ಶನಿವಾರ, ಸೆಪ್ಟೆಂಬರ್ 25, 2021
29 °C

ಚುರುಮುರಿ: ಕುರ್ಚಿ ಕಗ್ಗ!

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಅಲ್ಲಾ ಸಾ, ಮೋದಿ ಕೊನೆಗೂ ರಾಜಾವುಲಿ ಕೈಲಿ ರಾಜೀನಾಮೆ ಕೊಡಿಸೇಬುಡ್ತಲ್ಲ. ಕರ್ನಾಟಕದೇಲಿ ಮುಂದ್ಲಾರು ಕಟ್ಟಕೆ ಈಗ ಹೊಸ ಕುಳ ಬಂದೈತೆ’ ಅಂದೆ.

‘ಹೈಕಮಾಂಡ್ ಹೇಳಿದ್ರೆ ನಾನು ಮುಖ್ಯಮಂತ್ರಿ ಹೊಣೆ ಹೊರ್ತಿದ್ದೆ’ ತುರೇಮಣೆ ಘೋಷಣೆ ಮಾಡಿದರು. ‘ಅದ್ಯಾಕೆ ಹಂಗೆ ನುಲೀತಿದ್ದರಿ. ನೀವ್ಯಾವ ದೊಣೆನಾಯಕ ಅಂತ ನಿಮ್ಮುನ್ನ ಮುಖ್ಯಮಂತ್ರಿ ಮಾಡ್ಯಾರು ಸಾ’ ತುರೇಮಣೆ ಕಾಲೆಳೆದೆ.

‘ನೋಡಿರ‍್ಲಾ, ಸಿಎಂ ಪಟ್ಟೀಲಿ ಕಾಣಿಸಿಕೊಂಡಿದ್ದ ಕೆಲವರಿಗಿಂತ ನಾನೇನೂ ಕಮ್ಮಿ ಇಲ್ಲ. ನನಗಿನ್ನೂ 20 ವರ್ಸ ದುಡಿಯೋ ತಾಕತ್ತದೆ’ ಅಂದ ತುರೇಮಣೆ ಮಾತಿಗೆ ಯಾರೂ ಕ್ಯಾರೇ ಅನ್ನಲಿಲ್ಲ.

‘ರಾಜಾವುಲಿ ಮಾತಾಡಿಸಿಕ್ಯ ಬರಮು ಬನ್ನಿ ಸಾ’ ಅಂತಂದು ಅವುರ ಮನೆ ತಕ್ಕೋದ್ರೆ ಬಾಗಿಲಿಗೆ ದೊಡ್ಡ ಬೀಗ ಜಡಿದಿದ್ದರು. ಒಳಗೆ ಯಾರೋ ನರಳೋ ಸದ್ದು ಕೇಳ್ತಿತ್ತು. ರಾಜಾವುಲಿಗೆ ಕಾವೇರಿರಬೇಕು ಅಂತ ಗುಮಾನೀಲಿ ಮನೆ ಒಳಕ್ಕೆ ಇಣುಕಿ ನೋಡಿದರೆ ಸಿಎಂ ಕುರ್ಚಿ ಕಡದು- ಬಳದಿಗೆ ಉಂಟಾಡಿಕ್ಯಂಡು ಮುರುದೋಗಿ ನರಳ್ತಿತ್ತು.

‘ನೋಡಿರ‍್ಲಾ, ನಾನೂವೆ ಎಷ್ಟು ಜನದ ಜೊತೆಗೆ ಕೂಡಿಕೆ ಮಾಡಿಕ್ಯಳನ. ಒಬ್ಬರ ಜೊತೆಗೂ ನೆಟ್ಟಗೆ ಐದೊರ್ಸ ಒಗೆತನ ಮಾಡಕ್ಕಾಗಿಲ್ಲ. ಕೋವಿಡ್ಡು ಬಿಕ್ಕಟ್ಟಲ್ಲಿ ಏದುಸಿರು ಬುಡ್ತಿದ್ದೀನಿ’ ಅಂತು ಕುರ್ಚಿ ನಮ್ಮ ನೋಡಿದೇಟಿಗೆ.

‘ಇಲ್ಲಿ ಯಾವುದೂ ಊರ್ಜಿತವಲ್ಲ ಕನಪ್ಪಾ, ಒತ್ಲಿಸಿ ಬೆನ್ನಿಗೆ ಚೂರಿ ಹಾಕದೇ ರಾಜಕೀಯ. ಜೀವನವೇ ಅಗ್ನಿಪರೀಕ್ಷೆ. ರಿಜಲ್ಟು ಈಗ ಬಂದದೆ’ ಅಂತ ಒಗ್ರಣೆ ಹಾಕಿತು ಯಂಟಪ್ಪಣ್ಣ.

‘ಕುರ್ಚಿಯಣ್ಣ, ಈಗ ರಾಜಾವುಲಿ ಮಾಜಿಯಾದ ಮ್ಯಾಲೆ ಯಂಗೆ ಟೈಂ ಕಳಿತದೆ?’ ಚಂದ್ರು ಕೇಳಿದ.

‘ಅಯ್ ಬುಡಿ, ಡೆಲ್ಲಿಯೋರು ಅವರವರೆ ರಾಜಿಕಬೂಲು ಮಾಡಿಕ್ಯಂಡ್ರೇನಂತೆ, ನಾನು
ಸಕ್ರಿಯವಾಗಿರ್ತೀನಿ ಅಂತ ರಾಜಾವುಲಿ ಯೇಳಿಲ್ವಾ. ರಾಜಾವುಲಿ ಬುಟ್ಟು ವಸಾ ಸಿಎಂ ಬದುಕು ಮಾಡಕಾದದೇ’ ಕುರ್ಚಿ ಕಗ್ಗ ಕೇಳಿ ನಾವು ದಂಗಾಗಿದ್ದೋ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.