ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Prajavani Live: ಆದಾಯ ತೆರಿಗೆ (ಐಟಿ) ದಾಳಿ ರಾಜಕೀಯ ಪ್ರೇರಿತವೇ?

Last Updated 21 ಸೆಪ್ಟೆಂಬರ್ 2021, 18:38 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆಗಳ ಸಂದರ್ಭದಲ್ಲಿಯೇ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಹೆಚ್ಚುತ್ತದೆ. ಮುಖ್ಯವಾಗಿ, ಆಡಳಿತಾರೂಢ ಬಿಜೆಪಿ ಟೀಕಾಕಾರರು, ವಿಪಕ್ಷಗಳ ಜೊತೆಗೆ ಗುರುತಿಸಿಕೊಂಡವರ ಮೇಲೆಯೇ ಏಕೆ ಮುಖ್ಯವಾಗಿ ದಾಳಿ ನಡೆಯುತ್ತದೆ?

‘ಆದಾಯ ತೆರಿಗೆ (ಐ.ಟಿ) ದಾಳಿ: ರಾಜಕೀಯ ಪ್ರೇರಿತವೇ?’ ವಿಷಯದ ಮೇಲೆ ಮಂಗಳವಾರ ‘ಪ್ರಜಾವಾಣಿ’ ಬಹುಮಾಧ್ಯಮ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಕೇಳಿಬಂದ ಪ್ರಮುಖ ಪ್ರಶ್ನೆಗಳಿವು.

ಇನ್ನೊಂದೆಡೆ ‘ರಾಜಕೀಯ ಪ್ರೇರಿತ ಎಂಬುದು ಸರಿಯಲ್ಲ. ತೆರಿಗೆ ವಂಚನೆ ತಡೆಯುವುದು ಇದರ ಗುರಿ’ ಎಂಬ ಸಮರ್ಥನೆಯೂ ಕೇಳಿಬಂತು. ಸಂವಾದದಲ್ಲಿ ವ್ಯಕ್ತವಾದ ಅನಿಸಿಕೆಗಳು ಇಲ್ಲಿವೆ.

‘ರಾಜಕೀಯ ವಿರೋಧಿಗಳನ್ನು ಮಟ್ಟಹಾಕುವುದೇ ಗುರಿ’
ಐ.ಟಿ. ದಾಳಿಗಳ ಹಿಂದೆ ಆರ್ಥಿಕ ಪ್ರಗತಿ ಹಾಗೂ ತೆರಿಗೆ ವಂಚನೆ ತಡೆಯುವ ಉದ್ದೇಶ ಖಂಡಿತ ಇಲ್ಲ. ನೋಟು ರದ್ದತಿ ಮಾಡಿ ಜನಸಾಮಾನ್ಯರನ್ನು ಮಟ್ಟ ಹಾಕಿದರು. ಐ.ಟಿ ದಾಳಿ ಮೂಲಕ ರಾಜಕೀಯ ವಿರೋಧಿಗಳನ್ನು ಮಟ್ಟಹಾಕುತ್ತಿದ್ದಾರೆ. ಐ.ಟಿ. ದಾಳಿ ಕುರಿತು ನೋಟಿಸ್‌ ಕೊಡ್ತಾರೆ. ಬಳಿಕ ಅವರು ಬಿಜೆಪಿಗೆ ಸೇರಿದರೆ ಬಿಟ್ಟೇ ಬಿಡುತ್ತಾರೆ.

ಎಎಪಿ ಮುಖಂಡರ ಮೇಲೆ ನಡೆದ ದಾಳಿ, ನೀಡಿರುವ ನೋಟಿಸ್‌ ಸಂದರ್ಭಗಳನ್ನೇ ಗಮನಿಸಿ. ಪಂಜಾಬ್‌ನಲ್ಲಿ ಎಎಪಿ ಪ್ರಬಲವಾಗುತ್ತಿದೆ ಎಂಬ ವರದಿ ಹಿಂದೆಯೇ ಪಕ್ಷದ ಮುಖಂಡರಿಗೆ ನೋಟಿಸ್, ದಾಳಿ ಹೆಚ್ಚುತ್ತದೆ. ಪಶ್ಚಿಮ ಬಂಗಾಳದಲ್ಲಿ ಮುಕುಲ್ ರಾಯ್, ಸುವೇಂದು ಅಧಿಕಾರಿ ವಿರುದ್ಧವೂ ಆರೋಪಗಳಿದ್ದವು. ನೋಟಿಸ್‌ ನೀಡಲಾಗಿತ್ತು. ನಂತರ ಬಿಜೆಪಿ ಸುವೇಂದು ಅವರನ್ನೇ ಸಿ.ಎಂ ಅಭ್ಯರ್ಥಿ ಎಂದು ಬಿಂಬಿಸಿತ್ತು. ಇವರ ವಿರುದ್ಧ ಏಕೆ ದಾಳಿ ನಡೆದಿಲ್ಲ. ಹಲವು ಸುಳ್ಳುಗಳನ್ನು ಹೇಳಿ ಇವರು ಅಧಿಕಾರಕ್ಕೆ ಬಂದರು. ಅವುಗಳನ್ನು ಮುಚ್ಚಿ, ಜನರ ಗಮನ ಬೇರೆಡೆ ಸೆಳೆಯಲು, ವಿರೋಧಿಗಳನ್ನು ಮಟ್ಟ ಹಾಕಲು ಈಗ ಐ.ಟಿ.ದಾಳಿ ಮಾಡಿಸಲಾಗುತ್ತಿದೆ.
-ಬಿ.ಟಿ.ನಾಗಣ್ಣ, ಉಪಾಧ್ಯಕ್ಷ,ಆಮ್‌ ಆದ್ಮಿ ಪಕ್ಷ

‘ರಾಜಕೀಯ ಪ್ರಭಾವ, ಉದ್ದೇಶ ಇರುವುದು ಸ್ಪಷ್ಟ’
ಐ.ಟಿ.ದಾಳಿ ಅನೇಕ ಪ್ರಕರಣಗಳು ರಾಜಕೀಯ ಉದ್ದೇಶದ್ದೇ ಆಗಿವೆ, ಸರ್ಕಾರವನ್ನು ಟೀಕಿಸುವವರೇ ದಾಳಿಗೆ ಒಳಗಾಗುತ್ತಿದ್ದಾರೆ ಎಂಬುದು ನಿಜ. ಬಿಜೆಪಿಗೆ ಭ್ರಷ್ಟಾಚಾರ ವಿರುದ್ಧ ಹೋರಾಡುವ ಬದ್ಧತೆ ಇಲ್ಲ. ಅದು ಒಂದು ಪಕ್ಷವಾಗಿ ಅಸಹಿಷ್ಣುತೆ ತೋರಿದೆ. ಪ್ರಬಲ ವಿಪಕ್ಷಗಳನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಬಹುತೇಕ ದಾಳಿಗೆ ಒಳಗಾದವರು ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಿಲ್ಲ. ಇಲ್ಲಿ ಸಮಸ್ಯೆಯ ಮೂಲವಿದೆ.

ನಿಯಮದ ಪ್ರಕಾರ, ದಾಳಿ ವೇಳೆ ಬಾಧಿತ ವ್ಯಕ್ತಿ ಇರಬೇಕು. ಅಥವಾ ಆ ಭಾಗದ ಇಬ್ಬರು ಪ್ರಮುಖರ ಹಾಜರಿ ಇರಬೇಕು. ದಾಳಿ ವೇಳೆ ಮೌನವಾಗಿರುವ ಅವಕಾಶವೂ ಬಾಧಿತರಿಗೆ ಇದೆ. ಆದರೆ, ಬಳಿಕ ಈ ದಾಳಿಗೆ ಸಮರ್ಥನೆ ಇಲ್ಲ. ರಾಜಕೀಯ ದುರುದ್ದೇಶವಿದೆ ಎಂದು ನಿರೂಪಿಸಲು ಕೋರ್ಟ್‌ಗೆ ಹೋಗುತ್ತಿಲ್ಲ. ನ್ಯಾಯಾಲಯವನ್ನು ಒಳಪಡಿಸಿಕೊಳ್ಳದೇ ಈ ಹಕ್ಕಿನ ಉಲ್ಲಂಘನೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಅನಿಸಿಕೆ.

ದಾಳಿ ಕುರಿತು ಅಧಿಕಾರಿಗಳೂ ಸಮರ್ಥನೆ ನೀಡಬೇಕಾಗಿದೆ. ಬೇನಾಮಿ ಮಾಹಿತಿ ಆಧರಿಸಿ ದಾಳಿ ನಡೆಸಬಹುದೇ? ಕಾಂಗ್ರೆಸ್‌ ಕೂಡ ಈ ವಿಷಯದಲ್ಲಿ ಮೌನವಹಿಸಿದೆ. ವಿರೋಧಪಕ್ಷಗಳು ಧ್ವನಿ ಎತ್ತಬೇಕು. ಸಂಸದೀಯ ಸಮಿತಿ ಮೂಲಕ ಅಧಿಕಾರಿಗಳಿಗೆ ಸಮನ್ಸ್‌ ನೀಡಿ ಪ್ರಶ್ನಿಸಲು ಅವಕಾಶವಿದೆ. ಅಲ್ಲಿ ದಾಳಿ ಫಲಶ್ರುತಿಯನ್ನು ಪ್ರಶ್ನಿಸಬೇಕು.
-ಕೆ.ವಿ.ಧನಂಜಯ,ಹಿರಿಯ ವಕೀಲ

*

‘ಚುನಾವಣೆ ವೇಳೆಯೇ ದಾಳಿ– ಉದ್ದೇಶವೇನು?’
ಐ.ಟಿ ದಾಳಿ ಪ್ರಕರಣಗಳು ಇಲಾಖೆಯ ಸಿಬ್ಬಂದಿಯ ದಕ್ಷತೆ ಕುರಿತೇ ಶಂಕೆ ಮೂಡಿಸುತ್ತಿದೆ. ಸದ್ಯ,ದೇಶದಲ್ಲಿ ಸರ್ವಾಧಿಕಾರದ ಮನಸ್ಥಿತಿ ಇದೆ. ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ದಾಳಿಗಳು ಹೆಚ್ಚಿವೆ. ಆದರೆ, ಶಿಕ್ಷೆಯಾದ ಪ್ರಕರಣಗಳು ಕಡಿಮೆ. ಇದು, ಏನು ತೋರಿಸುತ್ತದೆ? ಚುನಾವಣೆ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಏಕೆ ನಡೆಯುವುದಿಲ್ಲ?.

ಡಿಎಂಕೆ, ಎನ್‌ಸಿಪಿ ಮುಖಂಡ ಅಜಿತ್‌ ಪವಾರ್, ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾಂಗ್ರೆಸ್‌ ಹೀಗೆ ಬಹುತೇಕ ಪ್ರತಿಪಕ್ಷಗಳ ಮುಖಂಡರೇ ದಾಳಿಗೆ ಗುರಿಯಾಗಿದ್ದಾರೆ. 2013–14ರ ಅವಧಿಯಲ್ಲಿ ಇಂಥ 342 ದಾಳಿ ನಡೆದಿದ್ದವು. ಆ ಬಳಿಕ ದಾಳಿ ಪ್ರಕರಣಗಳು ಗಣನೀಯವಾಗಿ ಏರಿದೆ. 2011ರಿಂದ 1569 ಪ್ರಕರಣಗಳಿಗೆ ಸಂಬಂಧಿಸಿ 1,700 ದಾಳಿ ನಡೆದಿವೆ. 11 ಪ್ರಕರಣಗಳಷ್ಟೇ ಸಾಬೀತಾಗಿವೆ. ಇದರರ್ಥ ಏನು? ಒಂದು ಐ.ಟಿ ಇಲಾಖೆ ಅದಕ್ಷವಾಗಿರಬೇಕು ಅಥವಾ ಅದರ ದುರ್ಬಳಕೆ ಆಗುತ್ತಿರಬೇಕು.
-ಭವ್ಯ ನರಸಿಂಹಮೂರ್ತಿ,ಕಾಂಗ್ರೆಸ್‌ ವಕ್ತಾರೆ

*

‘ಶಂಕೆ ಬೇಡ, ಪಕ್ಷಾತೀತ ದಾಳಿ ನಡೆಯುತ್ತಿದೆ’
ತೆರಿಗೆ ವಂಚನೆ ತಡೆ, ಆದಾಯವನ್ನು ಮರೆಮಾಚುವುದು ಹೆಚ್ಚುತ್ತಿವೆ. ದೇಶದಲ್ಲಿ ಕೇವಲ ಶೇ 4.3ರಷ್ಟು ಜನರು ತೆರಿಗೆ ವ್ಯಾಪ್ತಿಯಲ್ಲಿದ್ದಾರೆ. ಉಳಿದವರಿಗೆ ತೆರಿಗೆ ಕಟ್ಟುವಷ್ಟು ಆದಾಯ ಇರುವುದಿಲ್ಲವೇ? ಇಲಾಖೆ ತನ್ನ ಮೂಲಗಳಿಂದ ಮಾಹಿತಿ ಆಧರಿಸಿ ಆಗಾಗ್ಗೆ ದಾಳಿ ನಡೆಸುತ್ತದೆ. ಬಿಜೆಪಿ ಮುಖಂಡರ ಮೇಲೂ ದಾಳಿಗಳಾಗಿವೆ. ಪಕ್ಷಾತೀತವಾಗಿ ದಾಳಿ ನಡೆಯುತ್ತಿದೆ.

ಹಣದ ಚಲಾವಣೆ ಹೆಚ್ಚಿರಲಿದೆ, ಕ್ರೋಡೀಕರಣವಾಗಲಿದೆ ಎಂಬ ಕಾರಣಕ್ಕೆ ಚುನಾವಣೆ ವೇಳೆ ದಾಳಿಗಳು ನಡೆಯುತ್ತವೆ ಅಷ್ಟೆ. ತೆರಿಗೆಯನ್ನು ವಂಚಿಸುವ ಪರ್ಯಾಯ ಆರ್ಥಿಕ ವಹಿವಾಟು ತಡೆಯಲು ಇಂತಹ ದಾಳಿ ಅಗತ್ಯ. ದೇಶದಲ್ಲಿ ಕಪ್ಪುಹಣ ಎಂಬುದು ನೋಟಿನ ಸ್ವರೂಪದಲ್ಲಷ್ಟೇ ಇಲ್ಲ. ವಿದೇಶಿ ಕರೆನ್ಸಿಗಳು, ಭೂಮಿಯಲ್ಲಿ ಹೂಡಿಕೆ ಸ್ವರೂಪದಲ್ಲಿವೆ. ನೋಟು ರದ್ಧತಿಯ ಉದ್ದೇಶ ನಕಲಿ ನೋಟು ಚಲಾವಣೆ ತಡೆಯುವುದೇ ಆಗಿತ್ತು ಎಂಬುದನ್ನು ಮರೆಯಬಾರದು. ರಾಷ್ಟ್ರೀಯ ಭದ್ರತೆ ಕಾರಣಕ್ಕೆ ನೋಟು ರದ್ದತಿ ಮಾಡಲಾಗಿತ್ತು ಎಂಬುದನ್ನು ಗಮನಿಸಬೇಕು.
-ಸುರೇಶ್‌ ನೆಲಮಂಗಲ,ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT