‘ಸಂಧಿ ಅಂದ್ರೇನು ಗೊತ್ತೇನ್ರಿ? ಸಮಾಸ ಗೊತ್ತೇನ್ರಿ?...’ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕೇಳಿದ್ದಕ್ಕೆ ಸದನದ ಸದಸ್ಯರು ಕ್ಷಣ ಗಲಿಬಿಲಿಯಾದರು...’ ಎಂದಳು ಸುಮಿ.
‘ಸ್ಕೂಲಿನಲ್ಲಿ ಕಲಿತ ಸಂಧಿ, ಸಮಾಸ ಈಗ ಎಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ’ ಅಂದ ಶಂಕ್ರಿ.
‘ಆಗ ಕಲಿತದ್ದು ಈಗಲೂ ಸಿದ್ದರಾಮಯ್ಯನವರಿಗೆ ನೆನಪಿದೆಯಂತೆ. ಕನ್ನಡ ಭಾಷೆ, ಸಾಹಿತ್ಯ ಪ್ರೇಮ ಬೆಳೆಸಿಕೊಳ್ಳಿ ಅಂತ ಸಹಸದಸ್ಯರಿಗೆ ಸಲಹೆ ಮಾಡಿದರು. ಸಾಹಿತಿಗಳ ಸ್ಮರಣೆ ಮಾಡಿ, ಸಾಹಿತ್ಯದ ಸಾಲು, ಕವನದ ಸಾರ ಹೇಳಿ ಮೊನ್ನೆ ಗಣಿತದೊಂದಿಗೆ ಸಾಹಿತ್ಯ ಬೆರೆಸಿ ಬಜೆಟ್ ಮಂಡಿಸಿದರು’.
‘ಕಲಾಪದಲ್ಲಿ ಸದಸ್ಯರು ಬಳಸಬೇಕಾದ ಸಿರಿಗನ್ನಡ ಎಲ್ಲೆ ಮೀರಿ ಉರಿಗನ್ನಡ ಆಗಬಾರದು ಎಂಬ ಕಾಳಜಿಯಿಂದ ಅವರು ಹೀಗೆ ಹೇಳಿರಬಹುದು’.
‘ಇರಬಹುದು, ಸಲೀಸಾಗಿ ಚರ್ಚಿಸುವ ಸಹಜ ಕನ್ನಡ, ವ್ಯಂಗ್ಯ–ವಿಡಂಬನೆಯಿಂದ ನಗು ತರಿಸುವ ಲಘು ಕನ್ನಡ ಬಳಸಿದರೆ ಸದನದ ಸದಭಿರುಚಿ ಹೆಚ್ಚುತ್ತದೆ’.
‘ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ಬೆಂಗಳೂರಿನ ನಾನ್ ಕನ್ನಡ ಹೀಗೆ ಯಾವುದೇ ಕನ್ನಡ ಬಳಸಿದರೂ ಅರ್ಥವಾಗುತ್ತದೆ, ಅಪಾರ್ಥವೇನೂ ಆಗುವುದಿಲ್ಲ’.
‘ಸ್ಪೀಕರ್ ಖಾದರ್ ಅವರ ಕನ್ನಡವನ್ನು ಅಪಾರ್ಥ ಮಾಡಿಕೊಂಡ ಯತ್ನಾಳರು, ಸ್ಪೀಕರ್ ಟು ಕನ್ನಡ ಆ್ಯಪ್ ಸಿದ್ಧಪಡಿಸಿಕೊಡಿ ಅಂತ ಕೇಳಿಕೊಂಡರು’.
‘ಅದು ಅವರ ಆಡುಭಾಷೆಯ ಕನ್ನಡ. ಖಾದರ್ ಕನ್ನಡ, ಸಿದ್ದರಾಮಯ್ಯ ಕನ್ನಡ, ಬೊಮ್ಮಾಯಿ ಕನ್ನಡ, ಎಚ್‌ಡಿಕೆ ಕನ್ನಡ, ಯತ್ನಾಳ್ ಕನ್ನಡ, ಜಮೀರ್ ಕನ್ನಡ ಎನ್ನುವ ಹಲವಾರು ಆಡುನುಡಿಗಳಿವೆ. ಎಲ್ಲ ನುಡಿಯಲ್ಲೂ ಕನ್ನಡದ ಘನತೆ, ಧನ್ಯತೆ ಇದೆ. ವಿವಿಧತೆಯ ಆಡುಭಾಷೆಗಳಲ್ಲಿ ಏಕತೆಯ ನಾಡುಭಾಷೆ ಇದೆ. ಎಲ್ಲವೂ ಒಂದಾಗಿ ಕಲಾಪದಲ್ಲಿ ಕಲರ್‌ಫುಲ್ ಕನ್ನಡದ ಕಲರವ ಮೊಳಗುತ್ತಿದೆ...’ ಎಂದು ಶಂಕ್ರಿ ಅಭಿಮಾನಗೊಂಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.