ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮೇಲ್ಮನೆ ಮೇಲಾಟ

Last Updated 30 ನವೆಂಬರ್ 2021, 19:30 IST
ಅಕ್ಷರ ಗಾತ್ರ

‘ಕೊರೊನಾ ಸೋಂಕಿನ ಹಳೆ ತಳಿಯ ಅವಾಂತರವೇ ಮುಗಿದಿಲ್ಲ, ಈಗ ಹೊಸ ತಳಿ ದಾಳಿಗೆ ಕಾಯ್ತಿದೆಯಂತೆ. ಇನ್ನೇನು ಗ್ರಹಚಾರ ಕಾದಿದೆಯೋ...’ ಸುಮಿ ಕಳವಳಗೊಂಡಳು.

‘ಪಾಪ, ಕಾಯಿಲೆಗಳಿಗೆ ನಮ್ಮನ್ನು ಬಿಟ್ಟರೆ ಇನ್ನಾರು ದಿಕ್ಕು? ನೆಂಟರು ಬಂದಂತೆ ಕಾಯಿಲೆಗಳೂ ಬರುತ್ತಿರುತ್ತವೆ. ಬರಬಾರದು ಅಂತ ಮನೆಬಾಗಿಲು ಹಾಕಿ ಅವಾಯ್ಡ್ ಮಾಡಲಾಗುತ್ತಾ?’ ಎಂದ ಶಂಕ್ರಿ.

‘ದೇವರಿಗೆ ಹರಕೆ ಮಾಡಿಕೊಂಡ್ರೆ, ಕಷಾಯ ಕುಡಿದ್ರೆ ಜ್ವರ, ಕೆಮ್ಮು, ನೆಗಡಿಯಂಥ ಫ್ಯಾಮಿಲಿ ಕಾಯಿಲೆಗಳು ವಾಸಿಯಾಗುತ್ತವೆ. ಫಾರಿನ್ ಕಾಯಿಲೆಗಳು ದೇವರು-ದಿಂಡರು, ಕಷಾಯಕ್ಕೆ ಕೇರ್ ಮಾಡಲ್ಲ’.

‘ಮಕ್ಕಳಿಗೆ ಪರೀಕ್ಷಾ ಜ್ವರ, ರಾಜಕಾರಣಿಗಳಿಗೆ ಎಲೆಕ್ಷನ್ ಜ್ವರ ಅನ್ನುವ ಸೀಜನ್ ಕಾಯಿಲೆಗಳೂ ನಮ್ಮಲ್ಲಿವೆ’.

‘ಹೌದೂರೀ, ಚುನಾವಣೆ ಟೈಂನಲ್ಲಿ ಕಾಂಗ್ರೆಸ್‍ನವರಿಗೆ ಜೆಡಿಎಸ್ ಜ್ವರ ಶುರುವಾಗುತ್ತೆ. ಜ್ವರ ಬಾಧೆಯ ಕಾಂಗ್ರೆಸ್ ನಾಯಕರಲ್ಲಿ ತಿಂದದ್ದು ಜೀರ್ಣ ಆಗೋಲ್ಲ, ಕಣ್ಣಿಗೆ ನಿದ್ದೆ ಹತ್ತೋಲ್ಲ ಅಂತ ಕುಮಾರಣ್ಣ ರೋಗಲಕ್ಷಣ ವಿವರಿಸಿದ್ದಾರೆ’.

‘ಮೇಲ್ಮನೆ ಚುನಾವಣೆಯಲ್ಲೂ ನಾಯಕರ ಬೈದಾಟದ ಕಾಯಿಲೆ ಮುಂದುವರಿದಿದೆ. ಈ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಕುಟುಂಬದ ಸದಸ್ಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಕುಟುಂಬ ಕಲ್ಯಾಣಕ್ಕೆ ಆದ್ಯತೆ ನೀಡಿದ್ದಾವಂತೆ’.

‘ಸಮರ್ಥ ಅಭ್ಯರ್ಥಿಗಳು ಸಿಗದಿದ್ದಾಗ ನಾಯಕರು ತಮ್ಮ ಕುಟುಂಬದ ಸಾಮರ್ಥ್ಯವನ್ನೇ ಚುನಾವಣೆಯಲ್ಲಿ ಪಣಕ್ಕಿಡಬೇಕಾಗುತ್ತದೆ’.

‘ಸ್ಥಳೀಯ ಸಂಸ್ಥೆಗಳಲ್ಲಿ ಫಿಫ್ಟಿ ಪರ್ಸೆಂಟ್ ಮಹಿಳಾ ಮತದಾರರಿದ್ದರೂ ರಾಜಕೀಯ ಪಕ್ಷಗಳು ಫೀಮೇಲ್ ಅಭ್ಯರ್ಥಿಗಳನ್ನು ಕಡೆಗಣಿಸಿ, ಮೇಲ್ ಕ್ಯಾಂಡಿಡೇಟ್‍ಗಳಿಗೆ ಅವಕಾಶ ನೀಡಿ ಮೇಲ್ಮನೆಯನ್ನು ಮೇಲ್ ಮನೆ ಮಾಡಲು ಹೊರಟಿವೆ ಅನ್ನೋದು ನನ್ನ ಆಕ್ಷೇಪ’.

‘ಮೇಲ್ಮನೆ ಮೆಟ್ಟಿಲು ಹತ್ತುವುದು ಮಹಿಳೆ ಯರಿಗೆ ಕಷ್ಟ ಆಗಬಹುದು ಅಂತ ಹೀಗೆ ಮಾಡಿರ ಬಹುದು’.

‘ನಿಜಾರೀ, ಹಿಮಾಲಯ ಪರ್ವತ ಹತ್ತಿರುವ ಮಹಿಳೆಯರಿಗೆ ಮೇಲ್ಮನೆ ಹತ್ತೋದು ಕಷ್ಟ ಆಗಿಬಿಟ್ಟಿದೆ...’ ಎಂದು ಸುಮಿ ಸಿಡುಕಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT