ಗುರುವಾರ , ಅಕ್ಟೋಬರ್ 28, 2021
18 °C

ಚುರುಮುರಿ: ಮನೆ ಕಲಿಕೆ

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

Prajavani

‘ಮಕ್ಕಳು ಗೋಡೆ ಮೇಲೆಲ್ಲಾ ಅಆಇಈ, ಎಬಿಸಿಡಿ, ಗೊಂಬೆ ಚಿತ್ರ ಬರೆದು ಹಾಳು ಮಾಡಿದ್ದಾರೆ. ಪೇಂಟ್ ಮಾಡಿಸಬೇಕೂರೀ...’ ಎಂದಳು ಅನು.

‘ಶಾಲೆ ಓಪನ್ ಆಗೋವರೆಗೂ ಪೇಂಟ್ ಮಾಡಿಸೋದು ಬೇಡ. ಮಕ್ಕಳು ಗೋಡೆ ಮೇಲೊ, ಟೀವಿ ಮೇಲೊ ಬರೆದು ಜ್ಞಾನ ಬೆಳೆಸಿಕೊಳ್ಳಲಿ’ ಎಂದ ಗಿರಿ.

‘ಸರ್ಕಾರ ಸದ್ಯಕ್ಕೆ ಪ್ರೈಮರಿ ಶಾಲೆಗಳನ್ನು ತೆರೆಯುವಂತೆ ಕಾಣುತ್ತಿಲ್ಲ. ಬ್ಲ್ಯಾಕ್‌ ಬೋರ್ಡ್, ಚಾಕ್‍ಪೀಸ್ ತನ್ನಿ, ನಾನೇ ಮಕ್ಕಳಿಗೆ ಪಾಠ ಹೇಳ್ತೀನಿ’.

‘ನಿನ್ನ ಪಾಠಕ್ಕೆ ಸಿಲೆಬಸ್ ಇಲ್ಲ, ಟೈಂಟೇಬಲ್ ಇಲ್ಲ, ಅದೇನು ಕಲಿಸ್ತೀಯೋ... ತರಕಾರಿ ಹೆಚ್ಚುವಾಗ ಎಬಿಸಿಡಿ ಬರೆಸ್ತೀಯ, ಒಗ್ಗರಣೆ ಹಾಕುವಾಗ ರೈಮ್ಸ್ ಹೇಳಿಸ್ತೀಯ...’

‘ನೀವು ಟೀವಿಯಲ್ಲಿ ಕ್ರಿಕೆಟ್ ನೋಡಿಕೊಂಡು ಕೊಶ್ಚನ್ ಕೇಳ್ತೀರಿ, ಮಕ್ಕಳ ಉತ್ತರದ ಬದಲು ಕಾಮೆಂಟರಿ ಕೇಳಿಸಿಕೊಳ್ತೀರಿ’.

‘ಸರಿಬಿಡು, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮೊದಲ ಗುರು ತಾಯಿ. ಏನಿದ್ದರೂ ತಂದೆಯಾದವನು ಕೇವಲ ಎಲೆಮರೆಯ ಕಾಯಿ...’ ಗಿರಿ ಒಪ್ಪಿಕೊಂಡ.

‘ಹೇಗೋ ಮಕ್ಕಳು ಚೆನ್ನಾಗಿ ಓದಿ ಬದುಕು ರೂಪಿಸಿಕೊಂಡರೆ ಸಾಕು’.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಈಗ ಪದವಿ ಪಡೆದಿರುವವರಿಗೇ ಉದ್ಯೋಗವಿಲ್ಲ. ನಮ್ಮ ಮಕ್ಕಳು ಓದಿ ಉದ್ಯೋಗ ಮಾಡೋದು ಇನ್ಯಾವಾಗಲೋ...’

‘ಹೌದೂರಿ, ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿ ಮಾಡಲಿಲ್ಲ, ನಿರುದ್ಯೋಗಿಗಳು ತಮ್ಮ ಪದವಿ ಪ್ರಮಾಣಪತ್ರವನ್ನು ಪ್ರಧಾನಿಗೆ ಕಳಿಸಿ ಅಂತ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದಾರೆ’.

‘ಕೊರೊನಾದಿಂದಾಗಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆಯಂತೆ, ಸಮಸ್ಯೆ ನಿವಾರಣೆ ಆದಮೇಲೆ ಉದ್ಯೋಗ ಸೃಷ್ಟಿ, ತೆರಿಗೆ ಇಳಿಕೆ, ದಿನಬಳಕೆ ಪದಾರ್ಥಗಳ ಬೆಲೆ ಇಳಿಸುವುದಂತೆ ಸರ್ಕಾರ’.

‘ಸರ್ಕಾರವನ್ನು ನಂಬಿಕೊಳ್ಳಲು ಆಗುತ್ತೇನ್ರೀ? ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ ಮನೆಯಲ್ಲೇ ಸ್ವಯಂ ಉದ್ಯೋಗದ ತರಬೇತಿಯನ್ನೂ ಕೊಟ್ಟು ಅವರ ಬದುಕು ರೂಪಿಸಲು ಸಂಕಲ್ಪ ಮಾಡಿದ್ದೇನೆ...’ ಎಂದಳು ಅನು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು