ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಾವತಿ ನಿಲುಗಡೆ ವ್ಯವಸ್ಥೆ, ಸಾರ್ವಜನಿಕರ ಶೋಷಣೆ ನಿಲ್ಲಲಿ

Last Updated 15 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

‘ಸ್ಮಾರ್ಟ್‌’ ಅಥವಾ ‘ಸ್ವಯಂಚಾಲಿತ’ ವಾಹನ ನಿಲುಗಡೆ ವ್ಯವಸ್ಥೆ ಹೆಸರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 85 ರಸ್ತೆಗಳಲ್ಲಿ ಎರಡು ವರ್ಷಗಳ ಹಿಂದೆ ಜಾರಿಗೊಳಿಸಿದ ‘ಪಾವತಿ ನಿಲುಗಡೆ’ ವ್ಯವಸ್ಥೆಯು ಸಾರ್ವಜನಿಕರ ಶೋಷಣೆಗೆ ದಾರಿಯಾಗಿದೆ. ಇದರ ನಿರ್ವಹಣೆಯ ಗುತ್ತಿಗೆ ಪಡೆದಿರುವ ಖಾಸಗಿ ವ್ಯಕ್ತಿಗಳು ವಾಹನ ಸವಾರರಿಂದ ದುಬಾರಿ ದಂಡ ವಸೂಲಿ ಮಾಡುತ್ತಿದ್ದಾರೆ. ಅತಿಯಾದ ದಂಡ ವಸೂಲಿ ಮಾಡುತ್ತಿರುವ ಕುರಿತ ಸಾರ್ವಜನಿಕರ ದೂರುಗಳಿಗೆ ಬಿಬಿಎಂಪಿ ಆಡಳಿತದಿಂದ ಸ್ಪಂದನವೇ ದೊರೆತಿಲ್ಲ. ಆರ್ಥಿಕವಾಗಿ ತೀವ್ರ ಮುಗ್ಗಟ್ಟಿನಲ್ಲಿರುವ ಪಾಲಿಕೆಯು ಪಾವತಿ ನಿಲುಗಡೆ ವ್ಯವಸ್ಥೆಯನ್ನು ವರಮಾನ ಸಂಗ್ರಹದ ಮೂಲವಾಗಿಯೂ ಅವಲಂಬಿಸಿಕೊಂಡಿದೆ.

ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುವುದನ್ನು ತಪ್ಪಿಸಲು ಜಾರಿಗೊಳಿಸಿದ ಈ ಯೋಜನೆಯಿಂದ ವಾಹನ ನಿಲುಗಡೆಯಲ್ಲಿ ಕೊಂಚ ಶಿಸ್ತು ಬಂದಿದೆ. ಆದರೆ, ಅದೇ ಉದ್ದೇಶವನ್ನು ಅತಿಯಾದ ದಂಡ ಹೇರಿಕೆಗೆ ಬಳಸಿಕೊಂಡು ವಾಹನ ಸವಾರರನ್ನು ಶೋಷಣೆ ಮಾಡುತ್ತಿರುವ ಕ್ರಮದ ಬಗ್ಗೆ ತೀವ್ರವಾದ ಟೀಕೆಗಳಿವೆ. ಪಾವತಿ ನಿಲುಗಡೆ ವ್ಯವಸ್ಥೆ ಇರುವ ರಸ್ತೆಗಳಲ್ಲಿ ವಾಹನ ಸವಾರರು ತಾವು ವಾಹನವನ್ನು ನಿಲುಗಡೆ ಮಾಡುವ ಸಮಯಕ್ಕೆ ತಕ್ಕಂತೆ ಮುಂಗಡವಾಗಿ ಶುಲ್ಕ ಪಾವತಿಸಬೇಕಿದೆ. ಆದರೆ, ಪಾವತಿಸಿದ ಅವಧಿಯನ್ನು ಮೀರಿ ವಾಹನವನ್ನು ಹೊರ ತೆಗೆಯುವುದು ಒಂದು ನಿಮಿಷ ವಿಳಂಬವಾದರೂ ದ್ವಿಚಕ್ರ ವಾಹನಗಳಿಗೆ
₹ 250 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹ 500 ದಂಡ ವಿಧಿಸಲಾಗುತ್ತಿದೆ. ವಾಹನ ನಿಲುಗಡೆಯ ಹೆಚ್ಚುವರಿ ಅವಧಿಗೆ ಸಮನಾದ ಶುಲ್ಕ ಪಡೆಯುವುದು ಜನಸ್ನೇಹಿಯಾದ ವ್ಯವಸ್ಥೆ. ಶುಲ್ಕದ ಐದರಿಂದ ಹತ್ತು ಪಟ್ಟು ಹಣವನ್ನು ದಂಡದ ಹೆಸರಿನಲ್ಲಿ ವಸೂಲಿ ಮಾಡುವುದು ಶೋಷಣೆ. ಪಾವತಿ ನಿಲುಗಡೆ ಕುರಿತು ಮಾಹಿತಿ ಇಲ್ಲದೆ ಅಂತಹ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಅಥವಾ ಶುಲ್ಕ ಪಾವತಿಸಿದ ಅವಧಿಗಿಂತ ಹೆಚ್ಚು ಸಮಯ ನಿಲ್ಲಿಸಿದ ವಾಹನಗಳ ಚಕ್ರಗಳಿಗೆ ಕ್ಲ್ಯಾಂಪ್‌ ಹಾಕಿ ಜನರನ್ನು ಶೋಷಿಸುತ್ತಿರುವುದು
ಅಮಾನವೀಯ ನಡೆ. ದಂಡದ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ಮಾಡುವುದನ್ನು ತಡೆಯಲು ವಾಹನ ನಿಲುಗಡೆಗೂ ಮುನ್ನ ಶುಲ್ಕ ಸಂಗ್ರಹಿಸುವ ಬದಲಿಗೆ ವಾಹನವನ್ನು ಹೊರ ತೆಗೆಯುವ ಸಮಯದಲ್ಲಿ ನಿಲುಗಡೆಯ ಅವಧಿಯನ್ನು ಲೆಕ್ಕಹಾಕಿ ಶುಲ್ಕ ಪಡೆಯುವ ಕ್ರಮ ಜಾರಿಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು.

ಈ ರೀತಿ ವಾಹನ ನಿಲುಗಡೆ ಮಾಡುವವರಿಗೆ ದುಬಾರಿ ದಂಡ ವಿಧಿಸಲು ಬಿಬಿಎಂಪಿ ನಡೆಸಿದ ಟೆಂಡರ್‌ ಪ್ರಕ್ರಿಯೆಯಲ್ಲೇ ಅನುಮತಿ ನೀಡಲಾಗಿತ್ತೇ ಅಥವಾ ಗುತ್ತಿಗೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಗುತ್ತಿಗೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ? ಈ ಕುರಿತು ಪರಿಶೀಲನೆ ನಡೆಯಬೇಕಿದೆ. ದಂಡದ ಹೆಸರಿನಲ್ಲಿ ಈ ರೀತಿ ವರ್ಷಗಳಿಂದ ಸಾರ್ವಜನಿಕರ ಶೋಷಣೆ ನಡೆಯುತ್ತಿದ್ದರೂ ಅದು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೇ ಬಂದಿಲ್ಲವೆ, ಗಮನಕ್ಕೆ ಬಂದಿದ್ದಲ್ಲಿ ಗುತ್ತಿಗೆಯನ್ನೇ ಬದಲಿಸುವ ಅಥವಾ ಗುತ್ತಿಗೆಯ ಷರತ್ತುಗಳನ್ನು ಪರಿಷ್ಕರಿಸುವ ಕ್ರಮವನ್ನು ಏಕೆ ಈವರೆಗೂ ಕೈಗೊಂಡಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಗುತ್ತಿಗೆದಾರರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿರುವ ಕಾರಣಕ್ಕಾಗಿಯೇ ಪಾವತಿ ನಿಲುಗಡೆಯಲ್ಲಿನ ಶೋಷಣೆ ಕುರಿತ ದೂರುಗಳನ್ನು ನಿರ್ಲಕ್ಷಿಸಿರಬಹುದು ಎಂಬ ಅನುಮಾನವೂ ಇದೆ. ಪಾವತಿ ನಿಲುಗಡೆ ಗುತ್ತಿಗೆಯನ್ನು ರದ್ದು ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರಕಟಿಸಿದ್ದಾರೆ. ಆದರೆ, ಈ ಕ್ರಮವಷ್ಟೇ ಸಾಲದು. ಇಂತಹ ಜನವಿರೋಧಿ ವ್ಯವಸ್ಥೆ ಹೇಗೆ ಜಾರಿಗೆ ಬಂತು, ದಂಡದ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ಕುರಿತು ಸಾರ್ವಜನಿಕರ ದೂರುಗಳನ್ನು ದೀರ್ಘ ಅವಧಿಯವರೆಗೆ ಏಕೆ ನಿರ್ಲಕ್ಷಿಸಿಕೊಂಡು ಬರಲಾಗಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸಬೇಕು. ಆರಂಭದಿಂದ ಈವರೆಗೆ ದಂಡದ ಹೆಸರಿನಲ್ಲಿ ಸಂಗ್ರಹಿಸಿರುವ ಮೊತ್ತವನ್ನು ಬಿಬಿಎಂಪಿಯು ಗುತ್ತಿಗೆದಾರರಿಂದ ವಸೂಲಿ ಮಾಡಬೇಕು. ಈ ವಿಷಯದಲ್ಲಿ ತಪ್ಪೆಸಗಿರುವ ಮತ್ತು ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳನ್ನು ಪತ್ತೆಹಚ್ಚಿ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಬೇಕು. ಪಾವತಿ ನಿಲುಗಡೆ ವ್ಯವಸ್ಥೆಯಲ್ಲಿ ನಗದು ಪಾವತಿಸುವವರಿಗೆ ಕಡಿಮೆ ಅವಧಿ ಮತ್ತು ನಗದುರಹಿತ ಪಾವತಿಗೆ ಹೆಚ್ಚು ಅವಧಿ ನಿಗದಿಗೊಳಿಸಲಾಗಿದೆ. ನಗದುರಹಿತ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ಕ್ರಮ ಎಂಬ ವಾದ ಮುಂದಿಟ್ಟರೂ, ವಾಹನ ನಿಲುಗಡೆಯಂತಹ ಸ್ಥಳಗಳಲ್ಲಿ ಶುಲ್ಕ ವಿಧಿಸುವಾಗ ಈ ರೀತಿ ತಾರತಮ್ಯ ಮಾಡುವುದು ಜನವಿರೋಧಿಯಾದ ಕ್ರಮ. ಪಾಲಿಕೆಯ ಎಂಟೂ ವಲಯಗಳ ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದಲೇ ಪಾವತಿ ನಿಲುಗಡೆ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ದಂಡದ ಹೆಸರಿನಲ್ಲಿ ಈ ರೀತಿ ಶೋಷಣೆಗೆ ಅವಕಾಶ ಇಲ್ಲದಂತೆ ಮಾರ್ಗಸೂಚಿಗಳನ್ನು ಹೊರಡಿಸಬೇಕು. ವಾಹನ ನಿಲುಗಡೆಯಲ್ಲಿ ಶಿಸ್ತು ತರುವುದೇ ಈ ವ್ಯವಸ್ಥೆಯ ಪ್ರಮುಖ ಗುರಿಯಾಗಿರುವಂತೆ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT