ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಸಂಸದರ ನಡೆ: ಅತಿರೇಕ, ಅಧಿಕಪ್ರಸಂಗ

Last Updated 10 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನಾನು ಪಿಯುಸಿ ಓದುತ್ತಿದ್ದಾಗ ಒಮ್ಮೆ ನನ್ನೂರಿನ ಸಾರ್ವಜನಿಕ ಗ್ರಂಥಾಲಯದ ಸದಸ್ಯಳಾಗಲು ಗ್ರಂಥಾಲಯದ ಕಚೇರಿಗೆ ಹೋಗಿ ಅರ್ಜಿ ತುಂಬಿಕೊಟ್ಟೆ. ಅಲ್ಲಿನ ಅಧಿಕಾರಿಯೊಬ್ಬರು ಅರ್ಜಿಯ ಮೇಲೆ ಕಣ್ಣಾಡಿಸಿ, ‘ನಿನ್ನ ಹೆಸರು, ಮನೆ ನಂಬರು, ಮನೆ ಹೆಸರು, ಬೀದಿ, ಗಲ್ಲಿ, ಊರು ಎಲ್ಲಾ ಬರೆದಿರುವೆ, ನಿನ್ನ ತಂದೆಯ ಹೆಸರು ಇಲ್ಲ’ ಎಂದು ಕಟುವಾಗಿ ನುಡಿದು, ಅರ್ಜಿ ವಾಪಸು ನೀಡಿದರು ಅನ್ನುವುದಕ್ಕಿಂತ ಮುಖದ ಮೇಲೆ ಎಸೆದರು!

‘ನೀವು ಕೇಳಿರುವುದು ವಿಳಾಸ, ಅದನ್ನು ಬರೆದಿರುವೆ’ ಎಂದು ಹೇಳಿದೆ. ಅದಕ್ಕವರು ‘ನಿನಗೆ ತಂದೆ ಇಲ್ಲವೇ? ಹಾಗೇ ಹುಟ್ಟಿರುವೆಯಾ?’ ಎಂದು ವ್ಯಂಗ್ಯವಾಗಿ ನುಡಿದು, ‘ಇನ್ನೂ ಪಿಯುಸಿ, ಆಗಲೇ ಸ್ವತಂತ್ರ ಎಂದುಕೊಂಡುಬಿಟ್ಟಿರುವಿಯೋ’ ಎಂದು ಹೇಳಿ, ‘ಡಾಟರ್ ಆಫ್’ ಎಂದು ಬರೆಸಿಕೊಂಡು, ಬುದ್ಧಿ ಹೇಳಿ ಅನ್ನುವುದಕ್ಕಿಂತ ನಿಂದಿಸಿ ಸದಸ್ಯತ್ವ ನೀಡಿದರು. ನನ್ನ ಗೆಳತಿಯರಿಗೂ ಇದೇ ರೀತಿ ವರ್ತನೆ ತೋರಿದ್ದರು. ‘ನೀವು ಹೆಣ್ಣುಮಕ್ಕಳು’ ಹಾಗೆ ಹೀಗೆ ಎಂದು ಉಪದೇಶ ಬೇರೆ ಮಾಡಿದ್ದರು. ನನಗೆ ಎಷ್ಟು ಅವಮಾನ, ನೋವಾಗಿತ್ತು ಎಂದರೆ ಅದರ ಗಾಯ ಇನ್ನೂ ಮಾಸಿಲ್ಲ!

ಬಿಜೆಪಿ ಸಂಸದ ಸಿ.ಪಿ.ಜೋಶಿ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುತ್ತಾ ‘ಸತಿ’ ಹೋದವರ ನಾಡಿನಿಂದ ಬಂದವನು ಎಂದು ‘ಹೆಮ್ಮೆಯಿಂದ’ ಉದ್ಗರಿಸಿದರು. ನಂತರ ವಿರೋಧ ಪಕ್ಷಗಳು ಖಂಡಿಸಿದ ಮೇಲೆ, ‘ಬೆಂಕಿಗೆ ಹಾರಿ ಆತ್ಮಾಹುತಿ ಮಾಡಿಕೊಂಡ ಸತೀಮಣಿಯರ ನಾಡಿನಿಂದ ಬಂದವನು ಎಂದು ಹೇಳಿದ್ದು, ‘ಸತಿ’ ಎಂಬ ಪದವನ್ನು ಉಲ್ಲೇಖಿಸಿಲ್ಲ, ಹಿಂದಿಯಿಂದ ಅನುವಾದ ಮಾಡುವಾಗ ತಾವು ‘ಸತಿತ್ವ’ ಎಂದು ಹೇಳಿದ್ದನ್ನು ‘ಸತಿ’ ಎಂದು ಹೇಳಿರಬೇಕು’ ಎಂದು ತಿದ್ದುಪಡಿ ನೀಡಿದರು! ಸತಿ ಹೋಗುವುದು ಇವರಿಗೆ ಹೆಮ್ಮೆಯ ಸಂಗತಿಯಾದರೆ, ಈ ಹೊತ್ತಿಗೂ ಸಿಗುವ ಮಹಾಸತಿಯರ (ಮಾಸ್ತಿ ಕಲ್ಲುಗಳ) ಬಗ್ಗೆ ನಮಗೆ ವಿಷಾದವಿದೆ. ಪತಿಯೊಂದಿಗೆ ಬೂದಿಯಾದ ಎಳೆಯ ಜೀವಗಳ ನೋವು, ಆಕ್ರಂದನ ಕಿವಿಯಲ್ಲಿ ಅನುರಣಿಸಿದಂತಾಗುತ್ತದೆ. ಕೈ ಕಾಲು ಕಟ್ಟಿ, ಚಿತೆಗೆ ಎಸೆಯುತ್ತಿದ್ದರಂತೆ! ಇದೆಲ್ಲ ಇವರಿಗೆ ಹೆಮ್ಮೆಯ, ಸಂತೋಷದ ವಿಷಯವೇ? ನಮ್ಮಲ್ಲಿ ಎಲ್ಲಾದರೂ ಯಾರಾದರೂ ಎಂದಾದರೂ ‘ಪತಿ’ ಹೋದದ್ದು ಇದೆಯೇ? ಹೆಂಡತಿಯ ಹಿಂದೆ ಹೋಗಿ ಬೆಂಕಿಗೆ ಹಾರಿಕೊಂಡವರು ಇರುವರೇ? ‘ಮಹಾಪತಿ’ ಕಲ್ಲುಗಳು ಎಲ್ಲಿವೆ?

ಇದೀಗ ಮಹಿಳಾ ದಿನಾಚರಣೆಯಂದೇ ಕೋಲಾರದ ಸಂಸದ ಎಸ್.ಮುನಿಸ್ವಾಮಿ ಅವರು, ಹಣೆಗೆ ಬೊಟ್ಟು ಇಟ್ಟುಕೊಂಡಿರಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ನಿಂದಿಸಿರುವ ಸುದ್ದಿಯನ್ನು (ಪ್ರ.ವಾ., ಮಾರ್ಚ್‌ 9) ಓದಿದೆ. ಇವರ ಕ್ಷೇತ್ರದಲ್ಲಿ ನೀರು, ನೆರಳು, ರಸ್ತೆ, ಆಸ್ಪತ್ರೆ, ಹೊಟ್ಟೆಗೆ ಬಟ್ಟೆಗೆ ಇದೆಯೋ ಇಲ್ಲವೋ ಎಂದು ಕೇಳುವ ಬದಲು, ಆ ದುಡಿಯುವ ಮಹಿಳೆ ಬೊಟ್ಟು ಇಟ್ಟುಕೊಂಡಿರುವಳೋ, ತಾಳಿಸರ, ಗಾಜಿನಬಳೆ, ಕಾಲುಂಗುರ ಹಾಕಿದ್ದಾಳೆಯೋ ಎನ್ನುವ ಅಧಿಕಪ್ರಸಂಗ ಬೇಕೆ? ಎಲ್ಲರನ್ನೂ ‘ಮಾತೆ’ ಎಂದು ಗೌರವಿಸುವ ಬಿಜೆಪಿ ಪಕ್ಷವು ಮಹಿಳೆಯ ಮೇಲೆ ಅಸಭ್ಯವಾಗಿ ರೇಗಾಡಿದ್ದಕ್ಕಾಗಿ ಸಂಸದರಿಗೆ ತಮ್ಮ ವರ್ತನೆ ತಿದ್ದಿಕೊಳ್ಳುವಂತೆ, ಸಾರ್ವಜನಿಕವಾಗಿ
ಕ್ಷಮೆ ಕೋರುವಂತೆ ತಿಳಿಹೇಳುವುದೇ? ಕಾದು ನೋಡಬೇಕಿದೆ.
–ಸವಿತಾ ನಾಗಭೂಷಣ, ಶಿವಮೊಗ್ಗ

**

ಗಂಡಾಳ್ವಿಕೆಗೆ ಸಾಕ್ಷಿ
ಪಿತೃಪ್ರಧಾನ ಮತ್ತು ಅತಿರೇಕದ ಮತಾಂಧತೆ ಒಟ್ಟಾದರೆ ಏನಾಗಬಹುದು ಎನ್ನುವುದಕ್ಕೆ ಸಂಸದ ಮುನಿಸ್ವಾಮಿ ಸ್ಪಷ್ಟ ನಿದರ್ಶನ ಒದಗಿಸಿದ್ದಾರೆ. ಹೆಣ್ಣುಮಕ್ಕಳು ಯಾವ ಉಡುಪು ಧರಿಸಬೇಕು, ಯಾವ್ಯಾವ ಸ್ಥಾವರಗಳನ್ನು ಪ್ರವೇಶಿಸಬೇಕು, ಯಾವ ದೈಹಿಕ, ಜೈವಿಕ ಸ್ಥಿತಿಯಲ್ಲಿ ಪ್ರವೇಶಿಸಬೇಕು ಎಂದೆಲ್ಲಾ ಆಜ್ಞಾಪಿಸುತ್ತಿದ್ದ ಗಂಡು ಸಮಾಜ, ಈಗ ಆಕೆಯ ಹಣೆಯ ಮೇಲಿನ ಬೊಟ್ಟನ್ನೂ ನಿರ್ದೇಶಿಸಲು ಮುಂದಾಗಿದೆಯೇ? ಈ ಮಾತುಗಳು ಸಂಸದರ ಬಾಯಿಂದ ಹೊರಟಿದ್ದರೂ, ಇದರ ಹಿಂದಿನ ಮನಃಸ್ಥಿತಿಗೆ ಶತಮಾನಗಳ ಪರಂಪರೆ ಇದೆ. ಒಂದು ಪುರುಷಾಧಿಪತ್ಯದ ನೆಲೆಯೂ ಇದೆ.

ಹೆಣ್ಣು ತನ್ನಿಚ್ಛೆಯಂತೆ ಬದುಕುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದೆ. ತಾನು ಅನುಸರಿಸಲಿಚ್ಛಿಸುವ ಮತ-ಧರ್ಮವನ್ನು ಆಯ್ಕೆ ಮಾಡಿಕೊಳ್ಳುವಷ್ಟೇ, ಹೆಣ್ಣಿಗೆ ಆಯಾ ಧರ್ಮದ ಆಚರಣೆಗಳನ್ನು ಅನುಕರಿಸುವ, ಧಿಕ್ಕರಿಸುವ ಹಕ್ಕೂ ಇರುತ್ತದೆ. ಸಂವಿಧಾನವನ್ನು ಪ್ರತಿನಿಧಿಸುವ ಸಂಸದರಿಗೆ ಕಾಣಬೇಕಾಗಿದ್ದುದು ಆಕೆಯ ಜೀವನೋಪಾಯದ ಹಾದಿಯಲ್ಲಿ ಎದುರಾಗಬಹುದಾದ ಸವಾಲುಗಳು, ಸಂಕಷ್ಟಗಳೇ ವಿನಾ ಆಕೆಯ ಬರಿದಾದ ಹಣೆ ಅಲ್ಲ.

ಜನಪ್ರತಿನಿಧಿಗಳಲ್ಲಿ ಸಾಂವಿಧಾನಿಕ ಮೌಲ್ಯಗಳು ಕುಸಿಯುತ್ತಿರುವಂತೆಯೇ ನೈತಿಕ ಮೌಲ್ಯಗಳೂ ಶಿಥಿಲವಾಗುತ್ತಿರುವುದರ ಸಂಕೇತವಾಗಿ ಈ ಪ್ರಸಂಗವನ್ನು ನೋಡಬೇಕಿದೆ. ಸಂಸದರ ಹೇಳಿಕೆಯನ್ನು ಖಂಡಿಸಲೂ ಹಿಂಜರಿಯುವ ರಾಜಕೀಯ ನಾಯಕತ್ವದ ಬಗ್ಗೆ ಏನು ಹೇಳುವುದು? ಗಂಡಾಳ್ವಿಕೆಯ ಮನಃಸ್ಥಿತಿ ಕಲೆ, ಸಾಹಿತ್ಯ, ರಂಗಭೂಮಿಯನ್ನೂ ಆವರಿಸುತ್ತಿರುವ ಈ ಹೊತ್ತಿನಲ್ಲಿ, ಈ ಪ್ರಕರಣ ಸೂಕ್ಷ್ಮ ಸಂವೇದನೆಯ ಮನಸುಗಳನ್ನು ಬಡಿದೆಬ್ಬಿಸಬೇಕಲ್ಲವೇ? ಇಲ್ಲಿರುವುದು ರಾಜಕೀಯ ಅಥವಾ ತತ್ವ ಸಿದ್ಧಾಂತ ಅಲ್ಲ, ನಾವು ಪ್ರಶ್ನಿಸಬೇಕಿರುವುದು ಹೆಣ್ತನವನ್ನು ಗೌರವಿಸದ ಗಂಡಾಳ್ವಿಕೆಯ ದರ್ಪ, ಅಹಮಿಕೆಗಳನ್ನು

–ನಾ. ದಿವಾಕರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT