ಬುಧವಾರ, ಜನವರಿ 20, 2021
17 °C

ಅನುಭವ ಮಂಟಪ: ನಿಗಮ ರಚನೆ ಕುರಿತು ಎಚ್.ಆಂಜನೇಯ–ತೇಜಸ್ವಿನಿ ಗೌಡ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಗಮ ಓಕೆ, ತರಾತುರಿ ಯಾಕೆ?
ಪ್ರವಾಹದ ಕಾರಣದಿಂದ ಕರ್ನಾಟಕದ ಅರ್ಧದಷ್ಟು ಭಾಗದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮನೆಗಳಿಲ್ಲದೆ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. ಅವರಿಗೆ ಗಂಜಿ ಕೊಡಲೂ ಆಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಕೋವಿಡ್‌ನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಫುಟ್‌ಪಾತ್‌ ಮೇಲೆ ಹೆರಿಗೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿಗಳನ್ನು ಓಲೈಸಲು ಸರ್ಕಾರ ಹೊರಟಿದೆ. ಜಾತಿಗೊಂದು ಸ್ಮಶಾನ ಇದೆ, ಅಂತೆಯೇ ಜಾತಿಗೊಂದು ನಿಗಮ ಸ್ಥಾಪಿಸಲು ಹೊರಟಿದೆ. ನಿಗಮಗಳನ್ನು ಸ್ಥಾಪಿಸಲಿ, ಬೇಡ ಎನ್ನುವುದಿಲ್ಲ. ಆದರೆ, ಅದಕ್ಕೂ ಮುನ್ನ ಆ ಸಮುದಾಯಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆಯಬೇಕಿತ್ತು. ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು.

ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಮತ್ತು ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬರಲಿವೆ ಎಂಬ ಕಾರಣಕ್ಕೆ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ರಾಜಕೀಯ ಗಿಮಿಕ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ದುರ್ಬಲ ವರ್ಗದವರ ಅಭಿವೃದ್ಧಿಯ ಉತ್ಸಾಹ ಇದ್ದರೆ ಅದನ್ನು ಬಜೆಟ್‌ನಲ್ಲಿ ತೋರಿಸಬಹುದಿತ್ತು. ಸಂಪುಟದ ಮುಂದೆ ಇಡದೆ, ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೂ ಪಡೆಯದೆ, ಕೇವಲ ಟಿಪ್ಪಣಿ ಆಧರಿಸಿ ಆದೇಶ ಹೊರಡಿಸುವ ಪದ್ಧತಿ ಸರಿಯಲ್ಲ. ಸಂಪನ್ಮೂಲ ಕಾಯ್ದಿರಿಸಿ ನಿಗಮಗಳನ್ನು ಸ್ಥಾಪಿಸಿದರೆ ಅದಕ್ಕೊಂದು ಘನತೆ ಇರುತ್ತದೆ. ಹಣದ ಮೂಲವೂ ಇರುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿದ್ಧಪಡಿಸಿದ ಜಾತಿ ಗಣತಿಯು ಎಲ್ಲಾ ಸಮುದಾಯಗಳ ಸ್ಥಿತಿಗತಿಯ ಕೈಗನ್ನಡಿಯಂತಿದೆ. ಅದನ್ನು ಆಧರಿಸಿ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬಹುದಿತ್ತು. ಸದ್ಯ ಸ್ಥಾಪಿಸಿರುವ ಮೂರು ನಿಗಮಗಳಲ್ಲಿ ಅದೇ ಜಾತಿಯ ದುರ್ಬಲ ಸಮುದಾಯಗಳಿಗೆ ಹಣ ಕಾಯ್ದಿರಿಸಿ ಸಾಮಾಜಿಕ ನ್ಯಾಯ ಕಾಪಾಡಬೇಕು.

ಎಲ್ಲ ಸಮುದಾಯದಲ್ಲಿ ಸಾಕಷ್ಟು ಉಪಜಾತಿಗಳಿವೆ. ಅವುಗಳಲ್ಲಿ ಪ್ರಬಲ ಉಪಜಾತಿಗಳು ಸೌಲಭ್ಯಗಳ ಲಾಭ ಪಡೆದುಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಉಪಜಾತಿಗಳವರೂ ಪ್ರತ್ಯೇಕ ನಿಗಮ ರಚಿಸಿ ಎಂದು ಸರ್ಕಾರವನ್ನು ಕೇಳದೆ ಇರುತ್ತಾರೆಯೇ? ಆಗ ಉಪಜಾತಿಗೊಂದು ನಿಗಮ ಮಾಡುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗುತ್ತದೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಾಕಷ್ಟು ಬೇಡಿಕೆ ಇತ್ತು. ಹೀಗಾಗಿ ಸಮಿತಿಯೊಂದನ್ನು ನೇಮಿಸಿ ವರದಿ ನೀಡಲು ಸೂಚಿಸಲಾಗಿತ್ತು. ಅಂತೆಯೇ ಜಾತಿ ಗಣತಿ ವರದಿ ಸಿದ್ಧಪಡಿಸಲಾಗಿದೆ. ಹೀಗೆ ಏನೇ ನಿರ್ಧಾರ ಮಾಡಿದರೂ, ಅದಕ್ಕೊಂದು ಸಿದ್ಧತೆ ಇರಬೇಕು. ಆದರೆ ಬಿಜೆಪಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ, ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದೆ.
-ಎಚ್. ಆಂಜನೇಯ, ಕಾಂಗ್ರೆಸ್ ಮುಖಂಡ

ಹಣ ಹೊಂದಿಸುವ ಚಿಂತೆ ಕಾಂಗ್ರೆಸ್‌ಗೆ ಬೇಡ
ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಹಿಂದಿನಿಂದಲೂ ಇದೆ. ಅವರ ರಾಜಕೀಯ ಜೀವನದ ಬಹುಪಾಲನ್ನು ವಿರೋಧ ಪಕ್ಷದಲ್ಲೇ ಕಳೆದಿದ್ದಾರೆ. ಅವರಿಗೆ ದುರ್ಬಲ ಸಮುದಾಯಗಳ ಅಭಿವೃದ್ಧಿಯ ಬದ್ಧತೆ ಇದೆ. ಸದ್ಯ ಬಹುಮತ ಇರುವ ಸರ್ಕಾರದ ಮುಖ್ಯಮಂತ್ರಿ ಅವರು. ತಮಗೆ ಅನ್ನಿಸಿದ್ದನ್ನು ಮಾಡುವ ನೇರ ನಡೆ ನುಡಿಯ ವ್ಯಕ್ತಿ ಎಂಬುದು ಜೀವನ ಚರಿತ್ರೆ ನೋಡಿದರೇ ಅರ್ಥವಾಗುತ್ತದೆ. ಘೋಷಿಸಿರುವ ನಿಗಮಗಳಿಗೆ ಹಣ ಹೊಂದಿಸುವುದು ಮುಖ್ಯಮಂತ್ರಿ ಆದವರಿಗೆ ಗೊತ್ತಿದೆ. ಆ ಬಗ್ಗೆ ಕಾಂಗ್ರೆಸ್‌ನವರು ಚಿಂತೆ ಮಾಡುವುದು ಬೇಡ.

ದುರ್ಬಲ ವರ್ಗದವರ ಕಲ್ಯಾಣದ ಬಗ್ಗೆ ಸರ್ಕಾರ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ. ನುಡಿದಂತೆ ನಡೆಯುವುದು ಹೇಗೆ ಎಂಬುದು ನಮ್ಮ ಸರ್ಕಾರಕ್ಕೆ ಗೊತ್ತಿದೆ. ಇಷ್ಟು ದಿನಗಳ ಕಾಲ ಈ ಸಮುದಾಯಗಳಲ್ಲಿನ ಬಡವರ ಅಭಿವೃದ್ಧಿ ಮರೆತಿದ್ದ ಪ್ರತಿಪಕ್ಷಗಳು, ಈಗ ಯಡಿಯೂರಪ್ಪನವರ ನಡೆ ಕಂಡು ಹೊಟ್ಟೆ ಉರಿದುಕೊಳ್ಳುವುದು ಬೇಡ. ನಿಗಮ ಸ್ಥಾಪನೆಗೆ ಬಸವಕಲ್ಯಾಣ ಉಪ ಚುನಾವಣೆ ಕಾರಣ, ಬಿ.ವೈ. ವಿಜಯೇಂದ್ರ ಅವರ ಸಲಹೆ ಕಾರಣ ಎಂಬ ಆರೋಪಗಳು ನಿರಾಧಾರ. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಭಾವನಾತ್ಮಕ ವಿಷಯವಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ. ವಿಜಯೇಂದ್ರ ಅವರು ಮುಖ್ಯಮಂತ್ರಿ ಅವರಿಗೆ ಸಲಹೆ ಅಥವಾ ಮನವಿಗಳನ್ನು ನೀಡಬಹುದು. ಅದು ಸರಿ ಇದ್ದರಷ್ಟೇ ಯಡಿಯೂರಪ್ಪ ಸ್ವೀಕರಿಸುತ್ತಾರೆ. ಪುತ್ರ ವ್ಯಾಮೋಹದಿಂದ ಸಿದ್ದರಾಮಯ್ಯ ಹೊರತಾಗಿರಲಿಲ್ಲ, ಎಸ್.ಎಂ. ಕೃಷ್ಣ ಅವರು ಅಳಿಯನ ಮಾತು ಕೇಳುತ್ತಿದ್ದರು ಎಂಬ ಆರೋಪಗಳಿಲ್ಲವೇ?

ಕಾಡುಗೊಲ್ಲರು ನಾಗರಿಕ ಸಮಾಜದ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅವರಿಗೆ ನಿಗಮದ ಮೂಲಕ ಶಕ್ತಿ ತುಂಬುವ ಕೆಲಸವನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದೆ. ಶಿರಾ ಚುನಾವಣೆ ಹಿನ್ನೆಲೆಯಲ್ಲಿ ಕಾಡುಗೊಲ್ಲ ನಿಗಮ ರಚನೆ ಘೋಷಿಸಿದ್ದು ಕಾಕತಾಳೀಯವಷ್ಟೇ. ಮುಖ್ಯಮಂತ್ರಿಗಳಿಗೆ ಇಚ್ಛಾಶಕ್ತಿ ಇತ್ತು. ಹೀಗಾಗಿ ಅವರು ಮಾಡಿದ್ದಾರೆ. ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಮಾಡಿದ್ದರೂ ಇದನ್ನು ಬಿಜೆಪಿ ಸ್ವಾಗತಿಸುತ್ತಿತ್ತು.

ಬ್ರಾಹ್ಮಣ, ಮರಾಠಾ ಸಮುದಾಯದ ಅಭಿವೃದ್ಧಿಗೆ ನಿಗಮ ರಚಿಸುವ ಅವಕಾಶ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇತ್ತು. ಅವರು ಮಾಡದಿದ್ದುದನ್ನು ಈಗ ನಾವು ಮಾಡಿದ್ದೇವೆ. ವಿರೋಧ ಪಕ್ಷಗಳು ಮಾಡುವ ಆರೋಪಗಳಿಂದ ಬಿಜೆಪಿ ಅಥವಾ ಸರ್ಕಾರಕ್ಕೆ ಏನೂ ನಷ್ಟ ಆಗುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯಕರ್ತರ ಪಡೆ ಬಿಜೆಪಿಯಲ್ಲಿ ಇದೆ.
-ಡಾ. ತೇಜಸ್ವಿನಿ ಗೌಡ, ವಿಧಾನ ಪರಿಷತ್ ಸದಸ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು