ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಉಚಿತ ಪಡಿತರ ಯೋಜನೆ ಅಗತ್ಯ- ರಾಜಕೀಯ ಉದ್ದೇಶವೂ ಇಲ್ಲಿದೆ

Last Updated 26 ಡಿಸೆಂಬರ್ 2022, 22:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಎರಡು ಮಹತ್ವದ ನಿರ್ಧಾರಗಳು ರಾಜಕೀಯ ಆಯಾಮವನ್ನೂ ಹೊಂದಿರುವುದು ನಿಜವಾದರೂ, ಅವುಗಳಿಂದ ದೇಶದ ಕೋಟ್ಯಂತರ ಕುಟುಂಬಗಳಿಗೆ ನೆರವು ಸಿಗಲಿರುವುದು ಕೂಡ ಅಷ್ಟೇ ದಿಟ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷದ ಅವಧಿಗೆ ಉಚಿತ ಪಡಿತರ ನೀಡಲು ಹಾಗೂ ನಿವೃತ್ತ ಸೈನಿಕರ ಪಿಂಚಣಿಯನ್ನು ‘ಒಂದು ಶ್ರೇಣಿ ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಅಡಿಯಲ್ಲಿ ಪರಿಷ್ಕರಿಸಲು ಸರ್ಕಾರ ತೀರ್ಮಾನಿಸಿದೆ. ದೇಶದ ಜನರಿಗೆ ಇದು ‘ಹೊಸ ವರ್ಷದ ಕಾಣಿಕೆ’ಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಡವರ ಪರ ನೀತಿಗೂ ಈ ನಿರ್ಧಾರಗಳು ಸಾಕ್ಷಿಯಾಗಿವೆ ಎಂದು ಸರ್ಕಾರ ಮತ್ತು ಆಡಳಿತ ಪಕ್ಷ ಒಟ್ಟಿಗೇ ಬಣ್ಣಿಸಿವೆ. ಆರ್ಥಿಕ ಸಂಕಷ್ಟದ ಈ ದಿನಗಳಲ್ಲಿ ಜನರಿಗೆ
ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಬೇಕು ಎಂದು ವಿರೋಧ ಪಕ್ಷಗಳು ಸಹ ಒತ್ತಾಯಿಸುತ್ತಲೇ ಬಂದಿವೆ. ಹಲವು ತಿಂಗಳುಗಳಿಂದ ಜನಸಾಮಾನ್ಯರು ಹಣದುಬ್ಬರದ ಹೊಡೆತಕ್ಕೆ ಸಿಕ್ಕು ನಲುಗಿದ್ದಾರೆ. ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಲೇ ಇದೆ. ಕೂಲಿ ಕಾರ್ಮಿಕರು ಹಾಗೂ ದಮನಿತ ವರ್ಗಗಳ ಜನರನ್ನು ಈ ಸಮಸ್ಯೆ ಇನ್ನೂ ಹೆಚ್ಚಾಗಿ ಬಾಧಿಸಿದೆ. ಒಂದೆಡೆ ಗಳಿಕೆಯೇ ಇಲ್ಲದಿರುವುದು, ಇನ್ನೊಂದೆಡೆ ನಿರಂತರವಾಗಿ ಬೆಲೆ ಏರುತ್ತಿರುವುದು– ಇಂತಹ ವೈರುಧ್ಯಗಳಿಂದ ಬಡವರ ಬದುಕು ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಹೀಗಾಗಿ ಅವರ ಪಾಲಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ, ಅವರು ಸಂಪೂರ್ಣ ಬಸವಳಿದು ಹೋಗಿದ್ದಾರೆ.

ಪಡಿತರ ಯೋಜನೆಯ ಮೂಲಕ ಇದುವರೆಗೆ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ಹಾಗೂ ಇತರ ಧಾನ್ಯಗಳನ್ನು ಪಡೆಯುತ್ತಿದ್ದ ಫಲಾನುಭವಿಗಳು, ಇನ್ನುಮುಂದೆ ಒಂದು ವರ್ಷದವರೆಗೆ ಪ್ರತೀ ತಿಂಗಳು ತಲಾ 35 ಕೆ.ಜಿ.ಯಷ್ಟು ಆಹಾರಧಾನ್ಯವನ್ನು ಸಂಪೂರ್ಣ ಉಚಿತವಾಗಿ ಪಡೆಯಲಿದ್ದಾರೆ. ಉಳಿದವರಿಗೂ 2023ರ ಡಿಸೆಂಬರ್‌ವರೆಗೆ ತಲಾ ಐದು ಕೆ.ಜಿ.ಯಷ್ಟು ಆಹಾರಧಾನ್ಯವನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಅಂತ್ಯೋದಯ ಅನ್ನ ಯೋಜನೆ ಸೇರಿದಂತೆ ಬಡವರ ಕಲ್ಯಾಣಕ್ಕಾಗಿ ಹಾಕಿಕೊಂಡಿದ್ದ ಪಡಿತರ ವಿತರಣೆಯ ವಿವಿಧ ಕಾರ್ಯಕ್ರಮಗಳು ಮತ್ತು 2020ರ ಏಪ್ರಿಲ್‌ನ ಲಾಕ್‌ಡೌನ್‌ ಸಂದರ್ಭದಲ್ಲಿ ಶುರು ಮಾಡಿದ್ದ ಆಹಾರಧಾನ್ಯ ವಿತರಣೆ ಯೋಜನೆ ಎಲ್ಲವೂ ಈಗ ಈ ಹೊಸ ಯೋಜನೆಯಲ್ಲಿ ವಿಲೀನಗೊಂಡಿವೆ. ಈ ಯೋಜನೆಗೆ ಅಗತ್ಯವಾದ ₹ 2 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಹಾಗೆಯೇ ಪಿಂಚಣಿ ಪರಿಷ್ಕರಣೆಯಿಂದಾಗಿ ನಿವೃತ್ತ ಸೈನಿಕರ ಬಹುದಿನಗಳ ಬೇಡಿಕೆಯೂ ಈಡೇರಿದಂತಾಗಿದೆ. ಇದರಿಂದ ದೇಶಕ್ಕಾಗಿ ದುಡಿದ 25 ಲಕ್ಷ ನಿವೃತ್ತ ಸೈನಿಕರು ಪ್ರಯೋಜನ ಪಡೆಯಲಿದ್ದಾರೆ. ಈ ಉದ್ದೇಶಕ್ಕಾಗಿ
ಸರ್ಕಾರ ವಾರ್ಷಿಕ ₹ 24 ಸಾವಿರ ಕೋಟಿಯಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ವ್ಯಯಿಸಬೇಕಿದೆ.

ಸಂಕಷ್ಟದ ಈ ಸಮಯದಲ್ಲಿ ಬಡವರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ ಎನ್ನುವುದು ನಿಜವಾದರೂ ಈ ನಿರ್ಧಾರಗಳ ಹಿಂದಿನ ರಾಜಕೀಯ ಉದ್ದೇಶವು ಗಮನಸೆಳೆಯದೇ ಇರುವುದಿಲ್ಲ. ಒಂದು ವರ್ಷದವರೆಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತದೆ. ಆ ವೇಳೆಗೆ 2024ರ ಲೋಕಸಭಾ ಚುನಾವಣೆ ಹತ್ತಿರವಾಗಿರುತ್ತದೆ. ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು 2023ರಲ್ಲಿ ನಡೆಯಲಿವೆ. ಉಚಿತ ಪಡಿತರ ವಿತರಣೆ ಯೋಜನೆಯಿಂದ ಚುನಾವಣೆಯಲ್ಲಿ ರಾಜಕೀಯ ಲಾಭವನ್ನೂ ಮಾಡಿಕೊಳ್ಳಲು ಆಡಳಿತ ಪಕ್ಷ ಹವಣಿಸುತ್ತಿರುವುದು ಸುಸ್ಪಷ್ಟ. ವಿರೋಧಾಭಾಸದ ಸಂಗತಿ ಏನೆಂದರೆ, ಚುನಾವಣೆಯಲ್ಲಿ ಉಚಿತ ಕೊಡುಗೆಗಳ ಘೋಷಣೆಗಳನ್ನು ಪ್ರಧಾನಿ ಕಟುವಾಗಿ ಟೀಕಿಸುತ್ತಾರೆ. ಅವರದೇ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದಲೇ ಉಚಿತ ಪಡಿತರ ವಿತರಣೆಯಂತಹ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಇಲ್ಲಿರುವ ಒಂದು ಒಳ್ಳೆಯ ಸಂಗತಿ ಎಂದರೆ, ಈ ದುರಿತ ಕಾಲದಲ್ಲಿ ನೆರವಿನ ನಿರೀಕ್ಷೆಯಲ್ಲಿದ್ದವರಿಗೆ ಯೋಜನೆಯ ಪ್ರಯೋಜನ ಸಿಗಲಿದೆ ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT