ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥವಾದ ಮುಂಗಾರು ಅಧಿವೇಶನ ಸಂಸದೀಯ ಪ್ರಜಾಸತ್ತೆಯ ದಮನ

Last Updated 13 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಸಂಸತ್ತಿನ ಈ ಹಿಂದಿನ ಹಲವು ಅಧಿವೇಶನಗಳ ರೀತಿಯಲ್ಲಿಯೇ ಈ ಬಾರಿಯ ಮುಂಗಾರು ಅಧಿವೇಶನದ ಕಲಾಪಗಳೂ ಗದ್ದಲ ಮತ್ತು ಅಡ್ಡಿಪಡಿಸುವಿಕೆಯಿಂದಾಗಿ ವ್ಯರ್ಥವಾಗಿ ಹೋಗಿವೆ. ನಿಗದಿತ ವೇಳಾಪಟ್ಟಿಗಿಂತ ಎರಡು ದಿನ ಮೊದಲೇ ಸಂಸತ್ತಿನ ಎರಡೂ ಸದನಗಳ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಉಳಿದ ಎರಡು ದಿನಗಳ ಕಲಾಪ ಕೂಡ ಗದ್ದಲದಲ್ಲಿ ಮುಳುಗಿ ಹೋಗಲಿದೆ ಎಂಬ ಕಾರಣಕ್ಕಾಗಿಯೇ ಅಧಿವೇಶನವನ್ನು ಎರಡು ದಿನ ಮೊದಲೇ ಮೊಟಕು ಮಾಡಲಾಗಿದೆ. ಜುಲೈ 19ರಂದು ಅಧಿವೇಶನ ಆರಂಭ ಆದಾಗಿನಿಂದ ಹೆಚ್ಚಿನ ದಿನಗಳಲ್ಲಿ ಉಭಯ ಸದನಗಳಲ್ಲಿಯೂ ಕಲಾಪವು ಸಹಜವಾಗಿ ನಡೆಯಲಿಲ್ಲ. ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಿದ ಪ್ರಕರಣ, ರೈತರ ಪ್ರತಿಭಟನೆ, ಬೆಲೆ ಏರಿಕೆ, ಅದರಲ್ಲೂ ಮುಖ್ಯವಾಗಿ ತೈಲ ಬೆಲೆ ಏರಿಕೆ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರಕ್ಕೆ ಇಚ್ಛೆ ಇರಲಿಲ್ಲ. ಹಾಗಾಗಿ, ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡಿವೆ. ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಹಕಾರ ಕಂಡು ಬಂದಿತ್ತು. ಆದರೆ, ಯಾವ ಚರ್ಚೆಯೂ ಇಲ್ಲದೆ ಹಲವು ಮಸೂದೆಗಳು ಅಂಗೀಕಾರ ಪಡೆದುಕೊಂಡಿವೆ. ವಿವಾದಾತ್ಮಕವಾದ ವಿಮಾ ಮಸೂದೆಯು ಮೊಟಕುಗೊಂಡ ಅಧಿವೇಶನದ ಕೊನೆಯ ದಿನ ಗೌಜು, ಗದ್ದಲದ ನಡುವೆಯೇ ಅಂಗೀಕಾರ ಪಡೆದುಕೊಂಡಿತು. ಸದನವು ಸಂಘರ್ಷಾತ್ಮಕ ಸ್ಥಿತಿಗೆ ಸಾಕ್ಷಿಯಾಯಿತು.

ಸದನ ನಡೆಯದೇ ಇದ್ದುದಕ್ಕೆ ಪರಸ್ಪರರು ಕಾರಣ ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ–ಪ್ರತ್ಯಾರೋಪ ನಡೆದಿದೆ. ಲೋಕ ಸಭೆಯ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಲಾಪವು ನಡೆಯದೇ ಇದ್ದುದಕ್ಕೆ ಕಳವಳ ವ್ಯಕ್ತಪಡಿಸಿ
ದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿ ಸರ್ಕಾರದ ಕಡೆಯವರು ವಿರೋಧ ಪಕ್ಷಗಳ ಮೇಲೆ ಆರೋಪ ಹೊರಿಸಿದ್ದಾರೆ. ಎಲ್ಲರನ್ನೂ ಆಲಿಸುವ ಸ್ಫೂರ್ತಿಯನ್ನು ತೋರಿಲ್ಲ ಮತ್ತು ನಿರಂಕುಶ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹರಿಹಾಯ್ದಿವೆ. ಗದ್ದಲವೇ ಸಹಜ ಸ್ಥಿತಿ ಎಂಬಂತಾಗಿತ್ತು ಮತ್ತು ಸಂವಾದದ ಜಾಗದಲ್ಲಿ ಸಂಘರ್ಷವು ಬಂದು ಕೂತಿತ್ತು. ಈ ಅಧಿವೇಶನದಲ್ಲಿ ಲೋಕಸಭೆಯು ಶೇ 21ರಷ್ಟು ಮತ್ತು ರಾಜ್ಯಸಭೆಯು ಶೇ 28ರಷ್ಟು ಕಾರ್ಯದಕ್ಷತೆಯನ್ನು ಮಾತ್ರ ತೋರಿವೆ ಎಂಬುದೇ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಘಾತಕಾರಿ ಸುದ್ದಿ. ನಿಜವಾಗಿಯೂ ನಡೆದ ಕೋಲಾಹಲ ಎಷ್ಟು ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟವಾಗಿ ತೆರೆದು ಇರಿಸುವುದಿಲ್ಲ. ಪ್ರಜಾಸತ್ತೆಯ ಅತ್ಯುನ್ನತ ಸಂಸ್ಥೆಯ ಮಾನದಂಡವು ಎಷ್ಟು ಕೆಳಕ್ಕೆ ಕುಸಿದಿದೆ ಮತ್ತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ಅಪನಂಬಿಕೆ ಯಾವ ಪ್ರಮಾಣದಲ್ಲಿದೆ ಎಂಬುದನ್ನೂ ಈ ಅಂಕಿ ಅಂಶವು ಹೇಳುವುದಿಲ್ಲ. ಸಂಸದೀಯ ವ್ಯವಸ್ಥೆಗೆ ಎಷ್ಟು ಹಾನಿ ಆಗಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗಿದೆ. ಪ್ರಜಾಪ್ರಭುತ್ವದ ಇತರ ಸಂಸ್ಥೆಗಳು ಯಾವ ಮಟ್ಟದಲ್ಲಿ ತಳಕ್ಕೆ ಕುಸಿದಿವೆ ಮತ್ತು ದೇಶದಲ್ಲಿ ಪ್ರಜಾತಂತ್ರದ ಸ್ವರೂಪವು ಎಷ್ಟು ಊನಗೊಂಡಿದೆ ಎಂಬುದು ಸಂಸತ್‌ ಕಲಾಪದಲ್ಲಿ ಪ್ರತಿಬಿಂಬಿತವಾಗಿದೆ.

ಸಂಸತ್ತು ಸಹಜವಾಗಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳುವುದರಲ್ಲಿ ಹೆಚ್ಚಿನ ಹೊಣೆಗಾರಿಕೆಯು ಸರ್ಕಾರ ಮತ್ತು ಆಡಳಿತ ಪಕ್ಷದ್ದೇ ಆಗಿದೆ ಎಂಬುದು ಚರ್ಚಾರ್ಹ ವಿಷಯವೇನೂ ಅಲ್ಲ. ಹಾಗೆಯೇ, ಶಾಸನಕ್ಕೆ ಸಂಬಂಧಿಸಿದ ಕೆಲಸಗಳು, ಸಮಾಲೋಚನೆ, ಚರ್ಚೆಗಳು ಪ್ರಜಾಸತ್ತಾತ್ಮಕ ವಾಗಿ ಮತ್ತು ದಕ್ಷವಾಗಿ ನಡೆಯುವಂತೆಯೂ ಸರ್ಕಾರವೇ ನೋಡಿಕೊಳ್ಳಬೇಕು. ಪ್ರಶ್ನೆ ಕೇಳುವುದು ವಿರೋಧ ಪಕ್ಷಗಳ ಹಕ್ಕು. ಸರ್ಕಾರ ಉತ್ತರ ನೀಡಲೇ ಬೇಕು. ಈ ಬಾರಿಯ ಅಧಿವೇಶನವು ಸ್ಥಗಿತಗೊಳ್ಳಲು ಅತಿ ಹೆಚ್ಚು ಕಾರಣವಾದದ್ದು ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪ್ರಕರಣ. ಈ ಪ್ರಕರಣದ ಬಗ್ಗೆ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ವಿರೋಧ ಪಕ್ಷಗಳು ಎಷ್ಟೇ ಹಟ ಹಿಡಿದರೂ ಸರ್ಕಾರವು ಚರ್ಚೆ ನಡೆಸುವುದಿಲ್ಲ ಎಂಬ ನಿಲುವಿನಿಂದ ಅಣುವಿನಷ್ಟೂ ಆಚೀಚೆ ಸರಿಯಲಿಲ್ಲ. ಪೆಗಾಸಸ್‌ ಪ್ರಕರಣದ ಬಗ್ಗೆ ಚರ್ಚೆ ನಡೆಸುವುದು ಅಗತ್ಯವಿಲ್ಲ ಎಂಬ ಸರ್ಕಾರದ ಪ್ರತಿಪಾದನೆ ಮತ್ತು ಅದಕ್ಕೆ ಸರ್ಕಾರವು ನೀಡಿರುವ ಸಮರ್ಥನೆಯು ಮನವರಿಕೆ ಆಗುವ ರೀತಿಯಲ್ಲಿ ಇಲ್ಲ. ಸುಪ್ರೀಂ ಕೋರ್ಟ್‌ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ವಿಚಾರ ಚರ್ಚೆ ಆಗುತ್ತಲೇ ಇದೆ. ಹಾಗಿರುವಾಗ ಸಂಸತ್ತಿನಲ್ಲಿ ಚರ್ಚೆ ಬೇಕಾಗಿಲ್ಲ ಎಂಬುದಕ್ಕೆ ಏನು ಸಮರ್ಥನೆ ಇದೆ ಎಂಬುದೂ ಸ್ಪಷ್ಟವಿಲ್ಲ. ಇದರ ನಡುವೆ, ಸರ್ಕಾರವು ತನಗೆ ಬೇಕಿರುವ ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳುವ ಕೆಲಸವನ್ನು ಮಾಡಿದೆ. ಪೆಗಾಸಸ್‌ ಬೇಹುಗಾರಿಕೆ ಪ್ರಕರಣ ಮತ್ತು ಅದರಲ್ಲಿ ತನ್ನ ಪಾತ್ರದ ಬಗ್ಗೆ ಯಾವ ಚರ್ಚೆಯೂ ನಡೆಯದಂತೆ ನೋಡಿಕೊಳ್ಳುವಲ್ಲಿಯೂ ಸರ್ಕಾರ ಯಶಸ್ವಿಯಾಗಿದೆ. ಇವೆಲ್ಲದರ ಪರಿಣಾಮವಾಗಿ ಸೃಷ್ಟಿಯಾದ ಬಿಕ್ಕಟ್ಟು ಸಂಸತ್ತು ಮತ್ತು ನಮ್ಮ ಪ್ರಜಾಸತ್ತೆಯ ಮೌಲ್ಯವನ್ನು ಇನ್ನಷ್ಟು ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT