ಮಂಗಳವಾರ, ಡಿಸೆಂಬರ್ 7, 2021
19 °C

ಸಂಪಾದಕೀಯ: ಐ.ಟಿ. ದಾಳಿಗೆ ಅನ್ಯ ಉದ್ದೇಶ ಅಪಾಯಕಾರಿ ಬೆಳವಣಿಗೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ವಂಚನೆ ಎಸಗಿದವರ ವಿರುದ್ಧ ಅಥವಾ ತೆರಿಗೆ ವಂಚನೆಗೆ ನೆರವು ನೀಡಿದವರ ವಿರುದ್ಧ ದಾಳಿ ನಡೆಸುವುದು ಕಾನೂನುಬದ್ಧ ಪ್ರಕ್ರಿಯೆ. ಆದರೆ, ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎಂಬುದು ಕೇಂದ್ರ ಸರ್ಕಾರದ ಕೈಯಲ್ಲಿನ ಅಸ್ತ್ರದಂತೆ ಬಳಕೆಯಾಗುತ್ತಿದೆ. ರಾಜಕೀಯ ವಿರೋಧಿಗಳ ಮೇಲೆ, ಸರ್ಕಾರದ ನೀತಿಗಳನ್ನು ಟೀಕಿಸುವವರ ವಿರುದ್ಧ ಈಗ ಈ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ತನಗೆ ಆಗದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದಾದಲ್ಲಿ ಕೇಂದ್ರ ಸರ್ಕಾರವು ಈ ಇಲಾಖೆಯನ್ನು ಬಳಕೆ ಮಾಡಿಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಉಮೇಶ್ ಅವರ ನಿವಾಸದ ಮೇಲೆ  ಈಚೆಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದೆ. ಉಮೇಶ್ ಅವರ ಜೊತೆ ಒಡನಾಟ ಹೊಂದಿರುವ ಕೆಲವು ಗುತ್ತಿಗೆದಾರರ ಮೇಲೆಯೂ ದಾಳಿ ನಡೆದಿದೆ. ಈ ದಾಳಿಯು ರಾಜಕೀಯಪ್ರೇರಿತವಾಗಿ ನಡೆದಿದ್ದು ಎಂಬಂತೆಯೇ ಕಾಣಿಸುತ್ತಿದೆ. ಉಮೇಶ್ ಅವರು ತಮ್ಮೊಂದಿಗೆ ಕೆಲಸ ಮಾಡಿದ್ದರು ಎಂದು ಯಡಿಯೂರಪ್ಪ ಅವರ ಕುಟುಂಬದವರು ಹೇಳಿದ್ದಾರೆ. ರಾಜ್ಯ ರಾಜಕಾರಣದ ಬದಲಾದ ಸಂದರ್ಭದಲ್ಲಿ ಈ ದಾಳಿಯ ಮಹತ್ವ ಹೆಚ್ಚು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರಲಾಗಿತ್ತು. ಬಿಜೆಪಿಯ ಕೇಂದ್ರ ನಾಯಕರು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದರು. ಈಗ ನಡೆದಿರುವ ದಾಳಿಯು ತೆರಿಗೆ ವಂಚನೆಯನ್ನು ಪತ್ತೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಉದ್ದೇಶವನ್ನು ಹೊಂದಿರುವಂತಿದೆ.

ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದ ಕೆಲವು ನಿರ್ಧಾರಗಳಿಗೆ ಸಂಬಂಧಿಸಿ ಯಡಿಯೂರಪ್ಪ ಮತ್ತು ಅವರ ಬಳಗದವರು, ಬೊಮ್ಮಾಯಿ ಅವರ ಮೇಲೆ ಒತ್ತಡ ತಂದಿದ್ದಾರೆ ಎಂಬ ವರದಿಗಳು ಇವೆ. ಹಸ್ತಕ್ಷೇಪದ ಕಾರಣದಿಂದಾಗಿ ಬೊಮ್ಮಾಯಿ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂಬ ಸಂದೇಶ ರವಾನಿಸಲು ಈ ದಾಳಿ ನಡೆಸಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಮಸ್ಯೆ ಇರುವುದು ಬಿಜೆಪಿಯ ಆಂತರಿಕ ವಲಯದಲ್ಲಿ. ಈ ಸಮಸ್ಯೆಯನ್ನು ಪಕ್ಷವು ರಾಜಕೀಯವಾಗಿ, ಪಕ್ಷದ ಚೌಕಟ್ಟಿನ ಒಳಗೆ ಬಗೆಹರಿಸಿಕೊಳ್ಳಬೇಕು. ಈ ಸಮಸ್ಯೆ ಬಗೆಹರಿಸಲು ಆದಾಯ ತೆರಿಗೆ ಇಲಾಖೆಯ ನೆರವು ಪಡೆಯಬಾರದು! ಆದಾಯ ತೆರಿಗೆ ಇಲಾಖೆಯು ಕೇಂದ್ರ ಸರ್ಕಾರದ ಒಂದು ಅಂಗ, ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆ ಅದು ಎಂಬುದನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುವಲ್ಲಿ ಯಡಿಯೂರಪ್ಪ ಅವರ ಕೊಡುಗೆ ಬಹಳ ದೊಡ್ಡದು. ಅವರನ್ನು ಒತ್ತಾಯದಿಂದ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದಷ್ಟೇ ಅಲ್ಲದೆ, ಈಗ ಅವರನ್ನು ರಾಜಕೀಯ ವಿರೋಧಿ ಎಂಬಂತೆ ಬಿಜೆಪಿಯಲ್ಲಿ ಕೆಲವರು ನೋಡುತ್ತಿದ್ದಾರೆ. ಹಾಗಾಗಿಯೇ, ಈ ದಾಳಿಗಳ ಮೂಲಕ ‘ದೂರ ಇದ್ದರೆ ಕ್ಷೇಮ’ ಎಂಬ ಸಂದೇಶವನ್ನು ಅವರಿಗೆ ರವಾನಿಸಲಾಗುತ್ತಿದೆ ಎಂಬ ವಿಶ್ಲೇಷಣೆಯು ರಾಜಕೀಯ ವಲಯದಲ್ಲಿ ನಡೆದಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಲು ಬಳಸಿಕೊಂಡ ನಿದರ್ಶನಗಳು ಹಲವು ಇವೆ. ತಮಿಳುನಾಡಿನಲ್ಲಿ ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಇತರ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸಲು ಕೇಂದ್ರವು ಈ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡಿದೆ. ನಾಯಕರ ಜೊತೆಗಾರರ ಮೇಲೆಯೂ ದಾಳಿಗಳು ನಡೆದಿವೆ. ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ಟೀಕೆ ಮಾಡಿದ ದಿನಪತ್ರಿಕೆ, ಮಾಧ್ಯಮ ಕಚೇರಿಗಳ ಮೇಲೆ ದಾಳಿ ನಡೆದಿದೆ. ಕೇಂದ್ರದ ತೀರ್ಮಾನವನ್ನು ಕಟುವಾಗಿ ವಿಮರ್ಶೆಗೆ ಗುರಿಪಡಿಸಿದ ವ್ಯಕ್ತಿಗಳ ಮೇಲೆ ಇಂತಹ ದಾಳಿಗಳು ನಡೆದಿವೆ. ತಾವು ಮಾಡಿದ ಕೆಲಸದ ಬಗ್ಗೆ ಈ ಸಂಸ್ಥೆಗಳು ತಾವೇ ಪ್ರಚಾರ ಕೊಟ್ಟುಕೊಳ್ಳುತ್ತವೆ. ಕೇಂದ್ರ ಹಣಕಾಸು ಸಚಿವಾಲಯವು ಈ ಸಂದರ್ಭದಲ್ಲಿಯೂ ಅದೇ ಕೆಲಸ ಮಾಡಿದೆ. ಸರ್ಕಾರಿ ಸಂಸ್ಥೆಗಳನ್ನು ಕೆಲವರ ವಿರುದ್ಧ ಮಾತ್ರ ಬಳಕೆ ಮಾಡಿಕೊಳ್ಳುವುದು, ದ್ವೇಷ ಸಾಧನೆಗೆ ಬಳಸಿಕೊಳ್ಳುವುದು ತಪ್ಪು. ಇದು ತೀರಾ ಅಪ್ರಜಾಸತ್ತಾತ್ಮಕ ನಡೆ. ಆದರೆ, ಈ ರೀತಿ ಮಾಡುತ್ತಿರುವುದಕ್ಕೆ ಎದುರಾದ ಟೀಕೆಗಳ ಬಗ್ಗೆ ಕೇಂದ್ರವು ತಲೆಕೆಡಿಸಿಕೊಂಡಿಲ್ಲ. ಬಿಜೆಪಿಯಲ್ಲಿ ಇರುವ ನಾಯಕರ ವಿರುದ್ಧವೂ ಈ ಅಸ್ತ್ರ ಬಳಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಆಡಳಿತದ ಎಲ್ಲ ನಿಯಮಗಳಿಗೆ ಹಾಗೂ ಕಾನೂನುಗಳಿಗೆ ಇದು ವಿರುದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು