ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಹಿಂದೂ ಪದದ ಕುರಿತ ಗುದ್ದಾಟವೇ ಬಾಲಿಶ

ಹಿಂದೂ ಎಂಬುದು ಭಾರತ ಮೂಲದ ಪದ ಅಲ್ಲವೇ?
Last Updated 11 ನವೆಂಬರ್ 2022, 19:30 IST
ಅಕ್ಷರ ಗಾತ್ರ

‘ಹಿಂದೂ’ ಎಂಬ ಪದದ ವ್ಯಾಖ್ಯಾನದಲ್ಲಿ ಅಷ್ಟೇನೂ ಪ್ರಸ್ತುತವಲ್ಲದ ಕೆಲವು ಪ್ರಶ್ನೆಗಳನ್ನು ಪದೇ ಪದೇ ಎತ್ತಲಾಗುತ್ತಿದೆ. ಆ ಪದವು ಪ್ರಚಲಿತವಾಗಿದೆ ಮತ್ತು ಅದನ್ನು ಬಳಸುತ್ತಿದ್ದೇವೆ. ಆದಾಗ್ಗ್ಯೂ ಪದವು ಹೇಗೆ ಮತ್ತು ಎಲ್ಲಿಂದ ಬಂದಿತೆಂಬ ವಿಷಯದಲ್ಲಿ ಸಂಶಯಾಸ್ಪದ ತೀರ್ಮಾನಗಳಿಂದಾಗಿ ವರ್ತಮಾನದಲ್ಲಿ ಮತ್ತೆ ಗೊಂದಲ ಉಂಟಾಗಿದೆ. ಪದ ಹೇಗೇ ಬಂದಿರಲಿ, ಅದಕ್ಕೊಂದು ವ್ಯಾಪ್ತಿ ದಕ್ಕಿದೆಯಾದ್ದರಿಂದ ಅದನ್ನು ಬಳಸಲು ಸಂಕೋಚವೇನೂ ಇರಲಾರದು. ಆದರೆ ನಮ್ಮಲ್ಲೇ ಸಂಕೋಚ ಪ್ರವೃತ್ತಿ ತೋರ್ಪಟ್ಟಾಗ ಅದಕ್ಕೆ ವಿರೋಧ ವ್ಯಕ್ತವಾಗುತ್ತದೆಯೆಂದು ಭಾಸವಾಗುತ್ತದೆ.

**

ಅತ್ಯಂತ ಪ್ರಾಚೀನ ಸಾಹಿತ್ಯವಾದ ಋಗ್ವೇದದಲ್ಲಿ ಹಲವು ಬುಡಕಟ್ಟುಗಳ ಪ್ರಸ್ತಾಪವಿದೆ: ಪಣಿಗಳು, ದಾಸ - ದಸ್ಯು - ಕೀಕಟ - ಶಮ್ಯು, ಮುಂತಾದವು. ಮಹಾಭಾರತದಲ್ಲಿ ಆರಟ್ಟರು ಮತ್ತು ಚರಕಸಂಹಿತೆಯಲ್ಲಿ ಅಂಬಷ್ಠರು ಸಹ ಇದ್ದಾರೆ. ಇವರೆಲ್ಲಾ ಆರ್ಯರೆಂಬುವವರಿಂದ ಭಿನ್ನರು, ಆದರೆ ಯಾರು ಹಿಂದೂ, ಯಾರು ಮುಂದು ಎಂಬ ಪ್ರಶ್ನೆ ಬಾಧಿಸಿಲ್ಲ. ಪ್ರಾಚೀನ ಪರ್ಷಿಯಾದ ಅವೆಸ್ತಾ ಗ್ರಂಥದಲ್ಲಿಯೂ ‘ಹಿಂದೂ’ ಎಂಬ ಪದ ಲಭ್ಯವಿಲ್ಲ; ಅಂತೆಯೇ ವೈದಿಕ ಸಾಹಿತ್ಯದಲ್ಲಿ ಸಹ. ಋಗ್ವೇದದಲ್ಲಿ ಕುಭ್ಯರು ಎಂಬ ಒಂದು ಬಣ ಇದೆ. ಕುಭ ಮತ್ತು ಕೋಫೆನ್ ವಾಯವ್ಯದಲ್ಲಿರುವ ಕಾಬೂಲಿಗೆ ಇದ್ದ ಹೆಸರುಗಳು. ಆರ್ಯರು ಆ ಕಡೆಯಿಂದ ಸರಸ್ವತಿ ನದಿಯಾಚೆಯ ಗಂಗಾ ಬಯಲಿಗೆ ಕ್ರಮೇಣ ತಲುಪಿದ್ದು ಇತಿಹಾಸ. ಹಿಂದುಸ್ತಾನದ ಕಲ್ಪನೆಯು ಆ ನಂತರದ ಸಂಗತಿ. ಆರ್ಯರು ಹೊರಗಿನಿಂದ ಬಂದವರಲ್ಲವೆಂದು ಮಾನ್ಯ ಮಾಡಿದರೂ ಅದಕ್ಕೆ ಮುನ್ನವೇ ಒಳಗಿದ್ದವರ ಸಮುದಾಯದ ಹೆಸರೇನೆಂಬ ತಿಳಿವು ನಮಗೆ ದೊರೆಯದು. ಆರ್ಯರು ಸಮ್ಮಿಲನಗೊಂಡ ನಂತರದಲ್ಲಿ ಕೂಡ ವಿವಿಧ ಬುಡಕಟ್ಟುಗಳ ಹೆಸರುಗಳಿವೆಯೇ ವಿನಾ ಇಡೀ ಸಮುದಾಯದ್ದು ಇಲ್ಲ.

ಹಾಗಿದ್ದರೆ ನಮ್ಮ ಸಮುದಾಯದ ನಾಮಧೇಯವೇನು? ಆಪಸ್ತಂಬ ಧರ್ಮಸೂತ್ರವು ಆರಂಭವಾಗುವುದೇ ನಾಲ್ಕು ವರ್ಣಗಳ ಹೆಸರುಗಳಿಂದ. ಮನು ಮುಂತಾದ ಧರ್ಮಶಾಸ್ತ್ರಕಾರರು ಮತ್ತು ಭಗವದ್ಗೀತೆ ಅದೇ ಕಟ್ಟುಪಾಡಿಗೆ ಸಿಲುಕಿವೆ. ಮೂಲಭೂತವಾದ ಪ್ರಶ್ನೆ ಇದು: ಈ ನಾಲ್ಕನ್ನೂ ಒಳಗೊಂಡ ಒಂದು ಸಮುದಾಯದ ಹೆಸರೇನು? ಅಂದರೆ, ಶ್ರೇಣೀಕೃತ ಸಮಾಜದಲ್ಲಿ ಒಟ್ಟಾಗಿ ಜೀವನ ಸಾಗಿಸುತ್ತಿದ್ದ ಇಡೀ ಸಮೂಹದ ಹೆಸರೇನು? ಸೋಜಿಗವೆಂದರೆ, ನಮ್ಮಲ್ಲಿ ಸಮಷ್ಟಿಯ ನಾಮಪದವೇ ಇಲ್ಲ. ಕಡೇಪಕ್ಷ ಅಮರಕೋಶದಲ್ಲಿಯಾದರೂ ಇರಬೇಕಿತ್ತು, ಆದರೆ ಇಲ್ಲ. ಅಶೋಕನ ಶಾಸನಗಳು ಬೋಧನೆ ಮಾಡುತ್ತವಲ್ಲಾ, ಯಾರಿಗೆ? ತಥಾಕಥಿತ ಹಿಂದೂಗಳಿಗಂತೂ ಅಲ್ಲ, ಏಕೆಂದರೆ ಅಂತಹ ಸಮಷ್ಟಿಯನ್ನು ಹಾಗೆ ಕಲ್ಪಿಸಿಕೊಳ್ಳಲಾಗಿರಲಿಲ್ಲ. ಏಳನೆಯ ಶತಮಾನದ ಬಾಣಭಟ್ಟ ತನ್ನ ‘ಹರ್ಷಚರಿತ’ದಲ್ಲಿ ಹಲವು ವೃತ್ತಿಗಳ ಜನರನ್ನು ನಮೂದಿಸಿದ್ದಾನೆ, ಆದರೆ ಅವರೆಲ್ಲರೂ ಸೇರಿದ ಸಮುದಾಯಕ್ಕೆ ಒಂದು ನಿರ್ದಿಷ್ಟ ಹೆಸರಿಲ್ಲ. ಜಯದೇವ ಕವಿಯು ಅವತಾರಪುರುಷನು ಮ್ಲೇಚ್ಛರನ್ನು ಕಂಗಾಲಾಗಿಸುತ್ತಾನೆ, ಎನ್ನುತ್ತಾನೆ (ಮ್ಲೇಚ್ಛಾನ್ ಮೂರ್ಛಯತೇ). ಆದರೆ ಊರ್ಜಿತಗೊಳಿಸಲಾಗುವ ಒಟ್ಟು ಬಣದ ಹೆಸರೇನೆಂಬುದನ್ನು ತಿಳಿಸುವುದಿಲ್ಲ.

ನಮ್ಮ ದೇಶಕ್ಕೆ ‘ಭಾರತ’ ಎಂಬ ಹೆಸರೇಕಿದೆಯೆಂಬುದಕ್ಕೆ ಉತ್ತರವು ಐತಿಹ್ಯ ರೂಪದಲ್ಲಿದೆ, ಯಾವನೋ ಭರತನ ಮೂಲವನ್ನು ಅರಸಬೇಕಾಗಿದೆ. ಅದರಿಂದ ಊನವೇನೂ ಉಂಟಾಗಿಲ್ಲ. ‘ಭಾ’ ಎಂದರೆ ಜ್ಞಾನ, ಅದರಲ್ಲಿ ಆಸಕ್ತವಾಗಿರುವುದು ಭಾರತ. ಇದಕ್ಕೆ ಸಂವಾದಿಯಾಗಿ ‘ಹಿಂದೂ’ ಎಂಬ ಪದವನ್ನು ಅರ್ಥೈಸಲು ಸಾಧ್ಯವಾಗುವುದಿಲ್ಲ. ಹೋಗಲಿ, ಹ್ಯುಯನ್‍ತ್ಸಾಂಗ್‍ನ ಕಾಲದಲ್ಲಿ ‘ಹಿಂದೂಕುಶ್’ ಎಂಬುದಿತ್ತೇ, ಅವನು ಆ ಮಾರ್ಗವಾಗಿ ಬಂದನೇ? ಅಥವಾ, ಅವನಿಗಿಂತಲೂ ಮುಂಚೆ ಎಂದೋ ಬಂದಿದ್ದವರಿಂದಾಗಿ ಆ ಹೆಸರು ಬಂದಿತೆ? ಸಂಸ್ಕೃತದಲ್ಲಿ ಒಂದು ಪರಿಪಾಟವಿದೆ: ಪದಗಳ ವ್ಯುತ್ಪತ್ತಿ ಹೇಳುವುದು. ರಂಜನೆ ನೀಡುವವನು ರಾಜ (ರಂಜಯತಿ ಇತಿ), ಶುಕ್ ಅಸ್ಯ ಇತಿ ಶೂದ್ರಃ (ಬವಣೆಗೆ ಸಿಲುಕಿದವನು ಶೂದ್ರ), ಇತ್ಯಾದಿ. ನಾಮಪದಗಳೆಲ್ಲಾ ಕ್ರಿಯಾಸೂಚಕ ‘ಆಖ್ಯಾತ’ಗಳಿಂದ ಬಂದಿವೆ; ಆದರೆ ಆಖ್ಯಾತಗಳಿಗೆ ನಿರ್ದಿಷ್ಟವಾದ ಅರ್ಥ ಹೇಗೆ ನೀಡಲಾಯಿತೋ ತಿಳಿಯದು. ಇರಲಿ, ‘ಹಿಂದೂ’ ಎಂಬ ಪದಕ್ಕೆ ವ್ಯುತ್ಪತ್ತಿ ಏನು? ‘ಹಿಂಕರೋತಿ ಇತಿ ಹಿಂದುಃ’ ಎಂದು ಇಟ್ಟುಕೊಳ್ಳಬಹುದೇ? ಅದು ನಮ್ಮ ತಥಾಕಥಿತ ಕ್ಷಾತ್ರಧರ್ಮದ ಸೂಚಕವೂ ಆಗುತ್ತದೇನೊ! ಅಥವಾ ‘ಹಿಂದೂ’ ಎಂಬುದು ‘ಸಿಂಧು’ ಎಂಬುದಕ್ಕೆ ಸಂಬಂಧಿಸಿದ್ದೆ?

ತೌಲನಿಕ ಭಾಷಾಶಾಸ್ತ್ರದಲ್ಲಿ ಗುರುತಿಸಿರುವಂತೆ ಇಂಡೋ - ಯೂರೋಪಿಯನ್ ಭಾಷಾವರ್ಗದಲ್ಲಿ ‘ಶತಂ’ ಮತ್ತು ‘ಕೆಂಟುಂ’ ಎಂದು ಎರಡು ಶಾಖೆಗಳಿವೆ. ಒಂದು ವರ್ಗದ ‘ಶ’ ಇನ್ನೊಂದು ವರ್ಗದಲ್ಲಿ ‘ಹ’ ಆಗಿ ಕಾಣಿಸಿಕೊಳ್ಳುತ್ತದೆ ಎಂಬುದು ಅದರ ಸಾರ. ‘ಶತಂ‘ ಎಂಬುದು ‘ಹುಂದ್’ (ಹಂಡ್ರಡ್) ಆಗುತ್ತದೆ; ಹಾಗೆಯೇ ‘ಸಿಂಧು’ ಎಂಬುದು ‘ಹಿಂದು’ ಆಗುತ್ತದೆ. ಗ್ರಿಮ್ ನಿಯಮ, ಫಾರ್ಚುನಟೋವ್ ನಿಯಮ ಇತ್ಯಾದಿಗಳು ಇಂಡೋ-ಜರ್ಮನಿಕ್ ಮತ್ತು ಇಂಡೋ-ಇರಾನಿಯನ್ ಭಾಷೆಗಳಲ್ಲಿ ಪರಸ್ಪರ ವ್ಯತ್ಯಾಸಗಳು ಉಂಟಾಗಿರುವುದನ್ನು ಸಮರ್ಪಕವಾಗಿ ವಿವರಿಸಿವೆ. ಭಾಷಾಶಾಸ್ತ್ರದ ಅಧ್ಯಯನದಿಂದ ‘ಸಿಂಧು’ ಮತ್ತು ‘ಹಿಂದು’ ಪದಗಳ ನಡುವಣ ಸಾಮ್ಯವು ಆಕಸ್ಮಿಕವಲ್ಲವೆಂಬುದು ಸಿದ್ಧವಾಗಿದೆ; ಆದರೆ ‘ಹಿಂದೂ’ ಮತ್ತು ‘ಸನಾತನ ಧರ್ಮ’ ಎಂಬ ಸೂತ್ರದ ಸಮರ್ಥನೆಗೆ ವಿವರಣೆ ನೀಡುವುದು ದುಷ್ಕರ. ಯಾವ ಕಾಲದಲ್ಲಿ ಮತ್ತು ಏಕೆ ಒಂದು ಸಮುದಾಯಕ್ಕೆ ‘ಹಿಂದೂ’ ಎಂಬ ಹೆಸರು ಬಂದಿತು, ಅದನ್ನು ಕೊಟ್ಟವರು ಯಾರು, ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಹಾಗೂ ನಿಖರ ಉತ್ತರ ನೀಡಹೊರಡುವುದು ಹುಚ್ಚುಸಾಹಸವಾಗುತ್ತದೆ. ಆದರೆ ಅವೆರಡರ ನಡುವಣ ಸಂಬಂಧವು ಕಾಲ್ಪನಿಕವಂತೂ ಅಲ್ಲ. ಹಿಂದೂಗಳು ನೀತಿವಂತರೋ ಅಲ್ಲವೋ ಎಂಬುದು ಬೇರೊಂದು ಭಾಷೆಯ ‘ಸಿಂಧು’ ಪದದ ಅರ್ಥವನ್ನು ಆಧರಿಸಿರುವುದು ಸಾಧ್ಯವಿಲ್ಲದ ಮಾತು. ಅದರ ಬಗೆಗಿನ ಗುದ್ದಾಟವು ಬಾಲಿಶವಾಗುತ್ತದೆ.

ನಿರ್ದಿಷ್ಟವಾಗಿ ಕನ್ನಡದ ಸಂದರ್ಭದಲ್ಲಿ ‘ಹಿಂದೂ’ ಎಂಬ ಪದವು ನಮ್ಮ ಯಾವ ಪ್ರಾಚೀನ ಅಭಿಜಾತ ಸಾಹಿತ್ಯ ಕೃತಿಯಲ್ಲೂ ಇಲ್ಲ: ವಡ್ಡಾರಾಧನೆ, ಗದಾಯುದ್ಧ, ವಚನಗಳು ಇಲ್ಲೆಲ್ಲೂ ಅದರ ಸುಳಿವಿಲ್ಲ. ಆದ್ದರಿಂದ ಆ ಸಂಬಂಧವಾಗಿ ಭಾವೋದ್ರೇಕವು ತೀರಾ ಅಪ್ರಾಸಂಗಿಕ. ಒಂದು ಹೆಸರಿನ ಊಹಿತ ಅರ್ಥದಿಂದ ಗಾಸಿಗೊಳ್ಳುವುದು ಸರ್ವಥಾ ಅನರ್ಥಕ. ಗಾಸಿಗೊಳ್ಳುವಂತಿದ್ದರೆ ಸ್ಚತಂತ್ರವಾಗಿ ‘ಹಿಂದೂ’ ಎಂಬುದನ್ನು ‘ಮುಂದು’ ಎಂದು ಪರಿವರ್ತಿಸಿಕೊಳ್ಳಲು ಅಡ್ಡಿಯಿಲ್ಲ. ಸರ್ವೋಚ್ಚ ನ್ಯಾಯಾಲಯವು ‘ಹಿಂದೂ’ ಎಂಬುದು ಒಂದು ಜೀವನ ಮಾದರಿ ಎಂದು ತೀರ್ಪು ಕೊಟ್ಟಿದೆ. ಅದೆಂತಹ ಮಾದರಿ ಎಂಬುದು ಆಚರಣೆಯಲ್ಲಿ ತಿಳಿದಿಲ್ಲದ ವಿಚಾರವಲ್ಲ. ಆ ಮಾದರಿಯು ಯೋಗ್ಯವಾದುದೂ ಅಲ್ಲ. ಏಕೆಂದರೆ, ನಮ್ಮದು ಶ್ರೇಣೀಕೃತ ಮಾದರಿ, ಅದನ್ನು ಬದಲಾಯಿಸುವಂತೆಯೂ ಇಲ್ಲ. ಹಾಗಾದರೆ ಮುಂದಿನ ಹೆಜ್ಜೆ ಏನು? ನಿಜಕ್ಕೂ ಉತ್ತಮ ಪರ್ಯಾಯವನ್ನು ಕಂಡುಕೊಳ್ಳುವುದು ನಮ್ಮ ಕೈಯಲ್ಲೇ ಇದೆ: ಹಿಂದುತ್ವದ ಬದಲು ಭಾರತೀಯತೆ ಎಂಬ ತತ್ವಕ್ಕೆ ಪುಷ್ಟಿ ನೀಡಿದರೆ ಸಾಕು. ಹಿಂದುತ್ವದಲ್ಲಿಲ್ಲದ ಸಮಷ್ಟಿಭಾವವು ಭಾರತೀಯತೆಯಲ್ಲಿದೆ, ಏಕೆಂದರೆ ಅದು ಪ್ರತ್ಯೇಕತೆಯನ್ನು ಪೋಷಿಸುವುದಿಲ್ಲ. ಒಂದು ಪದವನ್ನು ಬೇರಾವುದೋ ಭಾಷೆಯಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದು ಗೌಣ, ನಾವು ನಮ್ಮ ಭಾಷೆಯಲ್ಲಿ ಯಾವ ವ್ಯಾಪ್ತಿಯನ್ನು ಆ ಪದಕ್ಕೆ ನೀಡುತ್ತೇವೆಂಬುದು ಮಾತ್ರವೇ ಪ್ರಸ್ತುತವಾದ್ದು. ಅಷ್ಟಾದರೂ ಮುಜುಗರವು ಗಾಢವಾಗುವಂತಿದ್ದರೆ ಪರ್ಯಾಯವು ಲಭ್ಯವಿದೆ: ಹಿಂದುತ್ವವನ್ನು ದೂರೀಕರಿಸೋಣ, ಭಾರತೀಯತೆಯನ್ನು ಸ್ವೀಕರಿಸೋಣ ಮತ್ತು ಪೋಷಿಸೋಣ.

ಲೇಖಕ: ಬರಹಗಾರ ಮತ್ತು ಸಂಸ್ಕೃತಿ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT