ- ಮಾನವ ಸಂಘರ್ಷ ನಿರಂತರವಾಗಿ ಇರುವ ಬಗ್ಗೆ ಹುಲಿ ತಜ್ಞ ಉಲ್ಲಾಸ ಕಾರಂತರು ಬಹುಕಾಲದಿಂದ ಎಚ್ಚರಿಸುತ್ತಲೇ ಬಂದಿದ್ದಾರೆ. ನಮ್ಮ ಸಂರಕ್ಷಣಾ ಮಾದರಿಗಳೆಲ್ಲ ಮಾನವಕೇಂದ್ರಿತ ಕ್ರಮಗಳೇ ಆಗಿದ್ದು ಬುಡಕಟ್ಟುಗಳನ್ನು ಹುಲಿಯ ವಿರುದ್ಧ ನಿಲ್ಲಿಸುವಂಥವೇ ಆಗಿವೆ. ಬುಡಕಟ್ಟು ಜನರಿಂದ ಹುಲಿಗಳಿಗೆ ತೊಂದರೆ ಆಗುತ್ತಿದೆ ಎಂಬ ಕಾರಣ ನೀಡಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿದ ನಂತರ ಸರ್ಕಾರ ಮಾಡಿದ್ದೇನು? ದುಬಾರಿ ಪ್ರವಾಸೋದ್ಯಮ ಅಲ್ಲಿಗೆ ಕಾಲಿಟ್ಟು ಮೊದಲಿಗಿಂತ ಹೆಚ್ಚಿನ ಅಧ್ವಾನಗಳಾಗಿವೆ.

ಏರಿದ ಹುಲಿ ಸಂಖ್ಯೆಯ ಬಗ್ಗೆ ಖುಷಿಯಿದೆಯಾದರೂ ಕೆಲವು ಸಂರಕ್ಷಿತ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳ ಫಲವಾಗಿ ಹುಲಿಯ ಆವಾಸ ನಾಶವಾಗುವುದನ್ನು ಸಹಿಸಲಾಗದು ಎಂದಿರುವ ಸಂರಕ್ಷಣಾ ತಜ್ಞೆ ಪ್ರೇರಣಾ ಭಿಂದ್ರ, ನದಿ ಜೋಡಣೆಯಿಂದಾಗಿ ಪನ್ನಾ ಅರಣ್ಯದಲ್ಲಿ 90 ಚದರ ಕಿ.ಮೀ. ವ್ಯಾಪ್ತಿಯ ಹುಲಿ ಆವಾಸ ಮತ್ತು 20 ಲಕ್ಷ ಮರಗಳು ಮುಳುಗಡೆಯಾಗುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಜಿಮ್ ಕಾರ್ಬೆಟ್ ಉದ್ಯಾನ, ಗೋವಾ ಮತ್ತು ಉತ್ತರ ಕನ್ನಡದ ಕಾಡುಗಳಲ್ಲಿ ಹೆದ್ದಾರಿ, ರೈಲು ಮಾರ್ಗ ನಿರ್ಮಾಣ ಕೆಲಸಗಳು ಹುಲಿಯ ಆವಾಸವನ್ನು ಮತ್ತಷ್ಟು ಸಂಕುಚಿತಗೊಳಿಸಲಿವೆ. ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿಯು ಹುಲಿಗಳ ಸಂರಕ್ಷಣೆಯ ಬದಲು ನಾಶಕ್ಕೆ ಕಾರಣವಾಗಲಿದೆ ಮತ್ತು ಹುಲಿ ವಾಸದ ಅರಣ್ಯವನ್ನು ಪದೇಪದೇ ಡಿನೋಟಿಫೈ ಮಾಡುತ್ತಿರುವ ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್‌ಲೈಫ್‍ನ ಅವಶ್ಯಕತೆಯಾದರೂ ಏನು ಎನ್ನುವ ಪ್ರಶ್ನೆ ಅನೇಕ ಹುಲಿ ತಜ್ಞರದ್ದು.

ಶತಮಾನದ ಹಿಂದೆ ನಮ್ಮ ನೆಲದಲ್ಲಿ ಅಂದಾಜು 10 ಸಾವಿರ ಹುಲಿಗಳಿದ್ದವು. ಈಗಿರುವ ಕಾಡಿನ ವ್ಯಾಪ್ತಿಯಲ್ಲಿ ಅಷ್ಟೊಂದು ಹುಲಿಗಳಿಗೆ ಜಾಗವಿಲ್ಲ. ಆದರೆ, ಅಸ್ತಿತ್ವದಲ್ಲಿರುವ ಹುಲಿ ಸಂರಕ್ಷಿತ ಅರಣ್ಯಗಳ ಶೇ 50ರಷ್ಟು ಭಾಗಗಳಲ್ಲಿ ಹುಲಿಗಳಿಲ್ಲ. ಹೆಚ್ಚು ಹುಲಿಗಳಿರುವ ಕಾಡಿನಿಂದ ಅಲ್ಲಿಗೆ ಸ್ಥಳಾಂತರ ಮಾಡಬಹುದಲ್ಲವೇ ಎನ್ನುವ ಪ್ರಶ್ನೆ ಕೆಲವರದ್ದು. ಛತ್ತೀಸಗಢದ ಇಂದ್ರಾವತಿ, ಜಾರ್ಖಂಡ್‍ನ ಪಲಮುವಿನಲ್ಲಿ ಹುಲಿಗಳ ಸಂಖ್ಯೆ ಅಲ್ಲಿನ ಕಾಡಿನ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಇದೆ. ಅಸ್ಸಾಂ, ಒಡಿಶಾ, ಅರುಣಾಚಲ ಪ್ರದೇಶ, ಮಿಜೋರಾಂನಲ್ಲಿ ಹುಲಿಗಳಿಲ್ಲ. ಇಲ್ಲಿನ ಕಾಡುಗಳಲ್ಲಿ ಹುಲಿ ಧಾರಣಾ ಸಾಮರ್ಥ್ಯವನ್ನು ಮೊದಲು ಸ್ಥಾಪಿಸಬೇಕು. ಬೇಟೆ ಪ್ರಾಣಿಗಳ ಸಂತತಿ ಹೆಚ್ಚಾಗುವಂತೆ ಮಾಡಿ ನಂತರ ಹುಲಿಗಳನ್ನು ಸ್ಥಳಾಂತರಿಸಬೇಕು ಎನ್ನುವುದು ತಜ್ಞರ ಸಲಹೆ.

ಹುಲಿ ಸಂಖ್ಯಾವೃದ್ಧಿಯ ಸಂತಸ ಸಾರ್ಥಕವಾಗಲು, ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತ ವಾಸಿಸುತ್ತ ಹುಲಿ ದಾಳಿಗಳಿಂದ ಪ್ರಾಣಹಾನಿಗೆ ಒಳಗಾದವರಿಗೆ ಶೀಘ್ರವಾಗಿ ಮತ್ತು ತುರ್ತಾಗಿ ಪರಿಹಾರ ನೀಡಬೇಕು. ಹುಲಿ ಆವಾಸದ ಸುತ್ತಲಿನ ಜಾಗಗಳಲ್ಲಿ ಸುಸ್ಥಿರ ಅಭಿವೃದ್ಧಿಯಾಗಬೇಕು. ಅರಣ್ಯ ಸರಹದ್ದುಗಳಲ್ಲಿ ವಾಸಿಸುವವರಿಗೆ ಸಂರಕ್ಷಣಾ ಯೋಜನೆಗಳಿಂದ ನೇರ ಆದಾಯ ಮತ್ತು ಕೆಲಸಗಳಲ್ಲಿ ಹೆಚ್ಚಿನ ಪಾಲು ಸಿಗಬೇಕು. 2005ರ ಟೈಗರ್ ಟಾಸ್ಕ್‌ಫೋರ್ಸ್ ವರದಿಯಲ್ಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹೋಟೆಲ್‍ಗಳಿಗೆ ಶೇ 30ರ ಸೆಸ್ ವಿಧಿಸಬೇಕೆಂಬ ಬೇಡಿಕೆ ಇತ್ತು. ಈ ಹಣ ಹುಲಿ- ಅರಣ್ಯದ ಸುತ್ತ ವಾಸಿಸುವ ಸ್ಥಳೀಯರಿಗೆ ಸಿಗಬೇಕು ಮತ್ತು ಅರಣ್ಯಗಳ ಬಳಿಯ ಹೋಮ್‌ ಸ್ಟೇ ಉದ್ಯಮದಲ್ಲಿ ಸ್ಥಳೀಯರೇ ಇರಬೇಕು ಎಂಬ ಒತ್ತಾಯವೂ ಇತ್ತು.

ಹುಲಿ ಪ್ರವಾಸೋದ್ಯಮದಲ್ಲಿ ಸ್ಥಳೀಯರನ್ನು ಪಾಲುದಾರರು ಇಲ್ಲವೆ ಮಾಲೀಕರನ್ನಾಗಿ ಮಾಡಿಕೊಳ್ಳಬೇಕು. ಹುಲಿ ಪ್ರವಾಸೋದ್ಯಮ ಆದಾಯದ ದೊಡ್ಡ ಪಾಲು ಸ್ಥಳೀಯರಿಗೆ ದೊರಕುವಂತೆ ಆಗಬೇಕು. ಹುಲಿಯ ವರ್ತಮಾನ ಮತ್ತು ಭವಿಷ್ಯಗಳೆರಡರಲ್ಲೂ ಸ್ಥಳೀಯರಿಗೆ ಹೆಚ್ಚಿನ ಪಾಲು ಇದೆ ಎಂಬುದನ್ನು ಸರ್ಕಾರಗಳು ಹಾಗೂ ಯೋಜನಾಕರ್ತರು ಅರಿತಾಗ ಮಾತ್ರ ಹುಲಿಯ ಸಂರಕ್ಷಣೆ ಇನ್ನೂ 50 ವರ್ಷಗಳ ಕಾಲ ಸರಿಯಾಗಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT