ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಪರಿಷ್ಕರಣೆ ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯಲಿ

ಪರಿಷ್ಕೃತ ಪಠ್ಯದ ಕುರಿತು ಸಾರ್ವಜನಿಕರಿಂದ ಆಕ್ಷೇಪ ಆಹ್ವಾನ ಸರಿಯಾದ ಕ್ರಮವೇ?
Last Updated 10 ಜೂನ್ 2022, 20:29 IST
ಅಕ್ಷರ ಗಾತ್ರ

ಶಿಕ್ಷಕರು, ಸಾಹಿತಿಗಳು, ಪಠ್ಯಪುಸ್ತಕಗಳ ರಚನಾಕಾರರು, ರಾಜನೀತಿಯ ಒಲವು ಹೊಂದಿದ್ದರೆ ತಪ್ಪಲ್ಲ. ಆದರೆ ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಅಥವಾ ರಾಜಕೀಯ ನಾಯಕರ ಬಾಯಾಳುಗಳ ಹಾಗೆ ವರ್ತಿಸಬಾರದು, ಪಠ್ಯ ರಚಿಸಬಾರದು. ಶಿಕ್ಷಣ ಕ್ಷೇತ್ರದಿಂದ ಗೆಲ್ಲಬೇಕಾದುದು ಪಕ್ಷಗಳಲ್ಲ ಗೆಲ್ಲಬೇಕಾದುದು ದೇಶ ಮತ್ತು ಮನುಷ್ಯತ್ವ. ಯಾರು ಏನೇ ಬರೆದರೂ ಕಡೆಗೂ ಉಳಿಯುವುದು ಸತ್ಯ ಮಾತ್ರ.

***

ಅರಿವು ಎನ್ನುವುದು ಮನುಷ್ಯನ ಮತ್ತು ಎಲ್ಲಾ ಜೀವಿಗಳ ಅನುಭವ ಶೋಧನೆ ಹಾಗೂ ಸಾಧನೆಗಳ ಫಲ. ಅರಿವು ಅನುಭವಗಳು ಶಿಕ್ಷಣ ಕ್ಷೇತ್ರವನ್ನು ಜೀವಂತವಾಗಿಯೂ ಚಲನಶೀಲವಾಗಿಯೂ ಇಟ್ಟಿವೆ. ಶಿಕ್ಷಣದಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಎಂದು ಎರಡು ವಿಧ. ಭಾಷಾ ರಚನೆಯಲ್ಲಿ ಮೌಖಿಕ ಹಾಗೂ ಗ್ರಾಂಥಿಕ ಎಂದು ಎರಡು ವಿಧ. ಎಲ್ಲ ಕಡೆಯೂ ಪಠ್ಯಗಳಿರುತ್ತವೆ. ಅವುಗಳ ಇತಿಹಾಸವನ್ನು ಗಮನಿಸಿದರೆ ರಚನೆ/ಪರಿಷ್ಕರಣೆ/ಪುನರ್‌ ರಚನೆ/ಪುನರ್‌ ಪರಿಷ್ಕರಣೆ ‌/ಪುನರ್‌ ರಚನೆ ಎಂಬ ದಾರಿಯಲ್ಲಿ ಸಾಗಿರುವುದು ಹೆಚ್ಚಾಗಿ ಮೌಖಿಕ ಸಾಹಿತ್ಯದಲ್ಲಿ, ಕಡಿಮೆ ಪ್ರಮಾಣದಲ್ಲಿ ಗ್ರಾಂಥಿಕ ಸಾಹಿತ್ಯದಲ್ಲಿ ನಡೆದಿರುವುದು ಕಂಡುಬರುತ್ತದೆ. ಔಪಚಾರಿಕ ಶಿಕ್ಷಣದಲ್ಲಿ ಪಠ್ಯಪುಸ್ತಕಗಳು ಬೋಧನೆಗೆ ಆಧಾರ ಗ್ರಂಥಗಳು. ಅವುಗಳ ರಚನೆ ಮತ್ತು ಪರಿಷ್ಕರಣೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಈ ಸಂಗತಿಯೇ ಶಿಕ್ಷಣದ ಏಳ್ಗೆಗೆ ಹಾಗೂ ಅರಿವಿನ ಪರಿಪೂರ್ಣತೆಗೆ ಸಾಗುವ ದಾರಿಯನ್ನು ನಿರ್ಮಿಸಿದೆ.

ಪ್ರಸ್ತುತ ಕರ್ನಾಟಕದ ಪಠ್ಯಪುಸ್ತಕಗಳ ಬಗ್ಗೆ ಎದ್ದಿರುವ ವಾದ–ವಿವಾದಗಳ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಜನರ ಅಭಿಪ್ರಾಯಗಳನ್ನು ಆಹ್ವಾನಿಸಿ ಮತ್ತೆ ಪರಿಷ್ಕರಣೆ ಮಾಡಲಾಗುವುದು ಎಂದಿರುವುದನ್ನು ಸ್ವಾಗತಿಸುತ್ತೇನೆ. ಇದೊಂದು ಪ್ರಾಮಾಣಿಕವಾದ ಶೈಕ್ಷಣಿಕ ಹಾಗೂ ಪ್ರಜಾಸತ್ತಾತ್ಮಕ ನಡೆ ಎಂದು ಅಭಿನಂದಿಸುತ್ತೇನೆ.

ಹಿಂದೆ ಡಾ.ಜಿ.ಎಸ್‌.ಮುಡಂಬಡಿತ್ತಾಯ ಅವರ ನೇತೃತ್ವದ ಸಮಿತಿ ರಚಿಸಿದ ಪಠ್ಯಗಳ ಬಗ್ಗೆ ದೂರುಗಳು ಬಂದ ಕಾರಣವನ್ನು ಒಡ್ಡಿ, ಅನಂತರ ಬಂದ ಸರ್ಕಾರವು ಪ್ರೊ.ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ಪರಿಷ್ಕರಣ ಸಮಿತಿಯನ್ನು ರಚಿಸಿದೆ. ಅವರು ನಡೆಸಿದ ಪರಿಷ್ಕರಣೆಯ ಬಗ್ಗೆ ದೂರುಗಳು ಬಂದ ಕಾರಣ ಇಂದಿನ ಕರ್ನಾಟಕ ಸರ್ಕಾರವು ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಇದೀಗ ದೂರುಗಳು ಬಂದ ಕಾರಣ ಇದೇ ಸರ್ಕಾರ ಮರುಪರಿಷ್ಕರಣೆಗೆ ಮುಂದಾಗಿರುವಂತೆ,ಹಿಂದಿನ ಸರ್ಕಾರ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಪಠ್ಯದಲ್ಲಿದ್ದ ಆಕ್ಷೇಪಾರ್ಹ ಸಂಗತಿಗಳನ್ನು ಮರುಪರಿಷ್ಕರಣೆಗೆ ಒಳಪಡಿಸಿದ್ದರೆ ಬಹುಶಃ ರೋಹಿತ್‌ ಚಕ್ರತೀರ್ಥ ಸಮಿತಿ ರಚನೆ ಆಗುತ್ತಿರಲಿಲ್ಲ. ಸರ್ಕಾರಗಳಿಗೆ, ಸಮಿತಿಗಳಿಗೆ ಶೈಕ್ಷಣಿಕ ಕಾಳಜಿ ಹಾಗೂ ಪ್ರಜಾಸತ್ತಾತ್ಮಕ ನಡವಳಿಕೆ ಅತ್ಯಗತ್ಯ. ಆಗ ಸಹಮತವನ್ನು ಸಾಧಿಸಬಹುದು.

ಬ್ರಾಹ್ಮಣ ವಿರೋಧಿ, ವೈದಿಕ ವಿರೋಧಿ, ಹಿಂದೂ ವಿರೋಧಿ, ರಾಷ್ಟ್ರೀಯತೆ ವಿರೋಧಿಯಾದ ಅಹಿಂದಪರವಾದ, ಮತಾಂತರಕ್ಕೆ ಪ್ರಚೋದಿಸುವ, ಮುಸ್ಲಿಂ ಮತ ತುಷ್ಟೀಕರಣದ ಕಮ್ಯುನಿಸ್ಟ್‌ ವರ್ಗ ಸಂಘರ್ಷ ಪ್ರಣೀತವಾಗಿರುವ ಪಠ್ಯಗಳನ್ನುಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ರೂಪಿಸಿದೆ ಎಂಬ ಆರೋಪಗಳು ಕೇಳಿಬಂದಾಗ ಒಂದು ಪ್ರಜಾಪ್ರಭುತ್ವವಾದಿ ಸರ್ಕಾರ ತನ್ನ ಶೈಕ್ಷಣಿಕ ಜವಾಬ್ದಾರಿಯನ್ನು ರಾಜಕೀಯ ಕಾರಣಕ್ಕೆ ಬಲಿಗೊಡಬಾರದು. ಬ್ರಾಹ್ಮಣ ವಿರೋಧವೇ ಜಾತಿ ವಿನಾಶವಲ್ಲ. ಶಾಲೆಯಲ್ಲಿರುವ ಒಂದು ಬ್ರಾಹ್ಮಣ ಮಗು ಆ ಪಾಠಗಳನ್ನು ಓದಿ ಬ್ರಾಹ್ಮಣೇತರರನ್ನು ಮತ್ತಷ್ಟು ದ್ವೇಷಿಸುತ್ತದೆ. ಅದೇ ಹೊತ್ತಿನಲ್ಲಿ ಅಬ್ರಾಹ್ಮಣ ಮಗು ತನ್ನ ಈ ಸ್ಥಿತಿಗೆ ಬ್ರಾಹ್ಮಣರು ಮಾತ್ರ ಕಾರಣ ಎಂದು ತಿಳಿಯುತ್ತದೆ. ಬ್ರಾಹ್ಮಣರ ಜಾತಿವಾದವನ್ನು ಮಾತ್ರ ವಿರೋಧಿಸುತ್ತಾ ಬ್ರಾಹ್ಮಣ ದ್ವೇಷಿಯಾಗುತ್ತದೆ. ಅದೇ ಹೊತ್ತಿನಲ್ಲಿ ಬ್ರಾಹ್ಮಣರ ಅನಂತರದ ಶ್ರೇಣಿಯಲ್ಲಿರುವ ಜಾತಿಯವರ ಜಾತಿವಾದಕ್ಕೆ ಬಲಿಯಾಗುತ್ತದೆ. ಆ ಕಾರಣದಿಂದಾಗಿಯೇ ಶತಶತಮಾನಗಳಿಂದ ಬುದ್ಧ ಬಸವಾದಿ ಶರಣರು ಸಂತರು ಎಷ್ಟೇ ಪ್ರಯತ್ನಿಸಿದರೂ ಅಸ್ಪೃಶ್ಯತೆ ಜಾತೀಯತೆ ಹೋಗಿಲ್ಲ ಸಮಾನತೆ ಮಾನವೀಯತೆ ಬಂದಿಲ್ಲ. ಅದರಿಂದಲೂ ಪಠ್ಯಪುಸ್ತಕ ರಚನಾ ಸಮಿತಿಗಳು ಪಾಠ ಕಲಿತು ಪರಿಷ್ಕರಣೆಗೆ ಸಿದ್ಧರಾಗಬೇಕು.

ರೋಹಿತ್‌ ಚಕ್ರತೀರ್ಥ ಅವರ ಸಮಿತಿಯ ಪಠ್ಯಗಳು ಬ್ರಾಹ್ಮಣೀಕರಣ, ವೈದಿಕಪರ, ಹಿಂದೂಪರ, ರಾಷ್ಟ್ರಭಕ್ತಿಯೆಂಬ ಸರ್ವಾಧಿಕಾರಿಪರ, ಅಹಿಂದ ವಿರೋಧಿ, ಮತಾಂತರ ವಿರೋಧಿ, ಕಮ್ಯುನಿಸ್ಟ್‌ ವಿರೋಧಿ ಪಠ್ಯಗಳಾಗಿವೆ ಎಂಬ ಆರೋಪಗಳಿಗೆ ಒಳಗಾಗಿದೆ. ಆದಕಾರಣ ಈ ಸಮಿತಿಯನ್ನು ರಚಿಸಿದ ಸರ್ಕಾರವೇ ಈ ಪಠ್ಯಗಳನ್ನು ಮರುಪರಿಷ್ಕರಣೆಗೆ ಒಳಗು ಮಾಡುತ್ತಿರುವುದು, ಆ ಕಾರ್ಯಕ್ಕೆ ಮುಂದಾಗಿರುವುದು ಶಿಕ್ಷಣದ ಪಠ್ಯಪುಸ್ತಕಗಳ ಸುಧಾರಣೆಗೆ ಪರಿಪೂರ್ಣತೆಯ ಸಾಧನೆಗೆ ಸಹಮತ, ಸಹಬಾಳ್ವೆಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಇದೊಂದು ಸ್ವಾಗತಾರ್ಹವಾದ ನಡೆ. ಈ ಎಡಪಂಥ–ಬಲಪಂಥಗಳ ಚರ್ಚೆ ಇಂದು ಹುಟ್ಟಿದ್ದಲ್ಲ, ನಾಳೆಗೆ ಮುಗಿಯುವುದಿಲ್ಲ. ಪಂಪನ ಆದಿಪುರಾಣದಲ್ಲಿ ಸ್ವಯಂಬುದ್ಧ ಹಾಗೂ ಶತಮತಿ, ಸಂಭಿನ್ನಮತಿ, ಮಹಾಮತಿ ಎಂಬ ಮಂತ್ರಿಗಳಲ್ಲೇ ನೋಡಬಹುದು. ಹೆಗಲ್‌ ಮತ್ತು ಕಾರ್ಲ್‌ಮಾರ್ಕ್ಸ್; ಲೆನಿನ್‌ ಮತ್ತು ಸ್ಟಾಲಿನ್‌ರ ನಡುವೆಯೂ ನೋಡಬಹುದು. ಅದನ್ನೇ ನಾವು ಪ್ರೊ. ಬರಗೂರು ರಾಮಚಂದ್ರಪ್ಪ– ರೋಹಿತ್‌ ಚಕ್ರತೀರ್ಥ ಸಮಿತಿ ಪಠ್ಯಗಳ ಪರ–ವಿರೋಧಗಳ ನಡುವೆಯೂ ನೋಡಬಹುದು. ಈ ವಾಗ್ವಾದ ವ್ಯಕ್ತಿನಿಂದನೆ ದ್ವೇಷಭಾವನೆಗೆ ಇಳಿಯದಿದ್ದರೆ ಇದು ಶಿಕ್ಷಣದ ಸುಧಾರಣೆಗೆ, ಮನುಷ್ಯನ ಕಲ್ಯಾಣಕ್ಕೆ ಕಾರಣವಾಗುತ್ತದೆ. ಮೊಸರನ್ನು ಕಡೆಯದಿದ್ದರೆ ಬೆಣ್ಣೆ ಬರುವುದಿಲ್ಲ. ಮಡಕೆಯನ್ನು ಒಡೆದರೆ ಬೆಣ್ಣೆ ಇರಲಿ ಮಜ್ಜಿಗೆಯೂ ಉಳಿಯುವುದಿಲ್ಲ.

ಈ ಎಚ್ಚರವು ಪರಿಷ್ಕರಣೆ–ಪುನರ್‌ರಚನೆ–ಪುನರ್‌ ಪರಿಷ್ಕರಣೆ – ಮತ್ತೆ ರಚನೆ ಈ ಎಲ್ಲಾ ಸಂದರ್ಭಗಳಲ್ಲೂ ಇರಬೇಕಾದುದು ಅತ್ಯಗತ್ಯ. ಶಿಕ್ಷಕರು, ಸಾಹಿತಿಗಳು, ಪಠ್ಯಪುಸ್ತಕಗಳ ರಚನಾಕಾರರು, ರಾಜನೀತಿಯ ಒಲವು–ನಿಲುವುಗಳಿಂದ ಕೂಡಿದ್ದರೆ ತಪ್ಪಲ್ಲ. ಆದರೆ ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಅಥವಾ ರಾಜಕೀಯ ನಾಯಕರ ಬಾಯಾಳುಗಳ ಹಾಗೆ ವರ್ತಿಸಬಾರದು, ಪಠ್ಯ ರಚಿಸಬಾರದು. ಶಿಕ್ಷಣ ಕ್ಷೇತ್ರದಿಂದ ಗೆಲ್ಲಬೇಕಾದುದು ಪಕ್ಷಗಳಲ್ಲ ಗೆಲ್ಲಬೇಕಾದುದು ದೇಶ ಮತ್ತು ಮನುಷ್ಯತ್ವ. ಯಾರು ಏನೇ ಬರೆದರೂ ಕಡೆಗೂ ಉಳಿಯುವುದು ಸತ್ಯ ಮಾತ್ರ. ಲೇಖಕರಾದವರಿಗೆ ಅದು ತಿಳಿದಿರಬೇಕು. ಆ ಪ್ರಜ್ಞೆ ಸರ್ಕಾರಗಳಿಗೂ ಇರಬೇಕು. ಆ ದೃಷ್ಟಿಯಿಂದ ಈಗಿನ ಕರ್ನಾಟಕ ಸರ್ಕಾರ ತನ್ನ ಕಾಲದ ಪಠ್ಯಪುಸ್ತಕಗಳನ್ನು ತಾನೇ ಮರುಪರಿಷ್ಕರಣೆಗೆ ಒಳಗು ಮಾಡುವ ನಿರ್ಧಾರವನ್ನು ಕೈಗೊಂಡಿರುವುದು ಸ್ವಾಗತಾರ್ಹ. ಅದನ್ನೂ ಯಾರಾದರೂ ವಿರೋಧಿಸಿದರೆ ಅವರ ಉದ್ದೇಶ ಶಿಕ್ಷಣ ಸುಧಾರಣೆಯಲ್ಲ, ಬದಲಿಗೆ ಜಾತಿಗಳನ್ನು ಎತ್ತಿಕಟ್ಟುವ ಮೂಲಕ ಜಾತಿರಾಜಕಾರಣ ಮಾಡುವುದೇ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮೂರು ಅಧ್ಯಕ್ಷರ ಪಠ್ಯಗಳನ್ನು ಪರಿಶೀಲಿಸಿದರೆ ಶೇಕಡಾ 85ರಷ್ಟು ಪಠ್ಯಗಳು ಮೂವರಲ್ಲೂ ಉಳಿದುಬಂದಿವೆ. ವಿವಾದವಿರವುದು ಕೇವಲ ಶೇ 15ರಷ್ಟು ಪಠ್ಯ, ಸಾಲು, ವಿಷಯಗಳ ಬಗ್ಗೆ. ಅದನ್ನೂ ಸರಿಪಡಿಸುವಂತಾದರೆ ಎಡ–ಬಲಗಳಿಲ್ಲದ ಭರತಭೂಮಿನ್ನು ಸಾಮರಸ್ಯದ ಸಮಾಜ, ಸಾಹಿತ್ಯ, ಸಂಸ್ಕೃತಿಯನ್ನು ನಾವಿಂದು ಸ್ಪಷ್ಟಿಸಬಹುದು. ಎಲ್ಲರೂ ನಮ್ಮನಮ್ಮ ಎದೆ ಮಿದುಳು ಕರುಳುಗಳನ್ನು ಪ್ರೀತಿಯಿಂದ ತಿಳಿಗೊಳಿಸಿಕೊಳ್ಳಬೇಕಾಗಿದೆ.

-ಲೇಖಕ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT