ಸೋಮವಾರ, ಸೆಪ್ಟೆಂಬರ್ 26, 2022
24 °C

ಚುರುಮುರಿ: ಶಾಸಕರಿಗೆ ಶಾಕ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಚುನಾವಣೆ ಹತ್ತಿರ ಬರುತ್ತಿದೆ, ಕ್ಷೇತ್ರದ ಕಡೆ ಹೆಜ್ಜೆ ಹಾಕಿ, ಜನರ ಸಮಸ್ಯೆ ಆಲಿಸಿ’ ಎಂದು ಶಾಸಕರಿಗೆ ಆಪ್ತ ಸಹಾಯಕ ಮನವಿ ಮಾಡಿದ.

‘ಮೊನ್ನೆ ನಡೆದೂ ನಡೆದೂ ಶಾಸಕರಿಗೆ ಕಾಲು ನೋವಾಗಿದೆ ಎಂದು ಜನರಿಗೆ ತಿಳಿಸಿ, ನನ್ನ ಪರವಾಗಿ ನೀನೇ ಬೆಂಬಲಿಗರೊಂದಿಗೆ ಕ್ಷೇತ್ರಯಾತ್ರೆ ಮಾಡು’ ಎಂದರು ಶಾಸಕರು.

‘ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಆಪಾದನೆ, ಅಪಸ್ವರ ಹೆಚ್ಚಾಗಿದೆ, ಜನರ ಸಿಟ್ಟು ಶಮನ, ಶತ್ರು ದಮನ ಮಾಡದೆ ಮುಂದಿನ ಚುನಾವಣೆ ಕಷ್ಟವಾಗುತ್ತದೆ’ ಎಂದು ಎಚ್ಚರಿಸಿದ. ಶಾಸಕರು ಆಕಳಿಸಿದರು.

‘ಮಳೆ ಬಂದು ರಸ್ತೆಗಳು ಕಿತ್ತುಹೋಗಿವೆ, ಚರಂಡಿಗಳು ಮುಚ್ಚಿಹೋಗಿವೆ, ರಿಪೇರಿಗೆ ಗುದ್ದಲಿಪೂಜೆ ಮಾಡಬೇಕು’.

‘ಅಧಿಕಾರಿಗಳನ್ನು ಕರೆಸಿ ನೀನೇ ಕಾಮಗಾರಿ ಶುರು ಮಾಡಿಸು’.

‘ಪಕ್ಷ ಬಿಟ್ಟು ಹೋಗಲು ಸಿದ್ಧರಾಗಿರುವವರ ಪಟ್ಟಿ ಇದೆ, ಇವರಿಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಟಿಕೆಟ್ ಕೊಡುಸ್ತೀವಿ ಅಂತ ಆಸೆ ಹುಟ್ಟಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲು ಸಾಂತ್ವನ ಸಭೆ ಮಾಡಬೇಕಾಗಿದೆ. ಅದನ್ನೂ ನಾನೇ ಮಾಡಲಾ ಸಾರ್?’

ಶಾಸಕರಿಗೆ ಆಪ್ತ ಸಹಾಯಕನ ಬಗ್ಗೆ ಅಪಾರ ನಂಬಿಕೆ. ತಮ್ಮ ಪಾಲಿನ ಎಷ್ಟೋ ಸಮಸ್ಯೆಗಳನ್ನು ಚಾಣಾಕ್ಷತನದಿಂದ ಬಗೆಹರಿಸಿ ನೆರವಾಗಿದ್ದ. ಅವರ ಪತ್ನಿಗೂ ಗೊತ್ತಿಲ್ಲದ ಶಾಸಕರ ಗುಟ್ಟು, ಗಮ್ಮತ್ತುಗಳನ್ನು ತಿಳಿದಿದ್ದ. ಕ್ಷೇತ್ರದ ಜನರ ನಾಡಿಮಿಡಿತ, ಹಿಡಿತವನ್ನು ಅರಿತಿದ್ದ ಆಪ್ತ ಸಹಾಯಕ ಶಾಸಕರಿಗೆ ಪರಮಾಪ್ತನಾಗಿದ್ದ.

ಹೀಗಿರುವಾಗ... ಆಪ್ತ ಸಹಾಯಕ, ಪಕ್ಷದ ನಾಯಕರ ಮನಗೆದ್ದು ಚುನಾವಣೆ ಟಿಕೆಟ್ ಪಡೆದು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ ಎನ್ನುವ ಆಘಾತಕಾರಿ ಸುದ್ದಿಗೆ ಶಾಸಕರು ಬೆಚ್ಚಿಬಿದ್ದು ನಿದ್ರೆಯಿಂದ ಎಚ್ಚರಗೊಂಡರು.

‘ಎಲೆಕ್ಷನ್ ಹತ್ತಿರ ಬಂದಾಗ ಕೆಟ್ಟ ಕನಸುಗಳು ಬೀಳುವುದು ಸಹಜ, ಆತಂಕಪಡಬೇಡಿ...’ ಎಂದು ಶಾಸಕರಿಗೆ ಪತ್ನಿ ಸಮಾಧಾನ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.