ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ಕಂಗ್ಲಿಷ್ ಕಿಚಡಿ!

Last Updated 6 ನವೆಂಬರ್ 2020, 19:31 IST
ಅಕ್ಷರ ಗಾತ್ರ

‘ರಾಜ್ಯೋತ್ಸವುದ್ ಬಗ್ಗೆ ಏನಾರ ಹೇಳಲೇ ನೋಡನ...’ ರುದ್ರೇಶಿ ಸವಾಲೆಸೆದ.

ಕ್ಷಣಮಾತ್ರ ಯೋಚಿಸಿದ ಚಂಬಸ್ಯ ‘ನೆನೆವುದೆಮ್ಮ ಮನಂ ನವೆಂಬರ್ ತಿಂಗಳಂ. ಅದರಾಚೆಯೀಚೆ ಕನ್ನಡ ತಂಗಳಂ’ ಎಂದುಲಿದ.

‘ಸರಿಯಾಗ್ಹೇಳ್ದೆ. ಚಳಿಗಾಲದ್ ಚಳಿ ಹುಟ್ಟೋ ನವೆಂಬರ್‌ನ್ಯಾಗೆ ನಮ್ಗೆ ಕನ್ನಡ ಚಳವಳಿ ನೆನಪು ಬರ್ತತಿ. ನವೆಂಬರ್ ಮುಗಿತುದ್ದಂಗೆ ಚಳಿ ಉಳಿಕ್ಯಳ್ತತಿ, ಕನ್ನಡ ಬೆಚ್ಚಗ್ ಮಕ್ಯಳ್ತತಿ. ಅಲ್ಲಿಗೆ ಕನ್ನಡವೇ ನಮ್ಮಮ್ಮ, ನೀನು ಮಕ್ಯಂದು ನಿದ್ದಿ ಮಾಡಮ್ಮ ಅಂತವಿ’.

‘ಅದ್ಸರಿ, ನಮ್ ಈಗಿನ್ ಪೀಳಿಗಿಗೆ ನೆಟ್ಟಗೆ ಒಂದ್ ಕನ್ನಡ ಪತ್ರಿಕೆ ಓದಕ್ ಬರದುಲ್ಲ. ದಿನಪತ್ರಿಕಿ ಅಂದ್ರೆ ಮಕ್ಳು ದೂರ ಹೋಗ್ತಾವು. ವಾರಪತ್ರಿಕಿ ಅಂದ್ರೆ ವಾಕರಿಕಿ. ನಮ್ ಕವಿಗಳು ಕನ್ನಡನ ಸುಲಿದ್ ಬಾಳೀಹಣ್ಣು ಅಂದುದ್ರು. ಈಗಿನವಿಕ್ಕೆ ಕನ್ನಡ ಅಂದ್ರೆ ಬಲಿತ ಹಾಗಲಕಾಯಿ! ಒಟ್ಟಿನ್ಯಾಗೆ ಕರ್ನಾಟಕದ ಜೀವ್ನ ಕಂಗ್ಲಿಷ್ ಕಿಚಡಿ ಆಗ್ಬಿಟ್ಟೈತಿ. ಅದ್ರಾಗೆ ಹಿಂದಿ ವಗ್ಗರಿಣಿ!
ತಮಿಳು– ತೆಲುಗು ಕೋಸಂಬ್ರಿ!’

‘ಇಪ್ಪಟ್ಟ್ ನನ್ಮಗಳು ಪುಷ್ಪಂದೇ ಉದಾಹರಣಿ ಕೊಡ್ತನಿ ಕೇಳ್ ಬಸ್ಸಿ. ಅಕಿ ಹೆಸರನ್ನು ಕನ್ನಡದಲ್ಲ್ ಬರೆಯಕ್ಕೆ ಅಕಿಗೇ ಬರದುಲ್ಲ- ಪುಪ್ಪ ಅಂತ ಬರಿತಾಳೆ. ಅರವತ್ತೆಂಟು ಅಂದ್ರಕಿಗೆ ತಿಳಿಯದುಲ್ಲ, ಸಿಕ್ಸ್‌ಟಿ ಏಯ್ಟ್ ಅನ್ನಬಕು. ಸೋಮವಾರ ಅಂದ್ರೇನು ಅಂತಾಳೆ. ಮಂಡೇ ಅಂದ್ರೆ, ಗೊತ್ತಾತು ಅಂತಾಳೆ’.

‘ಬರೇ ನಿನ್ ಮಗಳೊಬ್ಬಾಕೆದಲ್ಲ ಈ ಸಮಸ್ಯೆ ರುದ್ರಿ. ಕನ್ನಡಮ್ಮನ ಎಲ್ಲ ಮಕ್ಳು, ಮೊಮ್ಮಕ್ಳುದ್ದೂ ಇದೇ ಪಾಡು. ಈ ನಡುವೆ ಅನ್ನ, ಸೇಬು, ನಾಣ್ಯ, ಅಂಗಿ ಮುಂತಾದವೆಲ್ಲ ಗುಳೇ ಹೋಗಿ ಅವುಗಳ್ ಜಾಗದಾಗೆ ರೈಸು, ಆ್ಯಪಲ್ಲು, ಕಾಯಿನ್ನು, ಷರ್ಟುಗಳು ಬಂದು ವಕ್ಕರಿಸಿಕ್ಯಂಡದಾವೆ...’

ಇದೇ ಸಮಯಕ್ಕೆ ರುದ್ರೇಶಿ, ಚಂಬಸ್ಯರಿಗೆ ತಾವೇ ಓದಿದ್ದ ಸರ್ಕಾರಿ ಕನ್ನಡ ಶಾಲೆ ದೂರದಲ್ಲಿ ಕಾಣಿಸಿತು. ಅದು ಯಾವುದೋ ಹತ್ತನೇ ಶತಮಾನದ ಪಳೆಯುಳಿಕೆಯಂತೆ ಭಾಸವಾಗಿ, ಇಬ್ಬರೂ ಪೆಚ್ಚುಪೆಚ್ಚಾಗಿ ಮುಖ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT