ಸೋಮವಾರ, ಆಗಸ್ಟ್ 15, 2022
25 °C

ಚುರುಮುರಿ: ಶತಕದ ಓಟ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ಮೊದಲು ‘ಪಿ’ ಶತಕ ಬಾರಿಸಿದರೆ, ನಾನೇನು ಕಡಿಮೆ ಎಂಬಂತೆ ಆಟವಾಡಿದ ‘ಡಿ’ಯಿಂದ ಇದೀಗ ಒಂದು ಅದ್ಭುತ ಕೈಚಳಕದ ಶತಕ, ಇಬ್ಬರ ಜೊತೆಯಾಟದಲ್ಲಿ ಶತಕದ ನಂತರ ಫೋರ್ ಯಾರು ಬಾರಿಸುವವರೆಂದು ಪ್ರೇಕ್ಷಕರು ಕಾಯುತ್ತಿದ್ದಾರೆ... ಇವರಿಗೆ ಸಡ್ಡು ಹೊಡೆಯುವಂತೆ ‘ಎ’ ತಂಡದ ಎಲ್ಲ ಸದಸ್ಯರೂ ದ್ವಿಶತಕದತ್ತ ಮುನ್ನಡೆದಿದ್ದಾರೆ. ಎಲ್ಲೆಡೆ ಶತಕದ ಸಿಡಿತ... ಪ್ರಗತಿಯತ್ತ ದಾಪುಗಾಲು’ ಬೆಕ್ಕಣ್ಣ ಭಲೇ ಖುಷಿಯಿಂದ ಕ್ರಿಕೆಟ್ ಕಾಮೆಂಟರಿ ವದರುತ್ತಿತ್ತು.

‘ಯಾರಲೇ ಅದು ಪಿ, ಡಿ, ಎ... ಈಗೆಲ್ಲಿ ಕ್ರಿಕೆಟ್ ಶುರುವಾಗೈತಿ’ ಎಂದೆ.

‘ಇದು ಪಿಆರ್ ಕ್ರಿಕೆಟ್, ಅಂದ್ರ ಪ್ರೈಸ್ ರೈಸ್, ಬೆಲೆಯೇರಿಕೆ ಕ್ರಿಕೆಟ್. ಪಿ ಅಂದ್ರ ಪೆಟ್ರೋಲ್, ಡಿ ಅಂದ್ರ ಡೀಸೆಲ್, ಎ ಅಂದ್ರೆ ಅಡುಗೆ ಎಣ್ಣೆ’ ಮುದದಿಂದ ವಿವರಿಸಿತು.

‘ಸಾಮಾನು ತಗಳೂ ಮುಂದ ನಮಗೆ ಕಣ್ಣೀರು ಕಪಾಳಕ್ಕೆ ಬರತೈತಿ, ನೀ ಎಷ್ಟ್ ಖುಷಿಯಾಗೀಯಲ್ಲ. ಪೆಟ್ರೋಲು, ಡೀಸೆಲು ಇಷ್ಟು ತುಟ್ಟಿಯಾದ್ರ ಮಂದಿ ಅಡ್ಡಾಡೂದು ಹೆಂಗ? ಬೋಂಡಾ, ಬಜ್ಜಿ ಬಿಡು, ವಗ್ಗರಣೆಗೆ ಎಣ್ಣೆ ಹಾಕೂದು ಬಿಡಬೇಕೇನು?’

ಬೆಕ್ಕಣ್ಣ ನಡುವೆಯೇ ಬಾಯಿ ಹಾಕಿ ವಾದಿಸತೊಡಗಿತು. ‘ಡಾಕ್ಟ್ರು, ಸರ್ಕಾರ ಎಷ್ಟ್ ಬಡಕೊಂಡ್ರೂ ಮಂದಿ ಸುಮ್ಸುಮ್ನೆ ಅಡ್ಡಾಡತಿದ್ರು, ಹಿಂಗಾದ್ರ ಕೊರೊನಾ ಕಂಟ್ರೋಲು ಮಾಡೂದು ಹೆಂಗ? ಪೆಟ್ರೋಲು, ಡೀಸೆಲು ತುಟ್ಟಿ ಮಾಡಿದ್ರ, ಕೈಗೆ, ಕಾಲಿಗೆ ಬಿಸಿ ತಾಗತೈತಿ. ಅಡುಗೆ ಎಣ್ಣೆ ಕಡಿಮೆ ತಿಂದ್ರನೇ ವಳ್ಳೇದು. ಕೊಬ್ಬು ಹೃದಯಕ್ಕೆ ವಳ್ಳೇದಲ್ಲ ಅಂತ ಡಾಕ್ಟ್ರು ಹೇಳತಾರ’.

‘ಬ್ಯಾಳೆಕಾಳು ಬೆಲೆನೂ ಹೆಚ್ಚಾಗೈತಿ. ಅವನ್ನೂ ತಿನ್ನೂದು ಬಿಟ್ಟು ಬರೀ ಗಾಳಿ ಕುಡಕೊಂಡು ಬದುಕಬೇಕೇನಲೇ?’

‘ಬ್ಯಾಳೆಕಾಳು ಬೆಳೆದ ರೈತರಿಗೆ, ಹೊಲದಾಗೆ ದುಡಿಯೋವ್ರಿಗಿ ಕೈತುಂಬ ರೊಕ್ಕ ಸಿಗತದಲ್ಲ. ತೆರಿಗೆ ರೊಕ್ಕ ದೇಶಕ್ಕೆ ಹೋಗತೈತಿ, ಅಷ್ಟರ ರಾಷ್ಟ್ರಭಕ್ತಿ ಬ್ಯಾಡೇನು?’

‘ಸರಿ, ಹಂಗಾರೆ ಈ ಸಲ ಕರೆಂಟು ಬಿಲ್ ನೀ ಕಟ್ಟು’ ಎಂದು ಬಿಲ್ ಕೈಗಿಟ್ಟೆ.

ಬಿಲ್ ಮುಟ್ಟಿದ್ದೇ ಶಾಕ್ ಹೊಡೆಸಿಕೊಂಡು ತೆಪ್ಪಗಾಯಿತು ಬೆಕ್ಕಣ್ಣ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.