ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಕ್ಕಣ್ಣನ ಪಾದಯಾತ್ರೆ

Last Updated 16 ಜನವರಿ 2022, 19:31 IST
ಅಕ್ಷರ ಗಾತ್ರ

‘ಆನ್‌ಲೈನಿನಾಗೆ ಗಣವೇಷ ಸಿಕ್ಕರೆ ಆರ್ಡರು ಮಾಡು’ ಎಂದು ಬೆಕ್ಕಣ್ಣ ಹೇಳಿದಾಗ ಗಾಬರಿಬಿದ್ದೆ.

‘ಕಲಬುರುಗಿವಳಗ ಕಮಲಕ್ಕನ ಮೂಲಮನಿಯವರು ಅದೇನೋ ಶಾಖಾ ಕಾರ್ಯಕ್ರಮ ಮಾಡಿದರಂತ. ವರದಿ ಮಾಡಾಕೆ ಹೋದ ಪೇಪರಿನವ್ರಿಗಿ ಗಣವೇಷ ಹಾಕ್ಯಂಡರಷ್ಟೇ ವಳಗ ಬಿಡತೀವಿ ಅಂದ್ರಂತ. ಅವ್ರು ಇಲ್ಲೇನಾರ ಸಭೆ ನಡೆಸಿದ್ರ, ನಾ ವರದಿ ಮಾಡಾಕೆ ಹೋಗೂಮುಂದ ಬೇಕಾಗತೈತಿ’ ಎಂದಿತು.

‘ಮಂಗ್ಯಾನಂಥವನೇ... ನಿನ್ನ ಎದಕ್ಕ ಕರೀತಾರ’ ಎಂದು ಬೈದೆ.

‘ಕ್ಷಣ ಚಿತ್ತ, ಕ್ಷಣ ಪಿತ್ತ’ ಎಂಬಂತಿರುವ ಬೆಕ್ಕಣ್ಣ ಮರುಕ್ಷಣದಲ್ಲಿ ‘ನಾ ರಾಮನಗರದಿಂದ ಡಿಕೇಶಣ್ಣನ ಪಾದಯಾತ್ರೆಗೆ ಸೇರೂಣೂ ಅಂದ್ಕಂಡಿದ್ದೆ, ಅಷ್ಟರಾಗೆ ನಿಲ್ಲಿಸಿಬಿಟ್ಟರು’ ಎಂದು ಬೇಜಾರಿನಿಂದ ಹೇಳಿತು.

‘ಮುಗಿದಮ್ಯಾಗೆ ಹೇಳತೀಯಲ್ಲ... ಮೊದಲೇ ಹ್ವಾಗಬೇಕಿತ್ತು’ ಎಂದು ಮೊಟಕಿದೆ. ‘ಕಮಲಕ್ಕನ ಮನಿಯವರೇ ಮೇಕೆದಾಟು ದಾಟಾಕೆ ಆಗದಂಗೆ ಮಾಡ್ಯಾರೆ. ಅವರೇ ಎಲ್ಲಾದಕ್ಕೆ ಅಡ್ಡಗಾಲು ಅಂತ ಕೈಮಂದಿ ಪೇಪರಿನಾಗೆ ಬರದ್ರು. ಅದೆಲ್ಲ ಸುಳ್ಳು, ನಾವೇ ಯೋಜನೆ ಮುಂದುವರೆಸೀವಿ, ತಾವು ಕುರ್ಚಿವಳಗ ಕುತ್ತಾಗ ಏನೂ ಮಾಡಿಲ್ಲ, ಈಗ ಜನರ ಕಣ್ಣಾಗೆ ಮಂಕುಬೂದಿ ಹಾಕಾಕೆ ಪಾದಯಾತ್ರೆ ನಡೆಸ್ಯಾರಂತ ಕಮಲಕ್ಕನ ಮನಿಯವರು ಇಷ್ಟುದ್ದ ಉತ್ತರ ಕೊಟ್ಟರು. ನಾ ಹೋಗೂ ಮದ್ಲು ಅದ್ರ ಬಗ್ಗೆ ತಿಳಕೋಬೇಕಂತ ಓದತಿದ್ದೆ...’ ಬೆಕ್ಕಣ್ಣ ರಾಗವೆಳೆಯಿತು.

‘ಕಾರ್ಖಾನೆಗಳ ತ್ಯಾಜ್ಯ, ಚರಂಡಿ ನೀರು, ಹತ್ತಾರು ರಾಸಾಯನಿಕಗಳೆಲ್ಲ ಸೇರಿ ಕಾವೇರಮ್ಮ ಬಸವಳಿದಾಳ, ಅರಣ್ಯ ನಾಶ ಆಗತೈತಿ, ಮೇಕೆದಾಟು ಬ್ಯಾಡಂತ ಪರಿಸರ ತಜ್ಞರು ಹೇಳ್ಯಾರ, ಮತ್ತ ಅದನ್ನ ಓದಲಿಲ್ಲೇನು?’

‘ಪರಿಸರ ತಜ್ಞರಿಗೆ ಸರ್ಕಾರ ಉತ್ತರ ಕೊಡತೈತಿ, ನಾವು ಶ್ರೀಸಾಮಾನ್ಯರು ಎದಕ್ಕ ಓದೂಣೂ’ ಅಸಡ್ಡೆಯಿಂದ ಹೇಳಿದ ಬೆಕ್ಕಣ್ಣ ಮರುಕ್ಷಣವೇ ‘ನಾ ಜಾರ್ಕಂಡದ ಜಮ್ತಾರಕ್ಕೆ ಹೋಕ್ಕೀನಿ. ಅಲ್ಲಿ ರಸ್ತೆಗಳನ್ನ ಕಂಗನಾಳ ಕೆನ್ನೆ ಹಂಗೆ ಮಾಡತೀನಂತ ಶಾಸಕರು ಹೇಳ್ಯಾರ. ನುಣುಪು ಕೆನ್ನೆಯಂತಹ ರಸ್ತೆಗಳಿರೋದು ಕ್ಯಾಟ್‌ವಾಕ್ ಮಾಡಕೆ ಅಲ್ಲೇನು... ಪಾದಯಾತ್ರೆ ಅಲ್ಲೇ ಮಾಡತೀನಿ’ ಎಂದು ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT