ಬುಧವಾರ, ಡಿಸೆಂಬರ್ 1, 2021
21 °C

ಚರ್ಚೆ | ಶಿಕ್ಷಣ, ಶಿಕ್ಷಕ, ಗುಣಮಟ್ಟ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಶಿಕ್ಷಣ ಮತ್ತು ಶಿಕ್ಷಕರು

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಡಾ. ತೇಜಸ್ವಿ ವಿ. ಕಟ್ಟೀಮನಿ ಅವರು ‘ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಜುಲೈ 31). ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಶಿಕ್ಷಣ ನೀತಿಗಳನ್ನು ಬದಲಾವಣೆ ಮಾಡಿ ಜಾರಿಗೊಳಿಸಿದ ಮಾತ್ರಕ್ಕೆ ಶಿಕ್ಷಕರ ಮನಃಸ್ಥಿತಿಯನ್ನು ಬದಲಾಯಿಸಿದಂತೆ ಅಲ್ಲ. ಶಿಕ್ಷಣ ನೀತಿಯ ಆಶಯ, ಗುರಿ, ಧ್ಯೇಯೋದ್ದೇಶಗಳನ್ನು ಸೂಕ್ತ ತರಬೇತಿ, ಮಾರ್ಗದರ್ಶನದ ಮೂಲಕ ಮೊದಲು ಶಿಕ್ಷಕರಿಗೆ ಅರ್ಥ ಮಾಡಿಸುವುದು ಅಗತ್ಯ.

ಶಿಕ್ಷಕರ ಬೋಧನಾ ಗುಣಮಟ್ಟ, ಸಾಮರ್ಥ್ಯ ಹೆಚ್ಚಿಸಲು ಬಿ.ಇಡಿ ಕೋರ್ಸ್‌ನ ಅವಧಿಯನ್ನು ಹೆಚ್ಚಿಸಲಾಗಿದೆ. ಆದರೂ ಬೋಧನಾ ಸಾಮರ್ಥ್ಯದ ವಿಷಯ ಪ್ರಶ್ನಾರ್ಹವಾಗಿಯೇ ಉಳಿದಿದೆ. ಶಿಕ್ಷಕ ವೃತ್ತಿಯು ಬರೀ ಸಂಬಳಕ್ಕಾಗಿ ದುಡಿಯುವಂತಹದ್ದಲ್ಲ. ಅರ್ಪಣೆ,
ಸೇವಾ ಮನೋಭಾವ, ತ್ಯಾಗದ ಗುಣಗಳ ಮಿಶ್ರಣವೇ ಶಿಕ್ಷಕ ವೃತ್ತಿ. ಹಾಗೆಯೇ ಶಿಕ್ಷಕರು ಆತ್ಮವಂಚನೆಯಿಲ್ಲದೆ ವಿದ್ಯಾರ್ಥಿಗಳಿಗೆ ಕಲಿಸಲು ಪೂರಕವಾದ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಡಬೇಕಾಗಿದೆ. ಕೌಶಲವರ್ಧನೆ ಹೆಸರಿನಲ್ಲಿ ಶಿಕ್ಷಣ ಇಲಾಖೆಯು ರಜಾ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸುತ್ತದೆ. ಆದರೆ ಈ ತರಬೇತಿಯು ಕಡತಗಳಲ್ಲಿ ಪ್ರಗತಿ ಪ್ರದರ್ಶಿಸುವ ದಾಖಲೆಯಾಗಿದೆಯೇ ವಿನಾ ನಿಜವಾದ ಕೌಶಲ ವೃದ್ಧಿ ಸಾಧ್ಯವಾಗಿಲ್ಲ.

ಶಿಕ್ಷಕರನ್ನು ಬೋಧನೇತರ ಕೆಲಸಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು, ಸಚಿವರು ಪುಂಖಾನುಪುಂಖವಾಗಿ ಘೋಷಿಸುತ್ತಿದ್ದರೂ ಅದು ಬರೀ ಆಶ್ವಾಸನೆಯಾಗಿಯೇ ಉಳಿದಿದೆ. ಇನ್ನು ಶಿಕ್ಷಕರ ವರ್ಗಾವಣೆಯಲ್ಲಿನ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಶಿಕ್ಷಕರ ಮಾನಸಿಕ ಸ್ಥಿತಿ ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಗಳು, ಅವರು ನೀಡುವ ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಬೀರದೇ ಇರುವುದಿಲ್ಲ. ಸರ್ಕಾರವು ಶಿಕ್ಷಕರನ್ನು ‘ಬಡ ಮೇಷ್ಟ್ರು’ಗಳನ್ನಾಗಿಸಿದೆ. ತಿಂಗಳ ಸಂಬಳವು ಸಕಾಲಕ್ಕೆ ಕೈಸೇರುತ್ತಿಲ್ಲ. ಇದರಿಂದ ಅವರ ಆರ್ಥಿಕ ಸ್ಥಿತಿ ಹದಗೆಟ್ಟು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಮಕ್ಕಳ ಬಗ್ಗೆ ನಿಜವಾದ ಕಾಳಜಿ ತೋರಿಸಲು ಸಾಧ್ಯವೇ?

ಶಿಕ್ಷಕರ ಸಮಸ್ಯೆಗಳನ್ನು ಆಲಿಸಲು, ಅಧ್ಯಯನ ಮಾಡಲು ಸಮಿತಿಯನ್ನು ನೇಮಿಸಬೇಕಾದ ಅನಿವಾರ್ಯ ಇದೆ. ಶಿಕ್ಷಕರ ಸಾಮಾಜಿಕ– ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವುದರಿಂದ ಶಿಕ್ಷಕರ ಮನೋಸ್ಥೈರ್ಯ ವೃದ್ಧಿಯಾಗಿ, ಬೋಧನೆ ಕಡೆಗೆ ಆಸಕ್ತಿ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಶಿಕ್ಷಣ ನೀತಿಯ ಗುರಿಯನ್ನು ಈಡೇರಿಸಿದಂತಾಗುತ್ತದೆ.

–ಈರಣ್ಣ ಎನ್.ವಿ., ನಾರಾಯಣಪುರ, ಶಿರಾ

ಅಗೋಚರ ಆಡಳಿತಗಾರರ ಪ್ರಯೋಗಪಶು

ತೇಜಸ್ವಿ ವಿ. ಕಟ್ಟೀಮನಿ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಶಿಕ್ಷಣ ವ್ಯವಸ್ಥೆ ತ್ರಿಕೋನದ ತ್ರಿಪಾದ ಹೊಂದಿದೆ. ಸರ್ಕಾರ, ಶಿಕ್ಷಕರು ಹಾಗೂ ಸಮಾಜವು ತ್ರಿಕೋನದ ಒಂದೊಂದು ಪಾದವಾಗಿದೆ. ಒಂದು ವೇಳೆ ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಎಂಬಂತಾದರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಏಕೆ ಬೇಕು? ಶಿಕ್ಷಕರು ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡಹುವಾಗ ಸರ್ಕಾರ ಮತ್ತು ಜನಪ್ರತಿನಿಧಿಗಳು ಏನು ಮಾಡುತ್ತಿದ್ದರು?

ಶಿಕ್ಷಣ ವ್ಯವಸ್ಥೆ ಹಾಳಾಗಿರುವುದು ಅಗೋಚರ ಆಡಳಿತಗಾರರಿಂದ. ಶಿಕ್ಷಣ ವ್ಯವಸ್ಥೆಯು ಇಂತಹ ಅಗೋಚರ ಆಡಳಿತಗಾರರ ಪ್ರಯೋಗಪಶು ಆಗಿದೆ. ಆದ್ದರಿಂದ ಶಿಕ್ಷಕರ ಮೇಲೆ ಗೂಬೆ ಕೂರಿಸುವುದು ಬೇಡ. ವಾಸ್ತವ ಸಂಗತಿ ಅರಿತು ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡುವ ಕೆಲಸ ನಡೆಯಬೇಕು.

– ಡಾ. ಟಿ.ಪಿ.ಗಿರಡ್ಡಿ, ಜಮಖಂಡಿ

ವಾಸ್ತವಾಂಶದ ಹೇಳಿಕೆಗೆ ಖಂಡನೆಯೇಕೆ?

ತೇಜಸ್ವಿ ವಿ. ಕಟ್ಟೀಮನಿಯವರ ಹೇಳಿಕೆಯನ್ನು ಶಿಕ್ಷಕರ ಒಕ್ಕೂಟ ಖಂಡಿಸಿದೆ. ಅದು ಅವರ ಹಕ್ಕು. ಆದರೆ, ಲೋಪಗಳನ್ನು ಎತ್ತಿ ತೋರಿಸಿದರೆ ಯಾರಾದರೂ ಅದನ್ನು ಒಪ್ಪುವಂತಹ ಸ್ಥಿತಿ ಈಗ ನಮ್ಮಲ್ಲಿ ಉಳಿದಿದೆಯೇ? ಸರ್ಕಾರಿ ಶಾಲೆಗಳು ಹೀನಾಯ
ಸ್ಥಿತಿಗೆ ಇಳಿದಿರುವುದಕ್ಕೆ ಶಿಕ್ಷಕರ ಕೊಡುಗೆ ಏನೂ ಇಲ್ಲವೇ? ಅಧಿಕಾರಿಗಳ ಭ್ರಷ್ಟತೆ, ಜಡತ್ವ ಕೂಡ ಇದಕ್ಕೆ ಕಾರಣ.

ಹೆಚ್ಚಿನ ಶಿಕ್ಷಕರಲ್ಲಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಕಡಿಮೆ ಆಗಿದೆ. ಅಂಥವರು ಶಿಸ್ತು, ಕರ್ತವ್ಯಪ್ರಜ್ಞೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂದು ಸರ್ಕಾರಿ ಶಾಲೆಗಳು ಮುರುಕು ಧರ್ಮಶಾಲೆಯಂತೆ ಕಳಾಹೀನವಾಗಿವೆ. ಶಿಕ್ಷಕರು ಶುಷ್ಕ ವ್ಯಕ್ತಿಗಳಾಗಿ ಹೋಗಿದ್ದಾರೆ. ಇದಕ್ಕೆ ಪೂರಕವಾಗಿ ನೂರಾರು ಉದಾಹರಣೆಗಳನ್ನು ನೀಡಬಹುದು. ನಿಷ್ಠುರ ನೆಲೆಯಲ್ಲಿ ಚರ್ಚೆಯಾದರೆ ಎಲ್ಲ ಹುಳುಕುಗಳು ಹೊರಗೆ ಬರುತ್ತವೆ. ಶಿವರಾಮ ಕಾರಂತರು ಒಮ್ಮೆ ಶಿಕ್ಷಕರನ್ನು ರಕ್ಕಸರು ಎಂದು ಕರೆದಿದ್ದರು. ಶಿಕ್ಷಣ ಇಲಾಖೆಯು ಇಂತಹ ಶಾಲೆಗಳನ್ನು, ಶಿಕ್ಷಕರನ್ನು ಹೇಗೆ ಹಳಿಗೆ ತರುವುದೋ ಗೊತ್ತಿಲ್ಲ.

– ಎಂ.ಕೆ.ವಾಸುದೇವರಾಜು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು