ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕರಾರು

Last Updated 7 ಜುಲೈ 2020, 19:31 IST
ಅಕ್ಷರ ಗಾತ್ರ

ಮನೆ ಬಾಡಿಗೆಗೆ ಕೇಳಿಕೊಂಡು ಶಂಕ್ರಿ, ಸುಮಿ ಬಂದಿದ್ದರು.

‘ಬಾಡಿಗೆಗೆ ಮನೆ ಕೊಡ್ತೀನಿ, ಅದಕ್ಕೆ ಕೆಲವು ಕರಾರುಗಳಿವೆ...’ ಓನರಪ್ಪ ಹೇಳಿದರು.

‘ನಿಮ್ಮ ಸಕಲ ಕರಾರುಗಳಿಗೂ ನಾವು ಬದ್ಧ...’ ಅಂದಳು ಸುಮಿ.

‘ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ-ಆದಾಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳಿವೆ ತಗೊಳ್ಳಿ’ ಶಂಕ್ರಿ ಕೊಟ್ಟ.

‘ಕೊರೊನಾ ಟೆಸ್ಟ್ ಮಾಡಿಸಿರಬೇಕು, ಅದರ ನೆಗೆಟಿವ್ ವರದಿ ಬಂದಿರುವ ರಿಪೋರ್ಟ್ ಕೊಡಬೇಕು’.

‘ಜೊತೆಗೆ, ನಿಮ್ಮ ನಡವಳಿಕೆಯ ಪಾಸಿಟಿವ್ ರಿಪೋರ್ಟ್ ಬೇಕು’ ಎಂದರು ಓನರಮ್ಮ.

‘ಇದೆ, ಹಿಂದಿನ ಮನೆ ಓನರ್ ಕೊಟ್ಟಿರುವ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕಾಪಿಯನ್ನೂ ಲಗತ್ತಿಸಿದ್ದೀನಿ’ ಅಂದ ಶಂಕ್ರಿ.

‘ಮನೆ ಒಳಗೆ ಕೊರೊನಾ ಸೋಂಕು, ಬಂಧುಬಳಗ ಬರಕೂಡದು’– ಓನರಮ್ಮ.

‘ಕೊರೊನಾ ಮಾತ್ರವಲ್ಲ, ಅತ್ತೆ, ಮಾವ, ಮೈದುನ, ನಾದಿನಿಯನ್ನೂ ಮನೆಗೆ ಸೇರಿಸುವುದಿಲ್ಲ ಮೇಡಂ’ ಸುಮಿ ಪ್ರಾಮಿಸ್ ಮಾಡಿದಳು.

‘ಮನೆಯಲ್ಲಿ ಗಂಡ, ಹೆಂಡ್ತಿ, ಮಕ್ಕಳು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು’ –ಓನರಪ್ಪ.

‘ನಿಮ್ಮ ಜೊತೆಯೂ ಅಂತರ ಕಾಪಾಡಿಕೊಳ್ಳುತ್ತೇವೆ’– ಶಂಕ್ರಿ.

‘ಕೆಮ್ಮುವುದು, ಸೀನುವುದನ್ನು ಮಾಡಕೂಡದು. ಸ್ವಚ್ಛತೆ ಕಾಪಾಡಬೇಕು, ಮನೆಯನ್ನು ನಿತ್ಯವೂ ಸ್ಯಾನಿಟೈಸ್ ಮಾಡಬೇಕು’– ಓನರಪ್ಪ ಹೇಳಿದರು.

ಆಗ ದಿಢೀರ್‌ ಎಂದು ಬಂದ ಆರೋಗ್ಯ ಸಿಬ್ಬಂದಿ ತಂಡ, ‘ಈ ಏರಿಯಾ ಸೀಲ್‍ಡೌನ್ ಆಗಿದೆ. ಪಕ್ಕದ ಮನೆಯವರಿಗೆ ಪಾಸಿಟಿವ್ ಬಂದಿದೆ. ನೀವು ಅವರ ಸಂಪರ್ಕ ಹೊಂದಿದ ಮಾಹಿತಿ ಇದೆ. ಬಾಡಿಗೆ ಕೇಳಿಕೊಂಡು ಬಂದ ಇವರೂ ನಿಮ್ಮ ಸಂಪರ್ಕದಲ್ಲಿರೋದ್ರಿಂದ ಎಲ್ಲರನ್ನೂ ಈ ಮನೆಯಲ್ಲಿ ಕ್ವಾರಂಟೈನ್ ಮಾಡ್ತೀವಿ, ಯಾರೂ ಹೊರಗೆ ಹೋಗಕೂಡದು...’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT