ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೋಳಿ ಜಗಳ

Last Updated 21 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ದಾಂಪತ್ಯ ಕಲಹವಾಗಿ ಕೋಳಿ ಮುನಿಸಿಕೊಂಡು ಮಲಗಿತ್ತು. ‘ಸಾರಿ, ತಪ್ಪಾಯ್ತು, ಇನ್ಮೇಲೆ ಬೈಯ್ಯಲ್ಲ...’ ಎಂದು ಕೋಳಿಯನ್ನು ಹುಂಜ ರಮಿಸಿತು.

‘ನನ್ನ ಜೊತೆ ಮಾತನಾಡಬೇಡ...’ ಕೋಳಿ ಕೆರಳಿತು.

‘ನಿನ್ನ ಮೊಟ್ಟೆ ಶಾಲೆಗಳಲ್ಲಿ ವಿವಾದ ಉಂಟು ಮಾಡಿದೆ. ಆ ಬೇಸರದಿಂದ ಬೈದೆ, ಸಾರಿ ಚಿನ್ನಾ... ಮಾತು ಮನೆ ಕೆಡಿಸಿತು, ಮೊಟ್ಟೆ ಶಾಲೆ ಕೆಡಿಸಿತು ಅನ್ನೋ ಕೆಟ್ಟ ಹೆಸರು ನಮಗೇಕೆ?’ ಇರೋ ಪರಿಸ್ಥಿತಿ ಹೇಳಿತು ಹುಂಜ.

‘ಹೌದು ಕಣ್ರೀ... ನನ್ನದೇ ತಪ್ಪು, ಹಾಗಂತ ನಾನು ಮೊಟ್ಟೆ ಇಡುವುದು ಬೇಡ್ವಾ? ಡೈರೆಕ್ಟಾಗಿ ಮರಿ ಹೆರುವ ಭಾಗ್ಯವೂ ನನಗಿಲ್ಲವಲ್ಲ’ ಕೋಳಿಗೆ ದುಃಖ.

‘ಮೊಟ್ಟೆಗಳನ್ನು ಮನುಷ್ಯರೇ ತಿಂದು ಮುಗಿಸಿದರೆ ನಮ್ಮ ವಂಶ ಬೆಳೆಯೋದು ಹೇಗೆ?’

‘ಹಾಗಂತ ಎಲ್ಲಾ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಿ, ಅಷ್ಟೂ ಮರಿಗಳಿಗೆ ಕಾಳುಕಡ್ಡಿ ಹೊಂಚಿ, ಸಾಕಿ ಬೆಳೆಸುವ ಕಷ್ಟ ನನಗೆ ಗೊತ್ತು. ಬೆಳಿಗ್ಗೆ ಕೂಗುವುದು ಬಿಟ್ಟರೆ ನಿನಗೆ ಮಕ್ಕಳುಮರಿ ಬಗ್ಗೆ ಜವಾಬ್ದಾರಿ ಇಲ್ಲ...’ ಕೋಳಿ ರೇಗಿತು.

‘ಈ ಮನುಷ್ಯರು ನಮ್ಮ ಮೊಟ್ಟೆ ನಂಬಿ ಕೊಂಡಿದ್ದಾರೆ. ಬೇಕೂಂದ್ರೆ ಅವರೇ ಮೊಟ್ಟೆ ಇಟ್ಟು ಮಕ್ಕಳಿಗೆ ಹಂಚಲಿ...’ ಹುಂಜ ಗೊಣಗಿ ಕೊಂಡಿತು.

‘ಮೊಟ್ಟೆ ಇಡುವುದೂ ಬೇಡ, ಅದರ ವಿವಾದವೂ ಬೇಡ ಅಂತ ವೆಟರ್ನರಿ ಡಾಕ್ಟರ್ ಹತ್ರ ಹೋಗಿ ನಾನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಅಂದುಕೊಂಡಿದ್ದೀನಿ...’ ಕೋಳಿ ಸಂಕಟ ಹೇಳಿಕೊಂಡಿತು.

‘ಹಾಗೆಲ್ಲಾ ಮಾಡಬೇಡ. ಶಕ್ತ್ಯಾನುಸಾರ ಮೊಟ್ಟೆ ಇಡು. ಮಕ್ಕಳು ಮೊಟ್ಟೆ ತಿಂದು ಕೊಂಡಿರಲಿ, ಮೊಟ್ಟೆ ಇಲ್ಲ ಅಂದ್ರೆ ಕೋಳಿ ಮಾಂಸ ಬೇಕು ಅಂತ ಮಕ್ಕಳು ಹಟ ಮಾಡಿದ್ರೆ ನಮಗೆ ಉಳಿಗಾಲವಿಲ್ಲ...’ ಹುಂಜ ಗಾಬರಿಯಾಯಿತು.

‘ಅಯ್ಯೋ ಬಿಡ್ರಿ, ಎಷ್ಟು ಮೊಟ್ಟೆ ಕೊಟ್ಟರೂ ಜನ ನಮಗೆ ಚೂರಿ ಹಾಕೋದನ್ನು ಬಿಡೋಲ್ಲ...’ ಕೋಳಿ ಮಗ್ಗುಲಿಗೆ ತಿರುಗಿ ಮಲಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT