ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಉತ್ತರ ಗೊತ್ತಿದ್ದಾಗ…

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಏ, ನೋಡಿಲ್ಲಿ… ಇಡೀ ದೇಶದಾಗೆ ನಮ್‌ ಕರುನಾಡು ಮೂರನೇ ಸ್ಥಾನದಾಗೆ ಐತಿ’ ಬೆಕ್ಕಣ್ಣ ಖುಷಿಯಿಂದ ಹೆಡ್‌ಲೈನ್‌ ಓದಿತು. ಆಮೇಲೆ ಸುದ್ದಿ ಓದುತ್ತಿದ್ದಂತೆ, ‘ಛೆ… ನೀವು ಕನ್ನಡಿಗರು ಏನೋ ಸಾಧನೆ ಮಾಡೀರಿ ಅಂತ ನಾ ಖುಷಿಯಾದೆ, ನೋಡಿದರೆ ಮಹಿಳೆಯರನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ದೌರ್ಜನ್ಯ ಎಸಗಿದ ಪ್ರಕರಣಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನವಂತೆ’ ಎಂದು ನನ್ನ ಮೂತಿಗೆ ತಿವಿಯಿತು. ನಾನು ತ್ತೆತ್ತೆಬ್ಬೆಬ್ಬೆ ಗುಟ್ಟಿದೆ.

‘ನಮ್ಮ ರಾಜ್ಯವನ್ನು ಯೋಗಿ ಮಾದರಿ ರಾಜ್ಯ ಮಾಡತೀವಿ ಅಂತಿದ್ದರಲ್ಲ, ಈ ವಿಚಾರದಾಗೆ ಹಂಗೇ ಆದಂಗೆ ಕಾಣತೈತಿ. ಮೊದಲ ಸ್ಥಾನದಾಗೆ ಉತ್ತರಪ್ರದೇಶ, ಮೂರನೇ ಸ್ಥಾನದಾಗೆ ನಾವು ಅದೀವಿ’ ಎಂದೆ ನಾನು ಬೇಸರದಿಂದ.

‘ಯಾರಿಗೆ ಯಾರು ಮಾದರಿಯೋ’ ಎಂದು ಹಣೆ ಚಚ್ಚಿಕೊಂಡಿತು.

‘ಅದಿರಲಿ, ಮೊನ್ನೆ ಸಂಸತ್ತಿಗೆ ನುಗ್ಗಿ ದಾಂದಲೆ ಮಾಡಿದವ್ರಲ್ಲಿ ಒಬ್ಬನಿಗೆ ನಿಮ್ಮ ಪ್ರತಾಪಣ್ಣನೇ ಪಾಸ್‌ ಕೊಡಿಸಿದ್ದನಂತೆ’ ಮಾತು ಬದಲಿಸಿದೆ.

‘ಪ್ರತಾಪಣ್ಣನ ಹತ್ತಿರ ಅವನನ್ನು ಕಳಿಸಿದವರು ಎಡಬಿಡಂಗಿಗಳಿರಬೇಕು ಅಥವಾ ಕಾಂಗಿಗಳೇ ಇರಬಕು. ಪಾಸ್‌ ಕೊಡಿಸಿದ ಮಾತ್ರಕ್ಕೇ ಪ್ರತಾಪಣ್ಣನ ರಾಷ್ಟ್ರಭಕ್ತಿನ ಪ್ರಶ್ನೆ ಮಾಡೂದೇನು’ ಬೆಕ್ಕಣ್ಣ ಗುರುಗುಟ್ಟಿತು.

‘ಮಹುವಾ ಪಾಸ್‌ವರ್ಡ್‌ ಕೊಟ್ಟಾಳೆ ಅಂತ ಆಕಿನ್ನ ಉಚ್ಚಾಟನೆ ಮಾಡಿದ್ರು, ಮತ್ತ ಇಂವಾ ಪಾಸ್‌ ಕೊಡಿಸಿದರೆ ಅಡ್ಡಿಲ್ಲೇನು?’

‘ಪಾಸ್‌ ಕೊಡೂದಕ್ಕೂ ಪಾಸ್‌ವರ್ಡನ್ನೇ ಕೊಡೋದಕ್ಕೂ ಅಜಗಜಾಂತರ ಐತಿ. ಪಾಸ್‌ವರ್ಡ್‌ ಕೊಡೂದಂದ್ರೆ ಸಂಸತ್ತಿನ ವರ್ಚುವಲ್‌ ಕೀಲಿಕೈ ಕೊಟ್ಟಂಗೆ’ ಎಂದು ವಿತಂಡವಾದ ಹೂಡಿತು.

‘ಎರಡೂ ಪ್ರಕರಣದಾಗೆ ಮುಖ್ಯ ಪ್ರಶ್ನೆನೇ ತಳ್ಳಿಹಾಕಿದ್ರಲ್ಲ! ಅದಾನಿ ಕುರಿತು ಚಕಾರ ಎತ್ತಂಗಿಲ್ಲ, ನಿರುದ್ಯೋಗ, ಹಣದುಬ್ಬರ, ಮಣಿಪುರ ಹಿಂಸಾಚಾರ ಕುರಿತ ಪ್ರಶ್ನೆಗಳನ್ನೂ ಗಾಳಿಗೆ ತೂರಿದ್ರು’ ಎಂದೆ.

‘ಉತ್ತರ ಗೊತ್ತಿದ್ದಾಗ ಪ್ರಶ್ನೆ ಎದಕ್ಕೆ ಕೇಳಬೇಕು’ ಬೆಕ್ಕಣ್ಣ ಗಹಗಹಿಸಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT