ಶನಿವಾರ, ಅಕ್ಟೋಬರ್ 16, 2021
22 °C

ಸಂಪಾದಕೀಯ: ಏರ್‌ ಇಂಡಿಯಾ ಖರೀದಿ- ಟಾಟಾ ಹೊಸ ಔದ್ಯಮಿಕ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಅತಿದೊಡ್ಡ ಉದ್ಯಮ ಸಮೂಹಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಟಾಟಾ ಸನ್ಸ್, ಬಹುದೊಡ್ಡ ಪಯಣವೊಂದಕ್ಕೆ ಸನ್ನದ್ಧವಾಗಿ ನಿಂತಿದೆ. ಈ ಉದ್ಯಮ ಸಮೂಹದ ಪಾಲಿಗೆ ಬಹುಶಃ ತೀರಾ ಅಪರೂಪದ ಅವಕಾಶ ಇದು. ಹಿಂದೆ ತಾನೇ ಹುಟ್ಟುಹಾಕಿದ್ದ ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸನ್ಸ್‌ ಕಂಪನಿಯು ಬಿಡ್ ಮೂಲಕ ಗೆದ್ದುಕೊಂಡಿದೆ. ಏರ್‌ ಇಂಡಿಯಾ ಬಿಡ್‌ನ ಸ್ಪರ್ಧೆಯಲ್ಲಿ ಇದ್ದವರು ಇಬ್ಬರು ಮಾತ್ರ– ಟಾಟಾ ಸನ್ಸ್‌ ಹಾಗೂ ಸ್ಪೈಸ್‌ ಜೆಟ್‌ನ ಪ್ರವರ್ತಕ ಅಜಯ್ ಸಿಂಗ್. ಬಿಡ್ ಗೆದ್ದುಕೊಂಡಿದ್ದು ಟಾಟಾ ಸನ್ಸ್. ಕೇಂದ್ರ ಸರ್ಕಾರಕ್ಕೆ ₹ 2,700 ಕೋಟಿ ನಗದು ಪಾವತಿಸಿ, ಏರ್‌ ಇಂಡಿಯಾ ಕಂಪನಿಯ ಮೇಲಿರುವ ಒಟ್ಟು ಸಾಲದಲ್ಲಿ ₹ 15,300 ಕೋಟಿಯಷ್ಟನ್ನು ತಾನು ವಹಿಸಿಕೊಂಡು ಟಾಟಾ ಸನ್ಸ್‌, ಈ ವಿಮಾನಯಾನ ಕಂಪನಿಯನ್ನು ತನ್ನದಾಗಿಸಿಕೊಳ್ಳಲಿದೆ. ಈಗಾಗಲೇ ಎರಡು ವಿಮಾನಯಾನ ಕಂಪನಿಗಳನ್ನು ಟಾಟಾ ಸಮೂಹವು ಮುನ್ನಡೆಸುತ್ತಿದೆ ಎಂಬುದು ಗಮನಾರ್ಹ. ಏರ್‌ ಇಂಡಿಯಾ ಬಿಡ್‌ ಗೆದ್ದುಕೊಂಡ ನಂತರ ಭಾವುಕವಾಗಿ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರು, ‘ಇಡೀ ದೇಶ ಹೆಮ್ಮೆಪಡುವ ರೀತಿಯಲ್ಲಿ ಈ ವಿಮಾನಯಾನ ಕಂಪನಿಯನ್ನು ಕಟ್ಟುತ್ತೇವೆ’ ಎಂದು ಹೇಳಿದ್ದಾರೆ. ದೇಶದ ವಿಮಾನಯಾನ ಉದ್ಯಮ ವಲಯವು ತೀವ್ರ ಏರಿಳಿತಗಳನ್ನು ಕಂಡಿದೆ. ಇಲ್ಲಿ ದೊಡ್ಡ ಉದ್ಯಮಿಗಳು ಹಣ ಹೂಡಿದ್ದಿದೆ, ದೊಡ್ಡ ದೊಡ್ಡ ಕಂಪನಿಗಳು ಆಗಸದೆತ್ತರಕ್ಕೆ ಬೆಳೆಯುವ ಭರವಸೆಯನ್ನು ಹುಟ್ಟಿಸಿದ್ದಿದೆ. ಹಾಗೆಯೇ, ಕೆಲವು ವಿಮಾನಯಾನ ಕಂಪನಿಗಳು ಆರ್ಥಿಕವಾಗಿ ಕುಸಿದುಬಿದ್ದ ವಿಷಾದಕರ ನಿದರ್ಶನಗಳೂ ಇವೆ. ಈಗ ಕೋವಿಡ್‌ ಸಾಂಕ್ರಾಮಿಕ ತಂದಿತ್ತ ಪಲ್ಲಟಗಳಿಂದಾಗಿ, ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆಯಿಂದಾಗಿ ವಿಮಾನಯಾನ ಉದ್ಯಮವು ಒತ್ತಡ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಏರ್ ಇಂಡಿಯಾ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಟಾಟಾ ಸಮೂಹವು, ದೊಡ್ಡ ಪ್ರಮಾಣದ ಔದ್ಯಮಿಕ ಸಾಹಸಕ್ಕೆ ಕೈಹಾಕಿದೆ.

ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಈ ಹಿಂದೆಯೂ ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಆದರೆ ಮಾರಾಟಕ್ಕೆ ಸಂಬಂಧಿಸಿದ ಷರತ್ತುಗಳು ಹಾಗೂ ಏರ್‌ ಇಂಡಿಯಾ ಮೇಲಿರುವ ಸಾಲದ ಪ್ರಮಾಣವು ಹಿಂದಿನ ಪ್ರಯತ್ನಗಳಿಗೆ ಯಶಸ್ಸು ಕಾಣಲು ಅವಕಾಶ ಮಾಡಿಕೊಡಲಿಲ್ಲ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಂತರ ಕೇಂದ್ರ ಸರ್ಕಾರವು ಬಿಡ್‌ಗೆ ಸಂಬಂಧಿಸಿದ ಷರತ್ತುಗಳಲ್ಲಿ ಕೆಲವು ಮಾರ್ಪಾಡುಗಳನ್ನು ತಂದಿತು. ಅದಾದ ನಂತರದಲ್ಲಿಯೇ ಏರ್ ಇಂಡಿಯಾ ಮಾರಾಟಕ್ಕೆ ಯಶಸ್ಸು ಸಿಕ್ಕಿದ್ದು. ನಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿದ್ದ ಏರ್ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವುದು ಕೇಂದ್ರ ಸರ್ಕಾರದ ಪಾಲಿಗೆ ಅನಿವಾರ್ಯವೂ ಆಗಿತ್ತು. ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳ ಒದಗಿಸಿದರೂ ಕಂಪನಿಯು ನಷ್ಟದ ಸುಳಿಯಿಂದ ಮೇಲೆದ್ದು ಬರುತ್ತಿರಲಿಲ್ಲ. ಖಾಸಗಿ ಕಂಪನಿಯು ಚೆನ್ನಾಗಿ ನಡೆಸುತ್ತಿದ್ದ ವಿಮಾನಯಾನ ಕಂಪನಿಯೊಂದನ್ನು ಸರ್ಕಾರವು ಏಕೆ ರಾಷ್ಟ್ರೀಕರಣ ಮಾಡಬೇಕಿತ್ತು ಎಂಬ ಪ್ರಶ್ನೆ ಉದ್ಯಮ ವಲಯದಲ್ಲಿ ಮೊದಲಿನಿಂದಲೂ ಇದೆ. ಏರ್‌ ಇಂಡಿಯಾವನ್ನು ಸರ್ಕಾರವು ತನ್ನ ಅಧೀನಕ್ಕೆ ತೆಗೆದುಕೊಂಡ ನಂತರದಲ್ಲಿ ನಡೆದ ವಿದ್ಯಮಾನಗಳು ಈ ಪ್ರಶ್ನೆಗೆ ಪುಷ್ಟಿ ನೀಡುವಂತಿವೆ. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಯನ್ನು ಸುರಿದರೂ, ಏರ್ ಇಂಡಿಯಾ ಲಾಭದ ಹಳಿಗೆ ಬರಲಿಲ್ಲ. ಮೂಲಸೌಕರ್ಯ ಅಭಿವೃದ್ಧಿಗಾಗಿ ಅಥವಾ ಸಾರ್ವಜನಿಕರಿಗೆ ಒಳಿತು ಮಾಡಬಹುದಾದ ಇತರ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದ್ದ ಹಣ ಪೋಲಾಯಿತು. ಹೆಚ್ಚಿನ ದೇಶಗಳಲ್ಲಿ ನಾಗರಿಕ ವಿಮಾನಯಾನ ವಲಯದಲ್ಲಿ ಸರ್ಕಾರಿ ಕಂಪನಿಗಳು ಇಲ್ಲ. ಈ ರಂಗದಲ್ಲಿ ಖಾಸಗಿಯವರು ಹಣ ಹೂಡಿಕೆ ಮಾಡಿದ್ದಾರೆ.

ಟಾಟಾ ಸಮೂಹವು ಇನ್ನು ಒಂದು ವರ್ಷದವರೆಗೆ ಏರ್‌ ಇಂಡಿಯಾದ ಯಾವುದೇ ನೌಕರರನ್ನು ಕೆಲಸದಿಂದ ಕೈಬಿಡುವಂತೆ ಇಲ್ಲ. ನಂತರದಲ್ಲಿ ಅವರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೆ ತರಲು ಅವಕಾಶ ಇದೆ ಎಂದು ವರದಿಯಾಗಿದೆ. ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿನ ಕೆಲಸದ ಸಂಸ್ಕೃತಿಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇದೆ. ಏರ್ ಇಂಡಿಯಾ ಉದ್ಯೋಗಿಗಳನ್ನು ಟಾಟಾ ಸಮೂಹವು ತನ್ನಲ್ಲಿನ ಕೆಲಸದ ಸಂಸ್ಕೃತಿಗೆ ಹೇಗೆ ಒಗ್ಗಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಬಿಕ್ಕಟ್ಟಿನ ಸಂದರ್ಭದಲ್ಲಿ ಏರ್ ಇಂಡಿಯಾ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಟಾಟಾ ಸಮೂಹಕ್ಕೆ ಅದನ್ನು ನಿಭಾಯಿಸುವ, ಹೊಸದಾಗಿ ಅಗತ್ಯ ಬಂಡವಾಳವನ್ನು ತರುವ ಶಕ್ತಿ ಇದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಮಹಾರಾಜ’ನ ಗತ ವೈಭವವನ್ನು ಮರಳಿ ತಂದುಕೊಡುವ ಹೊಣೆ ಈಗ ಟಾಟಾ ಮೇಲೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು