ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಕೊರೊನಾ ಲಕ್ಷಣ!

Last Updated 6 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸಂಬಂಧಿಕರಾಗಿ ಒಂದೇ ಆಸ್ಪತ್ರೆಗೆ ದಾಖಲಾದ ರಾಜಾಹುಲಿ ಮತ್ತು ಹುಲಿಯಾ ಸಾಹೇಬರು ಬಿಡುವಿನ ವೇಳೆಯಲ್ಲಿ ತಮ್ಮ ಸುಖ ದುಃಖ ಹಂಚಿಕೊಂಡರು.

‘ಏನ್ ರಾಜಾಹುಲಿಯವರೆ, ನೀವು ಬಹಳ ಕೇರ್‍ಫುಲ್ ಆಗಿದ್ರಿ, ಆದ್ರೂ ನಿಮಗ್ಯಾಕೆ ಬಂತು ಕೊರೊನಾ?’ ಹುಲಿಯಾ ಸಾಹೇಬರು ವಿಚಾರಿಸಿಕೊಂಡರು.

‘ಏನೋ ಗೊತ್ತಿಲ್ಲ ಸ್ವಾಮಿ, ನಿಮ್ಮಗಳ ಹಾರೈಕೆ ಇರಬೇಕು…’ ರಾಜಾಹುಲಿ ನಕ್ಕರು.

‘ಛೆ ಛೆ, ರಾಜಕೀಯ ಬೇರೆ, ಮನುಷ್ಯತ್ವ ಬೇರೆ. ನೀವು ನೂರು ವರ್ಷ ಚೆನ್ನಾಗಿರಬೇಕು’ ಹುಲಿಯಾ ಹಾರೈಸಿದರು.

‘ನೂರು ವರ್ಷನಾ? ಮೂರು ವರ್ಷ ನೆಮ್ಮದಿ
ಯಾಗಿರೋಕೂ ಬಿಡ್ತಿಲ್ಲಪ್ಪ ನೀವು. ನಿಮ್ಮ ಕಾಟ ತಾಳದೆ ಇಲ್ಲಿಗೆ ಬಂದ್ರೆ ಇಲ್ಲಿಗೂ ಬರ್ತೀರಲ್ಲ?’

‘ಇರ‍್ಲಿ, ಬೇಜಾರ್ ಮಾಡ್ಕೋಬೇಡಿ. ಆಡಳಿತ ಪಕ್ಷ, ವಿರೋಧ ಪಕ್ಷ ಒಟ್ಟಿಗೇ ಇರೋದು ಸರ್ಕಾರದ ಆರೋಗ್ಯಕ್ಕೆ ಒಳ್ಳೇದು. ಯಾವುದೇ ತಪ್ಪು ನಡೆಯಲ್ಲ’.

‘ತಪ್ಪು ಒಪ್ಪು ಹಂಗಿರ‍್ಲಿ, ನಿಮಗ್ಯಾಕೆ ಬಂತು ಕೊರೊನಾ?’ ರಾಜಾಹುಲಿ ಪ್ರಶ್ನಿಸಿದರು.

‘ನಿಮ್ಮ ವಿರುದ್ಧ ಊರೂರು ಸುತ್ತಿ ಪ್ರತಿಭಟನೆ ಮಾಡಿದ್ವಲ್ಲ, ಎಲ್ಲೋ ಒಂದು ಕಡೆ ಅಟಕಾಯಿಸ್ಕಂತು ಅನ್ಸುತ್ತೆ. ಅದಿರ‍್ಲಿ, ಈಗ ನನಗೊಂದ್ ಅನುಮಾನ...’

‘ಅನುಮಾನನ? ಏನು?’ ರಾಜಾಹುಲಿಗೆ ಕುತೂಹಲ.

‘ನಿಮಗೆ ಕೊರೊನಾ ಬಂದಿಲ್ಲ, ಸುಮ್ನೆ ಬಂದು ಆಸ್ಪತ್ರೆಗೆ ಸೇರ್ಕಂಡಿದೀರಿ ಅಂತ...’

‘ಇದೇ ಬೇಡ ಅನ್ನೋದು. ಅಲ್ಲ, ಸುಮ್ ಸುಮ್ನೆ ಯಾರಾದ್ರೂ ಆಸ್ಪತ್ರೆ ಸೇರ್ಕಂತಾರೇನ್ರಿ?’

‘ಹಾಗಲ್ಲ, ನೀವೀಗ ಸಂಪುಟ ವಿಸ್ತರಣೆ ಸಂಕಟದಲ್ಲಿದೀರಿ. ಆಕಾಂಕ್ಷಿಗಳ ಕಾಟ ತಪ್ಪಿಸಿಕೊಳ್ಳೋಕೆ ಹೀಗೆ ಮಾಡಿದ್ರಾ ಅಂತ. ಬೀಸೋ ದೊಣ್ಣೆ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು ಅಂತಾರಲ್ಲ, ಹಂಗೇನಾದ್ರು...’

ರಾಜಾಹುಲಿ ಮಾತಾಡಲಿಲ್ಲ. ತಕ್ಷಣ ವೈದ್ಯರನ್ನು ಕರೆದು ಕೇಳಿದರು ‘ಡಾಕ್ಟ್ರೆ, ಅನುಮಾನ ಕೊರೊನಾ ಲಕ್ಷಣಾನಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT