ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ದೆಹಲಿಯ ಮಲಿನಗೊಂಡ ಗಾಳಿ ನಿಯಂತ್ರಣಕ್ಕೆ ಸಮಗ್ರ ಸೂತ್ರ ಬೇಕು

Published : 9 ನವೆಂಬರ್ 2023, 23:30 IST
Last Updated : 9 ನವೆಂಬರ್ 2023, 23:30 IST
ಫಾಲೋ ಮಾಡಿ
Comments

ಪ್ರತಿವರ್ಷ ಈ ಸಂದರ್ಭದಲ್ಲಿ ದೆಹಲಿಯ ಜನ ವಿಷಕಾರಿ ಗಾಳಿಯನ್ನು ಉಸಿರಾಡುತ್ತಾರೆ, ದೆಹಲಿಯಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟವನ್ನು ತಲುಪುತ್ತದೆ, ಜನರ ದೈನಂದಿನ ಜೀವನಕ್ಕೆ ಕೂಡ ತೊಂದರೆ ಉಂಟಾಗುತ್ತದೆ. ದೆಹಲಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಅಲ್ಲಿ ಸಮ–ಬೆಸ ನೋಂದಣಿ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಮಾತ್ರ ರಸ್ತೆಗಿಳಿಯಲು ಅವಕಾಶ ಕಲ್ಪಿಸುವ ಮೂಲಕ ವಾಹನಗಳ ಸಂಚಾರದ ಮೇಲೆ ನಿಯಂತ್ರಣ ಹೇರಲು ಪ್ರಯತ್ನಗಳು ನಡೆದಿವೆ.

ದೆಹಲಿಯ ವಾಯುಮಾಲಿನ್ಯಕ್ಕೆ ವಾಹನಗಳು ಉಗುಳುವ ಹೊಗೆಯ ಕೊಡುಗೆಯ ಪ್ರಮಾಣವು ಶೇಕಡ 30ರಷ್ಟು ಇದೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳು ಯಾವುವು ಎಂಬುದನ್ನು ಪ್ರಮಾಣಪತ್ರದ ಮೂಲಕ ತಿಳಿಸುವಂತೆ ದೆಹಲಿ ಸರ್ಕಾರ ಹಾಗೂ ನೆರೆಯ ಕೆಲವು ರಾಜ್ಯಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ದೆಹಲಿಯಲ್ಲಿನ ಪರಿಸ್ಥಿತಿಯು ಜನರ ಆರೋಗ್ಯದ ಕೊಲೆ ಎಂದು ಕೋರ್ಟ್ ವ್ಯಾಖ್ಯಾನಿಸಿದೆ.

ನೆರೆಯ ಪಂಜಾಬ್ ಹಾಗೂ ಹರಿಯಾಣದ ರೈತರು ಮುಂಗಾರಿನ ಭತ್ತದ ಕೊಯ್ಲು ಮುಗಿಸಿದ ತಕ್ಷಣ ಹಿಂಗಾರಿಗೆ ಗೋಧಿಯ ಬಿತ್ತನೆಗೆಂದು ಭತ್ತದ ಕೂಳೆಗಳಿಗೆ ಬೆಂಕಿ ಕೊಡುತ್ತಾರೆ. ಇದು,  ದೆಹಲಿಯ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ. ಕೂಳೆ ಸುಡುವ ಪರಿಪಾಟವು ಕಡಿಮೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಗಾಳಿಯ ಗುಣಮಟ್ಟವು ತೀರಾ ಕೆಟ್ಟುಹೋಗಿರುವಾಗ, ಜನರು ಮಾಲಿನ್ಯದ ಪರಿಣಾಮವನ್ನು ಎದುರಿಸುತ್ತಿರುವಾಗ, ‘ಕಡಿಮೆ ಆಗಿದೆ’ ಎಂಬ ಮಾತು ಸಮಾಧಾನ ತರುವುದಿಲ್ಲ. ಸಮಸ್ಯೆಯ ಬಗ್ಗೆ ಜನರಿಗೆ ಹಾಗೂ ಸರ್ಕಾರಕ್ಕೆ ಇಷ್ಟು ವರ್ಷಗಳಿಂದ ಅರಿವಿದ್ದರೂ, ಅದನ್ನು ಪರಿಹರಿಸಲು ಯಾವುದೇ ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸಿಲ್ಲ ಎಂಬುದು ವಾಸ್ತವ. ಈ ವಿಚಾರದ ಬಗ್ಗೆ ತಕ್ಷಣ ಗಮನ ಹರಿಸಬೇಕಾಗಿದೆ, ಇದರ ಬಗ್ಗೆ ಮೇಲ್ವಿಚಾರಣೆ ನಡೆಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ರಾಷ್ಟ್ರ ರಾಜಧಾನಿಯು ಎದುರಿಸುತ್ತಿರುವ ಪರಿಸ್ಥಿತಿಯ ಗಾಂಭೀರ್ಯ ಅರ್ಥ ಮಾಡಿಕೊಳ್ಳಲು ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಉಲ್ಲೇಖಿಸಬೇಕು. ಅಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 470ಕ್ಕೆ ತಲುಪಿದೆ. ಆರೋಗ್ಯವಂತ ಮನುಷ್ಯನ ಪಾಲಿಗೆ ಈ ಸೂಚ್ಯಂಕವು 50 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು. ಪಿಎಂ 2.5 (ಗಾಳಿಯಲ್ಲಿ ತೇಲುವ, 2.5 ಮೈಕ್ರಾನ್ ಗಾತ್ರದ ಕಣಗಳು) ಪ್ರಮಾಣ 360ಕ್ಕಿಂತ ಹೆಚ್ಚಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವುದಕ್ಕಿಂತ ಹಲವು ಪಟ್ಟು ಹೆಚ್ಚು. ಈ ಅಂಕಿ–ಸಂಖ್ಯೆಗಳನ್ನು ಹಲವು ವರ್ಷಗಳಿಂದ ಹೇಳುತ್ತ ಬರಲಾಗಿದೆ.

ದೆಹಲಿಯು ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ನಗರ ಎಂಬ ವಾಸ್ತವವನ್ನು ಇವು ಹೇಳುತ್ತಿವೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡಿರುವ ನಗರಗಳಲ್ಲಿ ಇದೂ ಒಂದು. ಮಾಲಿನ್ಯದ ಕಾರಣದಿಂದಾಗಿ ಸೃಷ್ಟಿಯಾಗುವ ಆರೋಗ್ಯ ಸಮಸ್ಯೆಗಳು ಇಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇಲ್ಲಿ ಪ್ರತಿ ಮೂವರು ಮಕ್ಕಳಲ್ಲಿ ಒಂದು ಮಗು ಆಸ್ತಮಾ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಗಳು ಮಕ್ಕಳ ಸಾವಿಗೆ ಕಾರಣವಾಗುತ್ತಿರುವುದೂ ಇದೆ. ಕೆಟ್ಟ ಗಾಳಿಯು ಕ್ಯಾನ್ಸರ್‌ಕಾರಕವೂ ಹೌದು. ವಾಯುಮಾಲಿನ್ಯವು ಉತ್ಪಾದಕತೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಆ ಮೂಲಕ ದೇಶದ ಜಿಡಿಪಿ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಸಾರ್ವಜನಿಕ ಆರೋಗ್ಯ ಸೇವೆಗಳ ವ್ಯವಸ್ಥೆಯು ಹೇಳಿಕೊಳ್ಳುವಷ್ಟು ಉತ್ತಮವಾಗಿ ಇಲ್ಲದಿದ್ದಾಗ, ಮಾಲಿನ್ಯವು ಜನರ ಮೇಲೆ ಹಾಗೂ ಸರ್ಕಾರಗಳ ಮೇಲೆ ಬಹಳ ದೊಡ್ಡ ಹೊರೆಯನ್ನು ಹೊರಿಸುತ್ತದೆ.

ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅಂಶಗಳು ಹಲವು ಇವೆ. ಕೂಳೆ ಸುಡುವುದು, ವಾಹನಗಳ ಸಂಚಾರ ಭಾರಿ ಪ್ರಮಾಣದಲ್ಲಿ ಇರುವುದು, ಅನಿಯಂತ್ರಿತ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಅಸಮರ್ಪಕವಾಗಿದೆ. ಇದರಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ರಾಜಕೀಯ ಪಕ್ಷಗಳ ನಡುವಿನ ಆರೋಪ–ಪ್ರತ್ಯಾರೋಪಗಳು ಜನರಿಗೆ ಯಾವುದೇ ಪ್ರಯೋಜನ ತಂದುಕೊಡುವುದಿಲ್ಲ. ವಾಯುಮಾಲಿನ್ಯ ನಿಯಂತ್ರಿಸುವ ವಿಚಾರದಲ್ಲಿ ವಿವಿಧ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಕಾಣುತ್ತಿದೆ. ಸಮ–ಬೆಸ ನೋಂದಣಿ ಸಂಖ್ಯೆಯ ವಾಹನಗಳು ದಿನ ಬಿಟ್ಟು ದಿನ ರಸ್ತೆಗೆ ಇಳಿಯಬೇಕು ಎಂಬ ನಿಯಮವನ್ನು 2017ರಲ್ಲಿ ಅಲ್ಪ ಅವಧಿಗೆ ಜಾರಿಗೆ ತರಲಾಗಿತ್ತು. ಆದರೆ ಅದರ ಅನುಷ್ಠಾನ ಹಾಗೂ ಪರಿಣಾಮದ ವಿಚಾರವಾಗಿ ದೆಹಲಿ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಡುವೆ ಒಮ್ಮತ ಇರಲಿಲ್ಲ. ವಾಯು ಗುಣಮಟ್ಟ ಉತ್ತಮವಾಗಬೇಕು ಎಂದಾದರೆ, ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ಚಟುವಟಿಕೆಗಳನ್ನು ವರ್ಷದುದ್ದಕ್ಕೂ ನಿಯಂತ್ರಿಸಲು ಸಮಗ್ರ ಕ್ರಿಯಾಯೋಜನೆ ರೂಪಿಸಿ, ಜಾರಿಗೆ ತರಬೇಕು. ಇಂತಹ ಕೆಲಸ ಆಗುತ್ತಿರುವಂತೆ ಕಾಣುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT