ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NEP ಚರ್ಚೆ: ದೇಶ ಹಿತದ ಜಾಗದಲ್ಲಿ ಪಕ್ಷ ಹಿತದ ವಿಕೃತಿ– ಸಿ.ಎನ್. ಅಶ್ವತ್ಥನಾರಾಯಣ ಲೇಖನ

ರಾಷ್ಟ್ರೀಯ ಶಿಕ್ಷಣ ನೀತಿಗೆ ರಾಜ್ಯ ರೂಪಿಸುವ ನೀತಿಯು ಪರ್ಯಾಯ ಆಗಬಹುದೇ?
Published 15 ಜುಲೈ 2023, 0:35 IST
Last Updated 15 ಜುಲೈ 2023, 0:35 IST
ಅಕ್ಷರ ಗಾತ್ರ

ಎನ್‌ಇಪಿ ನಮ್ಮ ಯುವಜನರನ್ನು ‘ಫ್ಯೂಚರ್-ರೆಡಿ’ಯನ್ನಾಗಿ ರೂಪಿಸುತ್ತದೆ. ಇದರಲ್ಲಿ ಪಠ್ಯದ ಹೊರೆಯನ್ನು ಇಳಿಸಲಾಗಿದ್ದು, ಮೂಲಭೂತ ಕಲಿಕೆಗೆ ಒತ್ತು ಕೊಡಲಾಗಿದೆ. ನಮ್ಮಲ್ಲಿ ಇದುವರೆಗೂ ಇದ್ದ ಅಂಕ ಆಧಾರಿತ ಕಲಿಕೆಯನ್ನು ಕೊನೆಗೊಳಿಸಿ, ನಿಜವಾದ ಜ್ಞಾನಾರ್ಜನೆಗೆ ಗಮನ ಹರಿಸಲು ಎನ್‌ಇಪಿಯಿಂದ ಸಾಧ್ಯವಾಗಲಿದೆ

-ನರೇಂದ್ರ ಮೋದಿ, ಪ್ರಧಾನಮಂತ್ರಿ

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾದವು. ಆದರೆ ಇಷ್ಟರಲ್ಲೇ ಅದರ ‘ಗ್ಯಾರಂಟಿ’ ಹಿಕ್ಮತ್ತುಗಳು ಮತ್ತು ಓಲೈಕೆ ರಾಜಕಾರಣದ ಅವಿವೇಕ ಎರಡೂ ಢಾಳಾಗಿ ಅನುಭವಕ್ಕೆ ಬಂದಿವೆ. ಇದು ಹೀಗೆಯೇ ಮುಂದುವರಿದರೆ ಕರ್ನಾಟಕವು ಮುಂದಿನ ಐದು ವರ್ಷಗಳಲ್ಲಿ ಒಂದು ಶತಮಾನದಷ್ಟು ಹಿಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ. ಯುವಜನರ ಭವಿಷ್ಯಕ್ಕೆ ಒಂದು ಖಚಿತ ಭರವಸೆಯನ್ನು ಮೂಡಿಸುವಂತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾಗದಲ್ಲಿ ಈಗಿನ ಕಾಂಗ್ರೆಸ್ ಸರಕಾರವು ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ತರಲು ಹೊರಟಿರುವುದಕ್ಕಿಂತ ಇನ್ನೊಂದು ನಿದರ್ಶನ ಇದಕ್ಕೆ ಬೇಕಾಗಿಲ್ಲ.

ಭಾರತವು 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರಗೊಂಡಿತಷ್ಟೆ. ಅದಕ್ಕೂ ಮೊದಲು ನಮ್ಮ ದೇಶವು ಒಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ವಸಾಹತುಶಾಹಿ ಆಡಳಿತದ ಬೇರೆಬೇರೆ ರೂಪಗಳಲ್ಲಿ ಪರಕೀಯರ ಆಳ್ವಿಕೆಯಡಿ ನಲುಗಿತ್ತು. ದೇಶವು ಈ ರೀತಿಯ ಪರಾಧೀನತೆಯಿಂದ ಬಿಡುಗಡೆ ಹೊಂದಿದ ಮೇಲೆ ಕೂಡಲೇ ನಮ್ಮದೇ ಆದ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸಲು ಆದ್ಯತೆ ಕೊಡಬೇಕಾಗಿತ್ತು. ಆದರೆ, ಸ್ವತಂತ್ರ ಭಾರತದ ಚುಕ್ಕಾಣಿ ಹಿಡಿದ ಜವಾಹರಲಾಲ್‌ ನೆಹರೂ ಮಂತ್ರಿಮಂಡಲದ ಶಿಕ್ಷಣ ಸಚಿವರನ್ನು ಆಯ್ಕೆ ಮಾಡಿಕೊಳ್ಳುವಲ್ಲೇ ತಮ್ಮ ‘ತುಷ್ಟೀಕರಣದ ಹಿಡನ್ ಅಜೆಂಡಾ’ವನ್ನು ಹೇರಿದರು. ವಾಸ್ತವವಾಗಿ, ಮಹಾತ್ಮ ಗಾಂಧಿಯವರ ಒತ್ತಾಸೆಯ ಮೇರೆಗೆ ನೆಹರೂ ಸಂಪುಟದ ಭಾಗವಾಗಿದ್ದ ಹೆಸರಾಂತ ಶಿಕ್ಷಣವೇತ್ತ ಡಾ.ಶಾಮಪ್ರಸಾದ್‌ ಮುಖರ್ಜಿಯವರಿಗೆ ಶಿಕ್ಷಣ ಖಾತೆಯನ್ನು ಕೊಡಬೇಕಾಗಿತ್ತು. ಏಕೆಂದರೆ, ಅವರು ತಮ್ಮ 33ನೇ ವಯಸ್ಸಿಗೇ ಪ್ರತಿಷ್ಠಿತ ಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿಯಾಗಿ, ಶೈಕ್ಷಣಿಕ ಕ್ರಾಂತಿಯನ್ನೇ ಉಂಟುಮಾಡಿದ್ದರು. ಆದರೆ, ‘ಜಾಣ ನೆಹರೂ’ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮೌಲಾನಾ ಅಬುಲ್‌ ಕಲಾಂ ಅವರನ್ನು ಆ ಜಾಗದಲ್ಲಿ ಕೂರಿಸಿದರು. ನಮ್ಮ ಶಿಕ್ಷಣ ವ್ಯವಸ್ಥೆ ಹೀಗೆ ಆರಂಭದಿಂದಲೇ ಹಳಿ ತಪ್ಪಿತು.

ಇದಾದ ಮೇಲೆ, ಕಾಂಗ್ರೆಸ್‌ 60 ವರ್ಷ ಆಳ್ವಿಕೆ ನಡೆಸಿತು. ಈ ಅವಧಿಯ ಬಹುಪಾಲು ಅದು ಇಡೀ ಶಿಕ್ಷಣ ಕ್ಷೇತ್ರವನ್ನೇ ತನ್ನ ‘ತುಷ್ಟೀಕರಣದ ರಾಜಕಾರಣ’ಕ್ಕೆ ಆಪೋಶನ ತೆಗೆದುಕೊಂಡಿತು. ಇದರ ಜೊತೆಗೆ ಇಂದಿರಾ ಗಾಂಧಿಯವರು ಪ್ರವರ್ಧಮಾನಕ್ಕೆ ಬಂದ ಮೇಲೆ, ಅವರು ಸಹ ತಮ್ಮ ರಾಜಕೀಯ ಹಿತಾಸಕ್ತಿಗಳು ಮುಕ್ಕಾಗದಂತೆ ನೋಡಿಕೊಳ್ಳುವ ಕುತಂತ್ರದ ಭಾಗವಾಗಿ ಶಿಕ್ಷಣ ರಂಗದ ಆಯಕಟ್ಟಿನ ಜಾಗಗಳಲ್ಲೆಲ್ಲ ಎಡಪಂಥೀಯರನ್ನು ತುಂಬಿದರು. ಈ ಕುಯುಕ್ತಿಯಲ್ಲಿ ದೇಶದ ಶಿಕ್ಷಣ ರಂಗವು ಬೋರಲು ಬಿದ್ದಿತು. ಇಷ್ಟೆಲ್ಲ ಆದಮೇಲೆ ಬಂದ ರಾಜೀವ್‌ ಗಾಂಧಿಯವರೇನೋ ಒಂದು ಹೊಸ ಶಿಕ್ಷಣ ನೀತಿಯನ್ನು ತಂದರು. ಆದರೆ ಅವರು ತಂದಿದ್ದು ಕೂಡ ಅಂಕಗಳಿಕೆಗೆ ಒತ್ತು ಕೊಡುತ್ತಿದ್ದ ಯಾಂತ್ರಿಕವಾದ ಶಿಕ್ಷಣ ನೀತಿಯನ್ನೇ!

ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಹಳ್ಳಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಕೂಡ ಇಂದು ಇಡೀ ಜಗತ್ತಿನ ಜತೆ ಸ್ಪರ್ಧಿಸುತ್ತಲೇ ಇರುತ್ತಾನೆ. ಈಗ ನಮ್ಮ ಪಕ್ಕದ ಚೀನಾ ನಮಗಿಂತ ಎಂಟು ಪಟ್ಟು ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಜಪಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಅಮೆರಿಕ, ಬ್ರಿಟನ್‌ ಜಗತ್ತಿನ ಮೇಲೆ ಹಿಡಿತ ಸಾಧಿಸಿವೆ. ಇವೆಲ್ಲದರ ಮಧ್ಯೆ ನಿರ್ದಿಷ್ಟವಾಗಿ ಕರ್ನಾಟಕವಾಗಲಿ, ಒಟ್ಟಾರೆಯಾಗಿ ಭಾರತವಾಗಲಿ ಹಿಂದುಳಿದಿದ್ದೇಕೆ? ರಚನಾತ್ಮಕವಾದ, ಸಮಕಾಲೀನ ಅಗತ್ಯಗಳನ್ನು ಮನಗಾಣದ, ಜಾಗತಿಕ ಸ್ಪರ್ಧೆಯನ್ನು ಕಡೆಗಣಿಸಿದ ಮತ್ತು ಭಾರತದ ಯುವಜನಾಂಗದ ಭವಿಷ್ಯದ ಬಗ್ಗೆ ಯಾವ ಮಹತ್ತ್ವಾಕಾಂಕ್ಷೆಯೂ ಇಲ್ಲದಿದ್ದಂತಹ ನಕಾರಾತ್ಮಕ ವಾತಾವರಣವೇ ಇದಕ್ಕೆ ಕಾರಣ. 

ನಮ್ಮ ಶಿಕ್ಷಣ ವ್ಯವಸ್ಥೆಯು ಹಿಂದೆಲ್ಲ ಸಮಗ್ರವೂ ಪರಿಪೂರ್ಣವೂ ಆಗಿತ್ತೆನ್ನುವುದು ಗೊತ್ತಾಗುತ್ತದೆ. ಹೆಸರಾಂತ ಗಾಂಧೀವಾದಿ ಚಿಂತಕ ಧರ್ಮಪಾಲ್‌ ಅವರ ‘ದಿ ಬ್ಯೂಟಿಫುಲ್‌ ಟ್ರೀ’ ಮತ್ತು ಸಹನಾ ಸಿಂಗ್‌ ಅವರು ಇತ್ತೀಚೆಗೆ ಬರೆದಿರುವ ‘ರೀವಿಸಿಟಿಂಗ್‌ ದಿ ಇಂಡಿಯನ್‌ ಎಜುಕೇಷನ್ ಸಿಸ್ಟಂ’ ಮುಂತಾದ ಕೃತಿಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಅಂದಂತೆ, ನಮ್ಮ ಆ ಕಾಲದ ಶಿಕ್ಷಣ ಪದ್ಧತಿಯನ್ನು ‘ಬ್ಯೂಟಿಫುಲ್‌ ಟ್ರೀ’ ಎಂದು ಬಣ್ಣಿಸಿದ್ದು ಬೇರಾರೂ ಅಲ್ಲ, ಸ್ವತಃ ಮಹಾತ್ಮ ಗಾಂಧಿ! ಆದರೆ, ಥಾಮಸ್‌ ಬ್ಯಾಬಿಂಗ್ಟನ್‌ ಮೆಕಾಲೆ ಕೇವಲ ಕಾರಕೂನರನ್ನು ತಯಾರಿಸುವ ಉದ್ದೇಶದಿಂದ ನಮ್ಮ ದೇಶದಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಪದ್ಧತಿಯನ್ನು ಹೇರಿದ ಮೇಲೆ, ಭಾರತೀಯ ಶೈಕ್ಷಣಿಕ ವ್ಯವಸ್ಥೆ ನೇಪಥ್ಯಕ್ಕೆ ಸರಿಯಿತು. ದುರಂತವೆಂದರೆ, 21ನೇ ಶತಮಾನದಲ್ಲೂ ಇದೇ ಪದ್ಧತಿ ಮುಂದುವರಿದುಕೊಂಡು ಬಂದಿದ್ದು. ಇದರಿಂದಾಗಿ ಕರ್ನಾಟಕ/ಭಾರತಗಳಿಗಾದ ಲುಕ್ಸಾನು ಲೆಕ್ಕಕ್ಕೆ ಸಿಗುವಂಥದ್ದಲ್ಲ. ಇಂತಹ ಕುಟಿಲ ಶಿಕ್ಷಣ ನೀತಿಯಿಂದ ಸ್ವತಂತ್ರ ಭಾರತದ ಇದುವರೆಗಿನ ತಲೆಮಾರುಗಳ ಪ್ರತಿಭೆಯೆಲ್ಲವೂ ಮುರುಟಿ ಹೋಯಿತಷ್ಟೆ.

ಇವೆಲ್ಲವನ್ನೂ ಮನಗಂಡ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು 34 ವರ್ಷಗಳ ನಂತರ ಮೂರನೆಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಘೋಷಿಸಿದರು. ಇದು ನಿಜಕ್ಕೂ ಚಾರಿತ್ರಿಕ ಸಾಧನೆ. ಸಮಾಜದ ಹಿತಕ್ಕೆ ಒದಗಿ ಬರುವಂತೆ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವದ ವಿಕಾಸ ಮತ್ತು ಅದೇ ಕಾಲದಲ್ಲಿ ಜಾಗತಿಕ ಮಟ್ಟದ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವಂತಹ ಕಲಿಕೆ ಎನ್‌ಇಪಿಯ ಆತ್ಮವಾಗಿವೆ. ಇದಕ್ಕಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮವನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿ, ಇದರೊಂದಿಗೆ ಉದ್ಯಮರಂಗವನ್ನೂ ಬೆಸೆಯಲಾಗಿತ್ತು. ಇದರಿಂದಾಗಿ ನಮ್ಮಲ್ಲಿ ಉದ್ಯೋಗಕ್ಕೆ ಅರ್ಹವಾದ ಸುಸಜ್ಜಿತ ಮಾನವ ಸಂಪನ್ಮೂಲದ ಸೃಷ್ಟಿ ಸಾಧ್ಯವಾಗುತ್ತದೆ.

ಶ್ರೀಮಂತರ ಮಕ್ಕಳು ತಮಗೆ ಬೇಕೆನಿಸಿದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗಬಲ್ಲರು. ನಮ್ಮಲ್ಲೂ ಉಳ್ಳವರು ಖಾಸಗಿ/ಸ್ವಾಯತ್ತ ವಿ.ವಿ.ಗಳ ಕಡೆಗೆ ಹೋಗುತ್ತಾರೆ. ಏಕೆಂದರೆ, ಅಲ್ಲಿಯ ದುಬಾರಿ ಖರ್ಚುವೆಚ್ಚಗಳನ್ನು ಭರಿಸುವಂತಹ ಆರ್ಥಿಕ ಶಕ್ತಿ ಅವರಲ್ಲಿದೆ. ಆದರೆ, ನಮ್ಮ ಸರಕಾರಿ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಬರುವವರೆಲ್ಲ ಮಧ್ಯಮ, ಕೆಳಮಧ್ಯಮ ಮತ್ತು ಬಡವರ ಮಕ್ಕಳಲ್ಲವೇ? ಇಂತಹ ಮಕ್ಕಳಿಗೂ ಕೈಗೆಟಕುವ ದರದಲ್ಲಿ ವಿದೇಶಿ ಗುಣಮಟ್ಟದ ಶಿಕ್ಷಣವು ಆರಂಭದಿಂದಲೇ ಸಿಗಬೇಕೆನ್ನುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿರುವ ಸಂಕಲ್ಪವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಉಪಕ್ರಮದ ಗೈರುಹಾಜರಿಯಿಂದಾಗಿಯೇ ಕರ್ನಾಟಕದ ವಿದ್ಯಾರ್ಥಿಗಳು ಹಿಂದೆಲ್ಲ ಜೆಇಇ, ನೀಟ್‌ ತರಹದ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಹೆಚ್ಚಾಗಿ ಉತ್ತೀರ್ಣರಾಗುತ್ತಿರಲಿಲ್ಲ ಎನ್ನುವುದನ್ನು ನಾವು ಮರೆಯಬಾರದು.

ನಿಜ ಹೇಳಬೇಕೆಂದರೆ, ಎನ್‌ಇಪಿ ಐದು ವರ್ಷಗಳ ಚಿಂತನೆ, ವಿಚಾರ ವಿನಿಮಯ, ಸಲಹೆ ಸ್ವೀಕಾರ, ಚರ್ಚೆ ಇತ್ಯಾದಿಗಳ ಫಲ. ಇದಕ್ಕಾಗಿ ಕೇಂದ್ರದ ಬಿಜೆಪಿ ಸರಕಾರವು 20 ಲಕ್ಷ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿತ್ತು; ವಿದೇಶಗಳಲ್ಲಿರುವ ಶಿಕ್ಷಣ ಪದ್ಧತಿಗಳನ್ನು ಆಳವಾಗಿ ಅಭ್ಯಸಿಸಿತ್ತು; ನಮ್ಮಲ್ಲಿದ್ದ ಶಿಕ್ಷಣ ಪದ್ಧತಿಯ ದೋಷಗಳನ್ನು ನಿವಾರಿಸಬೇಕೆನ್ನುವುದಕ್ಕೆ ಒತ್ತು ಕೊಟ್ಟಿತ್ತು. ಅಂದಂತೆ, ಎನ್‌ಇಪಿಯಲ್ಲಿರುವ ಅಂಶಗಳನ್ನು ಈಗಾಗಲೇ ಖಾಸಗಿ/ಡೀಮ್ಡ್/ಅಟಾನಮಸ್‌ ಶಿಕ್ಷಣ ಸಂಸ್ಥೆಗಳು ಶೇಕಡ 80ರಷ್ಟು ಮೊದಲಿನಿಂದಲೂ ಅಳವಡಿಸಿಕೊಂಡಿವೆ. ಹೀಗಾಗಿಯೇ ಅಲ್ಲಿ ಓದುವ ಮಕ್ಕಳು ಉಜ್ವಲ ಅವಕಾಶಗಳನ್ನು ಬಾಚಿಕೊಳ್ಳುತ್ತಾರೆ; ವಿದೇಶಗಳಿಗೆ ಹೋಗುತ್ತಾರೆ; ಉದ್ಯಮಗಳನ್ನು ಕಟ್ಟುತ್ತಾರೆ; ಒಂದು ತಲೆಮಾರನ್ನೇ ಪ್ರಭಾವಿಸುತ್ತಾರೆ.

ಎನ್‌ಇಪಿ ಅಳವಡಿಸಿಕೊಳ್ಳುವಲ್ಲಿ ಕರ್ನಾಟಕವು ಬಿಜೆಪಿ ಆಳ್ವಿಕೆಯ ಕಾಲದಲ್ಲಿ ದಾಪುಗಾಲಿಟ್ಟಿತ್ತು. ಇದರಿಂದಾಗಿ ನಮ್ಮ ಯುವಜನರಿಗೆ ತಮ್ಮ ಕನಸಿನ ಶಿಕ್ಷಣದ ಜತೆಗೆ ಕನಸಿನ ಉದ್ಯೋಗಕ್ಕೂ ಇದು ಹೆದ್ದಾರಿಯಾಗಿತ್ತು. ಆದರೆ ಈಗ ಕಾಂಗ್ರೆಸ್‌ ಕೃಪಾಪೋಷಿತ ‘ರಾಜ್ಯ ಶಿಕ್ಷಣ ನೀತಿ’ಯು ಮಧ್ಯಮ ಮತ್ತು ಬಡವರ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲು ಹೊರಟಿದೆ. ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ನಮ್ಮ ಜನರು ಇದ್ದಲ್ಲೇ ಇರಬೇಕು. ಹೀಗಿದ್ದರಷ್ಟೇ ಅದಕ್ಕೆ ರಾಜಕೀಯ ಲಾಭ! ಅದು ತರಲು ಹೊರಟಿರುವ ಎಸ್‌ಇಪಿ ಹಿಂದೆಯೂ ಇದೇ ದುಷ್ಟ ಆಲೋಚನೆ ಇದೆ. ಸಮಗ್ರವಾಗಿರುವ ಎನ್‌ಇಪಿಯನ್ನು ಬಲಿಗೊಡಲು ಹೊರಟಿರುವುದು ಕಾಂಗ್ರೆಸ್‌ ಸರಕಾರದ ಧೂರ್ತತನ. ಜೊತೆಗೆ ಮಹಾತ್ಮ ಗಾಂಧಿ, ಅಂಬೇಡ್ಕರ್, ಮುಖರ್ಜಿ ಅವರಂತಹ ದಾರ್ಶನಿಕರಿಗೆ ಬಗೆಯುತ್ತಿರುವ ದ್ರೋಹ!

ಲೇಖಕ: ಉನ್ನತ ಶಿಕ್ಷಣ ಇಲಾಖೆ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT