ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನವ ಉಪದೇಶಾಮೃತ

Last Updated 3 ಜನವರಿ 2021, 19:30 IST
ಅಕ್ಷರ ಗಾತ್ರ

ಜನವರಿ ಒಂದರಂದು ಬೆಳ್ಳಂಬೆಳಗ್ಗೆ ಬೆಕ್ಕಣ್ಣ ಘನಗಂಭೀರವಾಗಿ ಕುಳಿತು ಬರೆಯುತ್ತಿತ್ತು. ‘ಹ್ಯಾಪಿ ನ್ಯೂ ಇಯರ್’ ಎಂದರೂ ಹ್ಞಾಂ ಇಲ್ಲ, ಹ್ಞೂಂ ಇಲ್ಲ. ಕುತೂಹಲದಿಂದ ಇಣುಕಿ ನೋಡಿದೆ.

‘ಹೊಸವರ್ಷದ ನವ ಉಪದೇಶಾಮೃತ’ ಎಂಬ ತಲೆಬರಹ ಕಾಣಿಸಿತು.

‘ನೀ ಏನ್ ದೊಡ್ಡ ಶ್ರೀ ಶ್ರೀ ಮಾರ್ಜಾಲಾನಂದ ಸ್ವಾಮಿ ಆಗೀಯೇನು... ನಿನ್ನ ಉಪದೇಶ ಯಾರ್ ಕೇಳ್ತಾರಲೇ’ ಎಂದು ಕಿಚಾಯಿಸಿದೆ.

‘ಓದ್ತೀನಿ ಕೇಳು. ರೀಲ್ ಲೈಫಿನಲ್ಲಿ ಝಾನ್ಸಿರಾಣಿ ಆ್ಯಕ್ಟಿಂಗ್ ಮಾಡಿದೀನಿಂತ ರಿಯಲ್ ಲೈಫಿನಾಗೆ ಟ್ವಿಟರ್ ವೀರಾಗ್ರಣಿ ಆಗೂ ಜರೂರತ್ತಿಲ್ಲ. ಮಂಗ್ಯಾನಂತಾಕಿನೆ, ರೈತಮಹಿಳೆಯರ ಬಗ್ಗೆ ಬಾಯಿಗೆ ಬಂದಂಗ ವದರೂದು ಬಿಟ್ಟು ಒಂದಿನ ಅವ್ರ ಹಂಗೆ ಹೊಲಮನಿಯಾಗ ಕೆಲಸ ಮಾಡು. ಇದು ಕಂಗನಕ್ಕಂಗೆ’.

‘ಅಕ್ಕಿ ಮೇಲಾಸೆ, ನೆಂಟರ ಮ್ಯಾಗೆ ಪ್ರೀತಿ ಅನ್ನೂ ಗಾದೆ ಮಾತು ಕೇಳಾಕೆ ಛಂದ, ಆದರೆ ರಾಜಕೀಯದಾಗೆ ಉಪಯೋಗಕ್ಕೆ ಬರಂಗಿಲ್ಲ. ಅತ್ತಾಗೆ ಮೋದಿ ಮಾಮನ್ನೂ ಓಲೈಸಬಕು, ಇತ್ತಾಗೆ ತೆನೆ ಹೊತ್ತವರೂ ಬೇಕು ಅಂದರ ಕೊನಿಗೆ ಕೈಗೆ ಸಿಗೂದು ಮಿಣಿಮಿಣಿ ಪೌಡ್ರೇ. ಇದು ಕುಮಾರಣ್ಣಂಗೆ’.

‘ನಿಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಮಲಕ್ಕನ ಮನೇಲಿ ಸತ್ತ ನೊಣದ ಕಡೆಗೆ ಬೆಟ್ಟು ಮಾಡೂದನ್ನು ಇನ್ನಾರ ಬಿಡ್ರಿ... ಎಲ್ಲಾರ ಮನಿ ದೋಸೆ ತೂತಾದ್ರೆ ನಿಮ್ಮನೆ ಕಾವಲಿನೇ ತೂತಾಗೈತಿ. ಮೊದಲು ತಳ ಸರಿ ಮಾಡಿಕೋರಿ, ಇದು ಕಾಂಗಿಯಣ್ಣಂದಿರಿಗೆ’.

‘ಬಾಯಲ್ಲಿ ಬೆಣ್ಣೆ, ಕಂಕುಳಲ್ಲಿ ದೊಣ್ಣೆ, ತುಟಿಮ್ಯಾಗೆ ಮಾತ್ರ ಏಕತಾ ಮಂತ್ರ... ಈ ಹಕೀಕತ್ತೆಲ್ಲ ಇನ್ನರ ಬಿಡ್ರಿ... ಇದು ಮೋದಿಮಾಮಾ, ‘ಶಾ’ಣ್ಯಾ ಅಂಕಲ್‌ಗೆ’.

‘ಹಳ್ಳೀ ದೇವರ ಕಡೆಗಣಿಸಿ, ದಿಲ್ಲೀ ದೇವರ ಹೊಟ್ಟೆ ಹೊರೆದ ಹಂಗೆ ಇಲ್ಲಿಯ ರೈತ್ರು, ಬಡೋವ್ರ ಮ್ಯಾಲೆ ಸವಾರಿ ಮಾಡೂ ಕಾನೂನು ಜಾರಿ ಕೈಬಿಟ್ಟು ಇನ್ನರ ಖರೇ ಏಳಿಗೆ ಮಾಡ್ರಿ... ಇದು ಯೆಡ್ಯೂರಜ್ಜ ಮತ್ತು ಅವರ ಪರಿವಾರದವ್ರಿಗೆ’. ನಾನು ಕೇಳಿಕೇಳಿ ಸುಸ್ತಾದರೂ ಬೆಕ್ಕಣ್ಣನ ಉಪದೇಶಾಮೃತ ಮುಂದುವರಿದಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT