ಮಂಗಳವಾರ, ಮಾರ್ಚ್ 21, 2023
22 °C
ವಿವಿಧ ಕಾರಣಗಳನ್ನು ಮುಂದೊಡ್ಡಿ ವಿಡಂಬನಾ ಕಾರ್ಯಕ್ರಮಗಳನ್ನು ರದ್ದು ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಅಲ್ಲವೇ?

ಪ್ರಜಾವಾಣಿ ಚರ್ಚೆ: ಕಾರ್ಯಕ್ರಮಕ್ಕೂ ಪ್ರತಿಭಟನೆಗೂ ಅವಕಾಶ ಮುಕ್ತ ಇರಲಿ

ಪ್ರಕಾಶ್ ಬೆಳವಾಡಿ Updated:

ಅಕ್ಷರ ಗಾತ್ರ : | |

ವಿಡಂಬನಾ ಕಾರ್ಯಕ್ರಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಇದು ಹಲವು ಸಲ ಓದಿರುವ ಹೇಳಿ ಕೇಳಿರುವ ವಿಷಯ. ಈಗ ಮತ್ತೆ ನೆನಪು ಮಾಡಿಕೊಳ್ಳೋಣ. ಅಂದು ಭಾನುವಾರ, 2014ರ ಮೇ 11ರಂದು ಬೆಳಿಗ್ಗೆ ನಡೆದ ಕಾರ್ಯಕ್ರಮ. ಲಭ್ಯವಿರುವ ವರದಿಗಳ ಪ್ರಕಾರ, ಕನ್ನಡ ರಂಗಭೂಮಿಯ ವಿಶಿಷ್ಟ ಶೈಲಿಯ ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಆಗಿದ್ದ ಮಾಸ್ಟರ್ ಹಿರಣ್ಣಯ್ಯನವರ ಕಲಾ ಸೇವೆಯನ್ನು ಗುರುತಿಸಿ ಮೈಸೂರಿನ ಸಂಸ್ಥೆಯೊಂದು ಮೈಸೂರಿನಲ್ಲಿ ನಡೆದ ಸಂಗೀತ ಸಭಾ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿಯೊಂದನ್ನು ನೀಡಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಣ್ಣಯ್ಯನವರು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುರಿತು ಅವಹೇಳನಕಾರಿ ಎನ್ನಿಸಬಹುದಾದ ಮಾತುಗಳನ್ನು ತಮ್ಮ ಎಂದಿನ ಧಾಟಿಯಲ್ಲಿ ಆಡಿದ್ದರು.

ಅರಿವಿಗೆ ಬರದೆಯೇ ಅವರು ಆಡಿದ ಮಾತುಗಳ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ಹರಡಿ ಕೆಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಹಿರಣ್ಣಯ್ಯನವರ ವಿರುದ್ದ ಪ್ರತಿಭಟಿಸಿದ್ದರು. ಮಾಸ್ಟರ್ ಹಿರಣ್ಣಯ್ಯನವರು ಕಾರ್ಯಕ್ರಮ ಮುಗಿಸಿ ಅಲ್ಲಿಂದ ತೆರಳಿದ್ದರು, ರೊಚ್ಚಿಗೆದ್ದ ಕಾರ್ಯಕರ್ತರು ಕುರ್ಚಿಗಳನ್ನು ಎಸೆದು ರಂಪ ಮಾಡುತ್ತ ಹಿರಣ್ಣಯ್ಯನವರ ವಿರುದ್ಧ ಕೂಗಾಡಿ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.

ಈ ಸುದ್ದಿಯು ಹಿರಣ್ಣಯ್ಯನವರಿಗೆ ಮುಟ್ಟಿದ ಕೂಡಲೇ ಅವರು ಮೈಸೂರಿನಲ್ಲೇ ಇದ್ದ ಸಿದ್ದರಾಮಯ್ಯನವರ ನಿವಾಸಕ್ಕೆ ತಲುಪಿ ಅವರನ್ನು ಭೇಟಿಯಾಗಿ, ಕ್ಷಮೆ ಯಾಚಿಸಿ ಅವರಿಂದಲೇ ರಕ್ಷಣೆಯ ವ್ಯವಸ್ಥೆ ಕೋರಿದ್ದರಂತೆ. ಸಿದ್ದರಾಮಯ್ಯನವರು ಅವರ ಜೊತೆ ಮಾತು ಮುಗಿಸಿ ಅಲ್ಲಿಯೂ ಸೇರಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಹಿರಣ್ಣಯ್ಯನವರಿಗೆ ಬೆಂಗಾವಲು ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ಕೊಟ್ಟು ಅವರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದರಂತೆ.

ಐದು ವರ್ಷಗಳ ನಂತರ, 2019ರ ಮೇ 2ರಂದು ಮಾಸ್ಟರ್ ಹಿರಣ್ಣಯ್ಯ ತೀರಿಕೊಂಡರು. ಸಿದ್ದರಾಮಯ್ಯನವರು ತಮ್ಮ ಸಂತಾಪವನ್ನು ಸೂಚಿಸುತ್ತ, ‘ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದೆ’ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದರು.

ಇಲ್ಲಿ ಪ್ರಸ್ತುತ ಏನೆಂದರೆ, ಅಂದು ಅವರು ತೀರ್ಮಾನಿಸಿದಂತೆ ಮತ್ತೆ ಎಂದೂ ಹಿರಣ್ಣಯ್ಯನವರು ರಂಗದ ಮೆಟ್ಟಿಲುಗಳನ್ನು ಏರಲಿಲ್ಲ. ಇದರಿಂದ ಕೆಲವರಿಗೆ ಖುಷಿಯೂ ಆಗಿದ್ದಿರಬಹುದು ಮತ್ತು ಸಂಕಟ ಪಟ್ಟ ಹಿರಣ್ಣಯ್ಯನವರ ಅಭಿಮಾನಿಗಳೂ ಇದ್ದಾರೆ. ಅವರೇ ಬಾಯಿ ಮುಚ್ಚಿದ್ದೋ ಅಥವಾ ಅದನ್ನು ಮುಚ್ಚಿಸಿದ್ದೊ, ಅಂತೂ ಹಿರಣ್ಣಯ್ಯನವರ ಕಲೆಯನ್ನು ಅವರ ಅಭಿಮಾನಿಗಳು ಕಳೆದುಕೊಂಡದ್ದನ್ನು ಒಂದು ಸಮಾಜ ಒಪ್ಪಬೇಕೆ? ಅಥವಾ ಅವರಿಗೆ ಹಲವು ದಶಕಗಳು ಆ ಧಾಟಿಯಲ್ಲಿ ರಂಗದ ಮೇಲೆ ಮಾತನಾಡಲು ಬಿಟ್ಟಿದ್ದೇ ತಪ್ಪು ಎಂದು ತೀರ್ಮಾನಿಸಬೇಕೆ? ಹಾಗೆ ತೀರ್ಮಾನಿಸುವವರು ಯಾರು – ಪ್ರತಿಭಟನೆ ಮಾಡುವವರೊ? ಅಧಿಕಾರದಲ್ಲಿರುವವರೊ? ಅಥವ ಕಾನೂನು ಎತ್ತಿಹಿಡಿಯುವ ನ್ಯಾಯಾಂಗ ವ್ಯವಸ್ಥೆಯೊ?

ಈ ಪ್ರಶ್ನೆಯನ್ನು ಕಾಮಿಡಿಯನ್ ಮುನವ್ವರ್‌ ಫಾರೂಕಿಯವರ ವಿಚಾರದಲ್ಲೂ ಕೇಳಬಹುದು. ಆತನನ್ನು ನಾನು ನೋಡಿಲ್ಲ, ಮಾತೂ ಕೇಳಿಲ್ಲ, ಕೇಳುವುದೂ ಇಲ್ಲ. ಅದು ಸಹೃದಯನ ಆಯ್ಕೆ. ಆದರೆ ಈ ಕಾಮಿಡಿಯನ್ ಸುದ್ದಿಯಲ್ಲಿರುವುದು ಗೊತ್ತು. ಮೊನ್ನೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ರದ್ದುಗೊಳಿಸಿದ್ದಕ್ಕೆ ವಿಚಿತ್ರವಾದ ಕಾರಣ ನೀಡಿದ್ದಾರೆ ನಮ್ಮ ಪೊಲೀಸರು. ‘ಕಾರ್ಯಕ್ರಮದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ, ಕಾರ್ಯಕ್ರಮ ನಡೆದರೆ ಗದ್ದಲವಾಗಬಹುದು, ಆದ್ದರಿಂದ ಕಾರ್ಯಕ್ರಮ ರದ್ದುಗೊಳಿಸುವುದು ಉತ್ತಮ’ ಎಂದು ಹೇಳಿ ಪೊಲೀಸರು ಆಯೋಜಕರಿಗೆ ಪತ್ರ ಬರೆದಿದ್ದರಂತೆ.

ಅಂದರೆ, ಕಾರ್ಯಕ್ರಮಕ್ಕೆ ರಕ್ಷಣೆ ನೀಡುವುದಕ್ಕಿಂತ ಮುಖ್ಯವಾದುದು ಗದ್ದಲ ಮಾಡಲು ಸಿದ್ಧವಿರುವವರಿಗೆ ಸ್ಪಂದಿಸುವುದೇ? ಪೊಲೀಸರ ಈ ಕ್ರಮದಿಂದ ಅವರ ಬೆದರಿಕೆಗೆ ಮನ್ನಣೆ ಸಿಕ್ಕಂತೆ ಆಗುವುದಿಲ್ಲವೇ? ಅವರ ಕಾಮಿಡಿ ಶೋ ಕಾನೂನಿಗೆ ವಿರುದ್ಧವಾಗಿದೆ ಎನ್ನುವುದಾದಲ್ಲಿ ಅದು ಹೇಗೆ, ಯಾವ ಕಾನೂನಿನ ಅಡಿಯಲ್ಲಿ ಅರೋಪವನ್ನು ಮಾಡಿ ಸಮರ್ಥಿಸಿಕೊಳ್ಳಲಾಗಿದೆ ಎಂದು ಪೋಲಿಸರು ವಿವರಿಸಬೇಕಲ್ಲವೇ?

ಸುಮಾರು ಎರಡು ವರ್ಷಗಳ ಹಿಂದೆ ಹೊಸ ವರ್ಷದ ಒಂದು ಮೋಜಿನ ಕೂಟದಲ್ಲಿ ನಟಿ ಸನ್ನಿ ಲಿಯಾನ್ ಬಂದು ಮನರಂಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಬಂದ ಕೂಡಲೇ ಇಲ್ಲಿನ ಕೆಲವು ಕನ್ನಡ ಕಾಪಾಡುವ ಕಾರ್ಯಕರ್ತರು ಪ್ರತಿಭಟಿಸುವ ಬೆದರಿಕೆ ಹಾಕಿದ್ದರು. ಹಾಗಾಗಿ, ಆಕೆ ‘ನಾನು ಬರುವುದಿಲ್ಲ, ನನ್ನಿಂದ ಯಾರಿಗೂ ತೊಂದರೆಯಾಗುವುದು ಬೇಡ’ ಎಂದು ಹಿಂದೆ ಸರಿದಿದ್ದರು. ಮರ್ಯಾದೆಗೆ ಒಪ್ಪುವಂತೆ ಅಕೆ ಧರಿಸಬಹುದಾದ ಉಡುಪು ಹೇಗಿರಬೇಕು ಎಂದು ಸಚಿವರೊಬ್ಬರು ಸೂಚನೆ ಸಹ ನೀಡಿದ್ದರು.

ಈಗ ಫಾರೂಕಿಯವರೂ ಈ ಕಾಮಿಡಿ ವೃತ್ತಿಯೇ ಬೇಡ ಎಂದಿದ್ದಾರಂತೆ. ಇದಕ್ಕೆ ಹಿಂದೆಯೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡಿದ ಆರೋಪ ಎದುರಿಸಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧನದಲ್ಲಿದ್ದ ಫಾರೂಕಿ, ಈಗ ‘ಹೇಟ್ ವನ್, ಆರ್ಟಿಸ್ಟ್ ಲಾಸ್ಟ್’ (ದ್ವೇಷ ಗೆದ್ದಿತು, ಕಲಾವಿದ ಸೋತ) ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೊನೆಯೆಲ್ಲಿ? ಮಾತೆತ್ತಿದರೆ ಪ್ರತಿಭಟಿಸುವ ಈ ‘ಔಟ್ರೇಜಿಂಗ್’ ಯುಗದಲ್ಲಿ, ಈ ಪ್ರಶ್ನೆ ಎದುರಾದಾಗ ನಮ್ಮ ನಮ್ಮ ರಾಜಕೀಯ ನಿಯತ್ತು, ಧಾರ್ಮಿಕ ಶ್ರದ್ಧೆ ಅಥವಾ ಇನ್ನಾವುದೋ ತಿಕ್ಕಲುತನಕ್ಕೆ ಅನುಗುಣವಾಗಿ ಒಮ್ಮೆ ಇತ್ತ ಒಮ್ಮೆ ಅತ್ತ ವಾಲುವುದು ಮೂರ್ಖತನವಲ್ಲವೇ?

‘ಗಿವಿಂಗ್ ಒಫೆನ್ಸ್’ (Giving offence) ಸ್ಟ್ಯಾಂಡ್ ಅಪ್ ಕಾಮಿಡಿಯ ಒಂದು ಆಯಾಮ. ಅದನ್ನು ಗುಂಪುಗಾರಿಕೆಯಿಂದಾಗಲೀ ಪಕ್ಷ ರಾಜಕೀಯದಿಂದಾಗಲೀ ಶಿಸ್ತಿಲ್ಲದ ಅಧಿಕಾರದ ಬಳಕೆಯಿಂದಾಗಲೀ ಯಾವುದೇ ರೀತಿಯ ಬೆದರಿಕೆಯಿಂದಾಲಿ ತಡೆಯುವುದು ಅನಧಿಕೃತ ಸೆನ್ಸಾರ್ ಶಿಪ್ ಎಂದು ಪರಿಗಣಿಸಬೇಕಾಗುತ್ತದೆ. ನನ್ನ ಅಭಿಪ್ರಾಯದಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕಲ್ಪಿಸಿಕೊಡುವುದು ಅಧಿಕಾರ ವ್ಯವಸ್ಥೆಯ ಆದ್ಯ ಕರ್ತವ್ಯ. ಆದರೆ, ಅದೇ ನಿಷ್ಠೆಯಿಂದ ಶಾಂತಿಯುತ ಪ್ರತಿಭಟನೆಗೂ ಅವಕಾಶ ಕಲ್ಪಿಸಿಕೊಡಬೇಕು. ಕಲಾವಿದರು – ಅವರ ರಾಜಕೀಯ ಒಲವು ಏನೇ ಇರಲಿ – ಅಭಿಮಾನಿಗಳ ‘ಪ್ರೀತಿ’ಯನ್ನು ಸ್ವಾಗತ ಮಾಡುವಂತೆ, ಪ್ರೀತಿಸದವರ ‘ದ್ವೇಷ’ವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಹಿಂದೂ ದೇವತೆಗಳ ಬೆತ್ತಲೆ ‘ಆರ್ಟ್’ ಪ್ರದರ್ಶನ ಮಾಡಲು ಸ್ವರ್ಗೀಯ ಹುಸೇನ್ ಸಾಹೇಬರಿಗೆ ಅವಕಾಶ ಮಾಡಿಕೊಟ್ಟರೆ, ಅದರಿಂದಾಗಿ ನೊಂದವರ ಪ್ರತಿಭಟನೆಗೂ ಅವಕಾಶ ನೀಡಬೇಕು. ಇಲ್ಲದಿದ್ದರೆ ಅವರ ಅವರ ಮೂಗಿನ ನೇರಕ್ಕೆ ‘ಲಿಬರಲ್’ ಎಂದು ಅವರವರೇ ವ್ಯಾಖ್ಯಾನಿಸಿಕೊಳ್ಳಬೇಕು ಅಷ್ಟೆ.

ಕಡೆಯ ಮಾತು: 1992ರಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ಮುತ್ತಿಗೆ ಹಾಕಿದಾಗ ಬೆಳಿಗ್ಗೆ 11ರ ಸುಮಾರಿಗೆ ದೇಶದ ಜನ ಮನೆಯಲ್ಲಿಯೇ ಭಜಿಸಬೇಕು ಎಂದು ಎಲ್‌.ಕೆ. ಅಡ್ವಾಣಿಯವರು ಕರೆಕೊಟ್ಟಿದ್ದರು. ಆ ದಿನ ರವೀಂದ್ರ ಕಲಾಕ್ಷೇತ್ರಕ್ಕೆ ನಾನು ಪತ್ರಕರ್ತನಾಗಿ ಹೋಗಿದ್ದೆ. ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ನಮ್ಮ ತಂದೆ ಮೇಕಪ್‌ ನಾಣಿಯವರೂ ಸೇರಿದಂತೆ ಸಾಹಿತಿಗಳು, ಕಲಾವಿದರು ಪ್ರತಿಭಟನೆಗೆ ಕುಳಿತಿದ್ದರು. ಕಲಾಕ್ಷೇತ್ರದ ಮುಂದಿನ ಬೀದಿಯಲ್ಲಿ ಗಾಯಕ ಸಿ. ಅಶ್ವತ್ಥ ನೇತೃತ್ವದಲ್ಲಿ ಜನರ ತಂಡ ಕರಸೇವಕರ ಪರ ಘೋಷಣೆ ಕೂಗುತ್ತಾ ಸೇರಿದ್ದರು. ಆಗ, ಎರಡೂ ಕಡೆಯವರು ತಮ್ಮ ಭಾವನೆ ವ್ಯಕ್ತಪಡಿಸಲು ಅಂದಿನ ಆಡಳಿತ ವ್ಯವಸ್ಥೆ ಮಾಡಿಕೊಟ್ಟಿತ್ತು.

ಈಗಿನಂತೆ ಆಗ ಸೋಶಿಯಲ್‌ ಮೀಡಿಯಾ ಯುಗವಾಗಿರಲಿಲ್ಲ. ಸುದ್ದಿವಾಹಿನಿಗಳ ಅಬ್ಬರವೂ ಇರಲಿಲ್ಲ. ಲಂಕೇಶ್‌ ಪತ್ರಿಕೆ ಕಚೇರಿಯಲ್ಲಿ ಕಾರ್ಡ್‌ ಆಟ ಮುಗಿಸಿ, ಕೆಲವು ಲೇಖಕರು ಮೇಷ್ಟ್ರ (ಲಂಕೇಶ್‌) ಸುತ್ತ ಕುಳಿತಿರಬೇಕಾದರೆ ಬಾಬರಿ ಮಸೀದಿ ಕೆಡವಿದ ಸುದ್ದಿ ಬಂತು. ರಾಮಚಂದ್ರ ಶರ್ಮರ ಕಣ್ಣಲ್ಲಿ ನೀರು ಬಂತು. ಅವರಂಥವರೆಲ್ಲ ಕಣ್ಣೀರು ಹಾಕಿದ್ದರ ಹೊಣೆಯನ್ನು ಅಂದಿನ ಪ್ರಧಾನಿಯವರೋ ಅಥವಾ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿಯವರೋ, ಅಡ್ವಾಣಿಯವರೋ, ಕರಸೇವಕರೋ ಇಲ್ಲವೆ ಇಂದಿನ ನ್ಯಾಯಾಂಗ ವ್ಯವಸ್ಥೆಯೋ ಯಾರು ಹೊರುವರು ಎನ್ನುವ ಪ್ರಶ್ನೆ ಮುಂದಿದೆ. ಅದಕ್ಕೆ ಉತ್ತರ ಹುಡುಕುವ ಮನಸ್ಸು, ವ್ಯವಧಾನವನ್ನು ನಾವು ಹೊಂದುವುದು ಇಂದಿನ ಅಗತ್ಯ.

ಲೇಖಕ: ರಂಗಕರ್ಮಿ, ಸಿನಿಮಾ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು