ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಹದಿನಾರನೇ ಹಣಕಾಸು ಆಯೋಗ; ರಾಜ್ಯಗಳ ಬೇಡಿಕೆಗೆ ಧ್ವನಿಯಾಗಲಿ

Published : 9 ಸೆಪ್ಟೆಂಬರ್ 2024, 19:30 IST
Last Updated : 9 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗವನ್ನು ರಚಿಸಿದ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿತ್ತೀಯ ಅಧಿಕಾರಗಳು ಹಾಗೂ ಹಕ್ಕುಗಳು, ಸಂಪನ್ಮೂಲದ ಹಂಚಿಕೆ, ವಿತ್ತೀಯ ಒಕ್ಕೂಟ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. 2026ರ ಏಪ್ರಿಲ್‌ನಿಂದ ಐದು ವರ್ಷಗಳ ಅವಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ವರಮಾನದ ಹಂಚಿಕೆಯ ಮಾರ್ಗಸೂಚಿಗಳನ್ನು ಆಯೋಗವು ಅಂತಿಮಗೊಳಿಸಲಿದೆ. ಆಯೋಗವು ರಾಜ್ಯ ಸರ್ಕಾರಗಳ ಜತೆ ಈ ಸಂಬಂಧ ಚರ್ಚೆಯನ್ನೂ ಆರಂಭಿಸಿದೆ. ತೆರಿಗೆ ವರಮಾನದಲ್ಲಿ ನ್ಯಾಯಯುತ ಪಾಲು ನೀಡುವಂತೆ ಬೇಡಿಕೆ ಮಂಡಿಸಿರುವ ಕೆಲವು ರಾಜ್ಯಗಳು ಕೇಂದ್ರದ ಜತೆ ಸಂಘರ್ಷಕ್ಕೆ ಮುಂದಾಗಿರುವುದು, ಬದಲಾಗುತ್ತಿರುವ ಆರ್ಥಿಕ ಚಿತ್ರಣ, ಆರ್ಥಿಕವಾಗಿ ಸಮಪಾಲು ನೀಡಬೇಕೆಂಬ ಬೇಡಿಕೆ ಹಾಗೂ ವಿತ್ತೀಯ ನ್ಯಾಯದ ಕುರಿತು ಹೊಸ ಹೊಸ ವ್ಯಾಖ್ಯಾನಗಳು ಬರುತ್ತಿರುವುದರಿಂದ ಆಯೋಗದ ಮುಂದೆ ಹಲವು ಸವಾಲುಗಳು ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ವಿವಿಧ ರಾಜ್ಯಗಳ ನಡುವಿನ ವಿತ್ತೀಯ ಸಂಬಂಧಗಳ ವಿಚಾರದಲ್ಲಿ ಈಗ ರಾಜಕಾರಣವೂ ನುಸುಳಿಕೊಂಡಿರುವುದರಿಂದ ಆಯೋಗದ ಕೆಲಸವು ತುಸು ಜಟಿಲವಾಗುವ ಸಾಧ್ಯತೆ ಇದೆ. ರಾಜಕೀಯ ಒಕ್ಕೂಟ ವ್ಯವಸ್ಥೆ ಮತ್ತು ವಿತ್ತೀಯ ಒಕ್ಕೂಟ ವ್ಯವಸ್ಥೆಯು ಒಂದರೊಳಗೆ ಮತ್ತೊಂದು ನಿಕಟವಾಗಿ ಬೆಸೆದುಕೊಂಡಿವೆ. ಹೀಗಾಗಿ ಆಯೋಗವು ಅತ್ಯಂತ ಕಠಿಣವಾದ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ಇದೆ.

16ನೇ ಹಣಕಾಸು ಆಯೋಗವು ಕರ್ನಾಟಕದಲ್ಲಿ ಇತ್ತೀಚೆಗೆ ನಡೆಸಿದ ಚರ್ಚೆಗಳನ್ನೂ ಇದೇ ದೃಷ್ಟಿಕೋನ ದಲ್ಲಿ ನೋಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆಯಾಗುವ ತೆರಿಗೆ ವರಮಾನದ ನಿಧಿಗೆ ರಾಜ್ಯವು ಸಂದಾಯ ಮಾಡುತ್ತಿರುವ ಮೊತ್ತದಲ್ಲಿ ಶೇಕಡ 60ರಷ್ಟನ್ನು ರಾಜ್ಯವೇ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ಮಂಡಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ 5ರಷ್ಟು ಜನರನ್ನು ಹೊಂದಿರುವ ಕರ್ನಾಟಕವು ಭಾರತದ ನಿವ್ವಳ ಆಂತರಿಕ ಉತ್ಪನ್ನಕ್ಕೆ ಶೇ 8.4ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯವು ಪಾವತಿಸುವ ಪ್ರತಿ ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟು ಮಾತ್ರ ರಾಜ್ಯಕ್ಕೆ ತೆರಿಗೆ ವರಮಾನ ಹಂಚಿಕೆ ರೂಪದಲ್ಲಿ ಬರುತ್ತಿದೆ ಎಂಬುದನ್ನು ಆಧರಿಸಿ ಮುಖ್ಯಮಂತ್ರಿಯವರು ತೆರಿಗೆ ವರಮಾನದ ನ್ಯಾಯಯುತ ಹಂಚಿಕೆಗೆ ಪಟ್ಟು ಹಿಡಿದಿದ್ದಾರೆ. ತೆರಿಗೆ ಪಾಲಿನ ಹಂಚಿಕೆಯ ಸೂತ್ರದಲ್ಲಿನ ಬದಲಾವಣೆಯಿಂದಾಗಿ ‘ಹಂಚಿಕೆಯಾಗಬಹುದಾದ ತೆರಿಗೆ ನಿಧಿ’ಯಿಂದ ರಾಜ್ಯಕ್ಕೆ ಬರುತ್ತಿರುವ ಪಾಲು ನಿರಂತರವಾಗಿ ಇಳಿಕೆಯಾಗುತ್ತಿದೆ ಮತ್ತು ಹೆಚ್ಚಿನ ಮೊತ್ತವು ಬೇರೆ ರಾಜ್ಯಗಳಿಗೆ ಹೋಗುತ್ತಿದೆ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ. ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನೈಸರ್ಗಿಕ ವಿಕೋಪ ತಡೆಗೆ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲು ವಿಶೇಷ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರವು 16ನೇ ಹಣಕಾಸು ಆಯೋಗವನ್ನು ಕೋರಿದೆ. ಬೆಂಗಳೂರಿನಂತಹ ದೊಡ್ಡ ನಗರಗಳನ್ನು ಹೊರಗಿಟ್ಟು ರಾಜ್ಯಗಳಲ್ಲಿನ ತಲಾ ಆದಾಯವನ್ನು ಲೆಕ್ಕ ಹಾಕುವಂತೆಯೂ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಸಾಧನೆ ತೋರುತ್ತಿರುವುದಕ್ಕಾಗಿಯೇ ತೆರಿಗೆ ಪಾಲಿನ ಹಂಚಿಕೆಯಲ್ಲಿ ತಮ್ಮನ್ನು ಶಿಕ್ಷಿಸಲಾಗುತ್ತಿದೆ ಎಂಬ ಭಾವನೆ ದಕ್ಷಿಣದ ರಾಜ್ಯಗಳಲ್ಲಿದೆ. ಈ ಕಾರಣದಿಂದಾಗಿಯೇ ದಕ್ಷಿಣದ ಎಲ್ಲ ರಾಜ್ಯಗಳೂ ಏಕರೂಪದ ಬೇಡಿಕೆಗಳನ್ನು ಹೊಂದಿವೆ. ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳಿಗೆ ನೆರವಾಗಬೇಕು ಎಂಬ ‘ಸಮಾನತೆ’ಯ ಸೂತ್ರವನ್ನು ತೆರಿಗೆ ಪಾಲಿನ ಹಂಚಿಕೆಯಲ್ಲಿ ಅನುಸರಿಸಲಾಗುತ್ತಿದೆ. ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳ ಕಳಪೆ ಸಾಧನೆಯ ಕಾರಣಕ್ಕೆ ತಮ್ಮ ತೆರಿಗೆ ಪಾಲು ಕಡಿತಗೊಳ್ಳುವುದು ಸರಿಯಲ್ಲ ಎಂಬ ವಾದವನ್ನು ದಕ್ಷಿಣದ ರಾಜ್ಯಗಳು ಮಂಡಿಸುತ್ತಿವೆ. ಈ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರದರ್ಶಿಸಿರುವ ಸಿದ್ದರಾಮಯ್ಯ, ‘ನಮ್ಮ ರಾಜ್ಯಗಳ ಜನರ ಮೇಲೆ ಹೊರೆ ಹೊರಿಸಿ ಬೇರೆ ರಾಜ್ಯಗಳಿಗೆ ನೆರವು ನೀಡಲಾಗದು’ ಎಂದಿದ್ದಾರೆ. ಕೇಂದ್ರ ಸರ್ಕಾರವು ತಮ್ಮನ್ನು ತಾರತಮ್ಯದಿಂದ ನೋಡುತ್ತಿದೆ ಎಂಬ ಭಾವನೆ ದಕ್ಷಿಣದ ರಾಜ್ಯಗಳಲ್ಲಿದ್ದು, ಪಕ್ಷಪಾತದ ಧೋರಣೆಯ ವಿರುದ್ಧ ರಾಜಕೀಯ ಆಕ್ರೋಶವೂ ಬಲವಾಗುತ್ತಿದೆ. ಸಂಪನ್ಮೂಲ ಹಂಚಿಕೆಯ ವಿಚಾರದಲ್ಲಿ ಸಮತೋಲನದಿಂದ ಕೂಡಿದ ಮತ್ತು ಪಾರದರ್ಶಕವಾದ ಸ್ಪಂದನವನ್ನು ಆಯೋಗದಿಂದ ಬಯಸಿರುವುದಾಗಿ ಕರ್ನಾಟಕ ಹೇಳಿದೆ. ಭಿನ್ನಾಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವಂತಹ ನಿರ್ಧಾರಗಳನ್ನು ತಾನು ಕೈಗೊಳ್ಳುವುದಿಲ್ಲ ಎಂದು ಆಯೋಗ ಹೇಳಿದೆ. ರಾಜ್ಯದ ನ್ಯಾಯಯುತ ಬೇಡಿಕೆಯನ್ನು ಆಲಿಸಿ, ಅದನ್ನು ಈಡೇರಿಸುವ ದಿಸೆಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ 16ನೇ ಹಣಕಾಸು ಆಯೋಗದ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT