ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಶಾಸಕರಿಗೆ ಸಲಹೆ

Last Updated 12 ಆಗಸ್ಟ್ 2022, 23:00 IST
ಅಕ್ಷರ ಗಾತ್ರ

ಚಟ್ನಿಹಳ್ಳಿ ಕೆರೆ ತುಂಬಿ ಕೋಡಿ ಹರಿದಿತ್ತು. ಊರ ಜನ ಆನಂದಪಟ್ಟಿದ್ದರು. ಆದರೆ ನಂತರ ನಡೆದ ಬೆಳವಣಿಗೆಯಿಂದ ಶಾಸಕರಿಗೆ ಚಳಿಜ್ವರ ಬಂದಿತ್ತು.

ಕಳೆದ ಚುನಾವಣೆಯಲ್ಲಿ ಶಾಸಕರೆದುರು ಸೋತು ಸುಣ್ಣವಾಗಿದ್ದ ಎದುರು ಪಕ್ಷದ ಮುಖಂಡ ಈಗ ಮೈಕೊಡವಿ ಎದ್ದಿದ್ದ. ಕೆರೆಯಲ್ಲಿ ಗಂಗಾಪೂಜೆ ಏರ್ಪಡಿಸಿ ಹೆಣ್ಣುಮಕ್ಕಳಿಗೆ ಸೀರೆ ವಿತರಿಸಿ, ಬಾಗಿನ ನೀಡಿದ್ದ. ಕೆರೆ ಏರಿ ಮೇಲೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದ. ಊರಜನ ಉಂಡು ಮುಖಂಡರ ಸೇವೆ ಕೊಂಡಾಡಿದ್ದರು.

ಸಾಲದ್ದಕ್ಕೆ ಊರಿನಲ್ಲಿ ಹೆಲ್ತ್ ಕ್ಯಾಂಪ್ ವ್ಯವಸ್ಥೆ ಮಾಡಿದ್ದ. ಇತ್ತೀಚಿನ ಮಳೆಯಲ್ಲಿ ನೆಂದು ನೊಂದು ಶೀತ, ನೆಗಡಿ, ಜ್ವರದಿಂದ ಬಳಲುತ್ತಿದ್ದ ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಸುಧಾರಿಸಿಕೊಂಡಿದ್ದರು.

ಶಾಸಕರ ಜೊತೆಗಿದ್ದು ಜೈಕಾರ ಹಾಕುತ್ತಿದ್ದ ಜನರೆಲ್ಲಾ ಎದುರು ಪಕ್ಷದ ಮುಖಂಡನ ತೆಕ್ಕೆಗೆ ಬೀಳತೊಡಗಿದ್ದು ಶಾಸಕರ ನಿದ್ದೆ, ನೆಮ್ಮದಿ ಕೆಡಿಸಿತ್ತು.

ಮಳೆಯಲ್ಲಿ ಹಾಳಾಗಿದ್ದ ಊರ ರಸ್ತೆ ರಿಪೇರಿಯನ್ನಾಗಲೀ, ಕುಸಿದುಬಿದ್ದ ಸೇತುವೆ ದುರಸ್ತಿಯನ್ನಾಗಲೀ ಮಾಡುವ ಪ್ರಯತ್ನ ಮಾಡಿರಲಿಲ್ಲ ಅಂತ ಶಾಸಕರ ವಿರುದ್ಧ ಜನ ಸಿಟ್ಟಿಗೆದ್ದಿದ್ದರು. ಚುನಾವಣೆ ಸನಿಹದಲ್ಲಿ ಜನರ ವಿರೋಧ ಕಟ್ಟಿಕೊಳ್ಳುವುದು ತರವಲ್ಲ, ಊರಿಗೆ ಬಂದು ಜನರ ಕಷ್ಟಸುಖ ಕೇಳಿ ಅಂತ ಬೆಂಬಲಿಗರು ಶಾಸಕರ ಬೆನ್ನಿಗೆ ಬಿದ್ದಿದ್ದರು.

‘ಕೊರೊನಾ ಟೈಮಿನಲ್ಲಿ ಫುಡ್ ಕಿಟ್ ವಿತರಣೆ ಮಾಡಿದ್ದು ಬಿಟ್ಟರೆ ನೀವು ಊರ ಜನರಿಗೆ ಯಾವುದೇ ಕೊಡುಗೆ ನೀಡಿಲ್ಲ, ಹಿಂಗಾದ್ರೆ ಜನ ನಮ್ಮ ಕೈಗೆ ಸಿಗ್ತಾರಾ?’ ಅಂತೆಲ್ಲಾ ಆತ್ಮೀಯರು ಶಾಸಕರ ಗಮನಕ್ಕೆ ತಂದು ಗಾಬರಿ ಹುಟ್ಟಿಸಿದರು.

ಡ್ಯಾಮೇಜ್ ಸರಿಮಾಡಿಕೊಳ್ಳಲು ಏನು ಮಾಡೋದು? ಶಾಸಕರು ಪ್ರಶ್ನೆ ಮಾಡಿಕೊಂಡರು.

‘ಪಕ್ಷದ ನಾಯಕರನ್ನು ಊರಿಗೆ ಆಹ್ವಾನಿಸಿ ಅದ್ಧೂರಿಯಾಗಿ ನಿಮ್ಮ ಜನ್ಮದಿನ ಆಚರಿಸಿ. ಆಮೇಲೆ ಊರಿನ ದೇವರ ಉತ್ಸವದ ವ್ಯವಸ್ಥೆ ಮಾಡಿ, ಬಡವರಿಗೆ ಏನಾದರೂ ಕಾಣಿಕೆ ಕೊಡಿ. ಜನ ಮತ್ತೆ ನಿಮ್ಮ ಬುಡದಲ್ಲೇ ಇರುತ್ತಾರೆ’ ಎಂದು ಆತ್ಮೀಯರು ಸಲಹೆ ಮಾಡಿದರು. ಶಾಸಕರು ಸಲಹೆ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT