‘ಭಾರತರತ್ನ’ ಪುರಸ್ಕಾರಕ್ಕೆ ರಾಜಕೀಯ ಲೇಪ ಯಾಕೆ?

ಶುಕ್ರವಾರ, ಮಾರ್ಚ್ 22, 2019
21 °C

‘ಭಾರತರತ್ನ’ ಪುರಸ್ಕಾರಕ್ಕೆ ರಾಜಕೀಯ ಲೇಪ ಯಾಕೆ?

Published:
Updated:
Prajavani

ಭಾರತ ಸರ್ಕಾರ ನೀಡುವ ಭಾರತರತ್ನ ಮತ್ತು ಪದ್ಮ ಪ್ರಶಸ್ತಿಗಳ ಪೈಕಿ ಕೆಲವಾದರೂ ವಿವಾದಕ್ಕೆ ಸಿಲುಕುವುದು ಅಥವಾ ರಾಜಕೀಯ ಲೇಪ ಅಂಟಿಸಿಕೊಳ್ಳುವುದು ರೂಢಿಯೇ ಆಗಿಹೋಗಿದೆ. ಇನ್ನು ಚುನಾವಣಾ ವರ್ಷವಾದರೆ ಕೇಳಬೇಕಾಗಿಯೇ ಇಲ್ಲ. ಈ ಮಾತಿಗೆ ಯಾವ ಪಕ್ಷದ ಸರ್ಕಾರ ಅಥವಾ ಯಾವುದೇ ಮೈತ್ರಿಕೂಟದ ಸರ್ಕಾರ ಹೊರತಲ್ಲ.

ಈ ಸಲ ಭಾರತರತ್ನ ಪುರಸ್ಕಾರಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಆಯ್ಕೆ ರಾಜಕೀಯ ವಲಯದ ಒಳ–ಹೊರಗೆ ಹುಬ್ಬುಗಳನ್ನೇರಿಸಿದೆ. ಕಳೆದ ವರ್ಷ ಅವರು ಆರ್‌ಎಸ್‌ಎಸ್ ಆಹ್ವಾನವನ್ನು ಒಪ್ಪಿಕೊಂಡು ನಾಗಪುರದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ವಿದ್ಯಮಾನ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.  ಮುಖರ್ಜಿ ನಡೆಯಿಂದ ಸಂಘ ಪರಿವಾರ ಸಂಪ್ರೀತವಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದೊಡನೆ ರಾಷ್ಟ್ರಪತಿ ಮುಖರ್ಜಿ ಅವರ ಸಂಬಂಧ ಸೌಹಾರ್ದದಿಂದ ಕೂಡಿತ್ತು. ಈ ಸರ್ಕಾರದ ವಿವಾದಾತ್ಮಕ ನಿರ್ಧಾರಗಳ ಕುರಿತು ನಿವೃತ್ತಿಯ ನಂತರದ ಸಂದರ್ಶನಗಳಲ್ಲೂ ಅವರು ಚಕಾರ ಎತ್ತಲಿಲ್ಲ. 1984ರಲ್ಲಿ ಇಂದಿರಾ ಗಾಂಧಿಯವರ ಸಾವಿನ ನಂತರ ಮತ್ತು 2004ರಲ್ಲಿ ಯುಪಿಎ, ಸರ್ಕಾರ ರಚಿಸಿದಾಗ ಪ್ರಧಾನಿ ಹುದ್ದೆ ಮುಖರ್ಜಿಯವರನ್ನು ಸವರಿಕೊಂಡು ಮುಂದೆ ಹೋಯಿತು. ಕಾಂಗ್ರೆಸ್ ಪಕ್ಷವನ್ನು ಹಣಿಯುವ ಯಾವ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿಯವರು ಬಿಡುವುದಿಲ್ಲ.

ಹೀಗೆ ನಾಗಪುರಕ್ಕೆ ಭೇಟಿ ನೀಡಿದ್ದ ಮತ್ತು ಕಾಂಗ್ರೆಸ್ಸಿನಲ್ಲಿ ‘ಅವಗಣನೆ-ಅಪನಂಬಿಕೆ’ಗೆ ತುತ್ತಾಗಿದ್ದ ನಾಯಕನಿಗೆ ಭಾರತರತ್ನ ನೀಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಖರ್ಜಿಯವರ ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ಒಂದು ರಾಜಕೀಯ ಸಂದೇಶವನ್ನು ಕಳಿಸುವುದೂ ಅವರ ಉದ್ದೇಶವಾಗಿತ್ತು. ಬಂಗಾಳದಲ್ಲಿ ನೆಲಕಚ್ಚಿರುವ ಎಡಪಂಥೀಯ ಪಕ್ಷಗಳ ಸ್ಥಾನದಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವುದು ಮೋದಿ-ಶಾ ಉದ್ದೇಶ. ನೆಹರೂ-ಗಾಂಧಿ ಮನೆತನಕ್ಕೆ ಮೂರು ಭಾರತರತ್ನಗಳು ಸಂದಿವೆ. ಈ ಮನೆತನ ನಂಬದೆ ಪ್ರಧಾನಿ ಪದವಿಯಿಂದ ದೂರ ಇರಿಸಿದ್ದ  ‘ಸಾಮಾನ್ಯ ಹಿನ್ನೆಲೆ’ಯ ಕಾಂಗ್ರೆಸ್ಸಿಗನನ್ನು ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಸಾಲಿಗೆ ಸೇರಿಸಿ, ಅವರಿಗೆ ಸರಿಸಮನಾಗಿ ನಿಲ್ಲಿಸಿ ಹಗೆ ತೀರಿಸಿಕೊಳ್ಳುವುದು ಮೋದಿ ಅವರ ಆಂತರ್ಯ ಎಂಬ ವ್ಯಾಖ್ಯಾನವೂ ನಡೆದಿದೆ.

ರಾಜಕಾರಣದಲ್ಲಿ ಹಲವು ಬಾರಿ ತಮ್ಮ ತಲೆ ಕಾಯ್ದು ಕಾಪಾಡಿದ್ದ ತಮ್ಮದೇ ಪರಿವಾರದ ಹಿರಿಯ ಎಲ್.ಕೆ. ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿರುವ ಅವರ ನಡೆಯ ಬೆಳಕಿನಲ್ಲಿ, ಮುಖರ್ಜಿಯವರಿಗೆ ನೀಡಿರುವ ಸಮ್ಮಾನ ಇನ್ನಷ್ಟು ಹೊಳೆದು ಕಾಣತೊಡಗಿದೆ. ಒಂದು ಕಾಲಕ್ಕೆ ಮುಖರ್ಜಿ ಅವರ ರಾಷ್ಟ್ರಪತಿ ಉಮೇದುವಾರಿಕೆಯನ್ನು ಸಂಘ ಪರಿವಾರದ ‘ಟ್ರೋಲ್ ಆರ್ಮಿ’ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಿರೋಧಿಸಿತ್ತು. ಹಣಕಾಸು ಸಚಿವರಾಗಿ ಅವರ ‘ವೈಫಲ್ಯ’ವನ್ನು ಕಡುವ್ಯಂಗ್ಯದ ಬಾಣಗಳಿಂದ ತಿವಿದಿತ್ತು. ನಾಗಪುರ ಭೇಟಿ ಮತ್ತು ಭಾರತರತ್ನ ನೀಡಿಕೆಯ ನಂತರ ಈ ಸೇನೆಯ ಬಾಯಿ ಕಟ್ಟಿ ಹೋಗಿರುವುದು ವಿಡಂಬನೆಯೇ ಸರಿ.

ಬಿಜು ಪಟ್ನಾಯಕ್ ಪುತ್ರಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋದರಿ ಗೀತಾ ಮೆಹ್ತಾ ತಮಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಚುನಾವಣೆಗಳು ಹೊಸ್ತಿಲಲ್ಲಿ ನಿಂತಿರುವ ಹೊತ್ತಿನಲ್ಲಿ ಈ ಪ್ರಶಸ್ತಿ ಕೊಡುವುದು ಮತ್ತು ಪಡೆಯುವುದು ತರವಲ್ಲ ಎಂದಿದ್ದಾರೆ. ಅಪರೂಪದ ದಿಟ್ಟತನವಿದು. ಎಲ್ಲರಿಂದಲೂ ನಿರೀಕ್ಷಿಸುವುದು ಸಾಧ್ಯವಿಲ್ಲ. ಅಸ್ಸಾಮಿನ ಮಹಾನ್ ಗಾಯಕ ದಿವಂಗತ ಭೂಪೆನ್ ಹಜಾರಿಕಾ ಅವರು ಭಾರತರತ್ನರಾದದ್ದು ಸಂತೋಷದ ಸಂಗತಿ. ಆದರೆ ಅಸ್ಸಾಂ ಮತ್ತು ಈಶಾನ್ಯದಲ್ಲಿ ಭುಗಿಲೆದ್ದಿರುವ ಪೌರತ್ವ ವಿವಾದದ ಬೆಂಕಿಯನ್ನು ಶಮನ ಮಾಡುವ ರಾಜಕಾರಣದ ಲೇಪ ಈ ಆಯ್ಕೆಗೂ ಅಂಟಿದೆ. ಭಾರತರತ್ನ ನೀಡಿಕೆಯ ವಿಚಾರ ಬಂದಾಗ ದಕ್ಷಿಣ ಭಾರತವನ್ನು ಎಲ್ಲ ಸರ್ಕಾರಗಳೂ ಉಪೇಕ್ಷಿಸಿಕೊಂಡು ಬಂದಿವೆ ಎಂಬ ಭಾವನೆ ಇದೆ.

ಈ ಬಾರಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಿಗೆ ಮರಣೋತ್ತರವಾಗಿ ಈ ಪರಮೋಚ್ಚ ಗೌರವ ನೀಡಬೇಕೆಂಬ ಕೂಗಿಗೆ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಮೇರುನಟರಾದ ರಾಜ್‌ಕುಮಾರ್, ಎನ್.ಟಿ.ರಾಮರಾವ್‌ ಅವರಿಗೆ ‘ಭಾರತರತ್ನ’ರಾಗುವ ಅರ್ಹತೆ ಇಲ್ಲವೇ? ಇದರ ನಡುವೆಯೂ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅತ್ಯಂತ ಜನಸಾಮಾನ್ಯರಲ್ಲಿ ಸಾಧಕರನ್ನು ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ನೀಡಿರುವುದು ಮೆಚ್ಚತಕ್ಕ ಅಂಶ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !