ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಭಕ್ತನಾದ ಭಗವಂತ!

Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಗಾಢ ನಿದ್ರೆಯಲ್ಲಿದ್ದ ಪತ್ರಕರ್ತ ತೆಪರೇಸಿಯನ್ನು ಮಧ್ಯರಾತ್ರಿ ಯಾರೋ ಕೂಗಿ ಕರೆದಂತಾಯಿತು. ಆರ್‌ಸಿಬಿ ಸೋತದ್ದಕ್ಕೆ ಬ್ಯಾಸರಾಗಿ ಟೈಟಾಗಿ ಮಲಗಿದ್ದ ತೆಪರೇಸಿಗೆ ಸಿಟ್ಟು ಬಂತು. ‘ಯಾರು ಕರೆದದ್ದು?’ ಎಂದ.

‘ನಾನು ದೇವರು!’

‘ವ್ಹಾಟ್‌! ದೇವರಾ? ಸರಿ, ಏನು
ಇಷ್ಟೊತ್ತಲ್ಲಿ?’

‘ನಾನು ನಿನ್ನ ಭಕ್ತ, ದರ್ಶನಕ್ಕೆ ಬಂದಿದ್ದೇನೆ’.

‘ನಾನ್‌ಸೆನ್ಸ್.‌.. ದೇವರು, ಭಕ್ತ ಇಬ್ರೂ ಒಬ್ರೇನಾ? ನೀನೇ ಭಕ್ತ ಆದ್ರೆ ನಾನ್ಯಾರು?’

‘ನೀನೂ ದೇವರೇ... ಮನುಷ್ಯರು ದೇವರಾಗಿ, ದೇವರು ಭಕ್ತರಾಗೋ ಕಾಲ ಇದು’.

‘ಕುಡಿದಿದೀನಿ ಅಂತ ಕಿಂಡಲ್ಲಾ? ನಾನು ದೇವರಾಗಿದ್ರೆ ಆರ್‌ಸಿಬಿ ಗೆಲ್ಲಿಸ್ತಿದ್ದೆ. ಸೋತಿದ್ದೇಕೆ?’

‘ಆರ್‌ಸಿಬಿದು ಈಗ ಮುಗಿದ ಅಧ್ಯಾಯ. ಆದ್ರೂ ಮುಂದಿನ ಸಲ ಕಪ್ ನಿಮ್ದೇ...’

‘ಜೋಕಾ? ಈಗ ನೀನು ದೇವರಾಗಿದ್ರೆ ಮೇಲ್ಮನಿ ಚುನಾವಣೆಗೆ ಯಾರ್‍ಯಾರಿಗೆ ಟಿಕೆಟ್ ಸಿಗುತ್ತೆ ಹೇಳು ನೋಡಾಣ’.

‘ಅದು ಮೇಲ್ಮನಿ ಅಲ್ಲ, ‘ಮೇಲ್ Money’, ದುಡ್ಡಿದ್ದೋರಿಗಷ್ಟೇ ಸಿಗೋದು’.

‘ಕರೆಕ್ಟ್, ಆಮೇಲೆ ಡಿಕೆಶಿ ಯಾಕೆ ಕೆಪಿಸಿಸಿ ಕುರ್ಚಿ ಬಿಡೋ ಮಾತಾಡ್ತಿದಾರೆ?’

‘ಅವ್ರು ಬೇರೆ ಕುರ್ಚಿ ಮೇಲೆ ಟವೆಲ್ ಹಾಕಿದಾರೆ’.

‘ಕರೆಕ್ಟ್, ಆಮೇಲೆ ತಟ್ಟೆ ಬಾರಿಸಿದ್ರೆ ವೋಟ್ ಬೀಳುತ್ತಾ?’

‘ತಟ್ಟೆ ಬಾರಿಸಿದ್ರೆ ಕಪಾಳಕ್ಕೆ ಬೀಳುತ್ತೆ, ಅಡುಗೆ ಆಗಿಲ್ಲ ತಡ್ಕಾ ಅಂತಾಳೆ ಹೆಂಡ್ತಿ’.

‘ಸರಿ, ಈಗ ಬೇಗ ಎಸ್ಕೇಪ್ ಆಗ್ಬಿಡು, ನಮ್ಮನೇಲಿ ಸದಾ ಸೌಟು, ಲಟ್ಟಣಿಗೆ ಹಿಡ್ಕಂಡಿರೋ ಒಂದು ಹೆಣ್ಣು ದೇವರಿದೆ’ ತೆಪರೇಸಿ ಎಚ್ಚರಿಸಿದ. ಅಷ್ಟರಲ್ಲಿ ಯಾರೋ ಮೈಮೇಲೆ ನೀರು ಸುರಿದಂತಾಗಿ ತೆಪರೇಸಿ ಕಣ್ಣು ಬಿಟ್ಟ. ಎದುರಿಗೆ ಮಡದಿ ಪಮ್ಮಿ! ‘ಏನ್ರಿ ಅದು ಸೌಟು, ಲಟ್ಟಣಿಗೆ?’

‘ಅದೂ... ಕನಸಲ್ಲಿ ದೇವರು ಬಂದಿತ್ತು’ ತೆಪರೇಸಿ ತಡವರಿಸಿದ.

‘ಏನು, ದೇವರಾ?’ ಪಮ್ಮಿ ಕೊಡದಲ್ಲಿ ಉಳಿದಿದ್ದ ಇನ್ನಷ್ಟು ನೀರನ್ನು ತೆಪರೇಸಿ ಮೇಲೆ ಸುರಿದು ‘ಏಳ್ರಿ ಮೇಲೆ’ ಎಂದು ಅಬ್ಬರಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT