ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಜಾತ್ಯತೀತ, ಸಮಾಜವಾದ ಪದ ತೆಗೆದಿರುವುದು ಸಂವಿಧಾನ ದುರ್ಬಲಗೊಳಿಸುವ ಹುನ್ನಾರ

ಜಾತ್ಯತೀತ, ಸಮಾಜವಾದ, ಸಮಗ್ರತೆ– ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈಬಿಡುವುದು ಸರಿಯೇ? ಹೈಕೋರ್ಟ್‌ ಹಿರಿಯ ವಕೀಲ ಹಷ್ಮತ್‌ ಪಾಷ ಅವರ ಲೇಖನ
Published 23 ಸೆಪ್ಟೆಂಬರ್ 2023, 0:32 IST
Last Updated 23 ಸೆಪ್ಟೆಂಬರ್ 2023, 0:32 IST
ಅಕ್ಷರ ಗಾತ್ರ

ಸಂವಿಧಾನ ಪ್ರಸ್ತಾವನೆ ಎಂಬುದೇ ಒಂದು ಪುಟ್ಟ ಸಂವಿಧಾನವಿದ್ದಂತೆ. ಇದು ಸಂವಿಧಾನದ ಪರಿಚಯಾತ್ಮಕ ಹೇಳಿಕೆಯೂ ಹೌದು. ಪ್ರಸ್ತಾವನೆಯು ಸಂವಿಧಾನದ ಉದ್ದೇಶ, ಮೂಲ ತತ್ವಗಳು ಮತ್ತು ಗುರಿಗಳನ್ನು ತಿಳಿಸುವ ಕೀಲಿಕೈ ಕೂಡ ಆಗಿದೆ. ಜೊತೆಗೆ ಎಲ್ಲರಿಗೂ ರಕ್ಷಣೆ ಕೊಡಲು ಸಂವಿಧಾನವೇ ಆಧಾರ. ಆದರೆ, ರಾಜಕೀಯ ಲಾಭಕ್ಕಾಗಿ ಸಮಾಜವನ್ನು, ಜನರನ್ನು ಒಡೆದು ಆಳುವ, ವಿಘಟಿಸುವ ಕೃತ್ಯಗಳು ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಾಂಗದ ಮೇಲಿದೆ

––––

ಸಂವಿಧಾನ ರಚನಾ ಸಭೆ 1946ರ ಡಿಸೆಂಬರ್‌ 13ರಂದು ಜರುಗಿದಾಗ ಆ ಸಭೆಯಲ್ಲಿ ಹೊರಹೊಮ್ಮಿದ ವಸ್ತುನಿಷ್ಠತೆಯ ಪ್ರತೀಕವೇ ಸಂವಿಧಾನದ ಪ್ರಸ್ತಾವನೆ. ಮೂಲ ಸಂವಿಧಾನದ 368ನೇ ವಿಧಿಯನ್ನು ಭವಿಷ್ಯದ ತಿದ್ದುಪಡಿಗಾಗಿಯೇ ರೂಪಿಸಲಾಯಿತು. ಈ ಹಿನ್ನೆಲೆಯಲ್ಲಿ 1976ರಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಪ್ರಸ್ತಾವನೆ ಎಂಬುದೇ ಒಂದು ಪುಟ್ಟ ಸಂವಿಧಾನ. ಇದು ಸಂವಿಧಾನದ ಪರಿಚಯಾತ್ಮಕ ಹೇಳಿಕೆ. ಉದ್ದೇಶ, ಮೂಲ ತತ್ವಗಳು ಮತ್ತು ಗುರಿಗಳನ್ನು ತಿಳಿಸುವ ಕೀಲಿಕೈ.

ಹಷ್ಮತ್‌ ಪಾಷ ಹಿರಿಯ ವಕೀಲರು, ಹೈಕೋರ್ಟ್‌

ಹಷ್ಮತ್‌ ಪಾಷ ಹಿರಿಯ ವಕೀಲರು, ಹೈಕೋರ್ಟ್‌

ಸಂವಿಧಾನದ ಕರಡನ್ನು 1949ರ ನವೆಂಬರ್ 26ರಂದು ಅಂಗೀಕರಿಸಿದ ಸಂದರ್ಭದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳ ಸೇರ್ಪಡೆ ಈಗಲೇ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದವು. ಮುಂದೆ ಎಂದಾದರೂ ಒಂದು ದಿನ ತಿದ್ದುಪಡಿ ಮೂಲಕ ಈ ಪದಗಳನ್ನು ಸೇರಿಸಿದರಾಯ್ತು ಎಂಬ ಸಲಹೆ ಕೇಳಿ ಬಂದಿತ್ತು. ವಾಸ್ತವದಲ್ಲಿ 1974–75ರ ಸಂದರ್ಭದಲ್ಲಿ ದೇಶದಲ್ಲಿ ದುರ್ಬಲರ ಮೇಲಿನ ತಾರತಮ್ಯ, ನಿಮ್ನ ಜಾತಿಯ ಜನರಿಗೆ ನೀಡಲಾಗುತ್ತಿದ್ದ ಉಪಟಳ ಮತ್ತು ಕೋಮು ಗಲಭೆ ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು. ಇದನ್ನು ಅರಿತ ಇಂದಿರಾ ಗಾಂಧಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಪೀಠಿಕೆಯಲ್ಲಿ ಈ ಪದಗಳನ್ನು ಸೇರ್ಪಡೆ ಮಾಡಿದರು. ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾದ ಯಾವುದೇ ತತ್ವದ ಉಲ್ಲಂಘನೆಯಾಗಿದೆ ಎಂದು ಯಾರೂ ಕೂಡಾ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಅವಕಾಶ ಇರುವುದಿಲ್ಲ. ಆದಾಗ್ಯೂ, ನ್ಯಾಯಾಧೀಶರು ಇದನ್ನು ತಮ್ಮ ತರ್ಕ ಮತ್ತು ತೀರ್ಪುಗಳಲ್ಲಿ ಹೆಚ್ಚುವರಿ ಅಂಶವಾಗಿ ಬಳಸಬಹುದಾಗಿದೆ. ಇದಕ್ಕೆ ಪೂರಕವಾಗಿ ಹಿಜಾಬ್‌ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಸ್ತಾವನೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿರುವುದನ್ನು ಗಮನಿಸಿಬಹುದು. 

ದೇಶದಾದ್ಯಂತ 1970ರ ದಶಕದಲ್ಲಿ ಜನಜೀವನ ಹಾಗೂ ಸಾಮಾಜಿಕ ಪರಿಸ್ಥಿತಿ ಬಿಗಡಾಯಿಸಿತ್ತು. ಒಂದೆಡೆ ಪ್ರಕೃತಿಯ ವೈಪರೀತ್ಯಗಳು ಘೀಳಿಡುತ್ತಿದ್ದರೆ ಮತ್ತೊಂದೆಡೆ ಸಮಾಜದಲ್ಲಿನ ಜಾತಿ ಪದ್ಧತಿಗೆ ಕಡಿವಾಣವೇ ಇಲ್ಲವಾಗಿತ್ತು. ಜಾತಿಯ ಹೆಸರಿನಲ್ಲಿನ ಶೋಷಣೆ, ಅಪಮಾನ, ಪಾಳೇಗಾರಿಕೆ ವಿಜೃಂಭಿಸುತ್ತಿತ್ತು. ಹಳ್ಳಿಯಿಂದ ಬಂದ ನನ್ನಂಥವನು ಇದನ್ನೆಲ್ಲಾ ಕಣ್ಣಾರೆ ಕಂಡದ್ದಿದೆ. ಆ ದಿನಗಳಲ್ಲಿ ಏರುತ್ತಿದ್ದ ಜನಸಂಖ್ಯೆ, ಜಾತಿ ತಾರತಮ್ಯ, ಇವುಗಳನ್ನೆಲ್ಲಾ ಗಮನಿಸಿದ ಇಂದಿರಾ, ಗರೀಬಿ ಹಠಾವೊ ಘೋಷಿಸಿದರು. ಬಡವರಿಗೆ ನಿವೇಶನ ಹಂಚಿದರು. ಲಕ್ಷಾಂತರ ಜನರು ಉಳುವವರೇ ಒಡೆಯರಾದರು... ಹೀಗೆ ಹತ್ತಾರು ಜನಕಲ್ಯಾಣ ಕಾರ್ಯಕ್ರಮ ಜಾರಿಯಾಗಲು ಈ ಪೀಠಿಕೆ ನೆರವಾಯಿತು.

ಈ ಪದಗಳನ್ನು ಸಂವಿಧಾನದಲ್ಲಿ ಸೇರಿಸಬೇಕಾದ ತುರ್ತು ಅಂದು ಎಷ್ಟಿತ್ತೋ ಇಂದು ಅದರ ಮುಂದುವರಿಕೆಯೂ ಅಷ್ಟೇ ಅನಿವಾರ್ಯವಿದೆ. ಯಾಕೆಂದರೆ, ಸಮಾಜದಲ್ಲಿನ ಅಪಮಾನ, ಶೋಷಣೆ, ಅಶಕ್ತರ ಮೇಲಿನ ದೌರ್ಜನ್ಯ ಇನ್ನೂ ದೂರವಾಗಿಲ್ಲ. ಕಲ್ಯಾಣ ರಾಜ್ಯದ ಉತ್ತುಂಗದ ನಾಗರಿಕತೆಯನ್ನು ನಾವಿನ್ನೂ ತಲುಪಿಲ್ಲ. 1975ರಲ್ಲಿನ ಸಾಮಾಜಿಕ ಪರಿಸ್ಥಿತಿಯೇ ಇಂದು ಕೂಡಾ ಬೇರೊಂದು ರೂಪದಲ್ಲಿ ತಾಂಡವವಾಡುತ್ತಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯ 2015ರಲ್ಲಿ, ಭಾರತೀಯ ಸಂವಿಧಾನದ ಪ್ರಸ್ತಾವನೆಯ ಚಿತ್ರವನ್ನು ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳಿಲ್ಲದೆ ಜಾಹೀರಾತು ಮೂಲಕ ಪ್ರಕಟಿಸಿದ್ದು ಟೀಕೆ, ಆಕ್ರೋಶಗಳಿಗೆ ಕಾರಣವಾಗಿತ್ತು. ಇದಕ್ಕೆ ಸರ್ಕಾರ ಪರವಿದ್ದ ಸಚಿವರು, ‘ಸಂವಿಧಾನ ಅಂಗೀಕಾರದ ಸಂದರ್ಭದಲ್ಲಿ ಬಳಸಿದ ಮೊದಲ ಪ್ರಸ್ತಾವನೆಯ ಚಿತ್ರವನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ’ ಎಂಬ ಸಮರ್ಥನೆ ನೀಡಿದ್ದರು. ‘ನೆಹರೂ ಅವರಿಗೆ ಜಾತ್ಯತೀತತೆಯ ಬಗ್ಗೆ ತಿಳಿವಳಿಕೆ ಇರಲಿಲ್ಲವೇ? ಈಗ ಅದರ ಬಗ್ಗೆ ಚರ್ಚೆಯಾದರೆ ಏನು ಹಾನಿ? ನಾವು ಮೂಲ ಪ್ರಸ್ತಾವನೆಯನ್ನು ರಾಷ್ಟ್ರದ ಮುಂದೆ ಇಟ್ಟಿದ್ದೇವೆ‌’ ಎಂಬ ತರ್ಕ ಮಂಡಿಸಿದ್ದರು. ನಂತರ 2020ರಲ್ಲಿ, ಸಂಸದರೊಬ್ಬರು ‘ಸಮಾಜವಾದ’ ಎಂಬ ಪದವನ್ನು ಪ್ರಸ್ತಾವನೆಯಿಂದ ತೆಗೆದುಹಾಕುವಂತೆ ನಿರ್ಣಯ ಮಂಡಿಸಿದ್ದರು.

ಇದರ ಬೆನ್ನಲ್ಲೇ 2020ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ, ‘ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಬೇಕು’ ಎಂದು ಕೋರಲಾಗಿತ್ತು. ಬಲರಾಮ್ ಸಿಂಗ್, ಕರುಣೇಶ್ ಕುಮಾರ್ ಶುಕ್ಲಾ, ಪ್ರವೇಶ್ ಕುಮಾರ್ ಎಂಬವರು ಈ ಕುರಿತಾದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಅರ್ಜಿಯಲ್ಲಿ ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ‘ರಾಜಕೀಯ ಪಕ್ಷವನ್ನು ನೋಂದಾಯಿಸುವ ಮುನ್ನ ಸಮಾಜವಾದ ಮತ್ತು ಜಾತ್ಯತೀತತೆಯ ತತ್ವಗಳನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿದೆ’ ಎಂಬ ಷರತ್ತಿಗೆ ಈ ಅರ್ಜಿದಾರರು ತಕರಾರು ತೆಗೆದಿದ್ದರು.

ಈ ಹಿನ್ನೆಲೆಯಲ್ಲಿ ಇಂದಿನ ಬೆಳವಣಿಗೆಯನ್ನು ಗಮನಿಸಿದಾಗ, ಪ್ರತಿಯೊಬ್ಬ ಪ್ರಜೆಯೂ ಅಣ್ಣ ತಮ್ಮಂದಿರಂತೆ ಬಾಳಬೇಕು. ಜಾತ್ಯತೀತ ಪರಿಕಲ್ಪನೆಯಲ್ಲಿ ಸಮಾಜ ಸುಧಾರಣೆಯಾಗಬೇಕು. ರಾಷ್ಟ್ರದ ಏಕತೆಗೆ ಶ್ರಮಿಸಬೇಕು ಎಂಬ ತಿಳಿವಳಿಕೆ ಮೂಡಿಸುವುದು ಸರ್ಕಾರದ ಕರ್ತ್ಯವವೂ ಹೌದು. ಇವತ್ತು ರಾಜಕೀಯ ಮೌಲ್ಯಗಳು, ಆದ್ಯತೆಗಳು ಬದಲಾಗಿವೆ. ಆಳುವ ಪಕ್ಷದ ಮನಃಸ್ಥಿತಿ ಅವಕಾಶವಾದಕ್ಕೆ ಪಕ್ಕಾಗಿದೆ. ಎಲ್ಲರಿಗೂ ರಕ್ಷಣೆ ಕೊಡುವುದಕ್ಕೆ ಸಂವಿಧಾನವೇ ಆಧಾರ. ಆದರೆ, ರಾಜಕೀಯ ಲಾಭಕ್ಕಾಗಿ ಸಮಾಜವನ್ನು, ಜನರನ್ನು ಒಡೆದು ಆಳುವ, ವಿಘಟಿಸುವ ಕೃತ್ಯಗಳು ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತಾಂಗದ ಮೇಲಿದೆ. ಪ್ರಜಾಪ್ರಭುತ್ವ ದುರ್ಬಲವಾಗದಂತೆ ಕಾಪಾಡಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಸರ್ವಧರ್ಮ ಸಮನ್ವಯ ಇಲ್ಲದ ಶಾಸಕಾಂಗ ವ್ಯವಸ್ಥೆಯಿಂದ ದೇಶದ ಪ್ರಗತಿಚಕ್ರ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ.

ಲೇಖನ– ಹಷ್ಮತ್‌ ಪಾಷ, ಹಿರಿಯ ವಕೀಲರು, ಹೈಕೋರ್ಟ್‌

ನಿರೂಪಣೆ: ಬಿ.ಎಸ್. ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT