ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪ್ರವಾಸ: ಪ್ರಯಾಸವಲ್ಲ, ಪ್ರಶಾಂತ!

World Tourism Day 2023
Published 27 ಸೆಪ್ಟೆಂಬರ್ 2023, 0:30 IST
Last Updated 27 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಈಗ ಪ್ರವಾಸ ಎಂಬುದು ‘ವೈಭವ’ ಎನ್ನುವುದಕ್ಕಿಂತ ಆರೋಗ್ಯದ ಅವಶ್ಯಕತೆಯೂ ಹೌದು, ಜೀವನಕೌಶಲಗಳನ್ನು ಪ್ರಾಯೋಗಿಕವಾಗಿ ನಾವು ಕಲಿಯಬಹುದಾದ ವಿಧಾನವೂ ಹೌದು

ಸೆಪ್ಟೆಂಬರ್ 27, ಜಗತ್ತು ‘ವಿಶ್ವ ಪ್ರವಾಸೋದ್ಯಮ ದಿನ’ ಆಚರಿಸುತ್ತದೆ. ‘ಕೋಶ ಓದು ದೇಶ ಸುತ್ತು’ ಎಂಬ ಪ್ರಸಿದ್ಧ ನಾಣ್ಣುಡಿ ನಮ್ಮೆಲ್ಲರಿಗೂ ಮೊದಲಿನಿಂದ ಗೊತ್ತು. ಕೋಶ ಓದುವುದನ್ನು ನಾವು ಅಷ್ಟಿಷ್ಟೇ ಉಳಿಸಿಕೊಂಡಿದ್ದರೂ ದೇಶ ಸುತ್ತುವುದರಲ್ಲಿ ಮಾತ್ರ ಬಹಳಷ್ಟು ಮುಂದುವರಿದಿದ್ದೇವೆ. ವಿವಿಧ ರೀತಿಯ ಪ್ರವಾಸೋದ್ಯಮಗಳನ್ನು ಬೆಳೆಸಿದ್ದೇವೆ. ಪ್ರವಾಸ ಮಾಡುತ್ತಲೇ ಕೆಲಸವನ್ನೂ ಮುಂದುವರಿಸುವ ಸಾಧ್ಯತೆಯನ್ನೂ ಪ್ರಯೋಗ ಮಾಡಿ ನೋಡಿದ್ದೇವೆ. ಆದರೆ ಪ್ರವಾಸದಿಂದ ಮನಸ್ಸಿನ ಮೇಲೆ, ನಮ್ಮದೇ ವ್ಯಕ್ತಿತ್ವದ ಮೇಲೆ ಆಗಬಹುದಾದ ಪ್ರಭಾವಗಳನ್ನು ಮಾತ್ರ ನಾವು ಜಾಗೃತವಾಗಿ ಗಮನಿಸುವ ಸಾಧ್ಯತೆ ಕಡಿಮೆ.

ಕೋವಿಡ್ ನಂತರದ ದಿನಗಳಲ್ಲಿ ಈಗ ಪ್ರವಾಸದ ‘ಸೀಸನ್’ ಯಾವಾಗಲೂ ಎಂಬಂತಾಗಿಬಿಟ್ಟಿದೆ. ‘ಆಫ್ ಸೀಸನ್’ ಎಂಬ ಪದ ಯಾವ ಪ್ರವಾಸಿ ತಾಣಕ್ಕೂ ಅನ್ವಯಿಸದಂತಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರವಾಸ ನಮ್ಮ ಜೀವನದ ಮೇಲೆ ಬೀರುವ ಪರಿಣಾಮ, ನಮ್ಮ ಪ್ರವಾಸ ಇತರ ಜನರ, ನೆಲದ ಮೇಲೆ ಉಳಿಸುವ ಪರಿಣಾಮದ ಬಗ್ಗೆ ಚಿಂತನೆ ಮಾಡದಿದ್ದರೆ ಪ್ರವಾಸ ಮಾಡಿಯೂ ಅದರ ಪೂರ್ಣ ಲಾಭ ನಮಗೆ ದಕ್ಕದೇ ಹೋದೀತು.

ಶಾಲಾ ಪ್ರವಾಸಗಳನ್ನು ಏರ್ಪಡಿಸುವ ಶಾಲೆಗಳು, ಅವುಗಳಿಗೆ ಹೋಗುವ ಮಕ್ಕಳು, ಪ್ರವಾಸಗಳಿಗೆ ಮಕ್ಕಳನ್ನು ಕರೆದೊಯ್ಯದಿರುವ ಪೋಷಕರು ಈ ಅಂಶಗಳನ್ನು ಗಮನಿಸಬೇಕು.

ಪ್ರಯಾಣ ಎಂಬುದು ಪ್ರವಾಸದ ಅವಿಭಾಜ್ಯ ಅಂಗ. ‘ಪ್ರಯಾಣ’ ಎಂಬ ಪ್ರಕ್ರಿಯೆಯನ್ನು ನಾವು ನೋಡುವುದು ಸಾಮಾನ್ಯವಾಗಿ ಒಂದು ಯಾಂತ್ರಿಕ, ಬೋರು ಹೊಡೆಸುವ, ಪ್ರಯಾಸದ ಕ್ರಿಯೆಯಾಗಿ. ದೂರದ ಸ್ಥಳಗಳಿಗೆ ಪ್ರವಾಸ ಹೋಗುವ ಹೆಚ್ಚಿನವರ ಒಂದೇ ದೂರು ‘ಅದು ದೂರ, ಬಹಳ ಹೊತ್ತು ಪ್ರಯಾಣಿಸಬೇಕು’ ಎಂಬುದು. ದೂರ ಹೆಚ್ಚಿದಷ್ಟೂ ಖರ್ಚು ಹೆಚ್ಚುತ್ತದೆ, ಸಮಯವೂ ಹೆಚ್ಚು ಬೇಕಾಗುತ್ತದೆ ಎಂದರೂ, ಪ್ರಯಾಣ ಕಷ್ಟಕರ ಎಂಬ ಭಾವನೆಯೇ ಪ್ರಧಾನವಾಗಿ ಇಲ್ಲಿ ನಿಲ್ಲುತ್ತದೆ. ಆದರೆ ಪ್ರಯಾಣವನ್ನೂ ಪ್ರವಾಸದ ಅಂಗವಾಗಿ, ಕುತೂಹಲಕಾರಿ ಅನುಭವವಾಗಿ ಪರಿಗಣಿಸುವುದು ಉಪಯುಕ್ತವಷ್ಟೇ ಅಲ್ಲ, ಮನಸ್ಸು, ಮಿದುಳಿನ ದೃಷ್ಟಿಯಿಂದ ಪ್ರಯೋಜನಕಾರಿಯೂ ಹೌದು.

ನಡಿಗೆ, ಬಸ್ಸು, ಕಾರು, ರೈಲು, ವಿಮಾನ, ಹಡಗು ಯಾವುದೇ ಇರಲಿ, ಸಂಚಾರ ವ್ಯವಸ್ಥೆ ಹೇಗೇ ಇರಲಿ, ಆ ಕ್ಷಣದಲ್ಲಿ ಪೂರ್ತಿಯಾಗಿ ಅನುಭವಿಸುವುದು ವಿವಿಧ ಅಂಶಗಳನ್ನು ಕಲಿಯುವ ಅವಕಾಶವನ್ನು ನಮಗೆ ನೀಡುತ್ತದೆ. ಮನೆಗೆ ಒಬ್ಬರೋ ಇಬ್ಬರೋ ಮಕ್ಕಳಾಗಿ, ಸಕಲ ಸೌಲಭ್ಯಗಳನ್ನೂ ಹೊಂದಿರುವ, ಆನ್‌ಲೈನ್‌ ಪರದೆಗಳಲ್ಲಿಯೇ ಮುಳುಗಿರುವ ಇಂದಿನ ಮಕ್ಕಳಿಗೆ ಜಗತ್ತಿನೊಡನೆ ಕೆಲಗಂಟೆಗಳಾದರೂ ವ್ಯವಹರಿಸುವ, ಸಂವಹನ ಕೌಶಲವನ್ನು ಕಲಿಯುವ ಅವಕಾಶಗಳನ್ನೂ ಪ್ರಯಾಣ ಒದಗಿಸಬಲ್ಲದು.

ಪ್ರವಾಸಕ್ಕಾಗಿ ಯೋಜನೆ ಮಾಡುವುದು, ಮಾಹಿತಿ ಕಲೆಹಾಕುವುದು, ಪ್ರವಾಸದಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಅಲ್ಲಲ್ಲಿಯೇ ಹುಡುಕಿ ನಿವಾರಿಸಿಕೊಳ್ಳುವುದು, ಹೊಸ ವಾತಾವರಣ, ಸಂಸ್ಕೃತಿಗೆ ತಕ್ಷಣ, ತಾತ್ಕಾಲಿಕವಾಗಿ ತೆರೆದುಕೊಂಡು ಹೊಂದಿಕೊಳ್ಳುವುದು ಇವೆಲ್ಲವೂ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವ, ಜೀವನಕೌಶಲಗಳನ್ನು ಪ್ರಾಯೋಗಿಕವಾಗಿ ನಾವು ಕಲಿಯಬಹುದಾದ ವಿಧಾನಗಳೇ.

ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದೈಹಿಕವಾಗಿ, ಮಾನಸಿಕವಾಗಿ ದೂರ ಓಡುವುದು ಮನುಷ್ಯನ ಸಹಜ ಪ್ರವೃತ್ತಿ. ವೀಕೆಂಡ್ ಬರಲಿ, ರಜೆ ಬರಲಿ, ಶುಕ್ರವಾರವೆಂದರೆ ಇನ್ನೇನು ವಾರಾಂತ್ಯ ಹತ್ತಿರ, ಸೋಮವಾರ ಮತ್ತೆ ಕೆಲಸ ಆರಂಭ ಎಂಬ ಕಾರಣಕ್ಕೆ ಭಾನುವಾರ ಶನಿವಾರದಷ್ಟು ಆಪ್ತವಾಗಲಾರದು... ಇವೆಲ್ಲ ನಾವೆಲ್ಲರೂ ಅನುಭವಿಸಿರುವಂತಹ ಭಾವನೆಗಳೇ. ಇದೇ ಕಾರಣದಿಂದ ಪ್ರವಾಸ ಹೋಗಬೇಕೆಂದು ಯೋಜಿಸುವುದೂ ಮನಸ್ಸಿನ, ಮಿದುಳಿನ ಪ್ರಚೋದನೆಗೆ ಉಪಯುಕ್ತ. ಹಾಗೆಯೇ ಸಮುದ್ರ, ಬೆಟ್ಟ, ಕಾಡು, ಮ್ಯೂಸಿಯಂಗಳನ್ನು ನೋಡುವಾಗ ಆ ಕ್ಷಣದಲ್ಲಿ ಬದುಕಿನ ಸಮಸ್ಯೆಗಳಿಂದ ಮನಸ್ಸು-ಬುದ್ಧಿಗಳು ತಾವೂ ‘ಪ್ರವಾಸ’ ಮಾಡಿ ಸಮಸ್ಯೆಗಳನ್ನು ಮರೆಯುತ್ತವೆ. ಶಾಂತವಾದ ಮನಸ್ಸು-ಬುದ್ಧಿಗೆ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭವಾಗುತ್ತದೆ. ಈ ಅಂಶಗಳನ್ನು ಮನೋವೈಜ್ಞಾನಿಕ ಅಧ್ಯಯನಗಳು ಸ್ಪಷ್ಟಪಡಿಸಿವೆ. ಅಷ್ಟೇ ಅಲ್ಲ, ಒಂದೊಮ್ಮೆ ದೈಹಿಕವಾಗಿ ಪ್ರವಾಸ ಮಾಡುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿ (ಉದಾ: ವಿವಿಧ ಆರೋಗ್ಯ ಸಮಸ್ಯೆಗಳು, ಕೋವಿಡ್‍ನಂತಹ ಸಂಚಾರ ನಿರ್ಬಂಧಗಳ ಸನ್ನಿವೇಶ) ಹಿಂದಿನ ಪ್ರವಾಸದ ಅನುಭವಗಳನ್ನು ಮೆಲುಕು ಹಾಕುವುದು, ಪ್ರವಾಸ ಕಥನಗಳನ್ನು ಓದುವುದು, ಇತರರ ಅನುಭವಗಳನ್ನು ಕೇಳುವುದು ಆರೋಗ್ಯಕ್ಕೆ ಒಂದು ಉಪಯುಕ್ತ ಚಟುವಟಿಕೆಯಾಗಬಲ್ಲದು.

ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಅವಕಾಶಗಳನ್ನು ಪ್ರವಾಸ ವಿಪುಲವಾಗಿ ನೀಡುತ್ತದೆ ಎಂಬುದು ಗಮನಾರ್ಹ. ಅಂದರೆ ಪ್ರವಾಸ ಎಂಬುದು ‘ವೈಭವ’ ಎನ್ನುವುದಕ್ಕಿಂತ ಅದು ಆರೋಗ್ಯದ ಅವಶ್ಯಕತೆಯೂ ಹೌದು. ಉದ್ಯಾನದಲ್ಲಿ ಹೂ ಬಿಟ್ಟಿರುವ ಗಿಡವನ್ನು ಗಮನಿಸುವ ವ್ಯವಧಾನವನ್ನು ಪ್ರವಾಸ ನೀಡುತ್ತದೆ. ಪ್ರತಿನಿತ್ಯ ನಮ್ಮಲ್ಲಿ ಏನೂ ಇಲ್ಲ ಎಂಬ ಬಗ್ಗೆಯೇ ಚಿಂತಿಸುವ ನಮಗೆ ‘ನಮ್ಮಲ್ಲಿ ಏನೆಲ್ಲ ಇದೆ, ನಾವು ಬದುಕುತ್ತಿದ್ದೇವೆ’ ಎಂಬ ಸತ್ಯದ ಅರಿವು ಮೂಡಿಸುವ ಅವಕಾಶ ದೊರೆಯುತ್ತದೆ. ನಾವು ಪ್ರವಾಸ ಮಾಡಿದಾಗ ಅಲ್ಲಿಯ ಪರಿಸರದ ಮೇಲೆ, ಪ್ರವಾಸದ ತಾಣದಲ್ಲಿರುವ ಜನರ ಬದುಕಿನ ಮೇಲೂ ನಮ್ಮ ಪ್ರವಾಸದ ಪರಿಣಾಮವನ್ನು ಉಳಿಸಿಬಿಡಬಹುದು ಎಂಬ ಅರಿವು ಅಗತ್ಯ.

ಪ್ಲಾಸ್ಟಿಕ್ ನಿಷೇಧವಿದ್ದರೂ ಪ್ಲಾಸ್ಟಿಕ್ ಎಸೆಯುವುದು, ಪ್ಲಾಸ್ಟಿಕ್ ಬಾಟಲಿಯಲ್ಲೇ ನೀರು ಕುಡಿದು ಬಿಸಾಡುವುದು, ನೀರನ್ನು ವ್ಯರ್ಥ ಮಾಡುವುದು, ಕಸ ಎಲ್ಲೆಂದರಲ್ಲಿ ಎಸೆಯುವುದು, ಉಗುಳುವುದು... ಇವೆಲ್ಲ ಎಂತಹ ವಿದ್ಯಾವಂತ ನಾಗರಿಕರೂ ಮಾಡುವುದನ್ನು ನಾವು ನೋಡಬಲ್ಲೆವು. ಇದರ ನೇರ ಪರಿಣಾಮ ಪರಿಸರದ ಹಾಳುಗೆಡುವಿಕೆ, ಜಾಗತಿಕ ತಾಪಮಾನದ ಏರುವಿಕೆ.

‘ಪ್ರವಾಸೋದ್ಯಮ ಮತ್ತು ಹಸಿರು ಬಂಡವಾಳ’ ಎಂಬ ಈ ಬಾರಿಯ ಧ್ಯೇಯವಾಕ್ಯವನ್ನು ನಿಜವಾಗಿಸಲು ಬೇಕಾದದ್ದು ಮತ್ತೆ ಪರಿಸರವನ್ನು ಬದ್ಧತೆ, ನಿಷ್ಠೆ, ಅರಿವಿನಿಂದ ಕಾಯ್ದುಕೊಳ್ಳುವ ಪ್ರವಾಸಿ ಮನಸ್ಸುಗಳೇ. ನಾವು ಪರಿಸರ ಪ್ರಜ್ಞೆಯನ್ನು ಪ್ರವಾಸದಲ್ಲಿ ಕಾಯ್ದುಕೊಂಡು, ಪಾಲಿಸಿ, ಮಕ್ಕಳಿಗೆ ಮಾದರಿಯಾಗಬೇಕು. ಸ್ಥಿರ ಪ್ರವಾಸೋದ್ಯಮದ ಕನಸನ್ನು ಸಾಧ್ಯವಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT