ಹೆಂಡತಿಯನ್ನು ಕೂರಿಸಿಕೊಂಡು ಶಂಕ್ರಿ ಬೈಕ್‍ನಲ್ಲಿ ಹೊರಟಿದ್ದ. ಸರ್ಕಲ್‍ನಲ್ಲಿ ಪೊಲೀಸರು ತಡೆದು, ‘ಈ ರಸ್ತೆಯಲ್ಲಿ ಹೋಗುವಂತಿಲ್ಲ, ಆಡಳಿತ ಪಕ್ಷದವರು ಪ್ರತಿಭಟನಾ ಮೆರವಣಿಗೆ ಬರ್ತಿದ್ದಾರೆ’ ಅಂದರು. ‘ಆ ರೋಡ್‍ನಲ್ಲಿ ಹೋಗಬಹುದಾ?’ ಶಂಕ್ರಿ ಕೇಳಿದ.
‘ಆ ರೋಡಿಗೂ ಪ್ರವೇಶವಿಲ್ಲ. ಅಲ್ಲಿ ವಿರೋಧ ಪಕ್ಷದವರು ರಸ್ತೆತಡೆ ಮಾಡ್ತಿದ್ದಾರೆ’.
‘ಆ ಕಡೆಯ ರಸ್ತೆಗೆ ಯಾಕೆ ಬ್ಯಾರಿಕೇಡ್ ಹಾಕಿದ್ದೀರ?’ ಸುಮಿ ಕೇಳಿದಳು.
‘ಮೇಡಂ, ಆ ರಸ್ತೆಯಲ್ಲಿ ಓಡಾಡಲಾಗದಷ್ಟು ಗುಂಡಿ ಬಿದ್ದಿವೆ. ಏಳೆಂಟು ಬೈಕ್‍ನವರು ಗುಂಡಿಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಇನ್ನಷ್ಟು ಜನ ಬೀಳಬಾರದೆಂದು ಬ್ಯಾರಿಕೇಡ್ ಹಾಕಿದ್ದೇವೆ’.
‘ರಸ್ತೆಗುಂಡಿ ಮುಚ್ಚಲು ಒತ್ತಾಯಿಸಿ ಸಾರ್ವಜನಿಕರು ಹೋರಾಟ ಮಾಡಬೇಕು’.
‘ಅದನ್ನು ಮುಚ್ಚಬೇಕಾದ ಜನನಾಯಕರೇ ಬೀದಿಗಿಳಿದು ಹೋರಾಡ್ತಿದ್ದಾರೆ. ಮೊದಲು ಅವರ ಕಷ್ಟ ನಿವಾರಣೆಯಾಗಲಿ, ಆಮೇಲೆ ನಮ್ಮ ಕಷ್ಟ ಹೇಳಿಕೊಳ್ಳೋಣ’ ಶಂಕ್ರಿ ಸಮಾಧಾನ ಹೇಳಿದ.
‘ಜನರ ಕಷ್ಟ ಕೇಳಲಾಗದಷ್ಟು ಕಷ್ಟದಲ್ಲಿದ್ದಾರೇನ್ರೀ ಜನನಾಯಕರು?’
‘ಹೌದು, ಜನನಾಯಕರಲ್ಲಿ ದ್ವೇಷಪ್ರೇಮ ಹೆಚ್ಚಾಗಿದೆಯಂತೆ. ಪರಸ್ಪರ ದ್ವೇಷಾರೋಪಣೆ ಮಾಡುತ್ತಾ, ಬೀದಿ ಜಗಳ ಮಾಡಿಕೊಂಡು ಶಾಂತಿ, ನೆಮ್ಮದಿ ಕಳೆದುಕೊಂಡಿದ್ದಾರೆ’.
‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ಜನನಾಯಕರ ಜಗಳದಲ್ಲಿ ಜನ ಕಂಗಾಲಾಗಿದ್ದಾರೆ’ ಎನ್ನುತ್ತಾ ಸುಮಿ ನಿಟ್ಟುಸಿರುಬಿಟ್ಟಳು.
‘ನೆರೆಹೊರೆ ದುಃಖ ನಿವಾರಿಸಬಹುದು, ದೊರೆಯ ದುಃಖ ನಿವಾರಿಸಲು ನಮ್ಮಿಂದ ಸಾಧ್ಯವೇ?’
‘ಪ್ರಭುಗಳಿಗೇ ಫಜೀತಿಯಾದರೆ ಪ್ರಜೆಗಳ ಪಾಡೇನು? ರಾಜಕೀಯರಂಗದ ಫಜೀತಿಗೆ ಪರಿಹಾರ ಹುಡುಕಬೇಕು’.
‘ಹೌದು, ಚಿತ್ರರಂಗದವರು ಹೋಮ, ಪೂಜೆ ಮಾಡಿದಂತೆ ರಾಜಕೀಯರಂಗದ ಶಾಂತಿ, ನೆಮ್ಮದಿಗೆ ಯಾವುದಾದರೂ ಹೋಮ ಮಾಡಬೇಕಾಗುತ್ತದೆ...’ ಎಂದು ಶಂಕ್ರಿ ಬೈಕ್ ತಿರುಗಿಸಿಕೊಂಡು ಹೊರಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.